‘ಕರ್ನಾಟಕದ ಭಕ್ತರು ಸುರಕ್ಷಿತರಾಗಿದ್ದಾರೆ, ಯುವಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ’; ವದಂತಿಗಳಿಗೆ ಕಿವಿಗೊಡಬೇಡಿ ಎಂದ ಶ್ರೀಶೈಲ ಶ್ರೀಗಳು

| Updated By: shivaprasad.hs

Updated on: Mar 31, 2022 | 4:08 PM

Karnataka Devotees | Srisailam: ಆಂಧ್ರಪ್ರದೇಶದ ಶ್ರೀಶೈಲದಲ್ಲಿ ಕರ್ನಾಟಕ ಭಕ್ತರು ಹಾಗೂ ವ್ಯಾಪಾರಿಗಳ ಮಧ್ಯೆ ಗಲಾಟೆ ನಡೆದಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶ್ರೀಶೈಲ ಜಗದ್ಗುರುಗಳು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಡಾ.ಶ್ರೀ ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಘಟನೆಯ ಬಗ್ಗೆ ಹರಡುತ್ತಿರುವ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

‘ಕರ್ನಾಟಕದ ಭಕ್ತರು ಸುರಕ್ಷಿತರಾಗಿದ್ದಾರೆ, ಯುವಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ’; ವದಂತಿಗಳಿಗೆ ಕಿವಿಗೊಡಬೇಡಿ ಎಂದ ಶ್ರೀಶೈಲ ಶ್ರೀಗಳು
ಶ್ರೀಶೈಲ ಶ್ರೀಗಳಾದ ಡಾ.ಶ್ರೀ ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು (ಬಲ ಚಿತ್ರ)
Follow us on

ವಿಜಯಪುರ: ಆಂಧ್ರಪ್ರದೇಶದ ಶ್ರೀಶೈಲದಲ್ಲಿ (Srisailam) ಕರ್ನಾಟಕ ಭಕ್ತರು ಹಾಗೂ ಆಂಧ್ರಪ್ರದೇಶದ ವ್ಯಾಪಾರಿಗಳ ಮಧ್ಯೆ ಗಲಾಟೆ ನಡೆದಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶ್ರೀಶೈಲ ಜಗದ್ಗುರುಗಳು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಡಾ.ಶ್ರೀ ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಘಟನೆಯ ಬಗ್ಗೆ ಹರಡುತ್ತಿರುವ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ‘‘ನಿನ್ನೆ ರಾತ್ರಿ ಕರ್ನಾಟಕದ ಓರ್ವ ಭಕ್ತ ಹಾಗೂ ಸ್ಥಳೀಯ ಹೊಟೇಲ್ ನಡೆಸುತ್ತಿದ್ದ ವ್ಯಕ್ತಿ ನಡುವೆ ಜಗಳವಾಗಿದೆ. ಇದೇ ಜಗಳ ಎರಡು ಸಮುದಾಯಗಳ ನಡುವೆ ಹಬ್ಬಿ ಗಲಾಟೆಯಾಗಿದೆ. ಕರ್ನಾಟಕದ ವ್ಯಕ್ತಿ ಮೇಲೆ ಸ್ಥಳಿಯ ವ್ಯಕ್ತಿ ಹಲ್ಲೆ ಮಾಡಿದ್ದಾನೆ. ಕರ್ನಾಟಕದ ವ್ಯಕ್ತಿ ಗಾಯಗೊಂಡು, ಆಸ್ಪತ್ರೆಗೆ ದಾಖಲಾಗಿದ್ದಾರೆ’’ ಎಂದು ಶ್ರೀಗಳು ವಿಡಿಯೋದಲ್ಲಿ ತಿಳಿಸಿದ್ದಾರೆ.

