ಹಂಪಿಯಲ್ಲಿ ಅಕ್ರಮ ಹೋಂಸ್ಟೇ, ಡ್ರಗ್ಸ್ ಹಾವಳಿ: 54 ಅಧಿಕಾರಿಗಳ ವಿರುದ್ಧ ಉಪ ಲೋಕಾಯುಕ್ತ ‘ಸ್ವಯಂಪ್ರೇರಿತ’ ದೂರು
ಉಪ ಲೋಕಾಯುಕ್ತರು ಹಂಪಿಯಲ್ಲಿ ನಡೆಯುತ್ತಿರುವ ಪಾರಂಪರಿಕ ಸಂರಕ್ಷಣಾ ನಿಯಮ ಉಲ್ಲಂಘನೆ, ಅಕ್ರಮ ಹೋಂಸ್ಟೇ, ವಾಣಿಜ್ಯ ಚಟುವಟಿಕೆಗಳ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿದ್ದಾರೆ. 54 ಅಧಿಕಾರಿಗಳಿಗೆ ಸೆಪ್ಟೆಂಬರ್ 1 ರೊಳಗೆ 'ಕ್ರಮ ಕೈಗೊಂಡ ವರದಿ' ಸಲ್ಲಿಸಲು ಆದೇಶಿಸಿದ್ದಾರೆ. ಇದು ಹಂಪಿ ರಕ್ಷಣೆಗೆ ಕೈಗೊಂಡಿರುವ ಕಠಿಣ ಕ್ರಮವಾಗಿದೆ.

ಹೊಸಪೇಟೆ ಆ.7: ವಿಶ್ವ ಪಾರಂಪರಿಕ ತಾಣವಾದ ಹಂಪಿಯಲ್ಲಿ ಪಾರಂಪರಿಕ ಸಂರಕ್ಷಣಾ ನಿಯಮಗಳ ಗಂಭೀರ ಉಲ್ಲಂಘನೆ, ಅಕ್ರಮ ವಾಣಿಜ್ಯ ಚಟುವಟಿಕೆಗಳು ಹಾಗೂ ನಿಯಮಬಾಹಿರ ಹೋಂಸ್ಟೇಗಳಿಗೆ ಅವಕಾಶ ನೀಡಿದ ಆರೋಪದಡಿ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಒಟ್ಟು 54 ಅಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತ (Suo Motu) ದೂರು ದಾಖಲಿಸಿಕೊಂಡಿರುವ ಅವರು, ಸೆಪ್ಟೆಂಬರ್ 1 ರೊಳಗೆ ‘ಕ್ರಮ ಕೈಗೊಂಡ ವರದಿ’ (Action Taken Report) ಸಲ್ಲಿಸುವಂತೆ ಆದೇಶಿಸಿದ್ದಾರೆ.
ಈ ಸಂಬಂಧ ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು, ಹೊಸಪೇಟೆ ಹಾಗೂ ಕೊಪ್ಪಳ ವ್ಯಾಪ್ತಿಯ ಸಹಾಯಕ ಆಯುಕ್ತರು (AC), ತಹಸೀಲ್ದಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು (EO) ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ (PDO) ನೋಟಿಸ್ ಜಾರಿ ಮಾಡಲಾಗಿದೆ.
ಉಪ ಲೋಕಾಯುಕ್ತರ ಮಾಹಿತಿಯಂತೆ, ಹಂಪಿ ಪಾರಂಪರಿಕ ಪ್ರಾಧಿಕಾರದ ಕೋರ್ ಝೋನ್ , ಬಫರ್ ಝೋನ್ ಹಾಗೂ ಪೆರಿಫೆರಲ್ ಝೋನ್ ಪ್ರದೇಶಗಳಲ್ಲಿ ಸುಮಾರು 200 ಅಕ್ರಮ ಹೋಂಸ್ಟೇಗಳು ಕಾರ್ಯನಿರ್ವಹಿಸುತ್ತಿವೆ. ಇದರ ಜೊತೆಗೆ ಹಂಪಿ ದೇವಾಲಯದ ಸಮೀಪವಿರುವ ಜನತಾ ಕಾಲೋನಿಯಲ್ಲಿಯೂ 250ಕ್ಕೂ ಹೆಚ್ಚು ಅಕ್ರಮ ಹೋಂಸ್ಟೇಗಳು ತಲೆಎತ್ತಿವೆ. ಪಾರಂಪರಿಕ ಪ್ರದೇಶಗಳು ಹಾಗೂ ಗಂಗಾವತಿ ವ್ಯಾಪ್ತಿಯ ಪ್ರವಾಸಿ ತಾಣಗಳಲ್ಲಿ ಮಾದಕ ದ್ರವ್ಯ (ಡ್ರಗ್ಸ್) ಜಾಲ ಹಾಗೂ ಅಕ್ರಮ ಮದ್ಯ ಮಾರಾಟ ವ್ಯಾಪಕವಾಗಿ ನಡೆಯುತ್ತಿದೆ ಎಂಬ ದೂರುಗಳನ್ನೂ ಉಪ ಲೋಕಾಯುಕ್ತರು ಪರಿಗಣಿಸಿದ್ದಾರೆ.
ಇದನ್ನೂ ಓದಿ; ಗದಗ: ಹುಳು ಬಿದ್ದ ಆಹಾರ ಸರಬರಾಜು; ರಕ್ತ ಹೀರುವ ತಿಗಣೆ ಕಾಟಕ್ಕೆ ವಿದ್ಯಾರ್ಥಿಗಳು ವಿಲವಿಲ
ಯುನೆಸ್ಕೋ ಪಾರಂಪರಿಕ ನಿಯಮಾವಳಿಗಳ ಪ್ರಕಾರ, ಹಂಪಿಯ ಪುರಾತತ್ವ ಹಾಗೂ ಸಾಂಸ್ಕೃತಿಕ ಮಹತ್ವಕ್ಕೆ ಧಕ್ಕೆ ತರುವ ಯಾವುದೇ ಆರ್ಥಿಕ ಅಥವಾ ವಾಣಿಜ್ಯ ಚಟುವಟಿಕೆಗಳನ್ನು ಕೋರ್ ಮತ್ತು ಬಫರ್ ವಲಯಗಳಲ್ಲಿ ನಿಷೇಧಿಸಲಾಗಿದೆ. ಆದರೆ, ಸ್ಪಷ್ಟ ಮಾರ್ಗದರ್ಶಿ ಸೂತ್ರಗಳಿದ್ದರೂ ಅಧಿಕಾರಿಗಳು ಅಕ್ರಮ ರೆಸಾರ್ಟ್, ಹೋಂಸ್ಟೇ ಹಾಗೂ ಕಟ್ಟಡ ನಿರ್ಮಾಣ ತಡೆಯಲು ವಿಫಲರಾಗಿದ್ದು, ಕೆಲವು ಕಡೆ ನಿಯಮಗಳನ್ನು ಗಾಳಿಗೆ ತೂರಿ ಅನುಮತಿ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




