ವಾಲ್ಮೀಕಿ ನಿಗಮದ ಹಗರಣ: ನನ್ನ ಪಾತ್ರವಿಲ್ಲ, ನನ್ನ ವಿರುದ್ಧದ ಆರೋಪ ಸುಳ್ಳು ಎಂದ ಶಾಸಕ ದದ್ದಲ್

| Updated By: ಗಂಗಾಧರ​ ಬ. ಸಾಬೋಜಿ

Updated on: Jun 08, 2024 | 5:38 PM

ವಾಲ್ಮೀಕಿ ನಿಗಮದ ಕೋಟಿ ಕೋಟಿ ಹಗರಣ, ರಾಜ್ಯದಲ್ಲಿ ದೊಡ್ಡ ಮಟ್ಟಿಗೆ ಸದ್ದು ಮಾಡುತ್ತಿದೆ. ಅದ್ರಲ್ಲೂ ಬಿ. ನಾಗೇಂದ್ರ ರಾಜೀನಾಮೆ ಬೆನ್ನಲ್ಲೇ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸನಗೌಡ ದದ್ದಲ್ ತಲೆತಂಡಕ್ಕೆ ಒತ್ತಾಯ ಕೇಳಿ ಬರುತ್ತಿದೆ. ಈ ವಿಚಾರವಾಗಿ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ಹಗರಣದಲ್ಲಿ ನನ್ನ ಪಾತ್ರವಿಲ್ಲ, ನನ್ನ ವಿರುದ್ಧದ ಆರೋಪಗಳು ಸುಳ್ಳು ಎಂದಿದ್ದಾರೆ.

ವಾಲ್ಮೀಕಿ ನಿಗಮದ ಹಗರಣ: ನನ್ನ ಪಾತ್ರವಿಲ್ಲ, ನನ್ನ ವಿರುದ್ಧದ ಆರೋಪ ಸುಳ್ಳು ಎಂದ ಶಾಸಕ ದದ್ದಲ್
ವಾಲ್ಮೀಕಿ ನಿಗಮದ ಹಗರಣ: ನನ್ನ ಪಾತ್ರವಿಲ್ಲ, ನನ್ನ ವಿರುದ್ಧದ ಆರೋಪ ಸುಳ್ಳು ಎಂದ ಶಾಸಕ ದದ್ದಲ್
Follow us on

ರಾಯಚೂರು, ಜೂನ್​ 08: ವರ್ಷದ ಸಂಭ್ರಮದಲ್ಲಿದ್ದ ರಾಜ್ಯ ಸರ್ಕಾರ, ಸುಳಿಯಲ್ಲಿ ‌ಸಿಲುಕಿದೆ. ವಾಲ್ಮೀಕಿ ನಿಗಮದಲ್ಲಾದ ಹಗರಣ (Valmiki corporation fraud), ಬಿ ನಾಗೇಂದ್ರ ತಲೆದಂಡಕ್ಕೆ ಕಾರಣವಾಗಿತ್ತು. ಇದೀಗ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸನಗೌಡ ದದ್ದಲ್ (Basanagouda Daddal) ತಲೆತಂಡಕ್ಕೆ ಒತ್ತಾಯ ಕೇಳಿ ಬರುತ್ತಿದೆ. ಹೀಗಾಗಿ ಈ ವಿಚಾರವಾಗಿ ನಿಗಮದ ಹಗರಣದಲ್ಲಿ ನನ್ನ ಪಾತ್ರವಿಲ್ಲ, ನನ್ನ ವಿರುದ್ಧದ ಆರೋಪಗಳು ಸುಳ್ಳು ಎಂದು ಶಾಸಕ ದದ್ದಲ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ಅಧ್ಯಕ್ಷನಾದ ಬಳಿಕ ಲೋಕಸಭಾ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿತ್ತು. ಎಸ್ಐಟಿ ಹಾಗೂ ಸಿಬಿಐ ಅಧಿಕಾರಿಗಳಿಂದ ತನಿಖೆ ನಡೆಯುತ್ತಿದ್ದು, ವಿಪಕ್ಷಗಳು ಮಾಡಿರುವ ಆರೋಪಕ್ಕೆ ಸಾಕ್ಷ್ಯಗಳಿದ್ರೆ ತನಿಖಾ ಸಂಸ್ಥೆಗೆ ನೀಡಲಿ, ಸತ್ಯ ಹೊರಬರುತ್ತೆ. ಅಲ್ಲಿವರೆಗೆ ನನ್ನ ವಿರುದ್ಧ ಆರೋಪ ಮಾಡೋದನ್ನು ವಿಪಕ್ಷಗಳು ಕೈಬಿಡಬೇಕು. ಪಟ್ಟಬದ್ಧ ಹಿತಾಸಕ್ತಿಗಳಿಂದ ಹಣ ದುರ್ಬಳಕೆಯಾಗಿರೋದು ನೋವುಂಟು ಮಾಡಿದೆ ಎಂದಿದ್ದಾರೆ.

ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ನಾನು ಯಾವುದೇ ಸಾಕ್ಷ್ಯ ನಾಶ ಮಾಡಿಲ್ಲ; ಬಸನಗೌಡ ದದ್ದಲ್

ಟಿವಿ9ಗೆ ಬಸನಗೌಡ ದದ್ದಲ್ ಮಾತನಾಡಿದ್ದು, ಪ್ರಕರಣದಲ್ಲಿ ನನ್ನ ಯಾವುದೇ ಪಾತ್ರ ಇಲ್ಲ, ಇಷ್ಟೇ ಅಲ್ಲ, ತನಿಖೆಗೆ ನಾನು ಸಂಪೂರ್ಣವಾಗಿ ‌ಸಹಕರಿಸುತ್ತೇನೆ. ಹಣ ಯಾರ ಯಾರ ಖಾತೆಗೆ ಹೋಗಿದೆ ಎಲ್ಲ ಕಲೆ ಹಾಕ್ತಿದ್ದೇವೆ. ಆ ಹಣವನ್ನು ವಾಪಸ್ಸು ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಸಿಎಂ ರಾಜೀನಾಮೆ ಕೇಳಿದರೆ ನಾನು ಕೊಡೋದಕ್ಕೂ ಸಿದ್ಧ ಎಂದು ಹೇಳಿದ್ದಾರೆ.

ಮಾಧ್ಯಮ ಪ್ರಕಟಣೆಯಲ್ಲೇನಿದೆ?

ಕರ್ನಾಟಕ ರಾಜ್ಯದಲ್ಲಿ ಇತ್ತೀಚೆಗೆ ಮಹರ್ಷಿ ವಾಲ್ಮೀಕಿ ನಿಗಮದ ರೂ. 187.00 ಕೋಟಿ ಹಗರಣದ ತನಿಖೆಯು ರಾಜ್ಯ ಸರ್ಕಾರ ನೇಮಿಸಿದ ಎಸ್.ಐ.ಟಿ ದೂರು ದಾಖಲಿಸಿ 5 ಜನ ಆರೋಪಿಗಳನ್ನು ಬಂಧಿಸಿದೆ. ಇಂತಹ ಸಂದರ್ಭದಲ್ಲಿ ವಿರೋಧ ಪಕ್ಷಗಳು ಅನಗತ್ಯವಾಗಿ ನನ್ನ ಮೇಲೆ ಮಾಡಿರುವ ಆರೋಪವು ಸತ್ಯಕ್ಕೆ ದೂರವಾಗಿರುತ್ತದೆ. ಅಲ್ಲದೇ ಸದರಿ ಹಗರಣ ನಡೆದ ಅವಧಿ ಮತ್ತು ನಾನು ನಿಗಮದ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ನಂತರ ಲೋಕಸಭಾ ಚುನಾವಣೆ ಅಧಿಸೂಚನೆ ಹಿನ್ನಲೆಯಲ್ಲಿ ರಾಜ್ಯದ್ಯಂತ ನೀತಿ ಸಂಹಿತೆ ಜಾರಿಯಲ್ಲಿತ್ತು.

ನಾನು ಪರಿಶಿಷ್ಟ ಪಂಗಡಗಳ ಸಮುದಾಯಕ್ಕೆ ಮೀಸಲಿದ್ದ ವಿಧಾನಸಭಾ ಕ್ಷೇತ್ರದಿಂದ ಚುನಾಯಿತನಾಗಿದ್ದು, ಯಾವುದೇ ಕಾರಣಕ್ಕೂ ಆ ಸಮುದಾಯದ ಹಿತ ಕಾಪಾಡುವುದು ನನ್ನ ಕರ್ತವ್ಯವಾಗಿದ್ದು, ಸರ್ಕಾರ ಸದರಿ ನಿಗಮಕ್ಕೆ ನನ್ನನ್ನು ಅಧ್ಯಕ್ಷನಾಗಿ ನೇಮಿಸಿರುವುದು ರಾಜ್ಯಾದ್ಯಂತ ವಾಸಿಸುತ್ತಿರುವ ನನ್ನ ಸಮುದಾಯಕ್ಕೆ ಸೇವೆ ಮಾಡಲು ಅವಕಾಶ ನೀಡಿದೆ ಎಂದೇ ಭಾವಿಸಿ ಕೆಲಸ ಮಾಡಲು ಉದ್ದೇಶಿಸಿರುತ್ತೇನೆ.

ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಗರಣಕ್ಕೆ ತಿರುವು: ಮತ್ತೊಬ್ಬ ಸಚಿವರ ಹೆಸರು ತಳುಕು

ಆದರೆ ದುರಾದೃಷ್ಟ ಪಟಬದ್ಧ ಹಿತಾಸಕ್ತ ವ್ಯಕ್ತಿಗಳಿಂದ ನಿಗಮದ ಅನುದಾನ ದುರ್ಬಳಕೆಯಾಗಿರುವುದು ನನಗೆ ನೋವುಂಟು ಮಾಡಿದೆ. ಸರ್ಕಾರವು ಸದರಿ ಪ್ರಕರಣವನ್ನು ಕುಲಂಕುಶವಾಗಿ ತನಿಖೆಗೆ ಒಳಪಡಿಸುತ್ತಿದ್ದು, ಯಾರೇ ಆರೋಪಿಗಳಾಗಿದ್ದರು ಕಾನೂನು ವ್ಯಾಪ್ತಿಯಲ್ಲಿ ಸೂಕ್ತ ಕ್ರಮ ಜರುಗಿಸುತ್ತದೆ ಎಂದು ನಂಬಿದ್ದೇನೆ.

ಪ್ರಕರಣದಲ್ಲಿ ನಿಗಮದ ಅಧ್ಯಕ್ಷನಾಗಿ ನನ್ನ ಪಾತ್ರ ಏನು ಇಲ್ಲ ಎಂದು ಈ ಮೂಲಕ ಸಾರ್ವಜನಿಕರ ಗಮನಕ್ಕೆ ತರಲು ಬಯಸುತ್ತೇನೆ. ಯಾರೇ ಏನೇ ಆರೋಪ ಮಾಡಿದ್ದರು ಸತ್ಯಕ್ಕೆ ದೂರವಾಗಿದೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.