Uttara Kannada: ಮೊಸಳೆಗಳಿಂದ ತಮ್ಮನ್ನು ರಕ್ಷಿಸುವಂತೆ ಅರಣ್ಯ ಇಲಾಖೆಗೆ ದುಂಬಾಲು ಬೀಳುತ್ತಿರುವ ಜನರು

| Updated By: Rakesh Nayak Manchi

Updated on: Oct 25, 2022 | 8:45 AM

ಹಾವುಗಳ ಕಾಟ ಕೇಳಿದ್ದೀರಿ, ಇಲಿಗಳ ಕಾಟ ಕೇಳಿದ್ದೀರಿ, ಆದರೆ ಎಂದಾದರು ಮೊಸಳೆಗಳ ಕಾಟದ ಬಗ್ಗೆ ಕೇಳಿದ್ದೀರಾ? ಇಲ್ಲವಾದರೆ ಈ ಸುದ್ದಿ ನೋಡಿ.

Uttara Kannada: ಮೊಸಳೆಗಳಿಂದ ತಮ್ಮನ್ನು ರಕ್ಷಿಸುವಂತೆ ಅರಣ್ಯ ಇಲಾಖೆಗೆ ದುಂಬಾಲು ಬೀಳುತ್ತಿರುವ ಜನರು
ಉತ್ತರ ಕನ್ನಡದ ದಾಂಡೇಲಿ ನಗರದಲ್ಲಿ ಮೊಸಳೆ ಕಾಟ
Follow us on

ಕಾರವಾರ: ಊರಿನಲ್ಲಿ ಹಾವಿನ ಕಾಟ, ಕೀಟಗಳ ಕಾಟ, ಇಲಿಗಳ ಕಾಟ ಎಂದು ಹೇಳುವುದನ್ನು ಕೇಳಿರುತ್ತೀರಿ, ನೋಡಿರುತ್ತೀರಿ. ಆದರೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರದ ಜನರು ಮಾತ್ರ ಅಪಾಯಕಾರಿ ಮೊಸಳೆಯ ಕಾಟವನ್ನು ಎದುರಿಸುತ್ತಿದ್ದಾರೆ. ಕಾಳಿ ನದಿ ದಡದಲ್ಲೇ ಇರುವ ದಾಂಡೇಲಿ ನಗರ ಪ್ರಾವಾಸೊಧ್ಯಮಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಪಕ್ಷಿಗಳು, ರಿವರ್ ರ್ಯಾಪ್ಟಿಂಗ್ ದೇಶದಲ್ಲೇ ಪ್ರಸಿದ್ಧ. ಈ ಹಿಂದೆ ಕಾಳಿ ನದಿಯಲ್ಲಿ ಅಲ್ಪವಿದ್ದ ಮೊಸಳೆಗಳ ಸಂತತಿ ಗಣನೀಯವಾಗಿ ಏರಿಕೆ ಕಂಡಿದೆ. ಹೀಗಾಗಿ ಊರಲ್ಲಿ ಮೊಸಳೆಗಳ ಕಾಟ ಮಿತಿಮೀರಿದ್ದು, ಹಾಲಮಡ್ಡಿ ಗ್ರಾಮ, ಹೊಸಕೊಣಪಾ ಗ್ರಾಮ ದಾಂಡೇಲಪ್ಪ ನಗರ, ಹಳಿಯಾಳ ರಸ್ತೆ ಹೀಗೆ ಹಲವು ಭಾಗದ ಕಾಲೋನಿಗಳಲ್ಲಿ ಮೊಸಳೆಗಳು ನದಿ ಬಿಟ್ಟು ಆಹಾರ ಅರಸಿ ಬರುತ್ತಿವೆ. ಹೀಗ ಬಂದ ಮೊಸಳೆಗಳು ಮನೆಗಳಿಗೆ ನುಗ್ಗಿ ಸಾಕುಪ್ರಾಣಿ, ಕೋಳಿ, ಹಸುಗಳನ್ನು ಕೊಂದು ತಿನ್ನುತ್ತಿವೆ. ಮನುಷ್ಯರ ಮೇಲೆ ಸಹ ದಾಳಿ ಮಾಡಿ ಇಬ್ಬರನ್ನು ಬಲಿ ತೆಗೆದುಕೊಂಡಿದೆ.

