ವಿಜಯಪುರ: ದೇವರು ವರ ಕೊಟ್ಟರೂ ಪೂಜಾರಿ ಬಿಡಲಿಲ್ಲ ಎನ್ನೋ ಮಾತಿದೆ. ಇದಕ್ಕೆ ತಕ್ಕಂತೆ ಕೆಲ ದುರುಳರು ಸರ್ಕಾರ ಬಡವರಿಗಾಗಿ ಕಲ್ಯಾಣ ಯೋಜನೆಗಳನ್ನ ಮಾಡಿದ್ರೂ, ನಡುವೆ ಲಂಚ ತಿನ್ನೋಕೆ ಇನ್ನಿಲ್ಲದ ಕಸರತ್ತು ಮಾಡ್ತಾರೆ. ಇಂಥದ್ದೆ ಒಂದು ಘಟನೆ ಪಂಚನದಿಗಳ ನಾಡು ವಿಜಯಪುರದಿಂದ ವರದಿಯಾಗಿದೆ.
ಹೌದು, ಬಡ ಜನರಿಗೆ ಆರೋಗ್ಯ ಸೇವೆಗಳು ಸಿಗಬೇಕೆಂದು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಆಯುಷ್ಮಾನ್ ಭಾರತ ಯೋಜನೆ ಜಾರಿಯಾಗಿದೆ. ಬಡವರು ಬಡತನ ರೇಖೆಗಿಂತ ಕೆಳಗಿರುವವರಿಗೆ ಆರೋಗ್ಯ ಸೇವೆಗಳು ಉಚಿತವಾಗಿ ಸಿಗಲು ಹಾಗೂ ಇತರರಿಗೆ ಕಡಿಮೆ ದರದಲ್ಲಿ ಆರೋಗ್ಯ ಸೇವೆಗಳು ಲಭಿಸಲಿ ಎನ್ನುವುದು ಈ ಯೋಜನೆಯ ಉದ್ದೇಶ. ನಿಗದಿ ಪಡಿಸಿದ ಆಸ್ಪತ್ರೆಗಳಲ್ಲಿ ಬಡತನ ರೇಖೆಗಿಂತ ಕೆಳಗಿರುವವರಿಗೆ ಉಚಿತವಾಗಿ ಆರೋಗ್ಯ ಸೇವೆಗಳು ಆಯುಷ್ಮಾನ್ ಭಾರತ ಯೋಜನೆಯಿಂದ ಸಾಧ್ಯ.
ಆಯುಷ್ಮಾನ್ ಕಾರ್ಡ್ ಹೆಸರಲ್ಲಿ ದಂಧೆ
ಆಯುಷ್ಮಾನ್ ಭಾರತ ಯೋಜನೆ ಪಡೆಯಲು ಸರ್ಕಾರ ನಿಗದಿ ಪಡಿಸಿರುವ ಆಯುಷ್ಮಾನ್ ಆರೋಗ್ಯ ಕಾರ್ಡ್ ಪಡೆಯಬೇಕು. ಈ ಕಾರ್ಡ್ ಪಡೆಯಲು ತಹಶೀಲ್ದಾರ್ ಕಚೇರಿ, ಪಂಚಾಯಿತಿ ಮಟ್ಟದಲ್ಲಿ ಹಾಗೂ ನಾಗರಿಕ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿ ನಿಗದಿತ 10 ರೂಪಾಯಿ ಶುಲ್ಕ ಭರಿಸಬೇಕು. ನಂತರ ಆಯುಷ್ಮಾನ್ ಭಾರತ ಕಾರ್ಡ್ ಅಂಚೆ ಮೂಲಕ ಮನೆಗೆ ಬರುತ್ತದೆ.
ಆದರೆ ಇದೇ ಆಯುಷ್ಮಾನ್ ಭಾರತ ಕಾರ್ಡ್ ಹೆಸರಲ್ಲಿ ಹಣ ಪೀಕುವ ದಂಧೆ ಈಗ ವಿಜಯಪುರ ಜಿಲ್ಲೆಯಲ್ಲಿ ಜೋರಾಗಿ ನಡೆಯುತ್ತಿದೆ. ಅಮಾಯಕ ಗ್ರಾಮೀಣ ಭಾಗದ ಜನರಿಗೆ ಆಯುಷ್ಮಾನ್ ಭಾರತ ಕಾರ್ಡ್ ನೀಡುವ ಭರವಸೆ ನೀಡಿ ಕೆಲವು ವ್ಯಕ್ತಿಗಳು ಹಣ ವಸೂಲಿ ಮಾಡುತ್ತಿವೆ. ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಜೀರಂಕಲಗಿ ಗ್ರಾಮಕ್ಕೆ ಬಂದಿದ್ದ ಇಬ್ಬರು ವ್ಯಕ್ತಿಗಳು, ಅದೇ ಗ್ರಾಮದ ಆಶಾ ಕಾರ್ಯಕರ್ತೆ ಶಶಿಕಲಾ ಕೋಳಿ ಎಂಬುವರ ಜತೆ ಸೇರಿ ಗ್ರಾಮಸ್ಥರಿಂದ ಹಣ ವಸೂಲಿ ಮಾಡಿದ್ದಾರೆ ಎನ್ನಲಾಗ್ತಿದೆ.
ಪ್ರತಿಯೊಬ್ಬರಿಂದ 100ರೂ. ವಸೂಲಿ
ಚಡಚಣದಿಂದ ಕಂಪ್ಯೂಟರ್ ಸೆಂಟರ್‌ವೊಂದರ ಸಿಬ್ಬಂದಿಯನ್ನ ಕರೆಸಿರುವ ಆಶಾ ಕಾರ್ಯಕರ್ತೆ ಶಶಿಕಲಾ ಕೋಳಿ, ಗ್ರಾಮಕ್ಕೆ ಕಂಪ್ಯೂಟರ್ ಸಿಸ್ಟಮ್, ಫಿಂಗರ್ ಪ್ರಿಂಟ್ ಮಶೀನ್ ಸಮೇತ ಇಬ್ಬರನ್ನು ಕರೆಯಿಸಿದ್ದಾರೆ. ಆಯುಷ್ಮಾನ್ ಭಾರತ ಕಾರ್ಡ್ ಬೇಕು ಅಂದ್ರೇ ಒಬ್ಬರಿಗೆ 100 ರೂಪಾಯಿ ನೀಡಬೇಕು. ಒಂದು ಕುಟುಂಬದಲ್ಲಿ ಎಷ್ಟು ಜನರಿದ್ದಾರೋ ಅಷ್ಟು ಜನ ತಲಾ ಒಂದು ನೂರು ರೂಪಾಯಿ ನೀಡಬೇಕೆಂದು ಹಣ ವಸೂಲಿ ಮಾಡಿದ್ದಾರೆ. ಆಯುಷ್ಮಾನ್ ಭಾರತ ಕಾರ್ಡ್‌ಗಾಗಿ ಇಲ್ಲಿನ ಜನರು ರೇಷನ್ ಕಾರ್ಡ್ ಪ್ರತಿ ನೀಡಿ ಹಾಗೂ ತಮ್ಮ ಫಿಂಗರ್ ಪ್ರಿಂಟ್ ನೀಡಿದ್ದಾರೆ.ೇ ಇವನ್ನು ಪಡೆದು ಫೋಟೋ ತೆಗೆದ ಬಳಿಕ ನಿಮ್ಮ ಕಾರ್ಡ್ ಪೋಸ್ಟ್ ಮೂಲಕ ಮನೆಗೆ ಬರುತ್ತದೆ ಎಂದು ಜನರಿಗೆ ಹೇಳಿದ್ದಾರೆ.
ಗ್ರಾಮಸ್ಥರು ರಸೀದಿ ಕೇಳಿದಾಗ ಕಾಲ್ಕಿತ್ತ ದುರುಳರು
ಆಗ ಅನುಮಾನಗೊಂಡ ಗ್ರಾಮದ ಕೆಲ ಯುವಕರು ಹಾಗೂ ಇತರರು ಇವರನ್ನು ಆಯುಷ್ಮಾನ್ ಕಾರ್ಡ್‌ಗೆ 100 ರೂಪಾಯಿ ತೆಗೆದುಕೊಳ್ಳುತ್ತಿದ್ದೀರಿ. ಸರ್ಕಾರ 10 ರೂಪಾಯಿ ಮಾತ್ರ ನಿಗದಿ ಮಾಡಿದೆ. ನಮ್ಮಿಂದ 100 ರೂಪಾಯಿ ತೆಗೆದುಕೊಂಡಿದ್ದಕ್ಕೆ ರಸೀದಿ ನೀಡಿ ಎಂದು ಕೇಳಿದ್ದಾರೆ. ಆಗ ಆಶಾ ಕಾರ್ಯಕರ್ತೆ ಶಶಿಕಲಾ ಕೋಳಿ ಹಾಗೂ ಕಂಪ್ಯೂಟರ್ ಆಪರೇಟರ್ಸ್ ಆಯುಷ್ಮಾನ್ ಭಾರತ ಕಾರ್ಡ್ ಬೇಕಿದ್ರೆ ಹಣ ನೀಡಿ ಇಲ್ಲದಿದ್ದರೆ ಬಿಡಿ ಎಂದು ಮರುತ್ತರ ನೀಡಿದ್ದಾರೆ. ಇಷ್ಟಕ್ಕೇ ಜನ ಸುಮ್ಮನಾಗದೇ ತರಾಟೆಗೆ ತೆಗೆದುಕೊಂಡಾಗ ಕಂಪ್ಯೂಟರ್ ಹಾಗೂ ಸ್ಕ್ಯಾನಿಂಗ್ ಯಂತ್ರ ಸಮೇತ ಅವರೆಲ್ಲಾ ಜಾಗ ಖಾಲಿ ಮಾಡಿದ್ದಾರೆ. -ಅಶೋಕ ಯಡಳ್ಳಿ
Published On - 5:51 pm, Sun, 28 June 20