ವಿಜಯಪುರ, ಏ.24: ರಾಜ್ಯದಲ್ಲಿ ಎರಡನೇ ಹಂತದಲ್ಲಿ ನಡೆಯುವ ಮತದಾನ ಕ್ಷೇತ್ರಗಳ ಪೈಕಿ ವಿಜಯಪುರ (Vijayapura) ಎಸ್ಸಿ ಮೀಸಲು ಲೋಕಸಭಾ ಕ್ಷೇತ್ರವೂ ಒಂದು. ನೆರೆಯ ಮಹಾರಾಷ್ಟ್ರದ ಗಡಿಯನ್ನು ಹಂಚಿಕೊಂಡಿರುವ ಜೊತೆಗೆ ಭೀಮಾತೀರದ ಅಪರಾಧಿಯ ಕೃತ್ಯಗಳ ಕುಖ್ಯಾತಿಯೂ ಇಲ್ಲಿದೆ. ಜೊತೆಗೆ ಕಳೆದ ವಿಧಾನಸಭಾ ಚುನಾವಣೆಯಿಂದ ಹಿಡಿದು ಲೋಖಸಭಾ ಚುನಾವಣೆ ವೇಳೆಯೂ ನಡೆದುಕೊಂಡು ಬಂದ ಕೊಲೆಗಳು ಹಾಗೂ ಇತರೆ ಅಪರಾಧ ಕೃತ್ಯಗಳ ಕಾರಣದಿಂದ ಅಪಖ್ಯಾತಿಗೂ ಪಾತ್ರವಾಗಿದೆ. ಈ ಕಾರಣಗಳಿಂದ ಮುಂಬರುವ ಲೋಕಸಭಾ ಚುನಾವಣೆಯನ್ನು ಯಾವುದೇ ಅಪರಾಧ ಕೃತ್ಯ ನಡೆಯದಂತೆ ಶಾಂತಿ ಸುವ್ಯವಸ್ಥೆಯಿಂದ ನಡೆಸಲು ಜಿಲ್ಲಾ ಪೊಲೀಸ್ ಇಲಾಖೆ ಕ್ರಮ ತೆಗೆದುಕೊಂಡಿದ್ದು, ಪ್ರಮುಖ ರೌಡಿ ಶೀಟರ್ಗಳನ್ನು ದೂರದ ಜಿಲ್ಲೆಗಳಿಗೆ ಗಡಿಪಾರು ಮಾಡಿದ್ಧಾರೆ.
ಚಾಮರಾಜನಗರ, ಕೋಲಾರ, ಮೈಸೂರು, ಕೊಡಗು, ಉಡುಪಿ, ತುಮಕೂರು ಸೇರಿದಂತೆ ಇತರೆ ಜಿಲ್ಲೆಗಳಿಗೆ ಗಡಿಪಾರು ಮಾಡಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಋಷಿಕೇಶ ಸೋನೆವಣೆ ಆದೇಶಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 28 ಜನ ರೌಡಿ ಶೀಟರ್ಗಳನ್ನು ಗಡಿಪಾರು ಮಾಡಲು ಆದೇಶ ಜಾರಿಯಾಗಿದೆ. ಸದ್ಯ 18 ಜನ ರೌಡಿಗಳನ್ನು ಗಡಿಪಾರು ಮಾಡಿ ಆದೇಶ ಮಾಡಿದ್ದೇವೆ. ಇನ್ನುಳಿದ 10 ಜನ ರೌಡಿಗಳನ್ನು ಸಹ ಗಡಿಪಾರು ಮಾಡಿ ಆದೇಶ ಜಾರಿ ಮಾಡಲಾಗುತ್ತದೆ. ಸುಗಮ ನ್ಯಾಯಸಮ್ಮತ ಹಾಗೂ ಶಾಂತಿ ಸುವ್ಯವಸ್ಥೆ ಚುನಾವಣೆಗಾಗಿ ಈ ಕ್ರಮ ಎಂದು ಎಸ್ಪಿ ಮಾಹಿತಿ ನೀಡಿದ್ಧಾರೆ. ಜೊತೆಗೆ ಕಾನೂನಿನ ಪ್ರಕಾರ ಗಡಿಪಾರು ಮಾಡಿದವರ ಹೆಸರು ಮಾಹಿತಿ ಬಹಿರಂಗ ಮಾಡಲಾಗಲ್ಲ ಎಂದಿದ್ದಾರೆ.
ಇದನ್ನೂ ಓದಿ:ಚಿಕ್ಕಮಗಳೂರು: ಚುನಾವಣಾ ಹೊತ್ತಲ್ಲೇ ಹಿಂದೂ ಕಾರ್ಯಕರ್ತ ಗಡಿಪಾರು; ಜಿಲ್ಲಾಧಿಕಾರಿ ಆದೇಶ
ಇನ್ನು ಜಿಲ್ಲೆಯ 2,086 ಮತಗಟ್ಟೆಗಳಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ಗೆ ಸಿದ್ದತೆ ಮಾಡಿಕೊಂಡಿದ್ದಾರೆ. 8 ಡಿವೈಎಸ್ಪಿ 26 ಇನ್ಸಪೆಕ್ಟರ್ 97 ಸಬ್ ಇನ್ಸಪೆಕ್ಟರ್ಸ್ ಸೇರಿದಂತೆ ಒಟ್ಟು 3,000 ಸಿಬ್ಬಂದಿಗಳನ್ನು ಚುನಾವಣಾ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಅಂತರ್ ರಾಜ್ಯ ಹಾಗೂ ಅಂತರ್ ಜಿಲ್ಲಾ ಚೆಕ್ ಪೋಸ್ಟ್ ಹಾಕಲಾಗಿದೆ. 11 ಅಂತಾರಾಜ್ಯ ಚೆಕ್ ಪೋಸ್ಟ್ ಗಳನ್ನು ನಿಯೋಜಿಸಿ ಕ್ರಮ ತೆಗೆದುಕೊಳ್ಳಲಾಗಿದೆ. ವಿವಿಧ ಚೆಕ್ ಪೋಸ್ಟ್ ಗಳಲ್ಲಿ ಪ್ಲೈಯಿಂಗ್ ಸ್ಕ್ವಾಡ್ ಮೂಲಕ ಒಟ್ಟು ಇಲ್ಲಿಯವರೆಗೆ 2.93 ಕೋಟಿ ಹಣ ಸೀಜ್ ಮಾಡಲಾಗಿದೆ. 50 ಅಬಕಾರಿ ಕೇಸ್ ಮಾಡಲಾಗಿದ್ದು 580 ಲೀಟರ್ ಮದ್ಯ 3 ಡ್ರಗ್ಸ್ ಕೇಸ್ ಹಾಕಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ. ಒಟ್ಟಾರೆ ಇದೇ ಮೇ 7 ರಂದು ನಡೆಯಲಿರುವ ಲೋಕಸಭಾ ಚುನಾವಣೆ ಮತದಾನ ಪ್ರಕ್ರಿಯೆ ಸುಗಮವಾಗಿ ಸುವ್ಯವಸ್ಥಿತವಾಗಿ ನಡೆಯಲು ಜಿಲ್ಲಾ ಪೊಲೀಸರು ಸನ್ನದ್ದರಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