ವಿಜಯಪುರ, ಜುಲೈ 18: ಮಹಾರಾಷ್ಟ್ರದಲ್ಲಿ (Maharashtra) ಉಗಮವಾಗುವ ಡೋಣಿ ನದಿ (Doni river) ಹೆಚ್ಚಾಗಿ ವಿಜಯಪುರ (Vijayapura) ಜಿಲ್ಲೆಯಲ್ಲಿ ಹರಿದು, ನೆರೆಯ ಯಾದಗಿರಿ ಬಳಿ ಕೃಷ್ಣಾ ನದಿಯಲ್ಲಿ (Krishna River) ಸಂಗಮವಾಗುತ್ತದೆ. ಡೋಣಿ ನದಿ ವಿಜಯಪುರ ಜಿಲ್ಲೆಯಲ್ಲಿ ಸುಮಾರು 120 ಕಿಮೀ ಹರಿಯುತ್ತಿದ್ದು, 80 ಗ್ರಾಮಗಳ ಬಳಿ ಹಾದು ಹೋಗುತ್ತದೆ. ಇಂಥ ಡೋಣಿ ನದಿ ಕಣ್ಣೀರಿನ ನದಿಯೆಂದು ಸಹ ಕುಖ್ಯಾತಿಗೆ ಪಾತ್ರವಾಗಿದೆ. ಕಾರಣ ಪ್ರತಿ ವರ್ಷ ತನ್ನ ಪಥವನ್ನು ಬದಲಿಸಿ ಕಂಡ ಕಂಡಲ್ಲಿ ಹರಿದು ಅಪಾರ ಪ್ರಮಾಣದ ಹಾನಿಗೆ ಕಾರಣವಾಗಿದೆ. ಈ ರೀತಿ ಹರಿಯಲು ನದಿಯಲ್ಲಿ ತುಂಬಿರುವ ಅಪಾರ ಪ್ರಮಾಣದ ಹೂಳು ಕಾರಣವಾಗಿದೆ. ನದಿಯಲ್ಲಿರುವ ಹೂಳನ್ನು ತೆಗೆಸಬೇಕೆಂದು ಜಿಲ್ಲೆಯ ರೈತರು ಕಳೆದ 30 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದಾರೆ.
ಪ್ರಸ್ತುತ ಮತ್ತು ಈ ಹಿಂದಿನ ಎಲ್ಲ ಸರ್ಕಾರಗಳು ಡೋಣಿ ನದಿಯಲ್ಲಿನ ಹೂಳು ತೆಗೆಯುವ ಮಾತುಗಳನ್ನು ಆಡಿವೆ ಮತ್ತು ಆಡುತ್ತಿವೆ. ಆದರೆ ಇನ್ನೂವರೆಗೂ ಹೂಳು ತೆಗೆದಿಲ್ಲ. ಕಳೆದ ವರ್ಷ ಇದೇ ವಿಚಾರದಲ್ಲಿ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಡೋಣಿ ನದಿಯಲ್ಲಿ ಹೂಳನ್ನು ತೆಗೆಯಲು ಕೇಂದ್ರ ಸರ್ಕಾರದ ಸಹಾಯ ಬೇಕೆಂದು ಹೇಳಿದ್ದರು. ಕೇಂದ್ರ ಸರ್ಕಾರದ ವ್ಯಾಪ್ಕೋ ಎಜೆನ್ಸಿ ಮೂಲಕ ಡೋಣಿ ನದಿಯ ಹೂಳು ತೆಗೆಸಲು ಸಮಗ್ರ ವರದಿ ಮಾಡಿಸಿದ್ದೇವು. ಹೂಳು ತೆಗೆಯುವುದು, ನದಿಯ ತಿರುವುಗಳನ್ನು ನೇರವಾಗಿ ಮಾಡಲು, ನದಿಯಲ್ಲಿ ಬೆಳೆದ ಮುಳ್ಳುಕಂಟಿಗಳನ್ನು ತೆರವು ಮಾಡಲು 2400 ಕೋಟಿ ರೂಪಾಯಿ ಖರ್ಚಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
