ಅಸ್ತಿತ್ವಕ್ಕೆ ಬಂತು ವಿಜಯನಗರ ಜಿಲ್ಲೆ, ಬಳ್ಳಾರಿ ವಿಭಜನೆ; ಹೊರಬಿತ್ತು ಕರ್ನಾಟಕ ಸರ್ಕಾರದ ಅಧಿಸೂಚನೆ

|

Updated on: Feb 08, 2021 | 6:30 PM

ಬಳ್ಳಾರಿ ಜಿಲ್ಲೆಯ ಸರಹದ್ದುಗಳನ್ನು ಮಾರ್ಪಡಿಸಿ ನೂತನ ವಿಜಯನಗರ ಜಿಲ್ಲೆಯನ್ನು ಅಸ್ತಿತ್ವಕ್ಕೆ ತರಲಾಗಿದೆ. ನೂತನ ವಿಜಯನಗರ ಜಿಲ್ಲೆಯ ಕೇಂದ್ರ ಸ್ಥಾನ ಹೊಸಪೇಟೆ ಆಗಿರಲಿದೆ.

ಅಸ್ತಿತ್ವಕ್ಕೆ ಬಂತು ವಿಜಯನಗರ ಜಿಲ್ಲೆ, ಬಳ್ಳಾರಿ ವಿಭಜನೆ; ಹೊರಬಿತ್ತು ಕರ್ನಾಟಕ ಸರ್ಕಾರದ ಅಧಿಸೂಚನೆ
ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗೆ ಸೇರುವ ತಾಲ್ಲೂಕುಗಳು
Follow us on

ಬೆಂಗಳೂರು: ಕರ್ನಾಟಕದ 31ನೇ ಜಿಲ್ಲೆಯಾಗಿ ವಿಜಯನಗರ ಜಿಲ್ಲೆಯನ್ನು ರಾಜ್ಯ ಸರ್ಕಾರ ಘೋಷಿಸಿದೆ. ಈ ಸಂಬಂಧ ಫೆ.8ರಂದು ಕರ್ನಾಟಕ ರಾಜ್ಯಪತ್ರದಲ್ಲಿ ಅಧಿಸೂಚನೆ ಪ್ರಕಟಿಸಲಾಗಿದೆ.

ಬಳ್ಳಾರಿ ಜಿಲ್ಲೆಯ ಸರಹದ್ದುಗಳನ್ನು ಮಾರ್ಪಡಿಸಿ ನೂತನ ವಿಜಯನಗರ ಜಿಲ್ಲೆಯನ್ನು ಅಸ್ತಿತ್ವಕ್ಕೆ ತರಲಾಗಿದೆ. ನೂತನ ವಿಜಯನಗರ ಜಿಲ್ಲೆಯ ಕೇಂದ್ರ ಸ್ಥಾನ ಹೊಸಪೇಟೆ ಆಗಿರಲಿದೆ.

ವಿಜಯನಗರ ಜಿಲ್ಲೆಯಲ್ಲಿ ಒಟ್ಟು ಆರು ತಾಲ್ಲೂಕುಗಳು ಇರಲಿದೆ ಎಂದು ಸರ್ಕಾರ ಅಧಿಸೂಚನೆಯಲ್ಲಿ ಘೋಷಿಸಿದೆ. ಹೊಸಪೇಟೆ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹೂವಿನಹಡಗಲಿ ಮತ್ತು ಹರಪನಹಳ್ಳಿ ತಾಲ್ಲೂಕುಗಳು ನೂತನ ಜಿಲ್ಲೆಯ ಭಾಗವಾಗಲಿವೆ.

ಇಷ್ಟು ದಿನ ಈ ತಾಲ್ಲೂಕುಗಳು ಬಳ್ಳಾರಿ ಜಿಲ್ಲೆಯ ಭಾಗವಾಗಿದ್ದವು. ಮುಂದಿನ ದಿನಗಳಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಬಳ್ಳಾರಿ, ಕುರುಗೋಡು, ಸಿರಗುಪ್ಪ, ಕಂಪ್ಲಿ ಮತ್ತು ಸಂಡೂರು ತಾಲ್ಲೂಕುಗಳು ಮಾತ್ರ ಉಳಿಯುತ್ತವೆ.

ಹೆಲಿಕಾಪ್ಟರ್​ನಲ್ಲಿ ಹೊಸಪೇಟೆಗೆ ಆನಂದ್​ಸಿಂಗ್
ನೂತನ ಜಿಲ್ಲೆಯ ಅಧಿಸೂಚನೆ ಹೊರಬಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಹೊಸಪೇಟೆಗೆ ಸಚಿವ ಆನಂದ್​ಸಿಂಗ್ ಹೆಲಿಕಾಪ್ಟರ್​ನಲ್ಲಿ ಹೊರಟರು. ಹಂಪಿ ವಿರೂಪಾಕ್ಷನಿಗೆ ಪೂಜೆ ಸಲ್ಲಿಸಿ, ರಾಜ್ಯ ಸರ್ಕಾರದ ನಿರ್ಧಾರವನ್ನು ಅವರು ಸ್ವಾಗತಿಸಲಿದ್ದಾರೆ.

ಆನಂದ್​ಸಿಂಗ್ ಅವಿರತ ಹೋರಾಟ
ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಹೊಸಪೇಟೆಯನ್ನು ಕೇಂದ್ರವಾಗಿಸಿ ನೂತನ ವಿಜಯನಗರ ಜಿಲ್ಲೆ ರಚಿಸಬೇಕು ಎನ್ನುವುದು ಕಾಂಗ್ರೆಸ್​ನಿಂದ ಬಿಜೆಪಿಗೆ ಆನಂದ್​ಸಿಂಗ್ ಪಕ್ಷಾಂತರ ಮಾಡಲು ಇಟ್ಟಿದ್ದ ಮುಖ್ಯ ಷರತ್ತಾಗಿತ್ತು. ನೂತನ ವಿಜಯನಗರ ಜಿಲ್ಲೆಯ ರಚನೆಗೆ ಕಾಂಗ್ರೆಸ್ ನಾಯಕರಾದ ವಿ.ಎಸ್.ಉಗ್ರಪ್ಪ ಮತ್ತು ಕೆ.ಸಿ.ಕೊಂಡಯ್ಯ ಅವರ ತೀವ್ರ ವಿರೋಧ ಇತ್ತು. ಇದೀಗ ಹೊಸ ಜಿಲ್ಲೆಯ ರಚನೆಗೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿರುವ ಆನಂದ್​ಸಿಂಗ್​ಗೆ ಜಿಲ್ಲೆಯಲ್ಲಿ ಹಿಡಿತ ಹೆಚ್ಚಾಗುವಂತೆ ಮಾಡಿದೆ. ಜನರು ಆನಂದ್​ ಸಿಂಗ್​ ಅವರಿಗೆ ಅದ್ಧೂರಿ ಸ್ವಾಗತ ಕೋರಿ ಹರ್ಷ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಸರ್ಕಾರ ಹೊರಡಿಸಿರುವ ಗೆಜೆಟ್ ಅಧಿಸೂಚನೆ

ವಿಜಯನಗರ ಜಿಲ್ಲೆ ರಚನೆ ಪ್ರಶ್ನಿಸಿ ಸಲ್ಲಿಸಲಾಗಿದ್ದ PIL ವಜಾ

Published On - 4:28 pm, Mon, 8 February 21