ಎರಡು ವರ್ಷಗಳ ನಂತರ ಅದ್ಧೂರಿಯಾಗಿ ಜರುಗಿದ ಕಲಬುರಗಿಯ ಕಲ್ಕತ್ತಾ ಲಕ್ಷ್ಮಿ ದೇವಿ ಜಾತ್ರೆ
ಕೊರೋನಾದಿಂದ ಎರಡು ವರ್ಷಗಳಿಂದ ನಡೆಯದೇ ಇದ್ದ ಕಲಬುರಗಿಯ ಕಲ್ಕತ್ತಾ ಲಕ್ಷ್ಮಿ ದೇವಿ ಜಾತ್ರೆ ಈ ವರ್ಷ ಸಂಭ್ರಮ ಸಡಗರದಿಂದ ಜರುಗಿತು.
ಕಲಬುರಗಿ: ಕೊರೋನಾದಿಂದ ಎರಡು ವರ್ಷಗಳಿಂದ ನಡೆಯದೇ ಇದ್ದ ಕಲಬುರಗಿಯ ಕಲ್ಕತ್ತಾ ಲಕ್ಷ್ಮಿ ದೇವಿ ಜಾತ್ರೆ ಸಂಭ್ರಮ ಸಡಗರದಿಂದ ಜರುಗಿತು. ವಿಶೇಷವೆಂದರೆ ಪ್ರತಿವರ್ಷ ಲಕ್ಷ್ಮಿ ದೇವಿಯ ಜಾತ್ರೆಗೆ ಆ ತಾಲೂಕಿನವರು ಎಲ್ಲಿಯೇ ಇದ್ದರು ಕೂಡಾ ಜಾತ್ರೆಗೆ ತಪ್ಪದೆ ಬಂದು ದೇವಿಯ ಆಶಿರ್ವಾದ ಪಡೆಯುತ್ತಾರೆ. ಅದರಂತೆ ಈ ಬಾರಿಯೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾದರು. ಕಲ್ಯಾಣ ಕರ್ನಾಟಕದ ಈ ಸುಪ್ರಸಿದ್ದ ಜಾತ್ರೆಗೆ ನೆರೆಯ ರಾಜ್ಯಗಳಿಂದಲು ಕೂಡಾ ಸಾವಿರಾರು ಭಕ್ತರು ಆಗಮಿಸಿದ್ದಾರೆ. ದಾರಿಯುದ್ದಕ್ಕೂ ಬಂಡಾರದ ಕಲರವ, ಡೊಳ್ಳು ಸೇರಿದಂತೆ ವಿವಿಧ ಜಾನಪದ ವಾದ್ಯಗಳ ಗುಂಗು ಭಕ್ತರನ್ನು ಮನರಂಜಿಸಿತು. ಅದರ ನಡುವೆ ಭಕ್ತರು ಲಕ್ಷ್ಮಿ ಮಾತಾಕಿ ಜೈ ಎಂದು ಜೈಕಾರ ಹಾಕಿದರು.
ಜೇವರ್ಗಿ ತಾಲೂಕಿನ ಅದಿದೇವತೆಯಾದ ಕಲ್ಕತ್ತಾ ಲಕ್ಷ್ಮಿ ದೇವಿ ದೇವಸ್ಥಾನದ ಜಾತ್ರೆ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಆಗಮಿಸಿದ್ದರು. ರಸ್ತೆ ಸೇರಿದಂತೆ ಮನೆಗಳ ಮೇಲೂ ಸಾವಿರಾರು ಭಕ್ತರು ನಿಂತು ದೇವಿಯ ದರ್ಶನ ಪಡೆದರು. ನೆರೆದಿದ್ದ ಜನರೆಲ್ಲಾ ಬಂಡಾರ, ಕುಂಕುಮ ಹಚ್ಚಿಕೊಂಡು ಸಂಭ್ರಮಿಸಿದರು. ತಾಲೂಕಿನ ಆರಾದ್ಯ ದೇವತೆಯಾದ ಮಹಾಲಕ್ಷ್ಮಿ ತಾಯಿಯ ಸನ್ನಿದಿಗೆ ಬಂದು ತಮ್ಮಲ್ಲಾ ಸಂಕಷ್ಟಗಳನ್ನು ಪರಿಹರಿಸುವಂತೆ ಬೇಡಿಕೊಂಡರು. ಭಕ್ತರು ಬೇಡಿಕೊಂಡದ್ದನ್ನು ಕಲ್ಕತ್ತಾ ಮಹಾಲಕ್ಷ್ಮಿ ಈಡೇರಿಸುತ್ತಾಳೆ ಎಂಬುದು ಇಲ್ಲಿನ ಜನರ ನಂಬಿಕೆ.
