ಲೋಕಸಭೆ ಚುನಾವಣೆ ಬಳಿಕ ಬಿಜೆಪಿಯಲ್ಲಿ ಕ್ರಾಂತಿ: ವಂಶವಾದ, ಭ್ರಷ್ಟಾಚಾರ ಖತಂ, ಭವಿಷ್ಯ ನುಡಿದ ಶಾಸಕ ಯತ್ನಾಳ್

| Updated By: ಗಂಗಾಧರ​ ಬ. ಸಾಬೋಜಿ

Updated on: Dec 23, 2023 | 4:58 PM

ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​, ನರೇಂದ್ರ ಮೋದಿ ಅವರು 2024ರ ಲೋಕಸಭೆ ಚುನಾವಣೆಯಲ್ಲಿ ಗೆದ್ದ ಬಳಿಕ ಬಿಜೆಪಿಯಲ್ಲಿ ದೊಡ್ಡ ಕ್ರಾಂತಿ ಆಗಲಿದೆ. ವಂಶವಾದ, ಭ್ರಷ್ಟಾಚಾರ, ಹೊಂದಾಣಿಕೆ ರಾಜಕೀಯ ಖತಂ ಆಗುತ್ತೆ ಎಂದು ಭವಿಷ್ಯ ನುಡಿದಿದ್ದಾರೆ.

ಲೋಕಸಭೆ ಚುನಾವಣೆ ಬಳಿಕ ಬಿಜೆಪಿಯಲ್ಲಿ ಕ್ರಾಂತಿ: ವಂಶವಾದ, ಭ್ರಷ್ಟಾಚಾರ ಖತಂ, ಭವಿಷ್ಯ ನುಡಿದ ಶಾಸಕ ಯತ್ನಾಳ್
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
Follow us on

ವಿಜಯಪುರ, ಡಿಸೆಂಬರ್​​ 23: ಲೋಕಸಭೆ ಚುನಾವಣೆ ಬಳಿಕ ಬಿಜೆಪಿಯಲ್ಲಿ ದೊಡ್ಡ ಕ್ರಾಂತಿ ಆಗಲಿದೆ. ವಂಶವಾದ, ಭ್ರಷ್ಟಾಚಾರ, ಹೊಂದಾಣಿಕೆ ರಾಜಕೀಯ ಖತಂ ಆಗುತ್ತೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal)​ ಭವಿಷ್ಯ ನುಡಿದಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ಅವರು 2024ರಲ್ಲಿ ಗೆದ್ದ ಮೇಲೆ ವಂಶವಾದ, ಭ್ರಷ್ಟಾಚಾರ, ಹೊಂದಾಣಿಕೆ ಮೂರು ಖತಂ ಮಾಡುತ್ತಾರೆ. ಸುಮ್ನೆ ಅಲ್ಲಿಯವರೆಗೂ ಜಗ್ಗುತ್ತಾರೆ ಅಷ್ಟೇ ಎಂದು ಹೇಳಿದ್ದಾರೆ.

ನಾನು ಯಾವುದೇ ಸ್ಥಾನಮಾನಕ್ಕೆ ಅಪೇಕ್ಷೆ ಮಾಡಿಲ್ಲ. ಅದು ಕೊಡಬಹುದು ಇದು ಕೊಡಬಹುದೆಂದು ಹಗಲುಗನಸು ಕಾಣಲ್ಲ. ತಿರುಕನ ಊರು, ಮುರುಕ ಶಾಲೆ‌ ಎಂದು ಹೇಳುತ್ತಾರೆ. ನಾನು ಯಾವತ್ತೂ ಕನಸು ಕಾಣಲ್ಲ, ಏನೂ ಕೊಡೋದು ಬೇಡ. ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಸಂಭಾಳಿಸುವುದು ಬೇಕಿದೆ ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯ ಟಿಪ್ಪು ಸುಲ್ತಾನ್ ಪಾರ್ಟ್-2 ಆಗಿದ್ದಾರೆ

ಹಿಜಾಬ್​ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಟಿಪ್ಪು ಸುಲ್ತಾನ್ ಪಾರ್ಟ್-2 ಆಗಿದ್ದಾರೆ. ಸಿದ್ದರಾಮಯ್ಯ ಅತಿಯಾಗಿ ಆಡುತ್ತಿದ್ದಾರೆ, ಅಂತ್ಯ ಕಾಲ ಬಂದಿದೆ ಅನ್ಸುತ್ತೆ. ಈ ರೀತಿ ತುಷ್ಟೀಕರಣ ಮಾಡಿಯೇ ನಮ್ಮ ದೇಶ ಹಾಳಾಗಿದೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಹಿಜಾಬ್​ ನಿಷೇಧ ಆದೇಶ ಇನ್ನೂ ವಾಪಸ್​​ ಪಡೆದಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

