ವಿಜಯಪುರ: ಪ್ರವಾಹದ ಮಧ್ಯೆ ಜನರಲ್ಲಿ ಮತ್ತೊಂದು ಭಯ; ಏನದು?

ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣ ಹಾಗೂ ಸುತ್ತಮುತ್ತಲ ಜನರು ಭೂಕಂಪನದ ಭೀತಿಯಲ್ಲಿದ್ದಾರೆ. ಕೆಲ ದಿನಗಳಿಂದ ಭೂಮಿ ಕಂಪಿಸಿದ ಅನುಭವ, ಭೂಮಿಯಿಂದ ಭಾರೀ ಶಬ್ದ ಕೇಳಿಬರುತ್ತಿದೆ ಎನ್ನುತ್ತಿದ್ದಾರೆ. ಪ್ರವಾಹದ ಸಂಕಷ್ಟದ ನಡುವೆ ಈ ಅನುಭವ ಜನರ ಆತಂಕಕ್ಕೆ ಕಾರಣವಾಗಿದೆ. ಹಾಗಾದರೆ ವಿಜ್ಞಾನಿ ಹೇಳಿದ್ದೇನು ಎಂಬ ಮಾಹಿತಿ ಇಲ್ಲಿದೆ.

ವಿಜಯಪುರ: ಪ್ರವಾಹದ ಮಧ್ಯೆ ಜನರಲ್ಲಿ ಮತ್ತೊಂದು ಭಯ; ಏನದು?
Earthquake
Edited By:

Updated on: Oct 06, 2025 | 4:08 PM

ವಿಜಯಪುರ, ಅಕ್ಟೋಬರ್​ 06: ಒಂದೆಡೆ ಜಿಲ್ಲೆಯಲ್ಲಿ ಅದಾಗಲೇ ಭೀಮಾನದಿ ಪ್ರವಾಹ ಜನರ ಬದುಕನ್ನೇ ಮೂರಾಬಟ್ಟೆ ಮಾಡಿದೆ. ಮತ್ತೊಂದೆ ಮಳೆ (rain) ಕಾಟವೂ ಸಂಕಷ್ಟಕ್ಕೆ ಎಡೆ ಮಾಡಿಕೊಟ್ಟಿದೆ. ಇದರ ಮಧ್ಯೆ ಜಿಲ್ಲೆಯ ಸಿಂದಗಿ ಪಟ್ಟಣ ಹಾಗೂ ಸುತ್ತಮುತ್ತಲ ಜನರು ಭಯದಲ್ಲೇ ಜೀವನ ನಡೆಸುವಂತಾಗಿದೆ. ಎಷ್ಟರ ಮಟ್ಟಿಗಿನ ಭಯ ಇಲ್ಲಿನ ಜನರಲ್ಲಿ ಆವರಿಸಿದೆ ಎಂದರೆ ರಾತ್ರಿ ವೇಳೆ ನಿದ್ದೆ ಕೂಡ ಮಾಡುತ್ತಿಲ್ಲ. ಇದಕ್ಕೆ ಕಾರಣ ಭೂಕಂಪನದ (earthquake) ಭಯ.

ಜಿಲ್ಲೆಯ ಸಿಂದಗಿ ಪಟ್ಟಣ ಹಾಗೂ ಸುತ್ತಮುತ್ತಲ ಜನರು ಕಳೆದ 15 ರಿಂದ 20 ದಿನದಿಂದ ಭಯದಲ್ಲೇ ಬದುಕುತ್ತಿದ್ದಾರೆ. ಯಾವಾಗ ಏನಾಗುತ್ತದೆಯೋ ಎಂಬ ಆತಂಕದಲ್ಲಿದ್ದಾರೆ. ಕಾರಣ ಈ ಭಾಗದಲ್ಲಿ ಹಲವು ದಿನಗಳಿಂದ ಇಲ್ಲಿನ ಜನರಿಗೆ ಭೂಕಂಪನ ಆದಂತ ಅನುಭವವಾಗುತ್ತಿದೆ. ಏಕಾಏಕಿ ಭೂಮಿ ಕಂಪಿಸಿದಂತೆ, ನೆಲದಿಂದ ಭಾರೀ ಶಬ್ದ ಕೇಳಿ ಬರುವುದು, ಮನೆ ಕಟ್ಟಡಗಳೆಲ್ಲಾ ಅಲುಗಾಡಿದಂತ ಅನುಭವವಾಗಿದೆ. ಇದರಿಂದ ಜನಸಾಮಾನ್ಯರು ಭಯಗೊಂಡಿದ್ದಾರೆ. ರಾತ್ರಿ ಮನೆಯಲ್ಲಿ ಮಲಗುವುದಕ್ಕೆ ಹೆದರುತ್ತಿದ್ದಾರೆ. ಯಾವಾಗ ಏನಾಗುತ್ತದೆಯೋ ಎಂಬ ಆತಂಕ ಮೂಡಿದೆ.