ಈ ಜಾತ್ರೆ ಪ್ರತಿ ವರ್ಷ ಸೀಗಿ ಹುಣ್ಣಿಮೆ ಮುಗಿದು ಐದು ದಿನದ ನಂತರ ಪ್ರಾರಂಭವಾಗುತ್ತದೆ. ಐದು ದಿನಗಳ ಕಾಲ ವಿವಿದ ಕಾರ್ಯಕ್ರಮಗಳನ್ನು ನಡೆಸುವ ಜನರು, ನಂತರ ಐದನೇ ದಿನ ಮಹಾಲಕ್ಷ್ಮಿಯ ಮೂರ್ತಿಯನ್ನು ಚಿಕ್ಕದಾದ ತೇರಿನಲ್ಲಿಟ್ಟು ಪಟ್ಟಣದಾದ್ಯಂತ ದೇವಿಯನ್ನು ಕರೆದುಕೊಂಡು ಹೋಗಿ ಸಂಜೆವೇಳೆಗೆ ಜಾತ್ರೆಗೆ ವಿರಾಮ ನೀಡುತ್ತಾರೆ. ಮಹಾಲಕ್ಷ್ಮಿ ತಾಯಿ ಸಾಗುವ ಪಲ್ಲಕ್ಕಿಯ ರಸ್ತೆಯಾದ್ಯಂತ ಸಾವಿರಾರು ಜನರು ನಿಂತು ದೇವಿಯ ದರ್ಶನ ಪಡೆಯುತ್ತಾರೆ. ಬಾಳೆ ಹಣ್ಣು ಸೇರಿದಂತೆ ಅನೇಕ ಫಲ ವಸ್ತುಗಳನ್ನು ಹಾಕಿ ಪುನೀತರಾಗುತ್ತಾರೆ.
ಈ ದೇವಸ್ಥಾನಕ್ಕೆ ಕಲ್ಕತ್ತಾ ಮಹಾಲಕ್ಷ್ಮಿ ಎಂಬ ಹೆಸರು ಬರಲು ಕೂಡಾ ಅನೇಕ ಕಥೆಗಳಿವೆ. ಕಲ್ಕತ್ತಾ ಪಟ್ಟಣದಿಂದ ಓರ್ವ ಬಾಲಕಿ ತಂದೆಯ ಜೊತೆ ಹೊರಟು ಜೇವರ್ಗಿ ಪಟ್ಟಣ ಸಮೀಪ ಬಂದ ನಂತರ ತಾನು ಇಲ್ಲಿಯೇ ಇರುವದಾಗಿ ಹೇಳುತ್ತಾಳಂತೆ. ನಂತರ ಆಕೆಗೆ ಕೆಲ ಜನರು ಜೇವರ್ಗಿ ಪಟ್ಟಣದಲ್ಲಿ ಆಶ್ರಯ ನೀಡುತ್ತಾರಂತೆ. ಆದರೆ ಸೀಗಿ ಹುಣ್ಣಿಮೆ ಮುಗಿದ ಮೇಲೆ ತಾನು ಬೇರೆ ಕಡೆ ಹೋಗುವದಾಗಿ ಬಾಲಕಿ ಹೇಳಿ ಅಲ್ಲಿಂದ ಅದೃಶ್ಯಳಾಗುತ್ತಾಳಂತೆ. ಕಲ್ಕತ್ತಾದಿಂದ ಬಂದು ಇಲ್ಲಿ ಕೆಲ ದಿನಗಳ ಕಾಲವಿದ್ದು ನಂತರ ಅದೃಶ್ಯವಾಗಿ ಹೋಗಿದ್ದರಿಂದ ಜೇವರ್ಗಿ ಮಹಾಲಕ್ಷ್ಮಿಯನ್ನು ಕಲ್ಕತ್ತಾ ಮಹಾಲಕ್ಷ್ಮಿ ಅಂತ ಕರೆಯುತ್ತಾರೆ.
ಇನ್ನು ಪ್ರತಿವರ್ಷ ನಡೆಯುವ ಜಾತ್ರೆಯಲ್ಲಿ ಜೇವರ್ಗಿ ತಾಲೂಕಿನ ಜನರು ಎಲ್ಲಿಯೇ ಇರಲಿ, ಜಾತ್ರೆಗೆ ಮಾತ್ರ ತಪ್ಪದೇ ಬರುತ್ತಾರೆ. ಜೇವರ್ಗಿ ಪಟ್ಟಣದಲ್ಲಿ ಕೆಲಸ ಮಾಡಿ ಹೋದ ನೌಕರರು ವರ್ಗಾವಣೆಯಾಗಿ ಹೋದರೂ ಜಾತ್ರೆಗೆ ಬಂದು ಲಕ್ಷ್ಮಿ ದೇವಿಯ ದರ್ಶನ ಮಾಡಿಕೊಂಡು ಹೋಗುತ್ತಾರೆ.
ವರದಿ: ಸಂಜಯ್, ಟಿವಿ9 ಕಲಬುರಗಿ
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:48 am, Tue, 25 October 22