ಕಾರವಾರ: ‘ಟವರ್ ಟ್ರೇಡಿಂಗ್… ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಸಿಗೋ ಒಂದು ಌಪ್. ಈ ಌಪ್ ಮೂಲಕ ಕ್ರಿಪ್ಟೋ ಕರೆನ್ಸಿಗಳಾದ ಬಿಟ್ ಕಾಯಿನ್, ಎಕ್ಸ್ ಆರ್ ಪಿ, ಇಥಿರಿಯಂ, ಡಾಗಿ ಕಾಯಿನ್ ಸೇರಿದಂತೆ ವಿವಿಧ ಕರೆನ್ಸಿಗಳ ಖರೀದಿ ಮಾಡಿ ಹಣ ಹೂಡಿಕೆ ಮಾಡಿದ್ರೆ ಲಕ್ಷ ಲಕ್ಷ ಗಳಿಸಿಬಹುದು ಎಂಬ ಆಮಿಷವೊಡ್ಡಲಾಗಿದೆ. ಇದನ್ನ ನಂಬಿದ ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಮಂದಿ ‘ಟವರ್ ಟ್ರೇಡಿಂಗ್ ಌಪ್ ಡೌನ್‌ಲೌಡ್ ಮಾಡ್ಕೊಂಡು ಆರಂಭದಲ್ಲಿ 5 ಸಾವಿರ ರೂಪಾಯಿ ಇನ್ವೆಸ್ಟ್ ಮಾಡಿದ್ದಾರೆ. ಹೀಗೆ 5 ಸಾವಿರ ಹೂಡಿಕೆ ಮಾಡಿದವರಿಗೆ ಪ್ರಾರಂಭದಲ್ಲೇ 8750 ರೂಪಾಯಿ ಅವರ ಖಾತೆಗೆ ಜಮಾ ಆಗಿದೆ. ಬಳಿಕ ವಾಟ್ಸಾಪ್ ಗ್ರೂಪ್ ಮಾಡ್ಕೊಂಡು ಅದು ಚೈನ್ ಲಿಂಕ್ ರೀತಿ ಬೆಳೆದುಕೊಂಡು ಹೋಗಿದೆ. ಬಹುತೇಕ ಮಂದಿ 1 ಲಕ್ಷ, 2 ಲಕ್ಷದಿಂದ ಹಿಡಿದು 10 ಲಕ್ಷ ರೂಪಾಯಿವರೆಗೂ ಇನ್ವೆಸ್ಟ್ ಮಾಡಿದ್ದಾರೆ. ಶಿರಸಿಯೊಂದರಲ್ಲೇ 29 ವಾಟ್ಸಾಪ್ ಗ್ರೂಪ್‌ಗಳಿದ್ದು, ಪ್ರತಿ ಗ್ರೂಪ್‌ಗಳು 250 ಮಂದಿಯಿಂದ ತುಂಬಿದ್ದವು. ಇದೀಗ ಆ್ಯಪ್ ಕೂಡ ವರ್ಕ್ ಆಗ್ತಿಲ್ಲ. ಹಾಕಿದ್ದ ಹಣವೂ ಇಲ್ಲದಂತಾಗಿದ್ದು ಎಲ್ಲರಿಗೂ ಹೋಲ್‌ಸೇಲ್ ಆಗಿ ಮಕ್ಮಲ್ ಟೋಪಿ ಹಾಕಲಾಗಿದೆ.
‘ಟವರ್ ಟ್ರೇಡಿಂಗ್’ ಆ್ಯಪ್ ಬಿಟ್ಟರೆ ತಾವು ಹಣ ಹಾಕಿದ್ದು ಯಾರ ಖಾತೆಗೆ ಎಂಬ ಅರಿವೂ ಹೂಡಿಕೆದಾರರಿಗೆ ಇಲ್ಲ. ವಾಟ್ಸಾಪ್ ಗ್ರೂಪ್‌ಗಳಲ್ಲಿಯೂ ಯಾವುದೇ ಉತ್ತರ ಬರುತ್ತಿಲ್ಲ. ಹೀಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ವಂಚಿಸಿದ ಹಣವೇ 16 ಕೋಟಿಗೂ ಮೀರಿದ್ದು ಎನ್ನಲಾಗ್ತಿದ್ದು, ಇದೀಗ ಕೆಲವರು ಶಿರಸಿ ಪೊಲೀಸರಲ್ಲಿ ತಾವು ಮೋಸ ಹೋಗಿರುವ ಬಗ್ಗೆ ದೂರು ಸಲ್ಲಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ ಈ ಆ್ಯಪ್ ಈ ವರ್ಷದ ಜೂನ್‌ನಲ್ಲಿ ರಚನೆಯಾಗಿದೆ, ಚೀನಾದ ಅಲಿಬಾಬಾ ಗ್ರೂಪ್‌ನ ಸರ್ವರ್‌ನಿಂದ ಕಾರ್ಯನಿರ್ವಹಿಸುತ್ತಿರುವ ಇದರ ಮೂಲ ಹಾಂಕಾಂಗ್ ಅನ್ನೋದು ಗೊತ್ತಾಗಿದೆ. ಆದರೆ ಮುಂಬೈ ವಿಳಾಸವೊಂದರಲ್ಲೂ ಈ ಆ್ಯಪ್ ನೋಂದಣಿಯಾಗಿದೆ. ಸದ್ಯ ಈ ಆ್ಯಪ್ ಸ್ಥಗಿತಗೊಂಡಿದೆ. ಸೈಬರ್ ಕ್ರೈಂ ಪೊಲೀಸರು ತನಿಖೆ ಕೈಗೊಂಡಿದ್ದು.. ಆನ್‌ಲೈನ್ ವಂಚಕರಿಗಾಗಿ ಬಲೆ ಬೀಸಿದ್ದಾರೆ.
ಇದನ್ನೂ ಓದಿ: Petrol Price Today: ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಂದು ಸಹ ಯಾವುದೇ ಬದಲಾವಣೆಗಳಿಲ್ಲ!