ಕೊರೊನಾ ಸೋಂಕಿನ ಮತ್ತೊಂದು ಹೊಡೆತಕ್ಕೆ ಚೀನಾ ನಲುಗಿದೆ. ಹುಳ ಹುಪ್ಪಟಗಳನ್ನು ತಿನ್ನುವ ಚೀನೀಯರಲ್ಲಿ ರೋಗ ನಿರೋಧಕ ಶಕ್ತಿ ಕುಂದಿದೆಯಂತೆ. ಅದಕ್ಕೆ ನಿಂಬೆ ಜ್ಯೂಸ್ ಕುಡಿದು ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಆದರೆ ಹಿತ್ತಲಗಿಡ ಮದ್ದಲ್ಲ ಎಂಬಂತೆ ನಮ್ಮಲ್ಲಿಯೇ ನಿಂಬೆ ಹಣ್ಣಿಗೆ ಬೇಡಿಕೆ ಇಲ್ಲವಾಗಿದೆ. ಜೊತೆಗೆ ಇದರಿಂದ ಬೆಲೆಯೂ ಕುಸಿದಿದೆ. ಆದರೆ ವಿಜಯಪುರದಲ್ಲಿ ನಿಂಬೆ ರೇಟು ಡೌನಾಗಿದೆ! ವಿವಿಧ ತೋಟಗಾರಿಕಾ ಬೆಳೆಗಳಿಗೆ ಪ್ರಸಿದ್ದಿಯಾದ ಜಿಲ್ಲೆ ವಿಜಯಪುರ. ಪ್ರಮುಖ ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ, ನಿಂಬೆ (Lemon), ದಾಳಿಂಬೆ, ಬಾಳೆ, ಸೀತಾಫಲ, ಪೇರಲು, ಕಬ್ಬು ಆರ್ಥಿಕ ಬೆಳೆಗಳೂ ಆಗಿವೆ. ಜಿಲ್ಲೆಯಲ್ಲಿ ಬೆಳೆಯೋ ತೋಟಗಾರಿಕೆ ಬೆಳೆಗಳ ಗುಣಮಟ್ಟ ಉತ್ತಮವಾಗಿದೆ. ವಿವಿಧ ಮಾರುಕಟ್ಟೆಗಳಲ್ಲಿ (Lemon Market) ವಿಜಯಪುರ (Vijayapura) ಜಿಲ್ಲೆಯ ತೋಟಗಾರಿಕಾ ಬೆಳೆಗಳಿಗೆ ಹೆಚ್ಚಿನ ಬೇಡಿಕೆಯೂ ಇದೆ. ಇಷ್ಟೆಲ್ಲದರ ಮಧ್ಯೆ ಜಿಲ್ಲೆಯ ನಿಂಬೆ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ. ಉತ್ತಮ ಗುಣಮಟ್ಟದ ನಿಂಬೆ ಬೆಳೆದರೂ ನಿಂಬೆ ಬೆಲೆ (Lemon Price) ಕಳೆದುಕೊಂಡಿದೆ. ಕಾರಣ ನಿಂಬೆ ಬೆಳೆಗಾರರ ಪಾಲಿಗೆ ಹುಳಿಯಷ್ಟೇಯಲ್ಲಾ ಕಹಿಯೂ ಆಗಿದೆ. ಡಿಟೇಲ್ಸ್ ಇಲ್ಲಿದೆ ನೋಡಿ
ಬೆಳೆಗಾರರ ಪಾಲಿಕೆ ಹುಳಿಯಷ್ಟೇ ಅಲ್ಲಾ ನಿಂಬೆಯೂ ಕಹಿಯಾಗಿದೆ. ಮಾರುಕಟ್ಟೆಯಲ್ಲಿ ಬೇಡಿಕೆಯಿಲ್ಲದೇ ಪಾತಾಳಕ್ಕೆ ಮುಟ್ಟಿದ ನಿಂಬೆ ಬೆಲೆ. ಸಾವಿರ ನಿಂಬೆಯಿರೋ ಮೂಟೆ ಮಾರಾಟವಾಗುತ್ತಿರೋದು ಸರಾಸರಿ 300 ರಿಂದ 400 ರೂ ಮಾತ್ರ. ಇದು ವಿಜಯಪುರ ಜಿಲ್ಲೆಯ ನಿಂಬೆ ಬೆಳೆಗಾರರ ದುರಾದೃಷ್ಟ ಅನ್ನಬಹುದೋ, ಮಾರುಕಟ್ಟೆಯ ಕರಾಮತ್ತು ಅನ್ನಬಹುದೋ ಎಂಬುದು ಮಾತ್ರ ತಿಳಿಯುತ್ತಿಲ್ಲಾ.
