‘ಪ್ರಧಾನಿ ಮೋದಿ ಓರ್ವ ಬಕಾಸುರ; ತಮಿಳುನಾಡಿನಲ್ಲಿ BJPಯನ್ನು ಅಧಿಕಾರಕ್ಕೆ ತರುವ ದುರುದ್ದೇಶದಿಂದ ಸಾವಿರಾರು ಕೋಟಿ ಬಿಡುಗಡೆ ಮಾಡ್ತಾರೆ’

Vatal Nagaraj ತಮಿಳುನಾಡಿನಲ್ಲಿ ಕಾವೇರಿ ನದಿ ಜೋಡಣೆ ಯೋಜನೆಯನ್ನು ವಿರೋಧಿಸಿ ನಗರದಲ್ಲಿ ಇಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್​ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ವಾಟಾಳ್​ ಧರಣಿ ಮಾಡಿದರು.

‘ಪ್ರಧಾನಿ ಮೋದಿ ಓರ್ವ ಬಕಾಸುರ; ತಮಿಳುನಾಡಿನಲ್ಲಿ BJPಯನ್ನು ಅಧಿಕಾರಕ್ಕೆ ತರುವ ದುರುದ್ದೇಶದಿಂದ ಸಾವಿರಾರು ಕೋಟಿ ಬಿಡುಗಡೆ ಮಾಡ್ತಾರೆ’
ಪ್ರಧಾನ ಮಂತ್ರಿ ನರೇಂದ್ರ ಮೋದಿ (ಎಡ); ವಾಟಾಳ್ ನಾಗರಾಜ್ (ಬಲ)

Updated on: Feb 25, 2021 | 7:32 PM

ಚಾಮರಾಜನಗರ: ತಮಿಳುನಾಡಿನಲ್ಲಿ ಕಾವೇರಿ ನದಿ ಜೋಡಣೆ ಯೋಜನೆಯನ್ನು ವಿರೋಧಿಸಿ ನಗರದಲ್ಲಿ ಇಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್​ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ವಾಟಾಳ್​ ಧರಣಿ ಮಾಡಿದರು. ಈ ನಡುವೆ ಮಾತನಾಡಿದ ವಾಟಾಳ್​ ನಾಗರಾಜ್,​ ಕಾವೇರಿ ನದಿ ಜೋಡಣೆಗೆ ತಮಿಳುನಾಡು ಸರ್ಕಾರ ರೂಪಿಸಿರುವ ಯೋಜನೆಗೆ ಕರ್ನಾಟಕ ಸರ್ಕಾರ ಅವಕಾಶ ನೀಡದಂತೆ ಆಗ್ರಹಿಸಿದರು. ಮುಖ್ಯಮಂತ್ರಿ ಯಡಿಯೂರಪ್ಪ ಅಸಮರ್ಥ ಎಂದು ಕಿಡಿಕಾರಿದ ವಾಟಾಳ್​ ರಾಜ್ಯದ ಗುಪ್ತದಳ ಸಂಪೂರ್ಣ ವಿಫಲವಾಗಿದೆ ಎಂದು ಗುಡುಗಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಓರ್ವ ಬಕಾಸುರ. ಅವರಿಗೆ ತಮಿಳುನಾಡಿನಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ದುರುದ್ದೇಶವಿದೆ. ಹಾಗಾಗಿ, ತಮಿಳುನಾಡಿಗೆ ಸಾವಿರಾರು ಕೋಟಿ ರೂ. ಬಿಡುಗಡೆ ಮಾಡುತ್ತಾರೆ. ತಮಿಳುನಾಡು ಸರ್ಕಾರ RSS, ಬಿಜೆಪಿ ಸರ್ಕಾರದ ಏಜೆಂಟ್ ಎಂದು ಸಹ ಕಿಡಿಕಾರಿದರು. ಪಶ್ಚಿಮ ಬಂಗಾಳವನ್ನು ತುಳಿದು ಹಾಕಲು ಮೋದಿ ಮುಂದಾಗಿದ್ದಾರೆ ಎಂದು ಹೇಳಿದರು. ಗುಜರಾತ್​ನ ಕ್ರಿಕೆಟ್ ಸ್ಟೇಡಿಯಂಗೆ ಮೋದಿಯವರ ಹೆಸರಿಟ್ಟ ಹಿನ್ನೆಲೆಯಲ್ಲಿ ಕ್ರಿಕೆಟ್​ ಸ್ಟೇಡಿಯಂಗೆ ಮಹಾತ್ಮ ಗಾಂಧಿ ಎಂದು ಹೆಸರು ಇಡಬೇಕಿತ್ತು ಎಂದು ನಗರದಲ್ಲಿ ವಾಟಾಳ್ ನಾಗರಾಜ್​ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ವಾಟಾಳ್​ ಧರಣಿ