ಇದನ್ನೂ ಓದಿ: ಭೀಮಾ ನದಿ ಪ್ರವಾಹಕ್ಕೆ ಲಕ್ಷಾಂತರ ಹೆಕ್ಟೇರ್ ಬೆಳೆ ನಾಶ: ತೀವ್ರ ಸಂಕಷ್ಟದಲ್ಲಿ ಕಲಬುರಗಿಯ 117 ಗ್ರಾಮಗಳ ಜನ

ಸಿಂದಗಿ ಪಟ್ಟಣದ ಜನರು ಭೂಂಕಪನದ ಭಯ ವ್ಯಕ್ತಪಡಿಸಿದ ಕಾರಣ ಜಿಲ್ಲಾಡಳಿತ ಅಧಿಕಾರಿಗಳು, ಗಣಿ ಮತ್ತು ಭೂವಿಜ್ಞಾನ ಇಲಾಖೆ ವಿಜ್ಞಾನಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಜೊತೆಗೆ ಬೆಂಗಳೂರಿನ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಧಿಕಾರಿಗಳು ಸಹ ಆಗಮಿಸಿ ಪರೀಕ್ಷೆ ಮಾಡಿದ್ದಾರೆ. ಇಲ್ಲಿಯವರೆಗೆ ಯಾವುದೇ ಭೂಕಂಪನ ದಾಖಲಾಗಿಲ್ಲ. ಭೂಕಂಪನವಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೆಚ್ಚು ಮಳೆ ಬಂದಾಗ, ಭೂಮಿಯಲ್ಲಿ ತೇವಾಂಶ ಹೆಚ್ಚಾದಾಗ ಇಂತಹ ಘಟನೆಗಳು ನಡೆಯುತ್ತವೆ. ಭೂಮಿ ಆಳದಲ್ಲಿ ನಡೆಯುವ ಪ್ರಕ್ರಿಯೆ ಕಾರಣ ನೆಲದಿಂದ ಭಾರೀ ಶಬ್ದ ಕೇಳಿ ಬರುತ್ತದೆ. ಇದನ್ನು ಹೈಡ್ರೋ ಸೀಸ್ಮಿಕ್ ಆಕ್ಟಿವಿಟಿ ಎನ್ನುತ್ತಾರೆ.

ವಿಜ್ಞಾನಿಗಳು ಹೇಳಿದ್ದಿಷ್ಟು

ವಾಡಿಕೆಗಿಂತ ಹೆಚ್ಚು ಮಳೆಯಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಿದೆ. ಈ ಭಾಗದ ನೆಲದಾಳದಲ್ಲಿ ಸುಣ್ಣದ ಮಾದರಿಯ ಮಣ್ಣಿನ ಪದರುಗಳಿವೆ. ಇದಕ್ಕೆ ತೇವಾಂಶದ ನೀರು ತಾಗಿದಾಗ ಸುಣ್ಣದ ಕಲ್ಲಿನಿಂದ ರಾಸಾಯನಿಕ ಉತ್ಪಾದನೆಯಾಗಿ ಈ ಶಬ್ದ ಬರುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಒಂದು ವೇಳೆ ಭೂಮಿ ಕಂಪಿಸಿದ್ದು ದಾಖಲಾದರೆ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆಂದು ಸಿಂದಗಿ ತಹಶೀಲ್ದಾರ ಕರೆಪ್ಪಾ ಬೆಳ್ಳಿ ಹೇಳಿದ್ದಾರೆ. ಜೊತೆಗೆ ಸಿಂದಗಿ ಪಟ್ಟಣದ ಅನತಿ ದೂರದಲ್ಲಿರುವ ರಾಂಪೂರ ಗ್ರಾಮದಲ್ಲಿ ಸಿಸ್ಮೋ ಮೀಟರ್ ಅಳವಡಿಕೆ ಮಾಡಿ ಅವಲೋಕಿಸಲಾಗುತ್ತಿದೆ ಎಂದಿದ್ಧಾರೆ.

ಇದನ್ನೂ ಓದಿ: ಭೀಮಾನದಿ ಭೋರ್ಗರೆತಕ್ಕೆ ಕಲ್ಯಾಣ ಕರ್ನಾಟಕ ತತ್ತರ: ಸಿಎಂ ಸಿದ್ದರಾಮಯ್ಯ ವೈಮಾನಿಕ ಸಮೀಕ್ಷೆ

ಸದ್ಯ ಭೀಕರ ಪ್ರವಾಹದಿಂದ ಕಂಗೆಟ್ಟಿರುವ ಜಿಲ್ಲೆಯ ಜನರಿಗೆ ಇದೀಗ ಭೂಕಂಪನದ ಭಯ ಶುರುವಾಗಿದೆ. ಯಾವಾಗ ಏನಾಗುತ್ತದೆಯೋ ಏನು ಎಂದು ಜನರು ಚಿಂತಿತರಾಗಿದ್ದಾರೆ. ಆದರೆ ವಿಜ್ಞಾನಿಗಳು ಮಾತ್ರ ಇದು ಭೂಕಂಪನ ಅಲ್ಲ, ಇದೊಂದು ಭೂಮಿಯಾಳದಲ್ಲಿ ನಡೆಯುವ ಸಜಹ ಪ್ರಕ್ರಿಯೆ ಎಂದಿದ್ದು, ಜನರಿಗೆ ತುಸು  ಧೈರ್ಯ ತುಂಬಿದಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Follow Us