2024ಕ್ಕೆ ಮತ್ತೆ ಅಧಿಕಾರಕ್ಕೆ ಬಂದರೆ ಏಕರೂಪ ನಾಗರಿಕ ಕಾನೂನು ಬರಲಿದೆ. ಆಗ ನಾವು ದೇಶದಲ್ಲಿ ಏಕರೂಪ ನಾಗರಿಕ ಕಾಯ್ದೆ ಜಾರಿಗೆ ತರುತ್ತೇವೆ. ನಮ್ಮ ಜೋಡೆತ್ತು ಯಾವುದಕ್ಕೆ ಹೋರಾಟ ಮಾಡುತ್ತಾರೆ ಗೊತ್ತಾಗಲ್ಲ ಎಂದು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಿರುದ್ಧ ಯತ್ನಾಳ್ ವಾಗ್ದಾಳಿ ಮಾಡಿದ್ದಾರೆ.

ಡಿಸಿಎಂ ಡಿ.ಕೆ.ಶಿವಕುಮಾರ್ ಕೇಸ್​ನಲ್ಲಿ ಹೋರಾಟ ಮಾಡಲಿಲ್ಲ. ಉಗ್ರ ಹೋರಾಟ ಮಾಡುತ್ತೇವೆ ಎಂದಿದ್ದವರು ಏನೂ ಮಾಡಲಿಲ್ಲ. ಈಗ ಅತ್ಯುಗ್ರ ಹೋರಾಟ ಮಾಡುತ್ತಾರಾ ನೋಡಬೇಕು ಎಂದು ಸ್ವಪಕ್ಷೀಯ ನಾಯಕರ ವಿರುದ್ಧವೇ ಶಾಸಕ ಯತ್ನಾಳ್ ವ್ಯಂಗ್ಯ ಮಾಡಿದ್ದಾರೆ.

ಇದನ್ನೂ ಓದಿ: ಟಿಪ್ಪುವಿನ ಅವತಾರವೇ ಸಿದ್ದರಾಮಯ್ಯ: ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ

ಹಿಜಾಬ್ ನಿಷೇಧ ಹಿಂಪಡೆಯುವುದು ಸೂಕ್ತ ಅಲ್ಲ. ಹಿಜಾಬ್ ನಿಷೇಧವನ್ನ ಬಿಜೆಪಿ ಮಾಡಿಲ್ಲ. ಶಾಲೆಯಲ್ಲಿ ಸಮಾನತೆ ಇರಲಿ ಎಂದು ಬಾಬಾಸಾಹೇಬ ಅಂಬೇಡ್ಕರ್ ಒಂದೇ ಸಮವಸ್ತ್ರದ ಕಾಯ್ದೆ ಮಾಡಿದ್ದರು. ಈ ರೀತಿ ಅವರವರಿಗೆ ತಿಳಿದಿದ್ದನ್ನ ಅವರು ಧರಿಸಿ ಬರುವುದಾದರೆ ನಾಳೆ ಹಿಂದೂ ಸಮುದಾಯದ ವಿದ್ಯಾರ್ಥಿಗಳು ಕೇಸರಿ ಶಾಲು, ಹಣೆಗೆ ತಿಲಕ ಇಟ್ಟುಕೊಂಡು ಬರುತ್ತಾರೆ. ಇದು ಸಂಘರ್ಷಕ್ಕೆ ಹಾದಿ ಆಗುತ್ತದೆ.

ಈ ರೀತಿ ಆದರೆ ಶ್ರೀಮಂತರ ಮಕ್ಕಳು ಒಳ್ಳೆಯ ಬಟ್ಟೆ, ಚಿನ್ನಾಭರಣ ಹಾಕಿಕೊಂಡು ಬರುತ್ತಾರೆ. ಆಗ ಬಡ ಮಕ್ಕಳ ಭಾವನೆಗೆ ಪೆಟ್ಟು ಬೀಳುತ್ತದೆ. ಲೋಕಸಭಾ ಚುನಾವಣೆ ಹಿನ್ನೆಲೆ ಮುಸ್ಲಿಂ ಪುಷ್ಟಿಕರಣಕ್ಕೆ ಸಿದ್ಧರಾಮಯ್ಯ ಈ ಮೂಲಕ ನಿಂತಿದ್ದಾರೆ. ಲೋಕಸಭೆಯಲ್ಲಿ ಅವರೆಲ್ಲ ಇವರಿಗೆ ಮತ ಚಲಾಯಿಸ್ತಾರೆ ಎಂದು ಕೊಂಡಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:57 pm, Sat, 23 December 23