ಪುಲ್ವಾಮಾದಲ್ಲಿ ಉಗ್ರರ ಗುಂಡಿನ ದಾಳಿಯಲ್ಲಿ ಹುತಾತ್ಮ ಯೋಧ ಕಾಶೀರಾಯ ಬೊಮ್ಮನಹಳ್ಳಿಗೆ ಶೌರ್ಯ ಪ್ರಶಸ್ತಿ: ರಾಜ್ಯ ಸರ್ಕಾರದ ವಿರುದ್ಧ ಕುಟುಂಬಸ್ಥರ ಅಸಮಾಧಾನ

| Updated By: ಆಯೇಷಾ ಬಾನು

Updated on: May 11, 2022 | 9:48 PM

ಉಗ್ರರಿಂದ ದೇಶ ಕಾಪಾಡಲು ಪ್ರಾಣವನ್ನು ಬಿಟ್ಟ ಕಾಶೀರಾಯ ಬೊಮ್ಮನಹಳ್ಳಿಗೆ ಕೇಂದ್ರ ಸರ್ಕಾರ ಮರಣೋತ್ತರ ಶೌರ್ಯ ಪ್ರಶಸ್ತಿಯನ್ನು ಘೋಷಣೆ ಮಾಡಿತ್ತು. ನಿನ್ನೆ ಮೇ 10 ರಂದು ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ವೀರ, ಧೀರ ಕನ್ನಡಿಗ ಕಾಶೀರಾಯ್ ಗೆ ಕೇಂದ್ರ ಸರ್ಕಾರವು ಮರಣೋತ್ತರವಾಗಿ ಶೌರ್ಯ ಪ್ರಶಸ್ತಿ ಪ್ರದಾನ ಮಾಡಿದೆ.

ಪುಲ್ವಾಮಾದಲ್ಲಿ ಉಗ್ರರ ಗುಂಡಿನ ದಾಳಿಯಲ್ಲಿ ಹುತಾತ್ಮ ಯೋಧ ಕಾಶೀರಾಯ ಬೊಮ್ಮನಹಳ್ಳಿಗೆ ಶೌರ್ಯ ಪ್ರಶಸ್ತಿ: ರಾಜ್ಯ ಸರ್ಕಾರದ ವಿರುದ್ಧ ಕುಟುಂಬಸ್ಥರ ಅಸಮಾಧಾನ
ಹುತಾತ್ಮ ಯೋಧ ಕಾಶೀರಾಯ ಬೊಮ್ಮನಹಳ್ಳಿ
Image Credit source: indiatimes
Follow us on

ವಿಜಯಪುರ: ಉಗ್ರರ ವಿರುದ್ಧ ಹೋರಾಡಿ ಪ್ರಾಣ ತ್ಯಾಗ ಮಾಡಿದ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ಹವಾಲ್ದಾರ ಕಾಶೀರಾಯ್ ಬಮ್ಮನಹಳ್ಳಿ ಅವರಿಗೆ ಕೇಂದ್ರ ಸರ್ಕಾರವು, ಮರಣೋತ್ತರ ಶೌರ್ಯ ಪ್ರಶಸ್ತಿಯನ್ನು ಪ್ರಕಟಿಸಿರುವುದು ವಿಜಯಪುರ ಜಿಲ್ಲಾಡಳಿತ ಮತ್ತು ಜಿಲ್ಲೆಯ ಜನತೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ.ವಿಜಯ ಮಹಾಂತೇಶ ಬಿ ದಾನಮ್ಮನವರ ಅಭಿಮಾನ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಯೋಧ ದೇಶ ರಕ್ಷಣೆಯಲ್ಲಿ ಹುತಾತ್ಮರಾಗಿದ್ದರು. ಕೇಂದ್ರ ಸರ್ಕಾರ ಹುತಾತ್ಮ ಯೋಧನಿಗೆ ಶೌರ್ಯ ಪ್ರಶಸ್ತಿ ನೀಡೋ ಮೂಲಕ ಗೌರವಿಸಿದೆ ಎಂದು ಡಿಸಿ ಹೇಳಿದ್ದಾರೆ.