2400 ಕೋಟಿ ರೂಪಾಯಿ ಖರ್ಚು ಮಾಡುವ ವಿಚಾರದಲ್ಲಿ ಹೂಳೆತ್ತುವ ಯೋಜನೆ ಹಾಗೇ ಉಳಿದಿದೆ. ಇದರ ಬದಲಾಗಿ 2400 ಕೋಟಿ ವೆಚ್ಚದ ಬದಲಾಗಿ ಕಡಿಮೆ ವೆಚ್ಚದಲ್ಲಿ ಹೂಳು ತೆಗೆಸೋ ಪ್ರಸ್ತಾವಣೆಯನ್ನು ತಯಾರಿಸಿ ಕೇಂದ್ರಕ್ಕೆ ಕಳುಹಿಸುತ್ತೇವೆ. ಕೋಸಿ ನದಿ ಪ್ರವಾಹ ಬಂದಿದ್ದ ವೇಳೆ ಕೇಂದ್ರ 4500 ಕೋಟಿ ರೂಪಾಯಿ ನೀಡಿತ್ತು. ಇದೇ ಮಾದರಿಯಲ್ಲಿ ಡೋಣಿ ನದಿ ಹೂಳೆತ್ತಲು ಕೇಂದ್ರ ಹಣ ನೀಡಬೇಕು. 2400 ಕೋಟಿ ಖರ್ಚು ಮಾಡಲು ರಾಜ್ಯ ಸರ್ಕಾರಕ್ಕೆ ಆಗಲ್ಲ. ಒಟ್ಟು ಯೋಜನಾ ವೆಚ್ಚದಲ್ಲಿ ರಾಜ್ಯ ಸರ್ಕಾರ 10 ರಿಂದ 20 ಪ್ರತಿಶತ ಹಣ ಹಾಕಬಹುದು. ಹಾಗಾಗಿ ಕೋಸಿ ನದಿಗೆ ನೀಡಿದಂತೆ ನಮ್ಮ ದೋಣಿ ನದಿ ಹೂಳೆತ್ತಲು ಹಣವನ್ನು ಕೇಂದ್ರ ನೀಡಲಿ ಎಂದು ಹೇಳಿದ್ದರು.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಹೆಚ್ಚಿದ ಮಳೆ, ತುಂಬಿದ ಆಲಮಟ್ಟಿ ಡ್ಯಾಂನಿಂದ ಕೃಷ್ಣಾ ನದಿಗೆ ನೀರು
ಇಷ್ಟೆಲ್ಲದರ ಮದ್ಯೆ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದ ಬಳಿ ಕೆಲ ರೈತರು ತಮ್ಮ ತಮ್ಮ ಜಮೀನಿನ ಬಳಿ ಡೋಣಿ ನದಿಯ ಹೂಳು ತೆಗೆದು ಜಮೀನಿಗೆ ನದಿಯ ನೀರು ಬರದಂತೆ ಒಡ್ಡುಗಳನ್ನು ನಿರ್ಮಾಣ ಮಾಡುತ್ತಿದ್ದಾರೆ.
“ಸರ್ಕಾರದ ದಾರಿ ಕಾಯ್ದು ಸಾಕಾಯಿತು. ನಮ್ಮ ಜಮೀನನನ್ನು ಉಳಿಸಿಕೊಳ್ಳಲು ನಾವೇ ಸ್ವಂತ ಹಣ ಹಾಕಿ ಹೂಳಿನಿಂದ ಒಡ್ಡು ಹಾಕಿಕೊಳ್ಳುತ್ತಿದ್ದೇವೆ” ಎಂದು ರೈತರು ಹೇಳಿದ್ದಾರೆ.
