ವಿಜಯಪುರ: ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದ ಬಾಲಕ ಆಶ್ಚರ್ಯಕರವಾಗಿ ಪ್ರಾಣಾಪಾಯದಿಂದ ಪಾರು

| Updated By: Rakesh Nayak Manchi

Updated on: Aug 28, 2023 | 9:14 PM

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದ ಬಳಿ ಚಲಿಸುತ್ತಿದ್ದ ಹುಬ್ಬಳ್ಳಿ-ಸೋಲಾಪುರ ಎಕ್ಸಪ್ರೆಸ್ ರೈಲಿನಿಂದ 6 ವರ್ಷದ ಬಾಲಕ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಘಟನೆ ನಿನ್ನೆ ಮಧ್ಯಾಹ್ನ 4 ಗಂಟೆ ಸುಮಾರಿಗೆ ನಡೆದಿತ್ತು. ಗಾಯಗೊಂಡು ಅಳುತ್ತಿರುವುದನ್ನು ಗಮಿನಿಸಿದ ಬೇನಾಳ ಗ್ರಾಮದ ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದ ರೈತರು, ಗಾಯಾಳು ಬಾಲಕನನ್ನು ನಿಡಗುಂದಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ವಿಜಯಪುರ: ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದ ಬಾಲಕ ಆಶ್ಚರ್ಯಕರವಾಗಿ ಪ್ರಾಣಾಪಾಯದಿಂದ ಪಾರು
ರೈಲಿನಿಂದ ಕೆಳಗೆ ಬಿದ್ದ ಬಾಲಕ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರು (ಸಾಂದರ್ಭಿಕ ಚಿತ್ರ)
Follow us on

ವಿಜಯಪುರ, ಆಗಸ್ಟ್ 28: ಚಲಿಸುವ ರೈಲಿನಿಂದ ಕೆಳಗೆ ಬಿದ್ದ ಆರು‌ ವರ್ಷದ ಬಾಲಕ ಆಶ್ಚರ್ಯಕರವಾಗಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ‌ ವಿಜಯಪುರ (Vijayapura) ಜಿಲ್ಲೆಯ ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದ ಬಳಿ ನಡೆದಿದೆ. ನಿನ್ನೆ ಮಧ್ಯಾಹ್ನ 4 ಗಂಟೆ ಸುಮಾರಿಗೆ ಹುಬ್ಬಳ್ಳಿ-ಸೋಲಾಪುರ ಎಕ್ಸಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ.

ರೈಲಿನಿಂದ ಕಳೆಗೆ ಬಿದ್ದ ರಭಸಕ್ಕೆ ಗಾಯಗೊಂಡು ಬಾಲಕ ಅಳುತ್ತಿರುವ ಶಬ್ದ ಕೇಳಿ ಬೇನಾಳ ಗ್ರಾಮದ ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದ ರೈತರು, ಸ್ಥಳಕ್ಕೆ ದೌಡಾಯಿಸಿದ್ದಾರೆ. ನಂತರ ಗಾಯಾಳುವನ್ನು ನಿಡಗುಂದಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಪ್ರಾಥಮಿಕ ಚಿಕಿತ್ಸೆ ನೀಡಿರುವ ನಿಡಗುಂದಿಯ ಡಾ.ಪ್ರಕಾಶ ಘೋಡಕಿಂಡಿ, ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ಶಿಫಾರಸು ಮಾಡಿದ್ದಾರೆ. ರಾತ್ರಿ 11-30ಕ್ಕೆ ಸ್ಥಳಕ್ಕೆ ಬಂದ ರೈಲ್ವೇ ಪೊಲೀಸರು ಹಾಗೂ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳ ಸುಪರ್ದಿಯಲ್ಲಿ ಬೆಳಿಗ್ಗೆ 4 ಗಂಟೆ ಸುಮಾರಿಗೆ ಆಂಬ್ಯುಲೆನ್ಸ್ ಮೂಲಕ ವಿಜಯಪುರ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.

