Tv9 Digital Live: ಕೊರೊನಾ ಎರಡನೇ ಅಲೆ ನಮ್ಮ ರಾಜ್ಯದಲ್ಲೂ ಆತಂಕ ಸೃಷ್ಟಿಸುತ್ತದೆಯೇ?
TV9 Digital Live: ಕೊರೊನಾ 2ನೇ ಅಲೆ ನಮ್ಮ ರಾಜ್ಯದಲ್ಲೂ ಆತಂಕ ಸೃಷ್ಟಿಸುತ್ತದೆಯೇ? ನಾವೇನು ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕು? ವ್ಯಾಕ್ಸಿನ್ ಒಂದೇ ಪರಿಹಾರವಾ? ಎಂಬುದರ ಕುರಿತಾಗಿ ಇಂದಿನ ಟಿವಿ9 ಡಿಜಿಟಲ್ ಲೈವ್ ಚರ್ಚೆ.
ಕೊರೊನಾ ಮತ್ತೊಮ್ಮೆ ಸದ್ದು ಮಾಡಿದೆ. ನೆರೆಯ ಕೇರಳ ರಾಜ್ಯದಲ್ಲಿ ಕೊರೊನಾ 2ನೇ ಅಲೆ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಕರ್ನಾಟಕದಲ್ಲೂ ಕೊರೊನಾ ಮತ್ತೆ ಜಾಸ್ತಿಯಾಗುತ್ತಿದೆ. ಕೊರೊನಾ 2ನೇ ಅಲೆ ನಮ್ಮ ರಾಜ್ಯದಲ್ಲೂ ಆತಂಕ ಸೃಷ್ಟಿಸುತ್ತದೆಯೇ? 2ನೇ ಅಲೆ ಎಷ್ಟು ಪರಿಣಾಮಕಾರಿ? ನಾವೇನು ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕು? ಲಸಿಕೆಯೊಂದೇ ಪರಿಹಾರವೇ? ಎಂಬ ವಿಷಯದ ಕುರಿತಾಗಿ ಟಿವಿ9 ಕನ್ನಡ ಡಿಜಿಟಲ್ ಲೈವ್ನಲ್ಲಿ (Tv9 Kannada Digital Live) ಆ್ಯಂಕರ್ ಅವಿನಾಶ್, ತಜ್ಞವೈದ್ಯರಾದ ಡಾ. ಸುನಿಲ್, ಡಾ. ಪವನ್ ಮತ್ತು ಡಾ. ಚೇತನ್ ಚರ್ಚೆ ನಡೆಸಿದರು.
ಮಹಾರಾಷ್ಟ್ರದಲ್ಲಿ, ಕೇರಳದಲ್ಲಿ ಏಕೆ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿದೆ ಎಂಬ ಪ್ರಶ್ನೆಗೆ ಸಂಬಂಧಿಸಿದಂತೆ ಮಾತನಾಡಿದ ಡಾ. ಪವನ್, ಸಾಕಷ್ಟು ಜನರಿಗೆ ಕೋವಿಡ್ ನಮಗಿಲ್ಲ. ಅದರಿಂದ ನಮಗೆ ಹಾನಿ ಇಲ್ಲ ಎಂಬ ಭಾವನೆ ಬಂದಿದೆ. ಆದರೆ ಜನರು ಈ ರೀತಿಯಾಗಿ ಉಡಾಫೆಯಾಗಿ ಯೋಚಿಸಬಾರದು. ಸೋಂಕಿತರ ಸಂಖ್ಯೆ ಶೇ. 70-80ರಷ್ಟು ಕೇರಳ, ಮಹಾರಾಷ್ಟ್ರದಿಂದ ಕೇಳಿ ಬರುತ್ತಿದೆ. ಕರ್ನಾಟಕದ ಜನರು ಸಂಚಾರ ಕಡಿಮೆ ಮಾಡುವುದು ಉತ್ತಮ.