ಸಾರವಾಡ ಗ್ರಾಮದ 10 ಜನ ರೈತರು ಕೂಡಿಕೊಂಡು ಡೋಣಿ ನದಿಯಲ್ಲಿನ ಹೂಳು ತೆಗೆಯುವ ಕೆಲಸಕ್ಕೆ ಮುಂದಾಗಿದ್ದಾರೆ. ಹಿಟಾಚಿ ಮೂಲಕ ಹೂಳು ತೆಗೆಸುತ್ತಿದ್ದಾರೆ. ನದಿಯ ಹೂಳಿನಿಂದಲೇ ಜಮೀನಿಗೆ ಒಡ್ಡುಗಳನ್ನು ಹಾಕಿಕೊಳ್ಳುತ್ತಿದ್ದಾರೆ. 10 ರೈತರು ಆರಂಬಿಕ ಮೊತ್ತವಾಗಿ ತಲಾ 50 ಸಾವಿರ ರೂಪಾಯಿ ಹಣ ಹಾಕಿದ್ದಾರೆ. 10 ರೈತರ ಜಮೀನು ದಾಟುವವರೆಗೂ ಮಾತ್ರ ನದಿಯ ಹೂಳನ್ನು ತೆಗೆಯುತ್ತೇವೆ. ಮುಂದಿನ ಜಮೀನಿನ ರೈತರಿಗೆ ಹೂಳನ್ನು ತೆಗೆಯುವ ಶಕ್ತಿ ಇಲ್ಲ.
ಜಿಲ್ಲೆಯ ಶಾಸಕರು, ಸಂಸದರು ಹಾಗೂ ಸಚಿವರು ಇದೇ ನದಿಯ ಸೇತುವೆ ಮೇಲೆ ಓಡಾಡುತ್ತಾರೆ. ಆದರೆ ಡೋಣಿ ನದಿಯ ಹೂಳು ತೆಗೆಸಲು ಯಾರೋಬ್ಬರೂ ಮುಂದೆ ಬಂದಿಲ್ಲ. ಡೋಣಿ ನದಿಯ ಹೂಳು ತೆಗೆಸುವುದು ಕೇಂದ್ರ ಸರ್ಕಾರಕ್ಕೆ ಹೊರೆಯಲ್ಲ. 2400 ಕೋಟಿ ರೂಪಾಯಿ ಸಹ ದೊಡ್ಡದಲ್ಲ. ಮಳೆಗಾಲದಲ್ಲಿ ನಮಗೆ ಕಣ್ಣೀರು ತರಿಸುವ ಡೋಣಿ ಶಾಪವಾಗಿದೆ ಎಂದು ಸಾರವಾಡ ಗ್ರಾಮದ ರೈತ ಸೋಮಶೇಖರ ವಾಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸದ್ಯ ರೈತರೇ ಡೋಣಿ ನದಿಯಲ್ಲಿರುವ ಹೂಳನ್ನು ತೆಗೆಸುತ್ತಿದ್ದಾರೆ. ಇದು ರಾವಣನ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆಯಂತಾಗುತ್ತದೆ. ಕಾರಣ ಕೆಲ ರೈತರು ಮಾತ್ರ ನದಿಯ ಹೂಳು ತೆಗೆಸಿದರೆ ಉಳಿದ ಹೂಳು ತೆಗೆಯುವವರು ಯಾರು ಎಂಬ ಪ್ರಶ್ನೆ ಮೂಡಿದೆ. ಕಾರಣ ರಾಜ್ಯ ಸರ್ಕಾರ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗ ದೆಹಲಿಗೆ ತೆರಳಿ ಕೇಂದ್ರ ಸರ್ಕಾರದ ಗಮನ ಸೆಳೆಯಬೇಕಿದೆ. ಡೋಣಿ ನದಿಯಲ್ಲಿರುವ ಹೂಳನ್ನು ತೆಗೆಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