
ವಿಜಯಪುರ, ಡಿಸೆಂಬರ್ 14: ಭಾರೀ ಚಳಿಗೆ (Cold) ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳು ಥಂಡಾ ಹೊಡೆದಿವೆ. ಕಳೆದ 10 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲಾಗಿದ್ದು, ಕಿತ್ತೂರು, ಕಲ್ಯಾಣ ಕರ್ನಾಟಕದ 9 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ (Orange Alert) ಘೋಷಿಸಲಾಗಿದೆ. ಇನ್ನೂ ಎರಡೂ ದಿನಗಳ ಕಾಲ ಶೀತಗಾಳಿ ಬೀಸಲಿದ್ದು, ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ
ಭಾರೀ ಚಳಿಗೆ ಉತ್ತರ ಕರ್ನಾಟಕ ಬೆಚ್ಚಿಬಿದ್ದಿದೆ. ಉತ್ತರ ಕರ್ನಾಟಕದ 9 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆಯಾಗಿದ್ದು, ಹವಾಮಾನ ಇಲಾಖೆ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದೆ. ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕದ ಕಲಬುರ್ಗಿ, ಬೀದರ್, ವಿಜಯಪುರ, ಬೆಳಗಾವಿ, ಬಾಗಲಕೋಟೆ, ಹಾವೇರಿ, ಯಾದಗಿರಿ, ಧಾರವಾಡ, ಕೊಪ್ಪಳ ಜಿಲ್ಲೆಗಳಲ್ಲಿ ಮುಂದಿನ ಎರಡೂ ದಿನಗಳ ಕಾಲ ಶೀತಗಾಳಿ ಬೀಸಲಿದೆ. ಈ 9 ಜಿಲ್ಲೆಗಳಲ್ಲಿ ತಾಪಮಾನ ದಿಢೀರ್ ಕುಸಿತ ಕಂಡಿದ್ದು, ಇನ್ನೂ ತಾಪಮಾನ ಕುಸಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: Karnataka Weather: ರಾಜ್ಯದಲ್ಲಿ ಚಳಿ ಅಬ್ಬರ; ಕನಿಷ್ಠ ತಾಪಮಾನಕ್ಕೆ ನಲುಗಿದ ಬೆಂಗಳೂರು
ರಾಜ್ಯದಲ್ಲಿಯೇ ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಅತಿ ಕಡಿಮೆ ತಾಪಮಾನ ದಾಖಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಕೇವಲ 7 ತಾಪಮಾನ ದಾಖಲಾಗಿದ್ದು, ಜನರ ಜೀವನ ತತ್ತರಗೊಂಡಿದೆ. ಕಳೆದ ಹತ್ತು ವರ್ಷಗಳಲ್ಲಿ ಎರಡನೆಯ ಬಾರಿಗೆ ತಾಪಮಾನ ಕನಿಷ್ಠ ಮಟ್ಟ ತಲುಪಿದೆ. 2023ರಲ್ಲಿ ವಿಜಯಪುರದಲ್ಲಿ 6.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಈಗ 7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇನ್ನೂ ಎರಡೂ ದಿನಗಳ ಕಾಲ ಶೀತಗಾಳಿ ಬೀಸಲಿದ್ದು, ತಾಪಮಾನ 6 ಸೆಲ್ಸಿಯಸ್ಗೆ ಕುಸಿಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಮುಂದಿನ ಎರಡ್ಮೂರು ದಿನಗಳ ಕಾಲ ಜನರು ಕೂಡ ಮುನ್ನೆಚ್ಚರಿಕಾ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ. ಬೆಳಿಗ್ಗೆ ಹಾಗೂ ಸಾಯಂಕಾಲ ಸಮಯದಲ್ಲಿ ಹೊರಗಡೆ ತೆರಳಿ ವಾಕಿಂಗ್ ಮಾಡುವುದು, ವ್ಯಾಯಾಮ ಮಾಡಬಾರದು. ಬೆಚ್ಚಗಿನ ಉಡುಪು ಧರಿಸಬೇಕು. ಬಿಸಿ ನೀರು ಸೇವನೆ ಮಾಡಬೇಕು ಎಂದು ಹವಾಮಾನ ತಜ್ಞರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ರಾಜ್ಯದಲ್ಲಿ ಚಳಿಯ ಮುನ್ಸೂಚನೆ, 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
ಒಟ್ಟಿನಲ್ಲಿ ಸದಾ ಬಿಸಿಲಿರುವ ಉತ್ತರ ಕರ್ನಾಟಕ ಭಾಗದಲ್ಲಿ ಶೀತಗಾಳಿ ಜನರನ್ನ ಹಿಂಡಿ ಹಿಪ್ಪೆ ಮಾಡಿದೆ. ಇನ್ನೂ ಎರಡೂ ದಿನ ಅಂದರೆ ಡಿ. 16ರವರೆಗೂ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಜನರು ಎಚ್ಚರಿಕೆಯಿಂದ ಇರಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.