Vijayapura News: ನಾಲ್ಕು ವರ್ಷಗಳ ನಂತರ ಕೊನೆಗೂ ಸಂಚಾರಕ್ಕೆ ಮುಕ್ತವಾದ ರೈಲ್ವೆ ಮೇಲ್ಸೇತುವೆ: ಖುಷಿಪಟ್ಟ ವಿಜಯಪುರ ಜನತೆ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 26, 2022 | 5:51 PM

ನಾಲ್ಕು ವರ್ಷಗಳ ನಂತರ ನಾಳೆ (ಡಿ.27) ಇಬ್ರಾಹಿಂಪುರ ಬಳಿ ನೂತನವಾಗಿ ನಿರ್ಮಾಣವಾಗಿರುವ ರೈಲ್ವೆ ಮೇಲ್ಸೇತುವೆ ಲೋಕಾರ್ಪಣೆಗೊಳ್ಳಲಿದೆ.

Vijayapura News: ನಾಲ್ಕು ವರ್ಷಗಳ ನಂತರ ಕೊನೆಗೂ ಸಂಚಾರಕ್ಕೆ ಮುಕ್ತವಾದ ರೈಲ್ವೆ ಮೇಲ್ಸೇತುವೆ: ಖುಷಿಪಟ್ಟ ವಿಜಯಪುರ ಜನತೆ
ಲೋಕಾರ್ಪಣೆಗೆ ಸಿದ್ಧಗೊಂಡ ರೈಲ್ವೆ ಮೇಲ್ಸೇತುವೆ
Follow us on

ವಿಜಯಪುರ: ನಗರದಿಂದ ಬೆಂಗಳೂರು ರಸ್ತೆ ಹಾಗೂ ಇತರೆ ಪಟ್ಟಣ ನಗರಗಳಿಗೆ ಸಂಪರ್ಕ ಕಲ್ಪಿಸುವ ಎನ್​ಎಚ್ 50 ಸಂಪರ್ಕಿಸುವ ರಸ್ತೆಯಲ್ಲಿ ರೈಲ್ವೆ ಮೇಲ್ಸೇತುವೆ (Railway Overbridge) ನಿರ್ಮಾಣ ಕಾಮಗಾರಿ ಮುಗಿದಿದೆ. ನಾಳೆ(ಡಿ.27) ಇಬ್ರಾಹಿಂಪುರ ಬಳಿ ನೂತನವಾಗಿ ನಿರ್ಮಾಣವಾಗಿರುವ ರೈಲ್ವೆ ಮೇಲ್ಸೇತುವೆ ಲೋಕಾರ್ಪಣೆಗೊಳ್ಳಲಿದೆ. ವಿಜಯಪುರ ಸಂಸದ ರಮೇಶ ಜಿಗಜಿಣಗಿ (ramesh jigajinagi) ಕೇಂದ್ರ ರೈಲ್ವೆ ಇಲಾಖೆಯ ಅನುದಾನದಿಂದ ಹಣ ಬಿಡುಗಡೆ ಮಾಡಿಸಿ ರೈಲ್ವೆ ಮೇಲ್ಸೇತುವೆ ಮಂಜೂರು ಮಾಡಿಸಿದ್ದರು. ರೈಲ್ವೆ ಹೋಗುವ ವೇಳೆ ನಗರ ಭಾಗದ ಜನರಿಗೆ ಹಾಗೂ ಇತರೆ ಜಿಲ್ಲೆಗಳಿಗೆ ತೆರಳುವ ಪ್ರಯಾಣಿಕರಿಗೆ ತೊಂದರೆ ಆಗುತ್ತಿತ್ತು. ಈ ಸಮಸ್ಯೆಯನ್ನು ಬಗೆ ಹರಿಸಲು ರೈಲ್ವೆ ಓವರ್ ಬ್ರಿಡ್ಜ್ ನಿರ್ಮಾಣ ಕಾಮಗಾರಿಗೆ 2018ರಲ್ಲಿ ಚಾಲನೆ ನೀಡಲಾಗಿತ್ತು.