ಗಾಯಾಳು ಮೃತಪಟ್ಟಿದ್ದಾರೆ ಎನ್ನುವ ವದಂತಿಯ ಬಗ್ಗೆ ಸ್ಪಷ್ಟನೆ ನೀಡಿರುವ ಶ್ರೀಗಳು, ‘‘ಕರ್ನಾಟಕದ ಗಾಯಾಳು ವ್ಯಕ್ತಿ ಮೃತಪಟ್ಟಿದ್ದಾನೆ ಎನ್ನುವ ಸುದ್ದಿ ಹರಡಿದೆ. ಇದೇ ಸುದ್ದಿ ಹರಡಿರೋ ಕಾರಣ ಇಲ್ಲಿ ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಪರಸ್ಥಿತಿ ಕೈ ಮೀರೋ ಹಂತಕ್ಕೆ ಹೋಗಿದೆ. ಈ ಕಾರಣ ನಾವೇ ಸ್ವತಃ ಸ್ಥಳಕ್ಕೆ ಭೇಟಿ ನೀಡಿ ಎಲ್ಲರಿಗೂ ಸಮಾಧಾನ ಮಾಡಿದ್ದೇವೆ. ಈ ಸುದ್ದಿ ಕರ್ನಾಟಕದಲ್ಲಿಯೂ ಹಬ್ಬಿದೆ. ಶ್ರೀಶೈಲದಲ್ಲಿ ಕರ್ನಾಟಕದ ಭಕ್ತರ ಮೇಲೆ ಹಲ್ಲೆ ಮಾಡಲಾಗುತ್ತಿದೆ ಎಂದು ಸುದ್ದಿ ಹರಡಿದೆ. ಇದು ವಾಸ್ತವ ಸ್ಥಿತಿಯಲ್ಲಾ, ಇಲ್ಲಿ ಪರಸ್ಥಿತಿ ಸಹಜವಾಗಿದೆ’’ ಎಂದು ನುಡಿದಿದ್ದಾರೆ.

‘‘ನಿನ್ನೆ ನಡೆದ ಗಲಾಟೆ ಇಂದು ಹತೋಟಿಗೆ ಬಂದಿದೆ’’ ಎಂದಿರುವ ಶ್ರೀಶೈಲ ಪೀಠದ ಶ್ರೀಗಳು, ‘‘ಕರ್ನಾಟಕದ ಭಕ್ತರೆಲ್ಲಾ ಇಲ್ಲಿ ಸುರಕ್ಷಿತವಾಗಿದ್ದಾರೆ. ಕನ್ನಡಿಗರಿಗೆ ಇಲ್ಲಿ ಯಾವುದೇ ತೊಂದರೆ, ಜೀವಭಯ ಇಲ್ಲ’’ ಎಂದಿದ್ದಾರೆ.

ಹಲ್ಲೆಗೊಳಗಾಗಿದ್ದ ವ್ಯಕ್ತಿಯ ಸ್ಥಿತಿ ಹೇಗಿದೆ?

ನಿನ್ನೆಯ ಗಲಾಟೆಯಲ್ಲಿ ಹಲ್ಲೆಗೊಳಗಾದ ಕರ್ನಾಟಕದ ವ್ಯಕ್ತಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಬಗ್ಗೆ ಹರಡಿರುವ ವದಂತಿಗಳು ಸುಳ್ಳು ಎಂದು ತಿಳಿಸಿರುವ ಶ್ರೀಗಳು. ಯುವಕನ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ತಲೆಗೆ ಪೆಟ್ಟಾಗಿರೋ ಕಾರಣ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸೊನ್ನಿ ಪೇಟೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆತನ ಆರೋಗ್ಯ ವಿಚಾರಿಸಿಕೊಂಡು ಬಂದಿದ್ದೇನೆ. ಇಂದು ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ’’ ಎಂದು ಹೇಳಿದ್ದಾರೆ.

‘‘ಶ್ರೀಶೈಲದಲ್ಲಿ ಎಲ್ಲವೂ ಸಹಜವಾಗಿದೆ, ಯಾರೂ ಭಯಪಡಬೇಡಿ’’ ಎಂದು ಭಕ್ತರಿಗೆ ಶ್ರೀಶೈಲ ಜಗದ್ದುರು ಡಾ.ಶ್ರೀ ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿ ಅಭಯ ನೀಡಿದ್ದಾರೆ.

