ಉತ್ತರ ಕನ್ನಡ, ಅ.10: ಉತ್ತರ ಕನ್ನಡ(Uttara Kannada) ಜಿಲ್ಲೆಯ ಒಟ್ಟಾರೆ ಭೂ ಭಾಗದಲ್ಲಿ ಅಂದಾಜು ಶೇ. 80 ರಷ್ಟು ಅರಣ್ಯ ಭಾಗದಿಂದ ಕೂಡಿದೆ. ಹೀಗಾಗಿ ಪ್ರವಾಸಿಗರ ನೆಚ್ಚಿನ ತಾಣವೂ ಆಗಿದೆ. ಆದರೆ, ದುರಾದೃಷ್ಟವಶಾತ್ ಇದೇ ಪ್ರಕೃತಿ ಮಡಿಲಲ್ಲಿ ಬದುಕುತ್ತಿರುವ ಜನರು ಮಾತ್ರ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಇದಕ್ಕೆ ತಾಜಾ ಉದಾಹರಣೆಯಂತೆ ಇಂದು(ಗುರುವಾರ) ಕಾರವಾರದ ಉಮಳೆಜೂಗ್ ದ್ವೀಪ ಗ್ರಾಮದಲ್ಲಿ ಸಾವನ್ನಪ್ಪಿದ ವ್ಯಕ್ತಿಯೊಬ್ಬರ ಶವವನ್ನು ಸಾಗಿಸಲು ರಸ್ತೆಯಿಲ್ಲದೇ ದೋಣಿ ಮೂಲಕ ಸಾಗಿಸಿ ಅಂತ್ಯಕ್ರಿಯೆ ಮಾಡಲಾಗಿದೆ.
ಹೌದು, ಗ್ರಾಮದಲ್ಲಿ ಗುಲ್ಬಾ ಕೋಳಮಕರ್ ಹೆಸರಿನ ವ್ಯಕ್ತಿ ಇಂದು ಸಾವನಪ್ಪಿದ್ದರು. ಉಮಳೆಜೂಗ್ ದ್ವೀಪ ಗ್ರಾಮದಲ್ಲಿ ರುದ್ರಭೂಮಿ ಇಲ್ಲದ ಹಿನ್ನೆಲೆ ಶವ ಸಂಸ್ಕಾರಕ್ಕೆ ನದಿ ದಾಟಿ ಹೋಗಬೇಕಾದ ಅನಿವಾರ್ಯತೆಯಿದೆ. ಹೀಗಾಗಿ ರಸ್ತೆಯಿಲ್ಲದೆ ಶವ ಸಾಗಿಸಲು ಪರದಾಡಿದ ಉಮಳೆಜೂಗ್ ದ್ವೀಪ ಗ್ರಾಮದ ಜನ, ಬಳಿಕ ಶವ ಸಂಸ್ಕಾರಕ್ಕೆ ಕೊಂಡೊಯ್ಯಲು ದೋಣಿ ಬಳಸಿಕೊಂಡು ಹೋಗಿದ್ದಾರೆ.
ಇದನ್ನೂ ಓದಿ:ಬೆಳಗಾವಿ: ಕೃಷ್ಣಾಪುರದಲ್ಲಿ ರಸ್ತೆ ಸಂಪರ್ಕ ಇಲ್ಲದೆ ಶವವನ್ನು 6 ಕಿಮೀ ಹೊತ್ತುಕೊಂಡೇ ಸಾಗಿದ ಗ್ರಾಮಸ್ಥರು
ಸೇತುವೆ ನಿರ್ಮಾಣವಾದರೂ ರಸ್ತೆ ನಿರ್ಮಾಣವಾಗದೇ ಉಮಳೆಜೂಗ್ ಗ್ರಾಮ ದ್ವೀಪವಾಗಿದ್ದು, ಕಾಳಿ ನದಿಯನ್ನು ಬೋಟ್‌ನಲ್ಲಿ ದಾಟಿ ಹೋಗಬೇಕಾದ ಅನಿವಾರ್ಯತೆಯಿದೆ. ನದಿಗೆ ಸೇತುವೆ ಇದ್ದರೂ ರಸ್ತೆ ನಿರ್ಮಾಣವಾಗದೇ ಸೇತುವೆ ಪ್ರಯೋಜನಕ್ಕೆ ಇಲ್ಲದಂತಾಗಿದೆ. ಇದರಿಂದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಇಂದು ದೋಣಿಯಲ್ಲೇ ಶವ ಸಾಗಿಸಿ ಸಂಸ್ಕಾರ ನಡೆಸಿ ಬಂದಿದ್ದಾರೆ. ಸೇತುವೆ ಬಳಕೆಗೆ ಸಿಗದಿರುವುದರಿಂದ ಇಲ್ಲಿನ ಗ್ರಾಮಸ್ಥರು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮತ್ತಷ್ಟ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