ಜನರು ಹೊರಗಡೆ ತಿರುಗಾಡುವ ಮೂಲಕ ಸೋಂಕು ತಗುಲುತ್ತಾ ಹೋಗುತ್ತದೆ. ಬೆಂಗಳೂರಿನಲ್ಲಿ ಕೇರಳದ ಜನರು, ಮಹಾರಾಷ್ಟ್ರದ ಜನರು ಕೆಲಸ ಮಾಡುತ್ತಿದ್ದಾರೆ. ಅವರು ಮಹಾರಾಷ್ಟ್ರಕ್ಕಾಗಲೀ, ಕೇರಳಕ್ಕಾಗಲೀ ಪದೇಪದೆ ಸಂಚಾರ ಮಾಡುವುದರ ಮೂಲಕ ಸೋಂಕು ಹರಡುತ್ತದೆ. ಹಾಗಾಗಿ ಜನರು ಸೋಂಕಿನ ಕುರಿತು ಗಮನ ಹರಿಸಿ ಸಂಚಾರ ಕಡಿಮೆ ಮಾಡಿ. ಲಸಿಕೆ ಪಡೆಯುವುದು. ರೋಗ ನಿರೋಧಕ ಶಕ್ತಿ ಲಸಿಕೆಯಲ್ಲಿದೆ. ಅದನ್ನು ಪಡೆದಾಗ ಸೋಂಕಿನ ವಿರುದ್ಧ ಹೋರಾಡುವ ಶಕ್ತಿ ನಮ್ಮಲ್ಲಿ ಸಿಗುತ್ತದೆ. ಇದರಿಂದ ನಮ್ಮ ದೇಹ ಸೋಂಕಿನ ವಿರುದ್ಧ ಹೋರಾಡುತ್ತದೆ. ಲಸಿಕೆ ನೂರಕ್ಕೆ ನೂರರಷ್ಟು ಸುರಕ್ಷಿತವೋ ಎಂಬ ಪ್ರಶ್ನೆ ಕೇಳಿಬರುತ್ತಿದೆ. ಆದರೆ, ಲಸಿಕೆಯಿಂದ ಅಡ್ಡ ಪರಿಣಾಮಗಳಿಲ್ಲ. ಸೋಂಕಿನ ವಿರುದ್ಧ ಹೋರಾಡುವ ಶಕ್ತಿ ಲಸಿಕೆಯಲ್ಲಿದೆ. ಹಾಗಾಗಿ ಲಸಿಕೆ ಪಡೆಯಲೇ ಬೇಕು. ಇದರಿಂದ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವುದನ್ನು ಕಡಿಮೆ ಮಾಡಬಹುದು ಎಂದು ಮಾತನಾಡಿದರು.
ಕೇರಳದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಏನು ಕಾರಣವಿರಬಹುದು? ಎಂಬ ಪ್ರಶ್ನೆಗೆ ಡಾ. ಸುನೀಲ್ ಮಾತನಾಡಿ, ಕೇರಳದ ಜನರಲ್ಲಿ ಹೆಚ್ಚು ಸೋಂಕು ಹೆಚ್ಚಾಗಿರುವುದು ಹೊರ ರಾಜ್ಯದಿಂದ ಬಂದ ಜನರಿಂದ. ಹೆಚ್ಚು ಜನರು ಹೊರಗಡೆ ಸಂಚಾರ ಕೈಗೊಂಡರು. ಹಾಗಾಗಿ ಬೇರೆ ಕಡೆಗಳಿಂದ ಜನರು ಸಂಚರಿಸಲು ಪ್ರಾರಂಭಿಸಿದರು. ಇದರಿಂದಾಗಿ ಒಬ್ಬರಿಂದ ಒಬ್ಬರಿಗೆ ಸೋಂಕು ತಗುಲುತ್ತಾ ಹೋಯಿತು. ವಿಶೇಷ- ಸಭೆ ಸಮಾರಂಭದಲ್ಲಿ ಜನರು ಮಾಸ್ಕ್ ಇಲ್ಲದೇ, ಅಂತರ ಇಲ್ಲದೇ ಓಡಾಡ್ತಿದ್ದಾರೆ. ಬೆಂಗಳೂರಲ್ಲಿ ಭಾರತದಿಂದ ಜನರು ಆಗಮಿಸುವುದು ಹೆಚ್ಚು. ಇದರಿಂದ ಸಂಚಾರ ಹೆಚ್ಚುತ್ತದೆ. ಒಂದು ಬಾರಿ ಸೋಂಕು ಹರಡಿದ್ದೇ ಆದರೆ, ಬೆಂಗಳೂರಿನಲ್ಲಿ ಒಂದೇ ಸಾರಿ ಸೋಂಕು ಎಲ್ಲೆಡೆ ಹರಡಬಹುದು. ಕೊರೊನಾ ಮೊದಲನೇ ಅಲೆಗೆ ಯಾವ ರೀತಿ ಮುಂಜಾಗ್ರತೆ ವಹಿಸಿದ್ದೆವೋ. ಅದೇ ರೀತಿ ಎರಡನೇ ಅಲೆಗೂ ಮುಂಜಾಗ್ರತೆ ಅತ್ಯವಶ್ಯಕ ಎಂದರು.