ಇದನ್ನೂ ಓದಿ: ಬೆಂಗಳೂರು: ಹಳಿ ದಾಟುವ ವೇಳೆ ಬಂದ ಗೂಡ್ಸ್ ರೈಲು, ಸಾವನ್ನೇ ಗೆದ್ದು ಬಂದ ಮಹಿಳೆ

ಚಲಿಸುವ ರೈಲಿನಿಂದ ಕೆಳಗೆ ಬಿದ್ದ ಕಾರಣ ಗಂಭೀರವಾಗಿ ಗಾಯಗೊಂಡಿದ್ದಲ್ಲದೆ ಘಟನೆಯಿಂದ ಮಾನಸಿಕವಾಗಿಯೂ ಬಾಲಕ ಆಘಾತಕ್ಕೊಳಗಾಗಿದ್ದಾನೆ. ತಲೆಯ ಮೇಲ್ಭಾಗದಲ್ಲಿ 12 ಹೊಲಿಗೆ ಹಾಕಲಾಗಿದೆ.  ಅಲ್ಲದೆ, ಬೆನ್ನು ಮೂಳೆಗೂ ಗಂಭೀರ ಏಟು ಆಗಿರುವುದು ಎಕ್ಸ್-ರೇ ಮೂಲಕ ತಿಳಿದುಬಂದಿದೆ. ಉಳಿದಂತೆ ದೇಹದ ಇತರೆ ಕಡೆಗಳಲ್ಲೂ ಗಾಯಗಳಾಗಿದ್ದು, ಚಿಕಿತ್ಸೆ ಮುಂದುವರೆದಿದೆ.

ಘಟನೆಯಿಂದ ಆಘಾತಕ್ಕೆ ಒಳಗಾಗಿರುವ ಬಾಲಕ ತಾನು ಮಹಾರಾಷ್ಟ್ರದ ಪುಣೆ ಮೂಲದ ಗಣೇಶ ಕಚ್ಚಿ ಎಂದು ಮರಾಠಿ ಭಾಷೆಯಲ್ಲಿ ತೊದಲು ಮಾತನಾಡಿದ್ದಾನೆ. ಅಪ್ರಾಪ್ತ ವಯಸ್ಸಿನ ಬಾಲಕ ಗಂಭೀರ ಗಾಯಗೊಂಡಿರುವ ಕಾರಣ ಪೊಲೀಸರು ಹಾಗೂ ಮಕ್ಕಳ ರಕ್ಷಣಾ ಘಟಕದವರು ಬಾಲಕನ ಆರೋಗ್ಯದ ಕಡೆಗೆ ಹೆಚ್ಚಿನ ಒತ್ತು ನೀಡಿದ್ದಾರೆ.

ಬಾಲಕನ ಆರೋಗ್ಯದ ಚೇತರಿಕೆಯ ಅಗತ್ಯದ ಹಿನ್ನೆಲೆಯಲ್ಲಿ ರೈಲ್ವೇ ಪೊಲೀಸರು ತುತಾರ್ಗಿ ಘಟನೆಯ ತನಿಖೆಗೆ ಇಳಿದಿರದಲಿಲ್ಲ. ಆದರೆ ಬಾಲಕನ ಪೋಷಕರ ಪತ್ತೆಗೆ ಮಹಾರಾಷ್ಟ್ರದ ಪುಣೆ ರೈಲ್ವೇ ಪೊಲೀಸರು ಸೇರಿದಂತೆ ಇತರೆ ಕಡೆಗಳ ನಿಲ್ದಾಣ, ಠಾಣೆಗಳಿಗೆ ಮಾಹಿತಿ ರವಾನಿಸಿದ್ದರು.

