ಉತ್ತರ ಕನ್ನಡ: ಜಿಲ್ಲೆಯ 11 ತಾಲ್ಲೂಕುಗಳ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸುರಕ್ಷಾಧಿಕಾರಿಗಳಿಗೆ ಅಗಸ್ಟ್ ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. ಕಳೆದ ನಾಲ್ಕು ತಿಂಗಳಿನಿಂದ ಕೆಲಸ ಮಾಡಿಯೂ ವೇತನ ಸೀಗದೆ ಆರೋಗ್ಯ ಸಿಬ್ಬಂದಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ, ಶ್ರುಶ್ರೂಷಕಿಯರು ಸಮಸ್ಯೆ ಪರಿಹರಿಸಿಕೊಡುವಂತೆ ಕಾರವಾರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು. ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಲು ಆಗಮಿಸಿದ್ದರು. ಆದರೆ ಆರೋಗ್ಯಾಧಿಕಾರಿಗಳು ಬೆಳಿಗ್ಗೆಯಿಂದ ಸಭೆಯಲ್ಲಿ ಬ್ಯುಸಿಯಾಗಿದ್ದ ಹಿನ್ನೆಲೆ ಆರೋಗ್ಯ ಸಿಬ್ಬಂದಿ ಕಚೇರಿ ಹೊರಗೆ ಬಿಸಿಲಿನಲ್ಲಿಯೇ ಕಾಯುತ್ತಾ ನಿಲ್ಲುವಂತಾಗಿತ್ತು. ಸಿಬ್ಬಂದಿಯಲ್ಲಿ ಬಹುತೇಕರು ಮಹಿಳೆಯರು ಇದ್ದಾರೆ, ಕುಟುಂಬ ನಿರ್ವಹಣೆಗೆ ವೇತನವನ್ನೇ ನಂಬಿಕೊಂಡಿದ್ದಾರೆ. ಇದೀಗ ಕಳೆದ ನಾಲ್ಕು ತಿಂಗಳಿನಿಂದ ವೇತನ ಪಾವತಿಯಾಗದ ಕಾರಣ ಜೀವನ ನಡೆಸುವುದು ಕಷ್ಟಕರವಾಗಿದ್ದು, ಕೂಡಲೇ ವೇತನ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಜಿಲ್ಲೆಯಾದ್ಯಂತ 11 ತಾಲ್ಲೂಕುಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸುಮಾರು 155 ಮಂದಿ ಆರೋಗ್ಯ ಸಂರಕ್ಷಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅದರಲ್ಲೂ ಕೆಲವರಿಗೆ ಎರಡರಿಂದ ಮೂರು ಕೇಂದ್ರಗಳ ಜವಾಬ್ದಾರಿ ವಹಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಓಡಾಟ ನಡೆಸಬೇಕಾಗಿದೆ. ಆದರೆ ಇಲಾಖೆಯಿಂದ ಓಡಾಟದ ವೆಚ್ಚ ಇತ್ಯಾದಿಗಳು ಇಲ್ಲವಾಗಿದ್ದು, ಇದೀಗ ವೇತನ ಸಹ ಸಮಯಕ್ಕೆ ಸರಿಯಾಗಿ ಸಿಗದಿರುವುದರಿಂದ ಸಂಕಷ್ಟ ಅನುಭವಿಸುವಂತಾಗಿದೆ. ಆರೋಗ್ಯ ಕೇಂದ್ರದ ಸಿಬ್ಬಂದಿ ಕೋವಿಡ್ ಸಂದರ್ಭದಲ್ಲೂ ಕೂಡಾ ರಜೆಯನ್ನು ಪಡೆಯದೇ ಕಾರ್ಯ ನಿರ್ವಹಿಸಿಕೊಂಡು ಬಂದಿದ್ದರು. ಇಷ್ಟು ಕಷ್ಟಪಟ್ಟು ಕೆಲಸ ಮಾಡುವ ಸಿಬ್ಬಂದಿಗೆ ಮೂರು ನಾಲ್ಕು ತಿಂಗಳಿಗೊಮ್ಮೆ ವೇತನ ನೀಡುತ್ತಿರುವುದರಿಂದ ದಿನನಿತ್ಯದ ಖರ್ಚು ವೆಚ್ಚಗಳನ್ನು ನಿಭಾಯಿಸಿಕೊಂಡು ಹೋಗುವುದು ಕಷ್ಟಕರವಾಗಿದೆ. ಹೀಗಾಗಿ ಪ್ರತಿ ತಿಂಗಳು ವೇತನ ಸಿಗುವ ಹಾಗೆ ಅಧಿಕಾರಿಗಳು ಪ್ರಯತ್ನಿಸಿ ವ್ಯವಸ್ಥೆ ಮಾಡಿಕೊಡುವಂತೆ ಸಿಬ್ಬಂದಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಕಾರವಾರ: ಜನರ ಎಚ್ಚರಿಕೆ ಕಡೆಗಣಿಸಿ ಈಜಲು ಕಾಳಿ ನದಿಗಿಳಿದವನನ್ನು ನರಭಕ್ಷಕ ಮೊಸಳೆ ನೀರಿನಾಳಕ್ಕೆ ಎಳೆದೊಯ್ಯಿತು!
ಒಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಓಡಾಡಿ ಜನರ ಆರೋಗ್ಯ ಸ್ಥಿತಿಯನ್ನು ಕಾಯ್ದುಕೊಳ್ಳುವಲ್ಲಿ ಶ್ರಮಿಸುತ್ತಿರುವ ಆರೋಗ್ಯ ಸಿಬ್ಬಂದಿಗಳಿಗೆ ಕಳೆದ ಮೂರ್ನಾಲ್ಕು ತಿಂಗಳಿನಿಂದ ವೇತನ ಸಿಗದಿರುವುದು ನಿಜಕ್ಕೂ ಬೇಸರದ ಸಂಗತಿ. ಇನ್ನಾದರು ಅಧಿಕಾರಿಗಳು ಗಮನಹರಿಸಿ ಆರೋಗ್ಯ ಸಿಬ್ಬಂದಿಗೆ ಸರಿಯಾದ ಸಮಯಕ್ಕೆ ವೇತನ ಸಿಗುವಂತೆ ವ್ಯವಸ್ಥೆ ಮಾಡಬೇಕಾಗಿದೆ.
ವರದಿ:ವಿನಾಯಕ ಬಡಿಗೇರ ಟಿವಿ 9 ಕಾರವಾರ
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