ರೈಲ್ವೆ ಓವರ್ ಬ್ರಿಡ್ಜ್ ಕಾಮಗಾರಿ ಮುಗಿಯಲು ಬೇಕಾಯ್ತು ನಾಲ್ಕು ವರ್ಷ:

ಕಳೆದ 2018ರಲ್ಲಿ ವಿಜಯಪುರ ನಗರದ ಇಬ್ರಾಹಿಂಪುರ ಬಳಿ ರೈಲ್ವೆ ಹಳಿ ಹಾಯ್ದು ಹೋಗಿದ್ದವು. ಎರಡು ಹಳಿಗಳು ಹಾಯ್ದು ಹೋಗಿರುವ ಕಾರಣ ನಿತ್ಯ ರೈಲು ದಟ್ಟಣೆಯಿಂದ ರಸ್ತೆ ಮೇಲೆ ಸಂಚಾರ ಮಾಡುವವರಿಗೆ ಸಮಸ್ಯೆಯಾಗಿತ್ತು. ರೈಲು ಹಾಯ್ದು ಹೋಗುವ ಮುನ್ನ ಮತ್ತು ನಂತರ ಕೆಲ ಕಾಲ ಕಾಯುವಂತಾಗಿತ್ತು. ಆದ್ದರಿಂದ ನಗರ ಭಾಗದ ಜನರು ಇಲ್ಲಿ ಆರ್ಓಬಿ ನಿರ್ಮಾಣ ಮಾಡಬೇಕೆಂದು ಒತ್ತಾಯ ಮಾಡಿದ್ದರು. ಜನರ ಒತ್ತಾಯದ ಮೇರೆಗೆ ಸಂಸದ ರಮೇಶ ಜಿಗಜಿಣಗಿ ಕೇಂದ್ರ ರೈಲ್ವೆ ಇಲಾಖೆಯಿಂದ ಅನುದಾನ ತಂದು ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಮುಂದಾಗಿದ್ದರು.

ಇದನ್ನೂ ಓದಿ: ಭಾವಿಪತಿಯ ಎದುರೇ ಗೋಲಗುಮ್ಮಟದಿಂದ ಹಾರಿ ಯುವತಿ ಸಾವಿಗೆ ಶರಣು: ಮಾರ್ದನಿಸುತ್ತಿದೆ ‘ಬಲವಂತ ಮಾಡಬೇಡಿ’ ಎಂಬ ಆರ್ತನಾದ

2018ರಲ್ಲಿ 20 ಕೋಟಿ ರೂಪಾಯಿ ವೆಚ್ಚದಲ್ಲಿ 18 ತಿಂಗಳ ಕಾಲಾವಕಾಶದಲ್ಲಿ ಆರ್ಓಬಿ ಕಾಮಗಾರಿ ಪೂರ್ಣಗೊಳಿಸಿ ಸಂಚಾರಕ್ಕೆ ಮುಕ್ತವಾಗಿಸಬೇಕೆಂಬ ನಿಯಮದೊಂದಿಗೆ ಹೈದರಾಬಾದ್ ಮೂಲದ ಎಂ.ವ್ಹಿ ಕನ್ಸಟ್ರಕ್ಷನ್ ಅವರಿಗೆ ನೀಡಲಾಗಿತ್ತು. ಮೊದಲು ಕಾಮಗಾರಿ ಭರದಿಂದಲೇ ಸಾಗಿತ್ತು. ಆದರೆ 2019 -20ರಲ್ಲಿ ಮಹಾಮಾರಿ ಕೊರೊನಾ ವ್ಯಾಪಿಸಿದ ಕಾರಣ ಆರ್ಓಬಿ ಕಾಮಗಾರಿ ನಿಂತು ಬಿಟ್ಟಿತ್ತು. ಕೊರೊನಾ ಲಾಕ್ ಡೌನ್ ಮಾಡಲಾಯಿತು. ಲಾಕ್​ ಡೌನ್ ಓಪನ್ ಆದ ಬಳಿಕವೂ ಸರಿಯಾಗಿ ಕಾರ್ಮಿಕರು ಬರಲಿಲ್ಲಾ. ಇಷ್ಟರ ಜೊತೆಗೆ ಸಿಮೆಂಟ್, ಕಬ್ಬಿಣ, ಜಲ್ಲಿ ಬೆಲೆಗಳು ದುಪ್ಪಟ್ಟಾಗಿ ಹೋಗಿದ್ದವು. 20 ಕೋಟಿ ರೂಪಾಯಿ ಕಾಮಗಾರಿಯ ವೆಚ್ಚವೂ ಹೆಚ್ಚಾಗಿತ್ತು. ಆಗ ಸರ್ಕಾರ 20 ರೂ. ಕೋಟಿಗೆ ಕಾಮಗಾರಿ ನೀಡಲಾಗಿದೆ.