ಘಟನೆ ಹಿನ್ನೆಲೆ
2021ರ ಜುಲೈ 1ರಂದು ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರು ಅಡಗಿದ್ದಾರೆ ಎಂಬ ಮಾಹಿತಿ ಸೇನೆಗೆ ಲಭ್ಯವಾಗಿತ್ತು. ಉಗ್ರರು ತಪ್ಪಿಸಿಕೊಂಡು ಹೋಗಬಾರದೆಂದು ಯೋಧರು ಉಗ್ರರು ಅಡಗಿದ್ದ ಸ್ಥಳವನ್ನು ಸುತ್ತುವರಿದು ನಿಂತಿದ್ದರು. 44 ನೇ ಬಟಾಲಿಯನ್ ನ ರಾಷ್ಟ್ರೀಯ ರೈಫಲ್ಸ್ ನಲ್ಲಿದ್ದ ವಿಜಯಪುರ ಜಿಲ್ಲೆ ಬಸನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ಯೋಧ ಕಾಶೀರಾಯ ಬೊಮ್ಮನಹಳ್ಳಿ ಉಗ್ರರನ್ನು ಹಡೆಮುರಿ ಕಟ್ಟಿ ಸೆರೆ ಹಿಡಿಯೋ ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿದ್ದರು. ಯಾವಾಗ ಉಗ್ರರು ತಮ್ಮನ್ನು ಸುತ್ತುವರಿದಿದ್ದಾರೆಂದು ಗೊತ್ತಾಯಿತೋ ಆಗ ಯೋಧರ ಮೇಲೆ ಉಗ್ರರು ಗುಂಡು ಹಾರಿಸಲು ಆರಂಭಿಸಿದರು. ಆಗ ನಡೆದ ಗುಂಡಿನ ಚಕಮಕಿಯಲ್ಲಿ ಯೋಧ ಕಾಶೀರಾಯ ಬೊಮ್ಮನಹಳ್ಳಿ ಮೂವರು ಉಗ್ರನನ್ನು ಹೊಡೆದುರುಳಿಸಿದ್ದರು. ಈ ವೇಳೆ ಯೋಧ ಕಾಶೀರಾಯ ಬೊಮ್ಮನಳ್ಳಿಗೆ ಉಗ್ರರ ಗುಂಡುಗಳು ತಾಗಿದರೂ ಎದೆಗುಂದದೇ ತನ್ನ ಜೊತೆಗಿದ್ದ ಯೋಧರ ಪ್ರಾಣ ರಕ್ಷಿಸುತ್ತಲೇ ದೇಶಕ್ಕಾಗಿ ಪ್ರಾಣ ಬಿಟಿದ್ದರು. 2021 ರ ಜುಲೈ 2 ರಂದು ಯೋಧ ಕಾಶೀರಾಯ ಬೊಮ್ಮನಹಳ್ಳಿ ಅಂತ್ಯಕ್ರಿಯೆಯನ್ನು ಸ್ವಗ್ರಾಮ ಉಕ್ಕಲಿ ಗ್ರಾಮದ ಬಸ್ ನಿಲ್ದಾಣದ ಬಳಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಅಂತ್ಯಕ್ರಿಯೆ ಮಾಡಿದ ಸ್ಥಳದಲ್ಲೇ ಯೋಧ ಕಾಶೀರಾಯನ ಕಂಚಿನ ಪುತ್ಥಳಿಯನ್ನು ನಿರ್ಮಾಣ ಮಾಡಲು ಗ್ರಾಮದ ಜನರು ನಿರ್ಧಾರ ಮಾಡಿದ್ದಾರೆ.