ಯಾತ್ರಿಗಳ ಸುರಕ್ಷತೆಗೆ ಕರ್ನಾಟಕ ಸರ್ಕಾರ ಬದ್ಧ: ಸಚಿವ ಗೋವಿಂದ ಕಾರಜೋಳ

ಶ್ರೀಶೈಲದಲ್ಲಿ ಕರ್ನಾಟಕದ ಯಾತ್ರಿಗಳು ಮತ್ತು ಸ್ಥಳೀಯ ವ್ಯಾಪಾರಸ್ಥರ ಮಧ್ಯೆ ಘರ್ಷಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಸಚಿವ ಗೋವಿಂದ ಕಾರಜೋಳ ಹೇಳಿಕೆ ನೀಡಿದ್ದಾರೆ. ಹಲವು ವಾಹನಗಳು ಜಖಂ ಆಗಿದ್ದು ಇಬ್ಬರಿಗೆ ಗಾಯವಾಗಿರುವ ಘಟನೆ ಕಳವಳ ತಂದಿದೆ. ಬುಧವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಸ್ಥಳೀಯರು ಮತ್ತು ಕನ್ನಡಿಗರ ನಡುವೆ ಪ್ರಾರಂಭವಾದ ಜಗಳ ವಿಕೋಪಕ್ಕೆ ತಿರುಗಿ ಬಾಗಲಕೋಟೆ, ಬೆಳಗಾವಿ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳ ಭಕ್ತರ ಮೇಲೆ ಹಲ್ಲೆಯಾಗಿದೆ. ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆಯೆಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಕರ್ನೂಲ್ ಎಸ್ಪಿ ಜೊತೆ ಮಾತನಾಡಿ ಕರ್ನಾಟಕದ ಎಲ್ಲಾ ಯಾತ್ರಿಗಳ ಸುರಕ್ಷತೆಯನ್ನು ಕಾಪಾಡಲು ಮತ್ತು ಅವರ ಗಾಯಾಳುಗಳ ಆರೋಗ್ಯದ ಕಡೆ ಲಕ್ಷ್ಯ ವಹಿಸಲು ಮತ್ತು ಸುರಕ್ಷಿತವಾಗಿ ಕರ್ನಾಟಕಕ್ಕೆ ಮರಳಿ ಕಳುಹಿಸುವ ವ್ಯವಸ್ಥೆ ಮಾಡಬೇಕೆಂದು ವಿನಂತಿಸಿದ್ದೇನೆ. ಬಾಗಲಕೋಟೆ ಎಸ್ಪಿ ಸಂಬಂಧಪಟ್ಟ ಸ್ಥಳೀಯ ಪೊಲೀಸ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಪರಿಸ್ಥಿತಿ ಕುರಿತು ಸತತ ನಿಗಾ ವಹಿಸಿದ್ದಾರೆ. ಯಾತ್ರಿಗಳ ಸುರಕ್ಷತೆಯನ್ನು ಸುನಿಶ್ಚಿತಗೊಳಿಸಲು ಕರ್ನಾಟಕ ಸರ್ಕಾರ ಬದ್ಧವಾಗಿದೆ ಎಂದು ಸಚಿವರು ಹೇಳಿದ್ದಾರೆ.

ಇದನ್ನೂ ಓದಿ: ಶ್ರೀಶೈಲದಲ್ಲಿ ಬಾಗಲಕೋಟೆ ಮೂಲದ ಯುವಕನ ಮೇಲೆ ಹಲ್ಲೆ; ಆತಂಕದಲ್ಲಿ ಕುಟುಂಬಸ್ಥರು- ಸಿಎಂ ಬೊಮ್ಮಾಯಿ ಹೇಳಿದ್ದೇನು?

ಆಂಧ್ರದ ಶ್ರೀಶೈಲದಲ್ಲಿ ಉದ್ವಿಗ್ನ ವಾತಾವರಣ; ಕರ್ನಾಟಕದ ವಾಹನಗಳು ಜಖಂ

Published On - 4:04 pm, Thu, 31 March 22