ನಾಲ್ಕು ವರ್ಷದಿಂದ‌ ರುದ್ರಭೂಮಿಯಲ್ಲಿಯೇ ವಾಸ; ಶವ ಸಂಸ್ಕಾರದಲ್ಲಿ ನಿರತ ಗಂಡನಿಗೆ ಹೆಗಲು ಕೊಟ್ಟು ನಿಂತ ಹೆಂಡತಿ

|

Updated on: May 31, 2021 | 10:54 AM

ಶಂಕರ ಕಾಳೆ ದಿನವೊಂದಕ್ಕೆ ನಾಲ್ಕರಿಂದ ಐದು ಮೃತದೇಹಗಳನ್ನು ಸುಡುತ್ತಾರೆ, ಈ ಸಂಖ್ಯೆ ಕೊವಿಡ್ ಹೆಚ್ಚಾದ ಸಮಯದಲ್ಲಿ 20ಕ್ಕೂ ಹೋಗಿತ್ತು. ಗಂಡ ಒಂದು ಕಡೆ ಕೊವಿಡ್ ಮೃತದೇಹಗಳನ್ನು ಸುಡುತ್ತಿದ್ದರೆ, ಇನ್ನೊಂದು ಕಡೆ ಹೆಂಡತಿ ಶಾಂತ ಅಡುಗೆ ಮಾಡಲು ಇಟ್ಟು, ತಾನೂ ಶವ ಹೊರುವ ಕೆಲಸ ಮಾಡುತ್ತಾರೆ. ಈ ಜೋಡಿಯ ಕೆಲಸ ನೋಡಿ ಇಡೀ‌ ವಿಜಯಪುರ ಜಿಲ್ಲೆಯೇ ಮೆಚ್ಚುಗೆ ವ್ಯಕ್ತಪಡಿಸಿದೆ.

ನಾಲ್ಕು ವರ್ಷದಿಂದ‌ ರುದ್ರಭೂಮಿಯಲ್ಲಿಯೇ ವಾಸ; ಶವ ಸಂಸ್ಕಾರದಲ್ಲಿ ನಿರತ ಗಂಡನಿಗೆ ಹೆಗಲು ಕೊಟ್ಟು ನಿಂತ ಹೆಂಡತಿ
ಶಂಕರ ಕಳೆ ಕುಟುಂಬ
Follow us on

ವಿಜಯಪುರ: ಶಿವನ ವಾಸ ಗುಡಿಯಲ್ಲಲ್ಲ ರುದ್ರಭೂಮಿಯಲ್ಲಿ ಎನ್ನುವ ಮಾತಿದೆ. ಇದಕ್ಕೆ ಕಾರಣ ಮನೆ- ಮಹಲು ನಮ್ಮ ಜೀವನದ ಕೇಂದ್ರ ಭಾಗದಲ್ಲಿ ಒಂದು ಅಷ್ಟೇ. ಆದರೆ ಬದುಕು ಅಂತ್ಯಗೊಳ್ಳುವುದು ರುದ್ರಭೂಮಿಯಲ್ಲಿಯೇ. ಹೀಗಾಗಿ ಮನುಷ್ಯನ ಅಂತಿಮ ಗುರಿ ಶಿವನ ನೆಲೆ ಎಂದು ಹೇಳಲಾಗುತ್ತದೆ. ಸದ್ಯ ಶಿವನ ಪ್ರತಿರೂಪವೆಂಬಂತೆ ಸ್ಮಶಾನದಲ್ಲಿಯೇ ಕುಟುಂಬ ಕಟ್ಟಿಕೊಂಡು ವಿಜಯಪುರ ಜಿಲ್ಲೆಯ ವ್ಯಕ್ತಿಯೊಬ್ಬರು ಸುಖ ಸಂಸಾರ ಸಾಗಿಸುತ್ತಿದ್ದಾರೆ. ಕಳೆದ ನಾಲ್ಕು ವರ್ಷದಿಂದ ರುದ್ರಭೂಮಿಯನ್ನೇ ವಾಸ ಸ್ಥಳವಾಗಿಸಿಕೊಂಡ ಈ ಕುಟುಂಬ ನೂರಾರು ಜನರ ಅಂತ್ಯಸಂಸ್ಕಾರ ಮಾಡಿ ಸೇವೆ ಸಲ್ಲಿಸುತ್ತಿದ್ದಾರೆ.