ದಾಂಡೇಲಿ ನಗರದ ತ್ಯಾಜ್ಯ ಹಾಗೂ ಮಳೆ ನೀರು ಹೊಗಲು ನಾಲೆಗಳನ್ನು ಕಾಳಿ ನದಿಗೆ ಬಿಡಲಾಗಿದೆ. ಇದರ ಮೂಲಕ ಮೊಸಳೆಗಳು ಗ್ರಾಮ ಮತ್ತು ನಗರ ಭಾಗಕ್ಕೆ ಬರುತ್ತಿವೆ. ಹೀಗಾಗಿ ಪ್ರತಿ ದಿನ ಮೊಸಳೆಯ ಕಾಟಕ್ಕೆ ಬೇಸತ್ತ ಜನ ಮೊಸಳೆಗಳು ನಗರ ಭಾಗಕ್ಕೆ ಬಾರದಂತೆ ತಪ್ಪಿಸಲು ನದಿ ಪ್ರದೇಶದ ನಾಲೆಗಳಿಗೆ ತಂತಿಯ ಜರಡಿಯನ್ನು ಹಾಕುವಂತೆ ಒತ್ತಾಯಿಸುತ್ತಿದ್ದಾರೆ.

ದಾಂಡೇಲಿಯಲ್ಲಿ ಮೊಸಳೆಗಳ ಸಂತತಿ ಹೆಚ್ಚಾಗುತಿದ್ದಂತೆ ಹಾಲಮಡ್ಡಿ ಗ್ರಾಮದ ಭಾಗದಲ್ಲಿ ಪ್ರವಾಸೋಧ್ಯಮ ಇಲಾಖೆ ಮೊಸಳೆ ಪಾರ್ಕ ಅನ್ನು ನಿರ್ಮಿಸಿದೆ. ಆದರೆ ಈ ಭಾಗದಲ್ಲಿ ಎತೇಚ್ಚವಾಗಿ ವೃದ್ಧಿಯಾಗುತ್ತಿರಿವ ಮೊಸಳೆಗಳಿಗೆ ಆಹಾರದ ಕೊರತೆ ಎದುರಾಗಿದೆ‌. ಹೀಗಾಗಿ ಆಹಾರ ಅರಸಿ ಮೊಸಳೆಗಳು ಎಲ್ಲೆಂದರಲ್ಲಿ ಹೊಗುತಿದ್ದು, ಇದೇ ವರ್ಷ ಎರಡು ಜನರನ್ನು ಮೊಸಳೆ ಭಕ್ಷಿಸಿದರೆ ಓರ್ವ ಮೊಸಳೆ ದಾಳಿಯಿಂದ ಗಾಯಗೊಂಡಿದ್ದಾನೆ. ಇದಲ್ಲದೇ ಮೂರು ಜಾನುವಾರ ಸಹ ಈ ಬಾರಿ ಮೊಸಳೆಗೆ ಬಲಿಯಾಗಿದೆ. ಹೀಗಾಗಿ ನಗರ ಹಾಗೂ ಹಳ್ಳಿ ಭಾಗಕ್ಕೆ ಲಗ್ಗೆ ಇಡುವ ಮೊಸಳೆಗಳನ್ನ ಅರಣ್ಯ ಇಲಾಖೆ ನಿಯಂತ್ರಿಸಬೇಕು. ನದಿ ಬಿಟ್ಟು ಜನ ವಸತಿ ಭಾಗಕ್ಕೆ ಬರುವ ಮೊಸಳೆಗಳನ್ನು ಹಿಡಿದು ಬೇರೆಡೆ ಬಿಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ದಾಂಡೇಲಿಯಲ್ಲಿ ಮೊಸಳೆಗಳ ಹಾವಳಿ ಮಿತಿಮೀರಿದ್ದು, ಸಾವುಗಳು ಸಂಭವಿಸಿದರೂ ಅರಣ್ಯ ಇಲಾಖೆ ಮಾತ್ರ ಮೌನ ವಹಿಸಿದೆ. ಆದಷ್ಟು ಬೇಗ ಮೊಸಳೆ ನಿಯಂತ್ರಣದ ಕ್ರಮ ಕೈಗೊಳ್ಳುತ್ತಾ ಇಲಾಖೆ ಎಂಬುದು ಕಾದು ನೋಡಬೇಕಿದೆ.

ವರದಿ: ವಿನಾಯಕ ಬಡಿಗೇರ, ಟಿವಿ 9 ಕಾರವಾರ

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:45 am, Tue, 25 October 22