ಕಾರಣ ಜಿಲ್ಲೆಯಲ್ಲಿ ಬೆಳೆಯೋ ಉತೃಷ್ಟ ಮಟ್ಟದ ತೋಟಗಾರಿಕೆ ಬೆಳೆಗಳ ಪೈಕಿ ನಿಂಬೆ ಬೆಳೆಯೂ ಸಹ ಪ್ರಮುಖವಾದುದಾಗಿದೆ. ಕಾರಣ ನಿಂಬೆ ಬೆಳೆಗಾರರಿಗೆ ನಿರಂತರ ಆದಾಯ ತಂದು ಕೊಡುವ ನಿಂಬೆ ಒಂದು ರೀತಿಯಲ್ಲಿ ರೈತರಿಗೆ ಎಟಿಎಂ ಇದ್ದ ಹಾಗೆ. ಆದರೆ ಸದ್ಯದ ಮಾರುಕಟ್ಟೆಯಲ್ಲಿ ನಿಂಬೆ ಬೆಳೆಗಾರರ ಪಾಲಿಗೆ ನಷ್ಟದ ಬೆಳೆಯಾಗಿದೆ. ಒಂದು ಸಾವಿರ ನಿಂಬೆ ಇರೋ ಮೂಟೆ 200 ರಿಂದ 800 ರೂಪಾಯಿಗೆ ಮಾತ್ರ ಮಾರಾಟ ಆಗುತ್ತಿದೆ.
ವಿಜಯಪುರ ನಗರದ ಕೃಷಿ ಉತ್ತಪೊನ್ನ ಮಾರುಕಟ್ಟೆಯ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯಲ್ಲಿ ನಿಂಬೆಗೆ ಬೆಲೆ ಇಲ್ಲವಾಗಿದೆ. ಸರಾಸರಿ ಲೆಕ್ಕ ಹಾಕಿದಾಗ 300 ರೂಪಾಯಿ ಮಾತ್ರ ಒಂದು ಮೂಟೆಗೆ ಸಿಗುತ್ತಿದೆ. 300 ರೂಪಾಯಿಗೆ ನಿಂಬೆ ಮೂಟೆ ಮಾರಾಟ ಆದರೆ ಬೆಳೆಗಾರರಿಗೆ ನಯಾ ಪೈಸೆಯೂ ಸಿಗಲ್ಲಾ. ನಿತ್ಯ ನಿಂಬೆಗೆ ನೀರುಣಿಸಿ ಬೆಳೆ ಬೆಳೆದು ಕಟಾವು ಮಾಡಿ, ಮಾರುಕಟ್ಟೆಗೆ ತಂದು, ಹಮಾಲಿ ಹಾಗೂ ಕಮೀಷನ್ ಲೆಕ್ಕ ಹಾಕಿದಾಗ 350 ರೂಪಾಯಿ ಆಗುತ್ತಿದೆ.