ಶಂಕರ‌ ಕಾಳೆ ಎನ್ನುವ ಈ ವ್ಯಕ್ತಿ ನಾಲ್ಕು ವರ್ಷದಿಂದ ಸ್ಮಶಾನದಲ್ಲಿಯೇ ವಾಸ ಮಾಡುತ್ತಿದ್ದಾರೆ. ಶಂಕರ ಕಾಳೆ ಅವರ ಹುಟ್ಟೂರು ಗದಗ, ಇಲ್ಲಿನ ನಗರಸಭೆಯಲ್ಲಿ ಸಿಕ್ಕ ಸರಕಾರಿ ಕೆಲಸ ಬಿಟ್ಟು, ಊರು ಊರು ಅಲೆದಾಡಿದ್ದ ಇವರು, ಕಡೆಗೆ ತಮ್ಮ ತಂದೆ ಮಾಡುತ್ತಿದ್ದ ಶವ ಸುಡುವ ಕಾಯಕವನ್ನೇ ಮುಂದುವರಿಸಲು ನಿರ್ಧರಿಸಿದರು. ಆಗತಾನೆ ಮದುವೆಯಾಗಿದ್ದ ಶಂಕರ ಮುದ್ದಿನ ಹೆಂಡತಿಯನ್ನು ಸ್ಮಶಾನದೊಳಗೆ ಹೆಣ ಸುಡುವುದಕ್ಕೆ ಕರೆದುಕೊಂಡು ಹೋಗಿದ್ದಾರೆ. ಇನ್ನು ಇದಕ್ಕೆ ಒಪ್ಪಿದ ಶಂಕರ‌ ಕಾಳೆ ಧರ್ಮ ಪತ್ನಿ ಶಾಂತರವರು ಅಂದಿನಿಂದಲು ಗಂಡನಿಗೆ ಈ ಕಾರ್ಯದಲ್ಲಿ ಸಾಥ್ ನೀಡುತ್ತಾ ಬರುತ್ತಿದ್ದಾರೆ.

ಕಳೆದ 4ವರ್ಷದಿಂದ ವಿಜಯಪುರ ದೇವಿಗೇರಿ ರುದ್ರಭೂಮಿಯಲ್ಲಿನ ಚಿಕ್ಕ ಮನೆ‌ಯಲ್ಲಿ ವಾಸಿಸುತ್ತಿರುವ ಈ ಕುಟುಂಬ ಕೊರೊನಾ ಕಾಲದಲ್ಲಿ ಕನಿಷ್ಠ 400ಕ್ಕೂ ಹೆಚ್ಚು ಕೊವಿಡ್ ಮೃತದೇಹಗಳ ಅಂತಿಮ ಸಂಸ್ಕಾರ ನೆರವೇರಿಸಿದೆ. ಕೊರೊನಾ ಮೊದಲ ಅಲೆಯಿಂದ ಇವತ್ತಿನವರೆಗೂ ಶವ ಸಂಸ್ಕಾರ ಮಾಡುತ್ತಿರುವ ಶಂಕರ‌ ಕಾಳೆ ಮತ್ತು ಅವರ ಧರ್ಮ ಪತ್ನಿ ಶಾಂತರವರಿಗೆ 9 ವರ್ಷದ ಖುಷಿ ಎಂಬುವ ಮುದ್ದಿನ ಮಗಳು ಇದ್ದಾಳೆ. ಪಕ್ಕದಲ್ಲೇ ಮೃತದೇಹಗಳು ಸುಡುತ್ತಿದ್ದರು, ಯಾವುದೇ ಭಯವಿಲ್ಲದೇ ಈ ಮಗು ತಂದೆ, ತಾಯಿ ಜತೆ ಆಟ‌ ಆಡಿಕೊಂಡು ಸಂತೋಷದಿಂದಲೇ ಇರುತ್ತದೆ.

ಶಂಕರ ಕಾಳೆ ದಿನವೊಂದಕ್ಕೆ ನಾಲ್ಕರಿಂದ ಐದು ಮೃತದೇಹಗಳನ್ನು ಸುಡುತ್ತಾರೆ, ಈ ಸಂಖ್ಯೆ ಕೊವಿಡ್ ಹೆಚ್ಚಾದ ಸಮಯದಲ್ಲಿ 20ಕ್ಕೂ ಹೋಗಿತ್ತು. ಗಂಡ ಒಂದು ಕಡೆ ಕೊವಿಡ್ ಮೃತದೇಹಗಳನ್ನು ಸುಡುತ್ತಿದ್ದರೆ, ಇನ್ನೊಂದು ಕಡೆ ಹೆಂಡತಿ ಶಾಂತ ಅಡುಗೆ ಮಾಡಲು ಇಟ್ಟು, ತಾನೂ ಶವ ಹೊರುವ ಕೆಲಸ ಮಾಡುತ್ತಾರೆ. ಈ ಜೋಡಿಯ ಕೆಲಸ ನೋಡಿ ಇಡೀ‌ ವಿಜಯಪುರ ಜಿಲ್ಲೆಯೇ ಮೆಚ್ಚುಗೆ ವ್ಯಕ್ತಪಡಿಸಿದೆ. ‌ಪ್ರೀತಿ ಮಾಡಿ ಮದುವೆಯಾದ ಜೋಡಿಗಳ ಕಿತ್ತಾಟದ ಮಧ್ಯೆ ಪ್ರೀತಿ ‌ಮಾಡಿ ಸ್ಮಶಾನದಲ್ಲೂ ನಗು ನಗುತಾ ಬಾಳಿ ಜೀವನದ ಸಾರ್ಥಕತೆ ಕಂಡುಕೊಂಡ ಇವರ ಬದುಕು ನಿಜಕ್ಕೂ ಸ್ಪೂರ್ತಿದಾಯಕ.