ಹುತಾತ್ಮ ಯೋಧ ಕಾಶೀರಾಯ ಬೊಮ್ಮನಹಳ್ಳಿಗೆ ಶೌರ್ಯ ಪ್ರಶಸ್ತಿ
ಉಗ್ರರಿಂದ ದೇಶ ಕಾಪಾಡಲು ಪ್ರಾಣವನ್ನು ಬಿಟ್ಟ ಕಾಶೀರಾಯ ಬೊಮ್ಮನಹಳ್ಳಿಗೆ ಕೇಂದ್ರ ಸರ್ಕಾರ ಮರಣೋತ್ತರ ಶೌರ್ಯ ಪ್ರಶಸ್ತಿಯನ್ನು ಘೋಷಣೆ ಮಾಡಿತ್ತು. ನಿನ್ನೆ ಮೇ 10 ರಂದು ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ವೀರ, ಧೀರ ಕನ್ನಡಿಗ ಕಾಶೀರಾಯ್ ಗೆ ಕೇಂದ್ರ ಸರ್ಕಾರವು ಮರಣೋತ್ತರವಾಗಿ ಶೌರ್ಯ ಪ್ರಶಸ್ತಿ ಪ್ರದಾನ ಮಾಡಿದೆ. ಹೊಸದಿಲ್ಲಿಯಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ಕಾಶೀರಾಯ ಪತ್ನಿ ಸಂಗೀತಾ ಹಾಗೂ ತಾಯಿ ಶಾಂತಾಬಾಯಿ ಬೊಮ್ಮನಹಳ್ಳಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಭಯೋತ್ಪಾದಕರ ವಿರುದ್ಧ ಹೋರಾಡಿ ಮಣ್ಣಲ್ಲಿ ರಕ್ತ ಹರಿಸಿದ ಭಾರತಾಂಬೆಯ ಪುತ್ರ ಕಾಶೀರಾಯ ಅವರಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಿರುವ ಕೇಂದ್ರ ಸರ್ಕಾರಕ್ಕೆ ಜನತೆ ಅಭಿನಂದನೆ ಸಲ್ಲಿಸಿದ್ದಾರೆ.

ವಿಜಯಪುರ ಜಿಲ್ಲೆಯ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಯೋಧ ಕಾಶೀರಾಯ ಕುಟುಂಬದ ಮಾಹಿತಿ
ಹುತಾತ್ಮ ಯೋಧ ಕಾಶೀರಾಯ ಬೊಮ್ಮಹಳ್ಳಿ ಮೂಲತಃ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದವರು.ಹುತಾತ್ಮ ಯೋಧನಿಗೆ ಪತ್ನಿ ಸಂಗೀತಾ, ಓರ್ವ ಪುತ್ರಿ ಹಾಗೂ ಓರ್ವ ಪುತ್ರನಿದ್ದಾನೆ. 2013 ರಲ್ಲಿ ಕಾಶೀರಾಯನ ಮದುವೆಯಾಗಿತ್ತು. ತಂದೆ ತಾಯಿ ಇಬ್ಬರು ಸಹೋದರರು ಇದ್ದಾರೆ. ಇರಲು ಒಂದು ಸ್ವಂತ ಮನೆ ಬಿಟ್ಟರೆ ಇವರಿಗೆ ಯಾವುದೇ ಇತರೆ ಆಸ್ತಿ ಪಾಸ್ತಿಯಿಲ್ಲ. ತಂದೆ ತಾಯಿ ಈಗಲೂ ಜಮೀನಿನಲ್ಲಿ ಕೆಲಸ ಮಾಡುತ್ತಾರೆ. ಇಬ್ಬರು ಸಹೋದರರ ಪೈಕಿ ಓರ್ವ ಸಹೋದರ ಕಿರಾಣಿ ಶಾಪ್ ನಲ್ಲಿ ಕೆಲಸಕ್ಕೆ ಹೋಗುತ್ತಾರೆ. ಮತ್ತೋರ್ವ ಸಹೋದರ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಾರೆ. ಇಡೀ ಕುಟುಂಬಕ್ಕೆ ಆಸರೆಯಾಗಿ ಕಾಶೀರಾಯ ಅಗಲಿಕೆ ಇಡೀ ಕುಟುಂಬಕ್ಕೆ ಮರೆಯಲಾರದ ನೋವು ನೀಡಿದೆ.

