ಕಾರವಾರ: ಉ.ಕನ್ನಡ ಜಿಲ್ಲೆ ಭಟ್ಕಳದಲ್ಲಿ ಪಾಕ್ ಮಹಿಳೆ (Pakistan woman) ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಮೂಲದ ಮಹಿಳೆ ಖತೀಜಾ ಮೆಹರೀನ್ಗೆ ಧಾರವಾಡ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಕೇಸ್ ವಿಚಾರವಾಗಿ ಧಾರವಾಡ ಪೀಠದಲ್ಲಿ ವಿಚಾರಣೆ ಮಾಡಲಾಗಿದ್ದು, 1 ಲಕ್ಷ ಮೌಲ್ಯದ ಬಾಂಡ್ ಸಲ್ಲಿಸಬೇಕು, ಸಾಕ್ಷಿ ನಾಶಕ್ಕೆ ಯತ್ನಿಸಬಾರದು. ಪೂರ್ವಾನುಮತಿ ಇಲ್ಲದೇ ಬೇರೆ ಸ್ಥಳಕ್ಕೆ ಹೋಗಬಾರದು. ಹೀಗೆ ಹಲವು ಷರತ್ತು ವಿಧಿಸಿ ಪಾಕ್ ಮಹಿಳೆಗೆ ಜಾಮೀನು ಮಂಜೂರು ಮಾಡಲಾಗಿದೆ. ಪಾಕ್ ಮಹಿಳೆ ಪಾಸ್‌ಪೋರ್ಟ್ ಹಾಗೂ ಇತರೆ ಯಾವುದೇ ದಾಖಲೆ ಇಲ್ಲದೇ ಭಾರತಕ್ಕೆ ಮಹಿಳೆ ನುಸುಳಿದ್ದಳು. ಈ ಹಿನ್ನೆಲೆ 2021ರಲ್ಲಿ ಗುಪ್ತಚರ ಇಲಾಖೆ, ಪೊಲೀಸರು ಖತೀಜಾಳನ್ನು ವಶಕ್ಕೆ ಪಡೆದಿದ್ದರು. ಭಟ್ಕಳದ ದಿ.ಜಾವೇದ್ ರುಕ್ನುದ್ದೀನ್ ಜೊತೆ ಮದುವೆಯಾಗಿದ್ದು, ಮೂವರು ಮಕ್ಕಳನ್ನು ದಂಪತಿ ಹೊಂದಿದ್ದರು. ಆದರೆ ಇತ್ತೀಚೆಗೆ ಹೃದಯಾಘಾತದಿಂದ ಪತಿ ಜಾವೇದ್ ಮೃತಪಟ್ಟಿದ್ದ.
ಘಟನೆ ಹಿನ್ನೆಲೆ:
2014ರಲ್ಲಿ 3 ತಿಂಗಳ ವಿಸಿಟಿಂಗ್ ವೀಸಾದ ಮೇಲೆ ಭಾರತಕ್ಕೆ ಬಂದಿದ್ದ ಮಹಿಳೆ 2015ರಲ್ಲಿ ಕಳ್ಳ ಮಾರ್ಗ ಅನುಸರಿಸಿ ಭಾರತ ಪ್ರವೇಶಿದ್ದಳು. ಭಟ್ಕಳದಲ್ಲಿ ಸುಳ್ಳು ದಾಖಲೆಗಳನ್ನು ಸ್ಥಳೀಯ ಸಂಸ್ಥೆಗಳಿಗೆ ನೀಡಿ ರೇಶನ್ ಕಾರ್ಡ್, ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಪಾನ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಪಡೆದುಕೊಂಡಿದ್ದಾಳೆ. ಪೊಲೀಸರು ಆಕೆಯನ್ನು ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ಇವೆಲ್ಲ ದಾಖಲೆಗಳನ್ನು ಕೂಡ ವಶಕ್ಕೆ ಪಡೆದಿರುವುದಾಗಿ ತಿಳಿಸಿದ್ದರು. 3 ಮಕ್ಕಳೊಂದಿಗೆ ಭಟ್ಕಳದಲ್ಲೇ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನದ ಮಹಿಳೆಯನ್ನು ಬಂಧಿಸಿ, ಭಟ್ಕಳದ ಟೌನ್ ಪೊಲೀಸರು ಮಹಿಳೆ ವಿರುದ್ಧ ಸೆಕ್ಷನ್ 468, 471ರಡಿ ಪ್ರಕರಣ ದಾಖಲಿಸಿದ್ದರು.
ಈಕೆ ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕೆಲವು ತಿಂಗಳುಗಳಿಂದ ಸ್ಥಳೀಯ ಪೊಲೀಸರು ಇತರ ತನಿಖಾ ಸಂಸ್ಥೆಯ ಸಹಕಾರದೊಂದಿಗೆ ಪತ್ತೆಗೆ ಸತತವಾಗಿ ಪ್ರಯತ್ನಿಸಿ, ಅಕ್ರಮವಾಗಿ ವಾಸವಾಗಿದ್ದ ಈಕೆಯನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಈಕೆಯ ಮೇಲೆ ವಿದೇಶಿ ಕಾಯಿದೆ ಉಲ್ಲಂಘನೆ ಮತ್ತು ಇತರೆ ಐಪಿಸಿ ಪ್ರಕರಣಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈಕೆಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.
ಎಸ್ ಪಿ ಶಿವಪ್ರಕಾಶ್ ದೇವರಾಜು, ಎಎಸ್ ಪಿ ಬದರಿನಾಥ, ಭಟ್ಕಳ ಡಿವೈಎಸ್ ಪಿ ಬೆಳ್ಳಿಯಪ್ಪ ಕೆ.ಯು. ಹಾಗೂ ಸಿಪಿಐ ದಿವಾಕರ ಪಿ.ಎಮ್ ಅವರ ಮಾರ್ಗದರ್ಶನ ಹಾಗೂ ಸೂಚನೆಯ ಮೇರೆಗೆ ಭಟ್ಕಳ ನಗರ ಪೊಲೀಸ್ ಠಾಣಿಯ ಪಿಎಸ್ಐ ಸುಮಾ ಬಿ. ಮತ್ತು ಸಿಬ್ಬಂದಿ ನಾರಾಯಣ ನಾಯ್ಕ, ಮುಗ್ದುಂ ಪತ್ತೆಖಾನ್, ಲೋಕಪ್ಪ ಪತ್ತಿ, ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿ ಹೀನಾ ಎಫ್. ತಂಡದಿಂದ ಕಾರ್ಯಾಚರಣೆ ಮಾಡಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:26 pm, Sun, 6 November 22