ಸಾಮಾನ್ಯವಾಗಿ ಮನೆಗೆಲಸ ಮಾಡಿ‌ ಸಿರೀಯಲ್ ನೋಡುತ್ತಲೇ ಕಣ್ಣೀರು ಸುರಿಸುವ ಮಹಿಳೆಯರ ನಡುವೆ ಶಾಂತ ವಿಭಿನ್ನವಾಗಿ ನಿಲ್ಲುತ್ತಾಳೆ. ಪ್ರತಿದಿನ ಸಾಲುಗಟ್ಟಿ ಬರುವ ಶವಗಳು, ಕುಟುಂಬದವರ ಆಕ್ರಂದನ, ಮೃತದೇಹಗಳ ಹದಗೆಟ್ಟ ದುರ್ವಾಸನೆ,‌ ಕಟ್ಟಿಗೆಯಿಂದ ಹೊರಸೂಸೂವ ಹೊಗೆಯ ಜೊತೆ ನನಗೆ ಬೆಂಬಲವಾಗಿ ನಿಂತಿದ್ದಾಳೆ. ಅಪ್ಪನ ವೃತ್ತಿಯನ್ನು ಮನಸ್ಪೂರ್ತಿಯಾಗಿ ಒಪ್ಪಿ ನಾನು ಕೂಡ ಮಾಡುತ್ತಿದ್ದೇನೆ. ಆದರೆ ತಮ್ಮ ಮಗಳನ್ನು ಮಾತ್ರ ದೇಶ ಕಾಯೋ ಸೈನಿಕ ಮಾಡುತ್ತೇನೆ ಎಂದು ಶವಸಂಸ್ಕಾರ ಮಾಡುವ ಶಂಕರ ಕಾಳೆ ತಿಳಿಸಿದ್ದಾರೆ.

ಕೊವಿಡ್ ಮೃತದೇಹಗಳ ಅಂತಿಮ‌ ಸಂಸ್ಕಾರ ನಡಸುತ್ತಿದ್ರೂ, ಈ ಕುಟುಂಬಕ್ಕೆ ಜಿಲ್ಲಾಡಳಿತ ಮಾತ್ರ ಇದುವರೆಗೂ ಒಂದೇ ಒಂದು ಪಿಪಿಇ ಕಿಟ್ ಕೊಡದೇ ಇರುವುದು ವಿಪರ್ಯಾಸ,. ಸ್ಯಾನಿಟೈಸರ್ ಮಾಸ್ಕ್ ಸಹಿತ ಈ ಕುಟುಂಬಕ್ಕೆ ಯಾವ ಸೌಲಭ್ಯವು ಸಿಕ್ಕಿಲ್ಲ. ಕೊರೊನಾ ಹೆಚ್ಚಾದ ಕಾಲದಲ್ಲಿ ಕೂಡ ಹಗಲು ರಾತ್ರಿ‌ ಶವ ಸಂಸ್ಕಾರ ಮಾಡಬೇಕಾದಗಲೂ ಒಂದೇ ಒಂದು ಗ್ಲವ್ಸ್​ ಕೂಡ ಜಿಲ್ಲಾಡಳಿತದಿಂದ ಸಿಕ್ಕಿಲ್ಲ. ಇವರ ದುಃಸ್ಥಿತಿ ಕಂಡು ನಿಡಗುಂದಿ ತಹಸೀಲ್ದಾರ್ ಶಿವಲಿಂಗ ಪ್ರಭು ವಾಲಿ ಪಿಪಿಇ ಕಿಟ್, ಮಾಸ್ಕ್, ಸ್ಯಾನಿಟೈಸರ್ ಅನ್ನು ಈ ಕುಟುಂಬಕ್ಕೆ ನೀಡಿದ್ದಾರೆ.

ಇದನ್ನೂ ಓದಿ:

ಬಾಗಲಕೋಟೆಯಿಂದ ಗದಗಕ್ಕೆ ಶವ ತಂದ ಕುಟುಂಬಸ್ಥರು, ಆದರೆ ಸೋಂಕಿತ ವೃದ್ಧನ ಶವ ಸಂಸ್ಕಾರಕ್ಕೆ ಗ್ರಾಮಸ್ಥರಿಂದ ವಿರೋಧ

Published On - 10:50 am, Mon, 31 May 21