ಕಾವೇರಿ ನದಿ ಜೋಡಣೆ ಯೋಜನೆಯನ್ನು ವಿರೋಧಿಸಿ ವಾಟಾಳ್ ನಾಗರಾಜ್​ ಪ್ರತಿಭಟನೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಓರ್ವ ಬಕಾಸುರ ಎಂದು ಕಿಡಿಕಾರಿದ ವಾಟಾಳ್

ಕಾವೇರಿ ನದಿ ಜೋಡಣೆಗೆ ಶಂಕುಸ್ಥಾಪನೆ
ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅವರು ಫೆಬ್ರವರಿ 21ರಂದು ಕಾವೇರಿ ನದಿಗಳ ಜೋಡಣೆ ಮೊದಲ ಹಂತದ ಬೃಹತ್​ ಯೋಜನೆಗೆ ಚಾಲನೆ ನೀಡಿದ್ದಾರೆ. ಇದು 6,941 ಕೋಟಿ ರೂ. ವೆಚ್ಚದ ಯೋಜನೆಯಾಗಿದ್ದು, ಮೊದಲ ಹಂತದಲ್ಲಿ ವೆಲ್ಲಾರು, ವೈಗೈ, ಗುಂಡಾರು ಜೋಡಣೆಗಳನ್ನು ಮಾಡಲಾಗುವುದು. ಈ ಯೋಜನೆಗಿಂದು ವಿರಾಳಿಮಲೈ- ಕುಣ್ಣತ್ತೂರು ಬಳಿ ಸಿಎಂ ಪಳಿನಿಸ್ವಾಮಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಮಾರ್ಚ್​ 1ರಂದು ಪ್ರಧಾನಿ ನರೇಂದ್ರ ಮೋದಿ ಇನ್ನೊಮ್ಮೆ ಚಾಲನೆ ನೀಡಲಿದ್ದಾರೆ. ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿರುವ ಬೆನ್ನಲ್ಲೇ ಅಲ್ಲಿನ ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಕಾವೇರಿ ನದಿ ನೀರಿನ ಬಗ್ಗೆ ಮತ್ತಷ್ಟು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಇನ್ನು ಮೊದಲಿನಿಂದಲೂ ತಮಿಳುನಾಡು ಮತ್ತು ಕರ್ನಾಟಕದ ನಡುವೆ ಕಾವೇರಿ ವಿವಾದ ಇದ್ದು, ಸದ್ಯ ತಮಿಳುನಾಡು ಕೈಗೆತ್ತಿಕೊಂಡಿರುವ ನದಿ ಜೋಡಣೆಯಿಂದಲೂ ರಾಜ್ಯಕ್ಕೆ ಅನನುಕೂಲವಾಗಲಿದೆ ಎಂದು ಜಲತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಮೇಶ್​ ಜಾರಕಿಹೊಳಿ ನೇತೃತ್ವದಲ್ಲಿ ಸಭೆ
ಅತ್ತ ತಮಿಳುನಾಡು ಸಿಎಂ ಕಾವೇರಿ ನದಿ ಜೋಡಣೆಗಳ ಯೋಜನೆಗೆ ಶಂಕುಸ್ಥಾಪನೆ ಮಾಡುತ್ತಿದ್ದರೆ, ಅದರಿಂದ ರಾಜ್ಯಕ್ಕೆ ಆಗುವ ಅನಾನುಕೂಲದ ಬಗ್ಗೆ ದೆಹಲಿಯ ಕರ್ನಾಟಕ ಭವನದಲ್ಲಿ ಜಲಸಂಪನ್ಮೂಲ ಇಲಾಖೆ ಸಚಿವ ರಮೇಶ್​ ಜಾರಕಿಹೊಳಿ ಸಭೆ ನಡೆಸಿದ್ದಾರೆ. ರಾಜ್ಯದ ವಕೀಲರ ತಂಡ, ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ್ದಾರೆ. ಮುಂದೆ ಯಾವ ರೀತಿಯಲ್ಲಿ ಕಾನೂನು ಹೋರಾಟ ನಡೆಸಬೇಕು ಎಂಬ ಬಗ್ಗೆಯೂ ಚರ್ಚೆ ನಡೆಸಿದ್ದಾರೆ. ಹಾಗೇ, ಸೋಮವಾರ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಶೇಖಾವತ್​ರನ್ನು ರಮೇಶ್​ ಜಾರಕಿಹೊಳಿ ಭೇಟಿಯಾಗಲಿದ್ದಾರೆ.

ಇದನ್ನೂ ಓದಿ: ಯಾವುದೇ ಕಾರಣಕ್ಕೂ ಹೆಚ್ಚುವರಿ ಕಾವೇರಿ ನೀರು ಪಡೆಯಲು ತಮಿಳುನಾಡಿಗೆ ಅವಕಾಶ ನೀಡಲ್ಲ- ಮುಖ್ಯಮಂತ್ರಿ ಯಡಿಯೂರಪ್ಪ

Published On - 7:14 pm, Thu, 25 February 21