ಎರಡನೇ ಅಲೆ ಬರುವ ಆತಂಕ ಇದೆಯಾ? ಎಂಬ ಪ್ರಶ್ನೆಗೆ ಡಾ.ಚೇತನ್ ಮಾತನಾಡಿ, ಕೊರೊನಾ ಟೆಸ್ಟ್ ಮಾಡಿಸುತ್ತಿದ್ದೇವೆ. ಟೆಸ್ಟ್ ಮೂಲಕ ಕೊರೊನಾ ಜನರ ಸಂಖ್ಯೆ ಸಿಗುತ್ತದೆ. ಆ ಸಂಖ್ಯೆ ಬಗೆಗೆ ಗಮನ ಹರಿಸುವುದರ ಬದಲು ಕೊರೊನಾ ಸೋಂಕಿತರ ಕಡೆಗೆ ಹೆಚ್ಚು ಗಮನ ಹರಿಸುವುದು ಮುಖ್ಯ. ಕೊರೊನಾ ನೆಗೆಟಿವ್ ಬಂತು ಅಂದ ತಕ್ಷಣ ಬೇಕಾಬಿಟ್ಟಿ ತಿರುಗಾಡುವುದನ್ನು ಕಡಿಮೆ ಮಾಡಬೇಕು. ಏಕೆಂದರೆ. ಕೊರೊನಾ ಸೋಂಕು ಹೇಗೆ, ಯಾವಾಗ ಜನರಿಗೆ ತಗುಲುತ್ತದೆ ಎಂಬುದನ್ನು ಯಾರೂ ಹೇಳಲು ಸಾಧ್ಯವಿಲ್ಲ. ಈ ಕುರಿತಾಗಿ ಜನರು ಗಮನ ಹರಿಸಲೇ ಬೇಕು. ವೈದ್ಯರೂ ಕೂಡಾ ಗಮನ ಹರಿಸಬೇಕು. ನಮ್ಮ ಜನರ ಗುಣ, ನಮ್ಮ ಆಸ್ಪತ್ರೆಯ ಸೌಲಭ್ಯ, ಹಣಕಾಸುಗಳನ್ನು ಗಮನದಲ್ಲಿರಿಸಿಕೊಂಡು ಸರ್ಕಾರ ಕ್ರಮ ಕೈಗೊಳ್ಳಬೇಕು. ವರದಿ ನೆಗೆಟಿವ್ ಬಂತು ಎಂದಾಕ್ಷಣ ಜನರು ಆರಾಮಾಗಿ ಎಲ್ಲಿಬೇಕಾದರಲ್ಲಿ ಓಡಾಡುವುದನ್ನು ನಿಲ್ಲಿಸಿ. ಆಸ್ಪತ್ರೆ ದುಡ್ಡು ಮಾಡಲು ಟೆಸ್ಟ್ ಮಾಡುತ್ತಿದ್ದಾರೆ, ಅಡ್ಮಿಟ್ ಮಾಡಿಕೊಳ್ಳುತ್ತಿದ್ದಾರೆ ಎಂಬ ಯೋಚನೆಯಲ್ಲಿ ಜನರಿದ್ದಾರೆ. ಜನರು ಅಡ್ಮಿಟ್ ಮಾಡಿಕೊಳ್ಳಬೇಕೆಂದಿಲ್ಲ. ಮೊದಲು ಲಸಿಕೆ ಪಡೆಯಿರಿ. ಕೊರೊನಾ ವರದಿ ಪಡೆಯಿರಿ ಎಂದು ಜನರಿಗೆ ಕಿವಿಮಾತು ಹೇಳಿದರು.
ಇದನ್ನೂ ಓದಿ: TV9 Digital Live | ಕೊರೊನಾ ಲಸಿಕೆ ಪಡೆಯಲು ಹಿಂಜರಿಕೆ ಏಕೆ?