ಭೀಮಾ ನದಿ ಪ್ರವಾಹಕ್ಕೆ ಲಕ್ಷಾಂತರ ಹೆಕ್ಟೇರ್ ಬೆಳೆ ನಾಶ: ತೀವ್ರ ಸಂಕಷ್ಟದಲ್ಲಿ ಕಲಬುರಗಿಯ 117 ಗ್ರಾಮಗಳ ಜನ
North Karnataka Flood: ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಈಗ ಸ್ವಲ್ಪ ಮಟ್ಟಿಗೆ ತಗ್ಗಿದೆ. ಮತ್ತೊಂದೆಡೆ ಭೀಮಾ ನದಿ ಅಬ್ಬರ ಕೂಡ ಕಡಿಮೆಯಾಗುತ್ತಿದೆ. ಆದರೆ ಬೀದರ್ನಲ್ಲಿ ಮಾತ್ರ ರೈತರು ಬೆಳೆದಿದ್ದ ಬೆಳೆ ಎಲ್ಲ ಜಲಾವೃತಗೊಂಡಿದೆ. ವಿಜಯಪುರದಲ್ಲಿ ಪ್ರವಾಹ ಕಡಿಮೆಯಾದ್ರೂ ಕುಡಿಯುವ ನೀರಿನ ಸಮಸ್ಯೆ ತಲೆದೂರಿದೆ.

ಬೆಂಗಳೂರು, ಅಕ್ಟೋಬರ್ 3: ಕಲಬುರಗಿ (Kalaburagi) ಜಿಲ್ಲೆಯ ಭೀಮಾ ನದಿ ದಡದ ಅಫಜಲಪುರ, ಜೇವರ್ಗಿ ಹಾಗೂ ಚಿತ್ತಾಪುರ ತಾಲೂಕಿನ ಭೀಮಾ ನದಿ ದಡದಲ್ಲಿ ಪ್ರವಾಹ ಕಡಿಮೆಯಾಗಿದ್ದು, ಕಾಳಜಿ ಕೇಂದ್ರಗಳಿಂದ ತಮ್ಮ ಮನೆಗಳಿಗೆ ಮರಳಿದ ಜನ ಆಘಾತಕ್ಕೀಡಾಗಿದ್ದಾರೆ. ಪ್ರವಾಹದಿಂದ ಅಲ್ಲಿ ಹಲವು ಅವಾಂತರಗಳು ಸಂಭವಿಸಿವೆ. ಕಳೆದ 10 ದಿನಗಳಿಂದ ಉಂಟಾದ ಭೀಮಾ ಪ್ರವಾಹದಿಂದ ಕಲಬುರಗಿ ಜಿಲ್ಲೆಯ ಮೂರು ತಾಲೂಕಿನ ಒಟ್ಟು 117 ಗ್ರಾಮಗಳು ನಲುಗಿ ಹೋಗಿದ್ದು, ಇದೀಗ ಪ್ರವಾಹ ಕಡಿಮೆಯಾದ ಹಿನ್ನಲೆ ಸಂತ್ರಸ್ಥರು ಮನೆಗೆ ಬಂದು ಅಳಿದುಳಿದ ವಸ್ತುಗಳನ್ನು ರಕ್ಷಿಸಿಕೊಳ್ಳುತ್ತಿದ್ದಾರೆ. ಅದೇ ರೀತಿ ಮಳೆ ಹಾಗೂ ಭೀಮಾ ಪ್ರವಾಹದಿಂದ ಕಲಬುರಗಿ ಜಿಲ್ಲೆಯ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಎಲ್ಲಾ ಬೆಳೆಗಳು ಸಂಪೂರ್ಣವಾಗಿ ನದಿ ಪಾಲಾಗಿವೆ. ಅದರಲ್ಲಿಯೂ ಇನ್ನೇನು 15 ದಿನ ಕಳೆದರೆ ಕೈಗೆ ಬರಲಿದ್ದ, ರೈತರ ಬಿಳಿ ಬಂಗಾರ ಅಂತಲೇ ಕರೆಯಿಸಿಕೊಳ್ಳೋ ಹತ್ತಿ ಕೂಡಾ ಭೀಮಾನದಿ ಪ್ರವಾಹ ಪಾಲಾಗಿದೆ. ಹೀಗಾಗಿ ಸರ್ಕಾರ ಪರಿಹಾರ ಕೊಡಲಿಲ್ಲ ಅಂದರೆ ನೇಣು ಹಾಕಿಕೊಳ್ಳುವುದು ಬಿಟ್ಟರೆ ದಾರಿಯಿಲ್ಲ ಎಂದು ಅನ್ನದಾತರು ಕಣ್ಣಿರು ