ಶಿವಮೊಗ್ಗದಲ್ಲಿ ಮತ್ತೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣ; ಮೃತ ಹರ್ಷ ಕುಟುಂಬಸ್ಥರಿಗೆ ದುಷ್ಕರ್ಮಿಗಳಿಂದ ಬೆದರಿಕೆ
ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಬಂದ ದುಷ್ಕರ್ಮಿಗಳು ಮೃತ ಹರ್ಷ ಕುಟುಂಬಸ್ಥರಿಗೆ ದುಷ್ಕರ್ಮಿಗಳಿಂದ ಬೆದರಿಕೆ ಹಾಕುವ ಮೂಲಕ ಶಿವಮೊಗ್ಗದಲ್ಲಿ ಶಾಂತಿ ಕದಡುವ ಕೆಲಸ ದುಷ್ಕರ್ಮಿಗಳು ನಡೆಸಿದ್ದಾರೆ. ಘಟನೆಯಿಂದಾಗಿ ಜಿಲ್ಲೆಯಲ್ಲಿ ಮತ್ತೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡಂತಾಗಿದೆ.
ಶಿವಮೊಗ್ಗ: ಗೃಹಸಚಿವ ಆರಗ ಜ್ಞಾನೇಂದ್ರ ಅವರ ಜಿಲ್ಲೆಯಲ್ಲಿ ದುಷ್ಕರ್ಮಿಗಳ ಅಟ್ಟಹಾಸ ನಿಲ್ಲುವಂತೆ ಕಾಣುತ್ತಿಲ್ಲ. ತಡರಾತ್ರಿ ಬೈಕ್‌ನಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಬಂದ ಅನ್ಯಕೋಮಿನ ದುಷ್ಕರ್ಮಿಗಳು ಕೊಲೆಯಾದ ಹರ್ಷನ ಸಹೋದರಿ ಹಾಗೂ ಕುಟುಂಬಸ್ಥರಿಗೆ ಜೀವ ಬೆದರಿಕೆ ಹಾಕಿದ ಘಟನೆ ನಡೆದಿದ್ದು, ಓರ್ವ ಯುವಕನ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಲಾಗಿದೆ. ಇದರಿಂದಾಗಿ ಶಾಂತವಾಗಿದ್ದ ಜಿಲ್ಲೆ ಮತ್ತೆ ಪ್ರಕ್ಷುಬ್ಧ ವಾತಾವರಣಕ್ಕೆ ತಿರುಗಿದಂತಾಗಿದೆ. ಸ್ಥಳೀಯರು ಬೆನ್ನಟ್ಟಲು ಆರಂಭಿಸಿದಾಗ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದು, ಗಾಯಾಳು ಪ್ರಕಾಶ್ ಎಂಬವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆ ನಂತರ ಎಚ್ಚೆತ್ತ ಪೊಲೀಸರು ಸ್ಥಳದಲ್ಲಿ ಬಿಗಿ ಭದ್ರತೆ ನಡೆಸಿದ್ದು, ಎಸ್ಪಿ ಮಿಥುನ್ ಅವರು ಸ್ಥಳಕ್ಕೆ ಭೇಟಿ ನೀಡಿ ಭದ್ರತೆ ಪರಿಶೀಲನೆ ನಡೆಸಿದ್ದಾರೆ.
ಹಿಜಾಬ್ ನಂತರ ಉಂಟಾದ ಕಲಹ ಹರ್ಷನ ಕೊಲೆಯಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಬಳಿಕ ಶಾಂತ ಸ್ಥಿತಿಗೆ ಮರಳಿದ್ದ ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸಲು ದುಷ್ಕರ್ಮಿಗಳು ಮುಂದಾಗಿದ್ದಾರೆ. ತಡರಾತ್ರಿ ಮಾರಕಾಸ್ತ್ರಗಳನ್ನು ಹಿಡಿದು ಬೈಕ್‌ನಲ್ಲಿ ಕೂಗುತ್ತಾ ಓಡಾಡಿದ ಅನ್ಯಕೋಮಿನ ಯುವಕರ ಗುಂಪೊಂದು ಮೃತ ಹರ್ಷನ ಸಹೋದರಿ ಹಾಗೂ ಕುಟುಂಬಸ್ಥರಿಗೆ ಬೆದರಿಕೆ ಹಾಕಿದ್ದಾರೆ.
ಮಾಹಿತಿ ತಿಳಿದ ಸ್ಥಳೀಯರು ದುಷ್ಕರ್ಮಿಗಳನ್ನು ಹಿಂಬಾಲಿಲು ಆರಂಭಸಿದರೂ ಅಷ್ಟರಲ್ಲಾಗಲೇ ಪರಾರಿಯಾಗಿದ್ದರು. ಈ ವೇಳೆ ಭರಮಪ್ಪ ನಗರದಲ್ಲಿ ಪ್ರಕಾಶ್ (25) ಎಂಬ ಯುವಕನಿಗೆ ಕಲ್ಲಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಕೂಡಲೇ ಇವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸೀಗೆಹಟ್ಟಿ ಭಾಗದಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆ.
ಗಾಯಾಳು ಪ್ರಕಾಶ್ ಸಹೋದರ ಹೇಳಿದ್ದೇನು?
ಅನ್ಯಕೋಮಿನ ಯುವಕರಿಂದ ಹಲ್ಲೆಗೊಳಗಾದ ಪ್ರಕಾಶ್ ಸಹೋದರ ಟಿವಿ9 ಜೊತೆ ಮಾತನಾಡಿದ್ದು, ಭಜರಂಗದಳ ಮತ್ತು ಆರ್‌ಎಸ್‌ಎಸ್ ವಿರುದ್ದ ರಸ್ತೆಯಲ್ಲಿ ಬೈದುಕೊಂಡು ಹೋಗತ್ತಿದ್ದರು. ಲಾಂಗ್ ಮಚ್ ಹಿಡಿದುಕೊಂಡು ಗಲಾಟೆ ಮಾಡಿಕೊಂಡು ಹೋಗುತ್ತಿದ್ದರು. ರಾತ್ರಿ ಮೂರು ಬೈಕ್‌ಗಳಲ್ಲಿ ಸುಮಾರು 9 ಮಂದಿ ಮಾಸ್ಕ್ ಹಾಕಿಕೊಂಡು ಹೋಗುತ್ತಿದ್ದರು. ನಮ್ಮ ಏರಿಯಾದ ಜನರು ಎಲ್ಲಾರು ಅವರನ್ನ ನೋಡಿದ್ದಾರೆ. ಈ ಹಿಂದೆ ಗಣೇಶ ಹಬ್ಬ ಸೇರಿದಂತೆ ಕೆಲವು ಹಿಂದೂ ಕಾರ್ಯಕ್ರಮಗಳಲ್ಲಿ ನನ್ನ ಸಹೋದರ ಭಾಗಿಯಾಗಿದ್ದ ಎಂದರು.
ಹರ್ಷನ ಕೊಲೆ ಯಾಕಾಯ್ತು?
ಶಿವಮೊಗ್ಗದಲ್ಲಿ ಹರ್ಷನ ಹತ್ಯೆ ನಡೆಯುವ ಹಿಂದಿನ ಉದ್ದೇಶ ಹಿಂದೂಗಳಲ್ಲಿ ಭಯ ಹುಟ್ಟಿಸುವುದಾಗಿದೆ. ಅಕ್ರಮವಾಗಿ ಗೋವು ಸಾಗಿಸುತ್ತಿದ್ದ ವಾಹನಗಳನ್ನು ಭಜರಂಗದಳದ ಕಾರ್ಯಕರ್ತರು ತಡೆಯುತ್ತಿದ್ದರು. ಕಸಾಯಿ ಖಾನೆಗೆ ಹೋಗುತ್ತಿದ್ದ ಗೂಡ್ಸ್ ವಾಹನಗಳನ್ನು ಅಡ್ಡಗಟ್ಟಲಾಗಿತ್ತು. ಇದರಿಂದಾಗಿ ಮುಸ್ಲಿಮರ ಆದಾಯಕ್ಕೆ ತೊಂದರೆ ಆಗಿತ್ತು. ಹಾಗಾಗಿ ಸಾರ್ವಜನಿಕ ಸ್ಥಳದಲ್ಲಿ ಓರ್ವ ಹಿಂದೂವನ್ನು ಹತ್ಯೆ ಮಾಡಿ ಅವರಲ್ಲಿ ಮುಸ್ಲಿಮರ ಬಗ್ಗೆ ಭಯ ಹುಟ್ಟುತ್ತದೆ ಎಂಬ ಭಾವಿಸಿದ್ದರು. ಈ ಬಗ್ಗೆ ಚರ್ಚೆ ನಡೆಸಿದಾಗ ಮುನ್ನಲೆಗೆ ಬಂದ ಹೆಸರು ಹರ್ಷ. ಈತ ಜಾಲತಾಣದಲ್ಲಿ ಸಕ್ರಿಯನಾಗಿದ್ದಲ್ಲದೆ ಮುಸ್ಲಿಮರನ್ನು ಬಗ್ಗೆ ಟೀಕಿಸಿ ಪೋಸ್ಟ್ ಹಾಕುತ್ತಿದ್ದನು. ಹೀಗಾಗಿ ಈತನ ಹೆಸರನ್ನೇ ಅಂತಿಮಗೊಳಿಸಿದ್ದಾರೆ. ಬಳಿಕ ಸಂಚು ರೂಪಿಸಿ ರಾತ್ರಿ ವೇಳೆ ದಾಳಿ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದರು.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:53 am, Tue, 25 October 22