ರಾಜ್ಯ ಸರ್ಕಾರದ ನಡೆಗೆ ಹುತಾತ್ಮ ಯೋಧನ ಕುಟುಂಬ ಅಸಮಾಧಾನ
ಇಂಥ ದುಖಃದ ನಡುವೆ ಇಡೀ ಕುಟುಂಬಕ್ಕೆ ರಾಜ್ಯ ಸರ್ಕಾರದ ಕುರಿತು ಅಸಮಾಧಾನವಿದೆ. ದೇಶಕ್ಕಾಗಿ ಉಗ್ರರೊಂದಿಗೆ ಕಾದಾಡಿ ಮೂವರು ಉಗ್ರರನ್ನು ಕೊಂದು ಅದೇ ಉಗ್ರರ ಗುಂಡಿಗೆ ಹುತಾತ್ಮನಾಗಿರೋ ಕಾಶೀರಾಯನಿಗೆ ಸರ್ಕಾರ ಅಗೌರವರ ತೋರಿದೆ. ಕಾಶೀರಾಯ ಹುತಾತ್ಮನಾಗಿ ಹತ್ತು ತಿಂಗಳಾಗುತ್ತಾ ಬಂದರೂ ಹುತಾತ್ಮ ಯೋಧನಿಗೆ ಕನಿಷ್ಟ ಮಟ್ಟದ ಗೌರವವನ್ನು ಸರ್ಕಾರ ನೀಡಿಲ್ಲಾ. ಸರ್ಕಾರದ ಯಾವುದೇ ಜನಪ್ರತಿನಿಧಿ ಜಿಲ್ಲಾ ಉಸ್ತುವಾರಿ ಸಚಿವರು, ಇತರೆ ಸಚಿವರು ನಮ್ಮ ಮನೆಗೆ ಬಂದಿಲ್ಲಾ. ನಮಗೆ ಕನಿಷ್ಟ ಮಟ್ಟದ ಸಾಂತ್ವನವನ್ನೂ ಹೇಳಲಿಲ್ಲಾ. ಸರ್ಕಾರದಲ್ಲಿ ಕುರ್ಚಿ ಪಡೆಯಲು ಕಿತ್ತಾಟ ನಡೆಸುತ್ತಿದ್ದಾರೆ. ಆದರೆ ಗಡಿ ಕಾಯೋ ಯೋಧನಿಗೆ ಗೌರವ ಸಲ್ಲಿಸಿ ಆತನ ಕುಟುಂಬಕ್ಕೆ ಧೈರ್ಯ ಹೇಳಲು ಸಮಯವಿಲ್ಲಾ ಎಂದು ಹುತಾತ್ಮ ಯೋಧನ ಪತ್ನಿ ಸಂಗೀತಾ ಬೊಮ್ಮನಹಳ್ಳಿ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಹಣ ಜಮೀನು ಇತ್ಯಾದಿಗಳ ಆಸೆಗಾಗಿ ನಾವು ಮಾತನಾಡುತ್ತಿಲ್ಲಾ. ದೇಶಕ್ಕಾಗಿ ಹುತಾತ್ಮನಾದ ಯೋಧನಿಗೆ ಸೂಕ್ತ ಗೌರವ ಸಿಗಲಿಲ್ಲಾ ಎಂಬ ನೋವಿದೆ ಎಂದಿದ್ದಾರೆ.

ವರದಿ: ಅಶೋಕ ಯಡಳ್ಳಿ, ಟಿವಿ9 ವಿಜಯಪುರ

Published On - 9:48 pm, Wed, 11 May 22