ಕಾರವಾರ: ಶಾಲೆಯ ಆವರಣದಲ್ಲಿಯೇ ವಿದ್ಯಾರ್ಥಿಯೋರ್ವನಿಗೆ ಹಾವು ಕಚ್ಚಿದೆ. ಮುರ್ಡೇಶ್ವರದ ನ್ಯಾಷನಲ್ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯಲ್ಲಿ ಈ ಆಕಸ್ಮಿಕ ಘಟನೆ ನಡೆದಿದೆ. ಮುರ್ಡೇಶ್ವರದ ಬಸ್ತಿಮಕ್ಕಿ ನಿವಾಸಿ ಅಲ್ಫಾಝ್ ಸರ್ತಾಜ್ (12) ಅಸ್ವಸ್ಥಗೊಂಡ ಬಾಲಕ. ಈತ ಉರ್ದು ಶಾಲೆಯಲ್ಲಿ 5ನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ.
ವಿದ್ಯಾರ್ಥಿ ಅಲ್ಫಾಝ್ ಸರ್ತಾಜ್ ಕೊಠಡಿಯಲ್ಲಿ ಪಾಠ ಕೇಳ್ತಿರುವಾಗ ಆಕಸ್ಮಿಕವಾಗಿ ಪೆನ್ಸಿಲ್ ಕಿಟಿಕಿಯಿಂದ ಹೊರಗೆ ಬಿದ್ದಿತ್ತು. ಪೆನ್ಸಿಲ್ ತರಲು ಹೊರಗೆ ಹೋದ ಬಾಲಕನಿಗೆ ಅಲ್ಲೇ ಇದ್ದ ಹಾವೊಂದು ಕಚ್ಚಿ ಅಸ್ವಸ್ಥಗೊಳಿಸಿದೆ. ಕೂಡಲೇ ಬಾಲಕನನ್ನು ಮುರ್ಡೇಶ್ವರ ಆಯುಷ್ ಕೇಂದ್ರಕ್ಕೆ ಪ್ರಥಮ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ನಂತರ ಪೋಷಕರು ಹೆಚ್ಚಿನ ಚಿಕಿತ್ಸೆಗಾಗಿ, ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ.