Yatnal: ಶೋಭಾ ಕಾಲಿಗೆ ಬಿದ್ದಿದ್ದರು ಎಂಬ ಮುರುಗೇಶ್ ನಿರಾಣಿ ಹೇಳಿಕೆಗೆ ತಿರುಗೇಟು ನೀಡಿದ ಶಾಸಕ ಯತ್ನಾಳ್

| Updated By: ಗಂಗಾಧರ​ ಬ. ಸಾಬೋಜಿ

Updated on: Dec 25, 2022 | 3:39 PM

ಶೋಭಾ ಕರಂದ್ಲಾಜೆ ಅವರ ಕಾಲಿಗೆ ಬಿದ್ದಿದ್ದರು ಎಂಬ ಮುರುಗೇಶ ನಿರಾಣಿ ಹೇಳಿಕೆ ವಿಚಾರಕ್ಕೆ ಬಸನಗೌಡ ಪಾಟೀಲ್ ಯತ್ನಾಳ ತಿರುಗೇಟು ನೀಡಿದ್ದಾರೆ.

Yatnal: ಶೋಭಾ ಕಾಲಿಗೆ ಬಿದ್ದಿದ್ದರು ಎಂಬ ಮುರುಗೇಶ್ ನಿರಾಣಿ ಹೇಳಿಕೆಗೆ ತಿರುಗೇಟು ನೀಡಿದ ಶಾಸಕ ಯತ್ನಾಳ್
ಸಚಿವ ಮುರುಗೇಶ್ ನಿರಾಣಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, (ಸಂಗ್ರಹ ಚಿತ್ರ)
Follow us on

ವಿಜಯಪುರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ (Basangouda Patil Yatnal) ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಅವರ ಕಾಲಿಗೆ ಬಿದ್ದಿದ್ದರು ಎಂದು ನಿನ್ನೆ(ಡಿ. 24) ಬಾಗಲಕೋಟೆಯಲ್ಲಿ ಸಚಿವ ಮುರುಗೇಶ ನಿರಾಣಿ (murugesh nirani) ಹೇಳಿಕೆ ನೀಡಿದ್ದರು. ಸದ್ಯ ಈ ವಿಚಾರವಾಗಿ ಸಚಿವ ಮುರುಗೇಶ್ ನಿರಾಣಿ ಹೇಳಿಕೆಗೆ ಯತ್ನಾಳ್ ತಿರುಗೇಟು ನೀಡಿದ್ದಾರೆ. ನಾನು ಯಾರ ಕಾಲು ಹಿಡಿಯಲು ಹೋಗಿಲ್ಲ.​ ನಾನು ವಾಜಪೇಯಿ, ಅಡ್ವಾಣಿ ಕಾಲಿಗೆ ನಮಸ್ಕಾರ ಮಾಡಿದ್ದೇನೆ. ಸಿದ್ಧಗಂಗಾಶ್ರೀ, ಸಿದ್ದೇಶ್ವರ ಶ್ರೀಗಳ ಕಾಲಿಗೆ ನಮಸ್ಕಾರ ಮಾಡಿದ್ದೇನೆ. ಆದ್ರೆ ಕೆಲವು ಸ್ವಾಮೀಜಿಗಳ ಕಾಲು ಮುಗಿಯಲ್ಲ.​ ಮುರುಘಾ ಶರಣರು ಬಂದಿದ್ದಾಗಲೂ ಕಾಲಿಗೆ ನಮಸ್ಕಾರ ಮಾಡಿಲ್ಲ. ಕೆಲ ತಲೆಹಿಡುಕರು ರಾಜಕೀಯಕ್ಕೆ ಬಂದ ಮೇಲೆ ತೊಂದರೆ ಆಗಿದೆ. ಶ್ರೀಗಳನ್ನು ಮನೆಗೆ ಕರೆದು ಲಕ್ಷಗಟ್ಟಲೆ ಹಣ ಕೊಡೋದು ಮಾಡ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.

ನಿರಾಣಿ ಬಚ್ಚಾ ಅದಾನೋ ನನಗೆ ಗೊತ್ತಿಲ್ಲ

ಆದರೆ ಈ ದಂಧೆ ಯತ್ನಾಳಗೆ ಗೊತ್ತಿಲ್ಲ ಎಂದು ಪರೋಕ್ಷವಾಗಿ ನಿರಾಣಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಾನೇನು‌ ಬಚ್ಚಾ ಅಲ್ಲಾ ಎಂಬ ಹೇಳಿಕೆ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದು, ನಿರಾಣಿ ಬಚ್ಚಾ ಅದಾನೋ ನನಗೆ ಗೊತ್ತಿಲ್ಲ. ಅದು ಜನರಿಗೆ ಗೊತ್ತಿದೆ. ಮೊನ್ನೆ ಬೆಳಗಾವಿಯಲ್ಲಿ ಪಂಚಮಸಾಲಿ ಹೋರಾಟ ನೋಡಿ ಹತಾಶೆ ಆಗಿದ್ದಾರೆ, ಹಾಗಾಗಿ ಅವರು ಹಾಗೆ ಮಾತನಾಡಿದ್ದಾರೆಂದು ವಾಗ್ದಾಳಿ ಮಾಡಿದರು.

