ಬೆಳಗ್ಗೆ 10 ಗಂಟೆ ನಂತರ ರಸ್ತೆಗಿಳಿದರೆ ವಾಹನ ಜಪ್ತಿ, ದೂರು ದಾಖಲು; ಬೆಂಗಳೂರಿನಲ್ಲಿ ಇಂದಿನಿಂದಲೇ ನಿಯಮ ಜಾರಿ

|

Updated on: May 08, 2021 | 8:29 AM

ಇಂದು ಬೆಳಗ್ಗೆ 10 ಗಂಟೆಯ ನಂತರ ಅನಗತ್ಯವಾಗಿ ರಸ್ತೆಗಿಳಿಯುವ ವಾಹನಗಳ ಮೇಲೆ ಪ್ರಕರಣ ದಾಖಲಿಸಿ, ಜಪ್ತಿ ಮಾಡುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್​ ಪಂತ್ ಸೂಚನೆ ನೀಡಿದ್ದಾರೆ. ಮೆಡಿಕಲ್ ಎಮರ್ಜೆನ್ಸಿ ಹೊರತಾಗಿ ಯಾವುದೇ ಕಾರಣಕ್ಕೂ ಜನರು ರಸ್ತೆಗಿಳಿಯುವಂತಿಲ್ಲ.

ಬೆಳಗ್ಗೆ 10 ಗಂಟೆ ನಂತರ ರಸ್ತೆಗಿಳಿದರೆ ವಾಹನ ಜಪ್ತಿ, ದೂರು ದಾಖಲು; ಬೆಂಗಳೂರಿನಲ್ಲಿ ಇಂದಿನಿಂದಲೇ ನಿಯಮ ಜಾರಿ
ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್​
Follow us on

ಬೆಂಗಳೂರು: ಕೊರೊನಾ ಎರಡನೇ ನಿಯಂತ್ರಿಸುವ ಸಲುವಾಗಿ ಸೋಮವಾರದಿಂದ (ಮೇ 10) ರಾಜ್ಯಾದ್ಯಂತ ಕಠಿಣ ನಿಯಮಾವಳಿಗಳು ಜಾರಿಯಾಗಲಿವೆ ಎಂದು ರಾಜ್ಯ ಸರ್ಕಾರ ಈಗಾಗಲೇ ತಿಳಿಸಿದೆ. ಮೇ 10 ರಿಂದ ಮೇ 24ರ ವರೆಗೆ ಲಾಕ್​ಡೌನ್ ಮಾದರಿಯ ಕಠಿಣ ಕ್ರಮ ಅಸ್ತಿತ್ವದಲ್ಲಿ ಇರಲಿದ್ದು ಆ ಸಂದರ್ಭದಲ್ಲಿ ಯಾರೂ ಕೂಡಾ ನಿಯಮ ಉಲ್ಲಂಘನೆ ಮಾಡುವಂತಿಲ್ಲ ಎಂದು ಸರ್ಕಾರ ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡಿದೆ. ರಾಜ್ಯಾದ್ಯಂತ ಸೋಮವಾರದಿಂದ ನಿಯಮಗಳು ಅನ್ವಯವಾಗಲಿವೆಯಾದರೂ ಬೆಂಗಳೂರು ಪೊಲೀಸರು ಇಂದು (ಮೇ.8) ಬೆಳಗ್ಗೆ 10 ಗಂಟೆಯಿಂದಲೇ ಬಿಗಿಕ್ರಮಗಳನ್ನು ಅನುಷ್ಠಾನಗೊಳಿಸಲು ಸಜ್ಜಾಗಿದ್ದಾರೆ.

ಇಂದು ಬೆಳಗ್ಗೆ 10 ಗಂಟೆಯ ನಂತರ ಅನಗತ್ಯವಾಗಿ ರಸ್ತೆಗಿಳಿಯುವ ವಾಹನಗಳ ಮೇಲೆ ಪ್ರಕರಣ ದಾಖಲಿಸಿ, ಜಪ್ತಿ ಮಾಡುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್​ ಪಂತ್ ಸೂಚನೆ ನೀಡಿದ್ದಾರೆ. ಕಠಿಣ ನಿಯಮಾವಳಿಗಳನ್ನು ನಿಯಂತ್ರಿಸಲು ಪೊಲೀಸರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದ್ದು, ಮೆಡಿಕಲ್ ಎಮರ್ಜೆನ್ಸಿ ಹೊರತಾಗಿ ಯಾವುದೇ ಕಾರಣಕ್ಕೂ ಜನರು ರಸ್ತೆಗಿಳಿಯುವಂತಿಲ್ಲ ಎಂದು ಕಟ್ಟುನಿಟ್ಟಾಗಿ ತಿಳಿಸಿದ್ದಾರೆ. ಹೀಗಾಗಿ ಸಂಚಾರ ನಿರ್ಬಂಧಿಸಲು ಮುಖ್ಯ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಮತ್ತಷ್ಟು ಕಣ್ಗಾವಲಿಡಲು ಪೊಲೀಸರು ಸಜ್ಜಾಗಿದ್ದಾರೆ.

ಇಷ್ಟು ದಿನಗಳ ಕಾಲ ಜನರು ಮನವಿ ಮಾಡಿಕೊಂಡ ಕಾರಣಕ್ಕೆ ಕೆಲ ವಿನಾಯಿತಿ ನೀಡುತ್ತಿದ್ದರೆ ಇಂದಿನಿಂದ ಅವುಗಳಿಗೆ ಯಾವ ಕಾರಣಕ್ಕೂ ಅವಕಾಶ ಇಲ್ಲ. ವೈದ್ಯಕೀಯ ತುರ್ತು ಅಗತ್ಯದ ಹೊರತಾಗಿ ಯಾರೇ ಮನೆಯಿಂದ ಹೊರಬಂದರೂ ಅವರ ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಎಂದು ಆಯುಕ್ತರು ಸೂಚಿಸಿದ್ದಾರೆ. ಈ ಕಾರಣದಿಂದಾಗಿ ಇಂದಿನಿಂದಲೇ ಬೆಂಗಳೂರು ಜನತೆಗೆ ಲಾಕ್​ಡೌನ್​ ಬಿಸಿ ತಟ್ಟಲಿದೆ.

ಇದನ್ನೂ ಓದಿ:
ಲಾಕ್​ಡೌನ್ ನಿಯಮ ಜಾರಿಗೊಳಿಸಲು ಪೊಲೀಸರಿಗೆ ಸಂಪೂರ್ಣ ಅಧಿಕಾರ; ಸುಖಾಸುಮ್ಮನೆ ಬೀದಿಗಿಳಿಯುವಂತಿಲ್ಲ