ಮಗನನ್ನು ಹುಡುಕಿಕೊಂಡು ಬಂದ ತಾಯಿ

ಇಷ್ಟರ ಮಧ್ಯೆ ಬಾಲಕನ ತಾಯಿ ಮಗನನ್ನು ಹುಡುಕಿಕೊಂಡು ಬಂದಿದ್ದಾರೆ. ಮುಂಬೈ ಮೂಲದ ಗಂಗಾ ಕೈಲಾಸ್ ಕಚ್ಚಿ ಎಂಬ ಮಹಿಳೆ ಭಿಕ್ಷಾಟನೆ ಮಾಡುತ್ತಿರುವಾಕೆ ಇಂದು ಮಧ್ಯಾಹ್ನ 1.30 ರ ಸುಮಾರಿಗೆ ಈ ಬಾಲಕ ತನ್ನ ಮಗನೆಂದು ಹೇಳಿಕೊಂಡಿದ್ದಾರೆ.

ರೈಲಿನಿಂದ‌ ತನ್ನ ಮಗ ಕೆಳಗೆ ಬಿದ್ದ ಪರಿವೆ ಇಲ್ಲದ ತಾಯಿ ಗಂಗಾ ಚಲಿಸುವ ರೈಲಿನಲ್ಲೇ ಮಗನನ್ನು ಹುಡಿಕಿದ್ದಾರೆ. ರೈಲಿನಲ್ಲಿ ಎಲ್ಲಿಯೂ ತನ್ನ ಮಗ ಕಾಣಿಸದಿದ್ದಾಗ ಅಂತಿಮಾಗಿ ರೈಲ್ವೇ ಪೊಲೀಸರ ನೆರವಿನಿಂದ ಆತಾ  ವಿಜಯಪುರ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಹಿತಿ ತಿಳಿದು, ಆಸ್ಪತ್ರೆಗೆ ಧಾವಿಸಿ ಬಂದಿದ್ದಾರೆ.

ಭಿಕ್ಷುಕಿಯಾಗಿರುವ ತಾನು ರೈಲಿನಿಲ್ಲಿ ಪ್ರಯಾಣಿಸುವಾಗ ಆಟವಾಡುತ್ತಿದ್ದ ಬಾಲಕ ಏಕಾಏಕಿ ಕಾಣೆಯಾಗಿದ್ದ. ಚಲಿಸುವ ರೈಲಿನಿಂದ ತನ್ನ ಮಗಾ ಕೆಳಗೆ ಬಿದ್ದಿರುವುದು ತಿಳಿಯದ ನಾನು ಕಾಣೆಯಾದ ಮಗನಿಗಾಗಿ ಚಲಿಸುವ ರೈಲಿನಲ್ಲೇ ಹುಡುಕಾಟ ನಡೆಸಿದ್ದೆ. ಎಲ್ಲಿಯೂ ತನ್ನ ಮಗ ಪತ್ತೆಯಾಗದೇ ಕಂಗಾಲಾಗಿದ್ದೆ ಎಂದು ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ್ದಾಗಿ ಮಹಿಳೆ ತಿಳಿಸಿದ್ದಾರೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ವಿಜಯಪುರ ರೈಲ್ವೇ ಠಾಣೆಯ ಪಿಎಸ್‍ಐ ಪಿ ಬಿ ಕಂಬಾರ ತನಿಖೆ ನಡೆಸಿದ್ದಾರೆ. ತಾಯಿಯಿಂದ ಮಾಹಿತಿ ಸಂಗ್ರಹಿಸಿ, ತನಿಖೆ ಆರಂಭಿಸಿದ್ದಾರೆ. ಸೂಕ್ತ ತನಿಖೆ ಬಳಿಕ ಹಾಗೂ ಬಾಲಕನ ಆರೋಗ್ಯ ಸುಧಾರಣೆಯಾದ ಬಳಿಕ ತಾಯಿಯ ಸುಪರ್ದಿಗೆ ಬಾಲಕನನ್ನು ನೀಡುವುದರ ಕುರಿತು ನಿರ್ಧಾರ ಮಾಡಲಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:49 pm, Mon, 28 August 23