ಇದನ್ನೂ ಓದಿ:
ಅಂಥದರಲ್ಲಿ 300 ರೂಪಾಯಿಗೆ ಒಂದು ಮೂಟೆ ನಿಂಬೆ ಮಾರಾಟವಾದರೆ ಬೆಳೆಗಾರರು ನಷ್ಟಕ್ಕೆ ಈಡಾಗುತ್ತಿದ್ದಾರೆ. ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳನ್ನು ಸಂಗ್ರಹಿಸಿಡಲು ಕೋಲ್ಡ್ ಸ್ಟೋರೇಜ್ ಗಳಿಲ್ಲ. ಹಣ್ಣಿನ ಪದಾರ್ಥವಾಗಿದ್ದು ನಮಗೆ ಸಂಗ್ರಹ ಮಾಡಿಡಲು ಸಾಧ್ಯವಾಗಿಲ್ಲ. ಜಿಲ್ಲೆಯಲ್ಲಿನ ಆಧಿಕಾರಿಗಳು, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ತೋಟಗಾರಿಕಾ ಬೆಳೆಗಾರರಿಗೆ ಮರಣ ಶಾಸನವಾಗಿದೆ. ಹಸಿ ಹಣ್ಣುಗಳನ್ನು ಸಂಗ್ರಹ ಮಾಡಿಟ್ಟುಕೊಳ್ಳಲು ಕೋಲ್ಡ್ ಸ್ಟೋರೇಜ್ ಇದ್ದರೆ ಅಲ್ಲಿ ಸಂಗ್ರಹ ಮಾಡಿ ಬೆಲೆ ಹೆಚ್ಚಿದ್ದಾಗ ಮಾರಾಟ ಮಾಡಲು ಅವಕಾಶವಿರುತ್ತದೆ. ಕಾರಣ ಜಿಲ್ಲೆಯಲ್ಲಿ ಹಣ್ಣು ಮತ್ತು ತರಕಾರಿ ಸಂಗ್ರಹ ಮಾಡಿಡಲು ಕೋಲ್ಡ್ ಸ್ಟೋರೇಜ್ ನಿರ್ಮಣವಾಗಬೇಕೆಂದು ಒತ್ತಾಯ ಮಾಡಿದ್ದಾರೆ ನಿಂಬೆ ಬೆಳೆಗಾರರು.
ತೋಟಗಾರಿಕೆ ಇಲಾಖೆಯ ಆಧಿಕಾರಿಗಳ ಪ್ರಕಾರ ಜಿಲ್ಲೆಯಲ್ಲಿ 12,000 ಹೆಕ್ಟೇರ್ ಪ್ರದೇಶದಲ್ಲಿ ಫಸಲು ನೀಡುವ ನಿಂಬೆ ಬೆಳೆಯಿದೆ. ವಾರದಲ್ಲಿ ಎರಡು ಬಾರಿ ನಿಂಬೆಕಾಯಿ ಕಟಾವು ಮಾಡಿ ಮಾರಾಟ ಮಾಡಬಹುದು. ಆದರೆ ಈ ಬಾರಿ ಉತ್ತಮ ಫಸಲು ಬಂದಿದ್ದರೂ ಸೂಕ್ತ ಬೆಲೆ ಇಲ್ಲದೇ ಇರೋದು ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇನ್ನು ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆಧಿಕಾರಾವಧಿಯಲ್ಲಿ ನಿಂಬೆ ಅಭಿವೃದ್ದಿ ಮಂಡಳಿ ಸ್ಥಾಪಿಸಲಾಗಿದೆ.
