ಲಾಕ್‌ಡೌನ್ ನಿಯಮ ಜಾರಿಗೊಳಿಸಲು ಪೊಲೀಸರಿಗೆ ಸಂಪೂರ್ಣ ಅಧಿಕಾರ; ಸುಖಾಸುಮ್ಮನೆ ಬೀದಿಗಿಳಿಯುವಂತಿಲ್ಲ
Karnataka Police On Guidelines: ಈ ಅವಧಿಯಲ್ಲಿ ಒಬ್ಬನೇ ವ್ಯಕ್ತಿ ರಸ್ತೆಯಲ್ಲಿ ಓಡಾಡೋಕೆ ಬಿಡಲ್ಲ. ಪೊಲೀಸರಿಗೆ ಏನು ಹೇಳಬೇಕೋ ಹೇಳಿದ್ದೀನಿ. ಜನರು ಸಹಕಾರ ನೀಡದಿದ್ದರೆ ಇನ್ನೂ ಏನೆಲ್ಲಾ ಮಾಡಬೇಕು, ಅದನ್ನು ಮಾಡೋಕೆ ನಾನು ಸಿದ್ಧನಿದ್ದೇನೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದರು.
ಬೆಂಗಳೂರು: ಮೇ 10ರಿಂದ ಮೇ 24ರವರೆಗೆ ಲಾಕ್‌ಡೌನ್ ಜಾರಿಯಲ್ಲಿರುವ ಕಾರಣ ಪೊಲೀಸ್ ಅಧಿಕಾರಿಗಳಿಗೆ ನಿಯಮ ಜಾರಿಗೊಳಿಸಲು ಸಂಪೂರ್ಣ ಅಧಿಕಾರ ನೀಡಲು ಸರ್ಕಾರ ನಿರ್ಧರಿಸಿದೆ. ನಾಳೆ ಬೆಳಗ್ಗೆಯಿಂದಲೇ ಕಠಿಣ ಕ್ರಮಕ್ಕೆ ರಾಜ್ಯದ ಪೊಲೀಸರು ಸಜ್ಜುಗೊಂಡಿದ್ದು, ಸುಖಾಸುಮ್ಮನೆ ಬೀದಿಗಿಳಿಯುವವರಿಗೆ ಲಾಠಿ ರುಚಿ ತೋರಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಈ ಕುರಿತು ಮಾಹಿತಿ ನೀಡಿದ್ದಾರೆ.
ಈ ಕುರಿತು ಬೆಂಗಳೂರು ನಗರದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ,ಎಲ್ಲಾ ವಿಭಾಗದ ಡಿಸಿಪಿಗಳಿಗೆ ಕಮಿಷನರ್ ಕಮಲ್‌ಪಂತ್ ಖಡಕ್ ಸೂಚನೆ ನೀಡಿದ್ದಾರೆ. ನಾಳೆ 10 ಗಂಟೆ ಬಳಿಕ ಕಠಿಣ ನಿಯಮಗಳನ್ನು ಜಾರಿಗೊಳಿಸಲು ಸೂಚಿಸಿದ್ದಾರೆ. ಕೊವಿಡ್ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ರೀತಿ ಕ್ರಮಕ್ಕೆ ಸೂಚನೆ ನೀಡಿದ್ದಾರೆ.
ಈ ಅವಧಿಯಲ್ಲಿ ಒಬ್ಬನೇ ವ್ಯಕ್ತಿ ರಸ್ತೆಯಲ್ಲಿ ಓಡಾಡೋಕೆ ಬಿಡಲ್ಲ. ಪೊಲೀಸರಿಗೆ ಏನು ಹೇಳಬೇಕೋ ಹೇಳಿದ್ದೀನಿ. ಜನರು ಸಹಕಾರ ನೀಡದಿದ್ದರೆ ಇನ್ನೂ ಏನೆಲ್ಲಾ ಮಾಡಬೇಕು, ಅದನ್ನು ಮಾಡೋಕೆ ನಾನು ಸಿದ್ಧನಿದ್ದೇನೆ. ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕಾದ್ದು ಜನರ ಕರ್ತವ್ಯ. ಅದನ್ನು ಅರ್ಥ ಮಾಡಿಕೊಳ್ಳಬೇಕು ಎಲ್ಲರೂ ಎಂದು ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಲಾಕ್‌ಡೌನ್ ನಿಯಮಗಳನ್ನು ಈ ಬಾರಿ ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕರ್ನಾಟಕದಲ್ಲಿ ಕೊವಿಡ್ ಸೋಂಕಿತರ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿದ್ದು, ಸೋಂಕು ಹೆಚ್ಚಳವನ್ನು ಕಟ್ಟಿಹಾಕಲು ಸರ್ಕಾರ ಹರಸಾಹಸ ಪಡುತ್ತಿದೆ.
ಕರ್ನಾಟಕದಲ್ಲಿ ಇಂದಿನ ಸೋಂಕಿತರ ಸಂಖ್ಯೆಯೆಷ್ಟು? ಕರ್ನಾಟಕದಲ್ಲಿ ಶುಕ್ರವಾರ ಒಟ್ಟು 48,781 ಜನರಲ್ಲಿ ಸೋಂಕು ದೃಢಪಟ್ಟಿದೆ. ಒಟ್ಟು 592 ಜನರು ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಇಂದು ಒಂದೇ ದಿನ 21,376 ಜನರಿಗೆ ಸೋಂಕು ತಗುಲಿದೆ. 346 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 18,38,885ಕ್ಕೆ (18.38 ಲಕ್ಷ) ಏರಿಕೆಯಾಗಿದೆ. ಸೋಂಕಿತರ ಪೈಕಿ 12,84,420 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಈವರೆಗೆ 17,804 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಒಟ್ಟು 5,36,641 ಮಂದಿ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 346 ಮಂದಿ ಮೃತಪಟ್ಟಿದ್ದಾರೆ. ಸೋಂಕಿನಿಂದ ಈವರೆಗೆ ಮೃತಪಟ್ಟವರ ಒಟ್ಟು ಸಂಖ್ಯೆ 7,491ಕ್ಕೆ ಏರಿಕೆಯಾಗಿದೆ. ನಗರದಲ್ಲಿ 3,41,978ಕ್ಕೆ ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇಂದಿನ 07/05/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿhttps://t.co/KlWYvWjNMg @CMofKarnataka @BSYBJP @mla_sudhakar @drashwathcn @RAshokaBJP @BSBommai @CPBlr @PIBBengaluru @KarnatakaVarthe @PIBBengaluru @BBMPCOMM @BlrCityPolice @blrcitytraffic pic.twitter.com/yYeBrR2wii
— K’taka Health Dept (@DHFWKA) May 7, 2021
ಇದನ್ನೂ ಓದಿ: Explainer: ಮಕ್ಕಳಿಗೆ ಸಮಸ್ಯೆ ತಂದೊಡ್ಡುವ ಕೊರೊನಾ 3ನೇ ಅಲೆ ಎದುರಿಸಲು ಸಿದ್ಧತೆ ಹೇಗಿರಬೇಕು? ತಜ್ಞರ ಅಭಿಪ್ರಾಯ ಇಲ್ಲಿದೆ
(Karnataka police have complete authority to enforce lockdown rules till May 24th informs DGP Praveen Sood)