ನಾವು ಹೆಚ್ಚಿಗೆ ಹಣ ಕೊಡಲಾಗಲ್ಲಾ ಎಂದು ಹೇಳಿ ಬಿಟ್ಟಿತ್ತು. ಇಷ್ಟರ ಮಧ್ಯೆ ಮೂಲ ನಕ್ಷೆಯ ಮೇಲ್ಸೇತುವೆ ಬಾಕ್ಸ್ ಮಾದರಿಯಲ್ಲಿ ಬದಲಾವಣೆ ಮಾಡಬೇಕೆಂದ ಸರ್ಕಾರದ ಸೂಚನೆಯೂ ಕಾಮಗಾರಿ ಹಿನ್ನಡೆಗೆ ಕಾರಣವಾಗಿತ್ತು. ಇಷ್ಟೆಲ್ಲಾ ಸಂಕಷ್ಟಗಳ ಸಮಸ್ಯೆಗಳ ಮಧ್ಯೆ ನಾಳೆ ವಿಜಯಪುರ ನಗರದ ಇಬ್ರಾಹಿಂಪುರ ಬಳಿಯ ರೈಲ್ವೆ ಮೇಲ್ಸೇತುವೆ ಲೋಕಾರ್ಪಣೆಗೊಳ್ಳಲಿದೆ.

ಖುಷಿಯಲ್ಲಿ ವಿಜಯಪುರ ಜನತೆ:

ಇಬ್ರಾಹಿಂಪುರ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ 2018ರಲ್ಲೇ ಆರಂಭವಾಗಿತ್ತು. ಕಾಮಗಾರಿಯ ಕಾರಣ ನಗರದ ಗಣೇಶನಗರ, ಶಾಂತವೀರನಗರ, ರಾಧಾಕೃಷ್ಣನಗರ, ಗುರುಪಾದೇಶ್ವರ ನಗರ, ಲಕ್ಷ್ಮೀ ಗುಡಿ, ಗಡಗಿ ಲೇಔಟ್, ಸಾಯಿಪಾರ್ಕ್, ವಿಜಯನಗರ, ಸನ್ ಸಿಟಿ ಕಾಲೋನಿ, ಕೆಎಚ್​ಬಿ ಬಡಾವಣೆ, ಸಂಗಮೇಶ್ವರ ನಗರ, ತ್ರಿಮೂರ್ತಿ ನಗರ ಸೇರಿದಂತೆ ಇತರೆ ಬಡವಾಣೆಗಳ ಜನರಿಗೆ ನಗರಕ್ಕೆ ಸಂಪರ್ಕಿಸುವ ರಸ್ತೆಯನ್ನು ಬಂದ್ ಮಾಡಿ ಕಾಮಗಾರಿ ನಡೆಸಲಾಗಿತ್ತು. ಆ ಭಾಗದ ಜನರು ನಗರದಲ್ಲಿ ಆಗಮಿಸಬೇಕೆಂದರೆ ಕನಿಷ್ಟ 5-6 ಕಿಲೋ ಮೀಟರ್ ಸುತ್ತು ಹಾಕಿಕೊಂಡು ಬರುವಂತಾಗಿತ್ತು. ಇಂದಲ್ಲಾ ನಾಳೆ ಕಾಮಗಾರಿ ಮುಗಿದು ಹೋಗುತ್ತದೆ ಎಂದು ಕಾಯ್ದು ಕುಳಿತಿದ್ದ ಜನರು ಕಾಯ್ದಿದ್ದು ಮಾತ್ರ ಬರೋಬ್ಬರಿ 4 ವರ್ಷ ಕಾಲ. ಬಳಿಕ ರೈಲ್ವೆ ಮೇಲ್ಸೇತುವೆ ಕಾಮಗಾರಿ ಮುಕ್ತಾಯವಾಗಿದೆ. ನಾಲ್ಕು ವರ್ಷಗಳ ನಂತರ ರೈಲ್ವೆ ಮೇಲ್ಸೇತುವೆ ಲೋಕಾರ್ಪಣೆಯಾಗಿ ಸಂಚಾರಕ್ಕೆ ಮುಕ್ತವಾಗುತ್ತಿರೋದಕ್ಕೆ ಜನರು ಖುಷಿ ಪಟ್ಟಿದ್ದಾರೆ.