ಇದನ್ನೂ ಓದಿ: ಬಸವೇಶ್ವರರ ನಾಡಿಗೂ ಕಾಲಿಟ್ಟ ಧರ್ಮ ದಂಗಲ್​: ಸಿದ್ದೇಶ್ವರ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡದಂತೆ ಯತ್ನಾಳ್​ಗೆ ಮನವಿ

2ಎ ಮೀಸಲಾತಿ ನೀಡುವುದಾಗಿ ತಾಯಿ ಮೇಲೆ ಆಣೆ ಮಾಡಿದ್ದಾರೆ

ಇನ್ನು ಪಂಚಮಸಾಲಿಗೆ 2ಎ ಮೀಸಲಾತಿ ಘೋಷಣೆ ಆಗುವ ಭರವಸೆ ಇದೆ. ಮೀಸಲಾತಿ ಘೋಷಣೆ ಮಾಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 2ಎ ಮೀಸಲಾತಿ ನೀಡುವುದಾಗಿ ತಾಯಿ ಮೇಲೆ ಆಣೆ ಮಾಡಿದ್ದಾರೆ. ಆಣೆ ಮಾಡಿದ್ಮೇಲೆ ಮೀಸಲಾತಿ ಕೊಟ್ಟೇ ಕೊಡುತ್ತಾರೆ. ವಚನ ಭ್ರಷ್ಟ ಆಗಬೇಕಾಗುತ್ತೆ, ಅದಕ್ಕೆ ಸಿಎಂ ಭರವಸೆ ಈಡೇರಿಸ್ತಾರೆ. ಬೇರೆ ಸಮುದಾಯದವರು ಮೀಸಲಾತಿ ಕೇಳುತ್ತಿರುವುದರಲ್ಲಿ ತಪ್ಪಿಲ್ಲ ಎಂದು ವಿಜಯಪುರ ‌ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಭೂಮಿಪೂಜೆ ಕಾರ್ಯಕ್ರಮದ ಬಳಿಕ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಯಡಿಯೂರಪ್ಪರಿಂದ 10 ಕೋಟಿ ರೂ ವಸೂಲಿ: ಅಧಿವೇಶನದಲ್ಲಿ ವಚನಾನಂದ ಸ್ವಾಮಿ ಬಣ್ಣ ಬಯಲು ಮಾಡುತ್ತೇನೆ ಎಂದ ಯತ್ನಾಳ್

ಕೆಲವರು ಬಿಜೆಪಿ ಸೇರಲು ಓಡಾತ್ತಿದ್ದಾರೆ

ಮಾಜಿ ಸಚಿವ ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪನೆ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದು, ಚುನಾವಣೆಯಲ್ಲಿ ಪಕ್ಷವನ್ನು ಬಹುಮತಕ್ಕೆ ತರುವುದಷ್ಟೇ ನಮ್ಮ ಗುರಿ. ಯಾರು ಪಕ್ಷ ಮಾಡಿದರು? ಯಾರು ಪಕ್ಷ ಬಿಟ್ಟರು ಅನ್ನೋದು ಬೇಡ. ಕೆಲವರು ಪಕ್ಷವನ್ನು ಬಿಟ್ಟು ಹೋಗುವವರು ಇದ್ದಾರೆ.​​​ ಅನೇಕರು ನಾಯಕರು ಬಿಜೆಪಿಗೆ ಬರಲಿದ್ದಾರೆ. ಕೆಲವರು ಪ್ರಾಣಹೋದ್ರೂ ಸೋನಿಯಾರನ್ನ ಬಿಡಲ್ಲ ಅಂತ ನಾಟಕ ಆಡ್ತಾರೆ. ದೆಹಲಿಗೆ ಹೋಗಿ ನಾವು ಬಿಜೆಪಿಗೆ ಸೇರುತ್ತೇವೆ ಎಂದು ಓಡಾಡುತ್ತಿದ್ದಾರೆ ಎಂದು ಶಿವಾನಂದ ಪಾಟೀಲ್ ಹಾಗೂ ಯಶವಂತರಾಯಗೌಡ ಪಾಟೀಲ್​ಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.

ನಾನು ಸಂಪುಟ ವಿಚಾರದಲ್ಲಿ ಇಲ್ಲವೇ ಇಲ್ಲ

ಸಚಿವ ಸಂಪುಟ ಚರ್ಚೆ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದು, ನಾನು ಸಂಪುಟ ವಿಚಾರದಲ್ಲಿ ಇಲ್ಲವೇ ಇಲ್ಲ. ಈಶ್ವರಪ್ಪ, ರಮೇಶ ಜಾರಕಿಹೊಳಿ, ಸಿ.ಪಿ ಯೊಗೇಶ್ವರ ಅವರು ಮಂತ್ರಿ ಆಗಬೇಕು ಎನ್ನುತ್ತಿದ್ದಾರೆ. ನಾನು ಸಿಎಂ ಬೊಮ್ಮಾಯಿ ಅವರಿಗೆ ಹೇಳಿದ್ದು ಇಷ್ಟೇ, ಮೀಸಲಾತಿ ಕೊಡಿ, ಕಥೆ ಹೇಳಬೇಡಿ ಎಂದು ಮೀಸಲಾತಿ ವಿಚಾರದಲ್ಲಿ ಸ್ಪಷ್ಟವಾಗಿ ಹೇಳಿದ್ದೇನೆ. ನಮಗೇನು ಸಚಿವ ಸ್ಥಾನ ಬೇಕಾಗಿಲ್ಲ, ಮೂರು ತಿಂಗಳ ಮಂತ್ರಿ ಆಗೋದು ಅವಶ್ಯಕತೆ ಇಲ್ಲ. ನನಗೇನು ಮಂತ್ರಿ ಆಗಬೇಕು ಎಂಬುದು ಇಲ್ಲ. ನಾನು ತಲೆ ಕೆಡೆಸಿಕೊಂಡಿಲ್ಲ. ನಾ‌ ಆಗೋದು ಇಲ್ಲಾ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.