ಆದರೆ ನಿಂಬೆ ಅಭಿವೃದ್ದಿ ಮಂಡಳಿ ಹೆಸರಿಗೆ ಮಾತ್ರ ಆದಂತಾಗಿದೆ. ಇಲ್ಲಿಯವರೆಗೆ ಇಬ್ಬರು ಆಧ್ಯಕ್ಷರ ನೇಮಕವಾಗಿದ್ದು ಬಿಟ್ಟರೆ ಇತರೆ ಯಾವುದೇ ಸಹಾಯ ನಿಂಬೆ ಅಭಿವೃದ್ದಿ ಮಂಡಳಿಯಿಂದ ನಿಂಬೆ ಬೆಳೆಗಾರರಿಗೆ ಅನಕೂಲವಾಗಿಲ್ಲಾ. ಸದ್ಯ ನಿಂಬೆ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗಿದ್ದು ಹಾಗೂ ಚಳಿಗಾಲವಾದ ಕಾರಣ ಬೇಡಿಕೆ ಪ್ರಮಾಣ ಕಡಿಮೆಯಾಗಿದೆ. ಈ ಕಾರಣಗಳಿಂದ ಖರೀದಿದಾರರು ಹೆಚ್ಚಿನ ಬೆಲೆ ನೀಡುತ್ತಿಲ್ಲಾ. ಜೊತೆಗೆ ಇತರೆ ರಾಜ್ಯಗಳಲ್ಲಿಯೂ ಸಹ ನಿಂಬೆ ಬೆಳೆಯ ಪ್ರಮಾಣ ಹೆಚ್ಚಿದೆ. ಇನ್ನೂ ಮೂರು ತಿಂಗಳ ಕಾಲ ಇದೇ ದರ ಯಥಾಸ್ಥಿತಿ ಮುಂದುವರೆಯಲಿದೆ ಎಂದು ನಿಂಬೆ ಖರೀದಿದಾರರು ಮಾಹಿತಿ ನೀಡಿದ್ದಾರೆ.
ಹಲ್ಲಿದ್ದಾಗ ಕಡಲೆಯಿಲ್ಲ, ಕಡಲೆಯಿದ್ದಾಗ ಹಲ್ಲಿಲ್ಲ ಎಂಬ ಸ್ಥಿತಿಯಾಗಿದೆ ವಿಜಯಪುರ ಜಿಲ್ಲಾ ನಿಂಬೆ ಬೆಳೆಗಾರರ ಸ್ಥಿತಿ. ಭರಪೂರ ಫಸಲು ಬರುತ್ತಿದ್ದರೂ ಬೆಲೆ ಇಲ್ಲದ ಕಾರಣ ರೈತರಿಗೆ ಲಾಭವಾಗುತ್ತಿಲ್ಲ. ಕಡಿಮೆ ಬೆಲೆ ಇದೆ ಎಂಬ ಕಾರಣಕ್ಕೆ ಫಸಲು ಕಟಾವು ಮಾಡದೇ ಬಿಡಲಾಗಲ್ಲ. ಕಡಿಮೆ ಬೆಲೆಯಿದ್ದರೂ ಅನಿವಾರ್ಯವಾಗಿ ನಿಂಬೆ ಕಟಾವು ಮಾಡಿ ಮಾರಾಟ ಮಾಡಬೇಕಿದೆ. ಕಾರಣ ಜಿಲ್ಲೆಯಲ್ಲಿ ನಿಂಬೆ ಬೆಳೆಗಾರರ ಅಗತ್ಯಕ್ಕೆ ತಕ್ಕಂತೆ ಸರ್ಕಾರ, ತೋಟಗಾರಿಕಾ ಇಲಾಖೆ ಕೋಲ್ಡ್ ಸ್ಟೋರೇಜ್ ಗಳ ನಿರ್ಮಾಣ ಮಾಡಬೇಕಿದೆ. ಇಲ್ಲವಾದರೆ ನಿಂಬೆ ಬೆಳೆಗಾರರ ಸಂಕಷ್ಟಕ್ಕೆ ತಡೆ ಇಲ್ಲದಂತಾಗುತ್ತದೆ.
ವರದಿ: ಅಶೋಕ ಯಡಳ್ಳಿ, ಟಿವಿ 9, ವಿಜಯಪುರ
ಮತ್ತಷ್ಟು ವಿದೇಶ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