ಇದನ್ನೂ ಓದಿ: ಸೂರ್ಯನಿಗೆ ಸೆಡ್ಡು ಹೊಡೆದು ವಿಜಯಪುರ ಜಿಲ್ಲೆಯನ್ನು ಆವರಿಸಿದ ಮಂಜು; ಹೆಚ್ಚಿದ ಆತಂಕ

ಈ ಕುರಿತಾಗಿ ಗಣೇಶನಗರ ನಿವಾಸಿಯಾದ ಬಸವರಾಜ ಬಿರಾದಾರ ಮಾತನಾಡಿ, 2018ರಲ್ಲಿ ಮೇಲ್ಸೇತುವೆ ಕೆಲಸ ಕಾಮಗಾರಿ ಆರಂಭವಾಗಿತ್ತು. 18 ತಿಂಗಳಲ್ಲಿ ಕಾಮಗಾರಿ ಮುಗಿಯುತ್ತದೆ ಎಂದು ಹೇಳಿದ್ದರು. ಕೊರೊನಾ ಕಾರಣ ಹಾಗೂ ಇತರೆ ಕಾರಣಗಳಿಂದ ನಾಲ್ಕು ವರ್ಷಗಳ ಬಳಿಕ ಆರ್ಓಬಿ ಜನರಿಗೆ ಮುಕ್ತವಾಗುತ್ತಿದೆ. ನಾಲ್ಕು ವರ್ಷಗಳ ಕಾಲ ಹೊರಗಡೆ ಇರುವ ನಾವೆಲ್ಲಾ ತುಂಬಾ ಸಮಸ್ಯೆಗಳನ್ನು ಎದುರಿಸಿದ್ದೇವೆ. ತಡವಾಗಿಯಾದರೂ ಕಾಮಗಾರಿ ಮುಗಿದು ಜನರಿಗೆ ರೈಲ್ವೆ ಮೇಲ್ಸೇತುವೆ ಮುಕ್ತವಾಗಿದ್ದಕ್ಕೆ ಸಮಾಧಾನವಾಗಿದೆ ಎಂದರು.

ಇಂದು ಪ್ರಾಯೋಗಿಕ ಓಡಾಟ-ಜಿಲ್ಲಾಧಿಕಾರಿಗಳ ಭೇಟಿ:

ಮೇಲ್ಸೇತುವೆ ಕಾಮಗಾರಿ ಪ್ರಾಯೋಗಿಕ ಪರೀಕ್ಷೆಗಾಗಿ ಬೈಕ್ ಹಾಗೂ ಹಗುರವಾದ ವಾಹನಗಳ ಓಡಾಟಕ್ಕೆ ಇಂದು(ಡಿ.26) ಅವಕಾಶ ಮಾಡಿಕೊಡಲಾಗಿದೆ. ಭಾನುವಾರದಿಂದಲೇ ಬೈಕ್, ಕಾರು ಸಂಚಾರ ನಡೆಸುತ್ತಿವೆ. ಕಾಮಗಾರಿ ಸಂಪೂರ್ಣ ಪೂರ್ಣಗೊಳ್ಳದ ಕಾರಣ ಭಾರಿ ವಾಹನಗಳ ಸಂಚಾರ ಇನ್ನೂ ಆರಂಭಿಸಿಲ್ಲ. ಮೇಲ್ಸೇತುವೆ ರಸ್ತೆ ಒಂದು ಬದಿ ಇನ್ನೂ ಡಾಂಬರೀಕರಣ ಪೂರ್ಣವಾಗಿಲ್ಲ, ಅದು ಪೂರ್ಣಗೊಂಡ ನಂತರವಷ್ಟೇ ಭಾರಿ ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ.

ಇನ್ನು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ವೀಕ್ಷಣೆ ಮಾಡಿದ್ದಾರೆ. ಡಿಸಿ ಅವರಿಗೆ ರೈಲ್ವೆ ಇಲಾಖೆ ಅಧಿಕಾರಿಗಳು ಸೇರಿದಂತೆ ಇತರೆ ಆಧಿಕಾರಿಗಳು ಸಹ ಸಾಥ್ ನೀಡಿದರು. ಮೇಲ್ಸೇತುವೆ ನಿರ್ಮಾಣದ ಬಗ್ಗೆ ಮಾಹಿತಿ ಕಲೆ ಹಾಕಿ ಇನ್ನೂ ಬಾಕಿ ಉಳಿದಿರುವ ಸಣ್ಣ ಪುಟ್ಟ ಕೆಲಸ ಕಾರ್ಯಗಳ ಬಗ್ಗೆಯೂ ಮಾಹಿತಿ ಪಡೆದರು.

ವರದಿ: ಅಶೋಕ ಯಡಳ್ಳಿ, ಟಿವಿ9, ವಿಜಯಪುರ

Published On - 5:50 pm, Mon, 26 December 22