ಸಿಡಿದೆದ್ದ ಗಾಣಿಗ ಸಮಾಜ, ಚುನಾವಣೆಯಲ್ಲಿ ಪರಿಣಾಮ ಎದುರಿಸಬೇಕಾಗುತ್ತೆ ಎಂದು ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ

|

Updated on: Mar 20, 2023 | 2:09 PM

ಲಿಂಗಾಯತ ಗಾಣಿಗ ಸಮಾಜವನ್ನು ಹಿಂದುಳಿದ ವರ್ಗಗಳ ಪ್ರವರ್ಗ 2A ದಲ್ಲಿ ಮುಂದುವರಿಸುವಂತೆ ಆಗ್ರಹಿಸಿ ವಿಜಯಪುರದಲ್ಲಿ ಪ್ರತಿಭಟನೆ ನಡೆದಿದೆ.

ಸಿಡಿದೆದ್ದ ಗಾಣಿಗ ಸಮಾಜ, ಚುನಾವಣೆಯಲ್ಲಿ ಪರಿಣಾಮ ಎದುರಿಸಬೇಕಾಗುತ್ತೆ ಎಂದು ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ
ಅಖಿಲ ಭಾರತ ಗಾಣಿಗ ಸಂಘ ಪ್ರತಿಭಟನೆ
Follow us on

ವಿಜಯಪುರ: ಲಿಂಗಾಯತ ಗಾಣಿಗ ಸಮಾಜವನ್ನು ಹಿಂದುಳಿದ ವರ್ಗಗಳ ಪ್ರವರ್ಗ 2A ದಲ್ಲಿ ಮುಂದುವರಿಸಬೇಕೆಂದು ಆಗ್ರಹಿಸಿ ಅಖಿಲ ಭಾರತ ಗಾಣಿಗ ಸಂಘ ಇಂದು(ಮಾರ್ಚ್ 20) ವಿಜಯಪುರ ನಗರದಲ್ಲಿ ಪ್ರತಿಭಟನೆ ನಡೆಸಿತು. ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಎದುರಿಗೆ ಜಮಾಯಿಸಿದ ಅಖಿಲ ಭಾರತ ಗಾಣಿಗ ಸಂಘದ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು. ಕರ್ನಾಟಕ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಅವರು ಇತ್ತೀಚಿಗೆ ಗಾಣಿಗ ಸಮುದಾಯವನ್ನು ಪ್ರವರ್ಗ 2A ದಿಂದ 3B ಗೆ ವರ್ಗಾಯಿಸುವುದಾಗಿ ಹೇಳಿಕೆ ನೀಡಿದ್ದಾರೆ. ಕಾರಣ ಗಾಣಿಗ ಸಮುದಾಯವನ್ನು 2A ದಿಂದ 3 B ಸೇರಿಸಿದರೆ ನಮ್ಮ ಸಮಾಜಕ್ಕೆ ಅನ್ಯಾಯವಾಗುತ್ತದೆ ಎಂದು ಗಾಣಿಗ ಸಮುದಾಯದ ಜನರು ಹಾಗೂ ಅಖಿಲ ಭಾರತ ಗಾಣಿಗೆ ಸಂಘ ತೀವ್ರವಾಗಿ ಖಂಡಿಸಿದೆ.

ಗಾಣಿಗ ಸಮಾಜ ಹಾವನೂರು ಆಯೋಗದಲ್ಲಿ ಹಾಗೂ ಚಿನ್ನಪ್ಪ ರೆಡ್ಡಿ ಆಯೋಗದ ವರದಿಯ ನಂತರವೂ ಪ್ರವರ್ಗ 2A ದಲ್ಲಿದೆ. ಇದೀಗ ಕರ್ನಾಟಕ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಅವರ ಹೇಳಿಕೆಯಿಂದ ನಮ್ಮ ಸಮಾಜದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಆರೋಪಿಸಿದರು. ಸರ್ಕಾರ ಕರ್ನಾಟಕ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸ್ಸನ್ನು ತಿರಸ್ಕರಿಸಿ ಯಥಾ ಸ್ಥಿತಿಯಲ್ಲಿಯೇ ಗಾಣಿಗ ಸಮಾಜವನ್ನು 2A ದಲ್ಲಿಯೇ ಮುಂದುವರಿಸಬೇಕೆಂದು ಒತ್ತಾಯಿಸಿದ್ದಾರೆ.‌ ಇಲ್ಲವಾದರೆ ಗಾಣಿಗ ಸಮಾಜಕ್ಕೆ ರಾಜಕೀಯವಾಗಿ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ಅನ್ಯಾಯವಾಗುತ್ತದೆ. ಒಂದು ವೇಳೆ ಸರ್ಕಾರ ನಮ್ಮ ಬೇಡಿಕೆಯನ್ನ ಈಡೇರಿಸದೆ ಹೋದರೆ ಮುಂದಿನ ಚುನಾವಣೆಯಲ್ಲಿ ನಮ್ಮ ಸಮಾಜದಿಂದ ಗಂಭೀರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡುವ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದ್ದಾರೆ.

ಇದನ್ನೂ ಓದಿ: ಶ್ರೀನಾರಾಯಣಗುರು ಅಭಿವೃದ್ಧಿ ನಿಗಮ ಹಾಗೂ ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ರಾಜ್ಯ ಸರ್ಕಾರ ಆದೇಶ

ಸಿದ್ದೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಡಿಸಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಅಖಿಲ ಭಾರತ ಗಾಣಿಗೆ ಸಂಘದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ್ ಲೋನಿ ಗೌರವಾಧ್ಯಕ್ಷ ಜಿಎಂ ಪಾಟೀಲ್ ಜಿಲ್ಲಾಧ್ಯಕ್ಷ ಬಿ ಬಿ ಪಾಸೋಡಿ, ಅಶೋಕ್ ಕರಡಿ ಸೇರಿದಂತೆ ಸಮುದಾಯದ ಇನ್ನಿತರ ಮುಖಂಡರು ಹಾಗೂ ಜನರು ಭಾಗಿಯಾಗಿದ್ದರು.

ವರದಿ: ಅಶೋಕ ಯಡಳ್ಳಿ, ಟಿವಿ9 ವಿಜಯಪುರ

Published On - 2:09 pm, Mon, 20 March 23