ಕಾರವಾರ: ಈಜಲು ಹೋಗಿ ಯುವಕ ಸಮುದ್ರ ಅಲೆಗೆ ಸಿಲುಕಿದ್ದ ಪ್ರವಾಸಿಗನನ್ನು ಗೋಕರ್ಣ ಅಡ್ವೇಂಚರ್ ಸಿಬ್ಬಂದಿ ರಕ್ಷಣೆ ಮಾಡಿರುವಂತಹ ಘಟನೆ ಕುಮಟಾ ತಾಲೂಕಿನ ಗೋಕರ್ಣ ಕೊಡ್ಲೇ ಬೀಚ್ನಲ್ಲಿ ನಡೆದಿದೆ. ಹೈದರಾಬಾದ್ ಅಖಿಲ್ ರಾಜ್ (26) ರಕ್ಷಣೆ ಮಾಡಲಾದ ಯುವಕ. ಅಖಿಲ್ ರಾಜ್ ಚಿತ್ರನಟ ಎಂದು ತಿಳಿದು ಬಂದಿದೆ. ಮತ್ತೊಂದು ಪ್ರಕರಣದಲ್ಲಿ ಬೆಳಗಾವಿಯಲ್ಲಿ ತಡರಾತ್ರಿ ಬೈಲಹೊಂಗಲ ತಾಲೂಕಿನಾದ್ಯಂತ ಮಳೆ ಅಬ್ಬರ ಜೋರಾಗಿದ್ದು, ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಚರಂಡಿ ವ್ಯವಸ್ಥೆ ಸರಿಯಾಗಿ ಇಲ್ಲದರಿಂದ ಮನೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿದ್ದ ದವಸ ಧಾನ್ಯಗಳು, ಸಾಮಾಗ್ರಿಗಳು ನೀರು ಪಾಲಾಗಿವೆ. ರಾತ್ರಿಯಿಡೀ ನೀರು ಹೊರ ಹಾಕಲು ಕುಟುಂಬಸ್ಥರು ಹರಸಾಹಸ ಪಟ್ಟಿದ್ದಾರೆ. ಚರಂಡಿ ವ್ಯವಸ್ಥೆ ಸರಿಯಾಗಿ ಮಾಡದ ಗ್ರಾಮ ಪಂಚಾಯಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹಾಸನದಲ್ಲಿ ಮಳೆ ಆರ್ಭಟಕ್ಕೆ ಮತ್ತೊಂದು ಬಲಿ
ಹಾಸನ: ಮಳೆ ಆರ್ಭಟಕ್ಕೆ ಕಾಂಪೌಂಡ್ ಕುಸಿದು ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ ನಗರದ ಹರ್ಷಾಮಹಲ್ ರಸ್ತೆಯಲ್ಲಿ ನಡೆದಿದೆ. ವಲ್ಲಭಾಯಿ ರಸ್ತೆಯ ವೆಂಕಟೇಶ್ ಮೃತ ವ್ಯಕ್ತಿ. ಬೀದಿ ಬದಿಯಲ್ಲಿ ಹೇರ್ ಪಿನ್ ಕ್ಲಿಪ್ ಮಾರಾಟ ಮಾಡುತ್ತಿದ್ದ ವೆಂಕಟೇಶ್. ರಾತ್ರಿ ವೇಳೆ ಸಾರ್ವಜನಿಕ ಸ್ಥಳದಲ್ಲಿಯೇ ಆಶ್ರಯ ಪಡೆಯುತ್ತಿದ್ದ. ನಿನ್ನೆ ಕೂಡ ಕಾಂಪೌಂಡ್ ಪಕ್ಕವೇ ನಿದ್ರೆಗೆ ಜಾರಿದ್ದ. ಈ ವೇಳೆ ನಡುರಾತ್ರಿ ಸುರಿದ ಭಾರಿ ಮಳೆಗೆ ಕಾಂಪೌಂಡ್ ಕುಸಿದಿದ್ದು, ಅದರ ಅಡಿಗೆ ಸಿಲುಕಿ ವ್ಯಕ್ತಿ ಮೃತ ಪಟ್ಟಿದ್ದಾನೆ. ಬೆಳಿಗ್ಗೆ ಕಾಂಪೌಂಡ್ ಮಣ್ಣಿನಡಿ ಟಾರ್ಪಲ್ ಕಂಡು ಅನುನಾನದಿಂದ ಕೆಲ ಯುವಕರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಣ್ಣಿನಡಿ ಮೃತದೇಹ ಇರೋದು ಪತ್ತೆಯಾಗಿದೆ. ಹಾಸನ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಇಬ್ಬರ ಶವ ಪತ್ತೆ
ಚಿತ್ರದುರ್ಗ: ಸೂಗೂರು ಬಳಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಇಬ್ಬರ ಶವಪತ್ತೆಯಾಗಿರುವಂತಹ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಸೂಗುರು ಗ್ರಾಮದ ಬಳಿ ನಡೆದಿದೆ. ಕುರಿದಾಸನಹಟ್ಟಿಯ ಲೋಕೇಶ(38), ತಿರುಮಲ(25) ಮೃತರು. ಎನ್ಡಿಆರ್ಎಫ್, ಅಗ್ನಿಶಾಮಕ ದಳ, ಪೊಲೀಸರ ಕಾರ್ಯಾಚರಣೆಯಿಂದ ಘಟನೆ ನಡೆದು 24 ಗಂಟೆ ಬಳಿಕ ಶವಪತ್ತೆ ಮಾಡಲಾಗಿದೆ. ನಿನ್ನೆ ಕತ್ತಲಾದ ಬಳಿಕ ಕಾರ್ಯಾಚರಣೆ ಸ್ಥಗಿತವಾಗಿತ್ತು. ಇಂದು ಬೆಳಗ್ಗೆ 8 ಗಂಟೆ ಬಳಿಕ ಕಾರ್ಯಾಚರಣೆ ಆರಂಭಿಸಲಾಗಿತ್ತು.
ಅಬ್ಬಿನಹೊಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:41 pm, Fri, 21 October 22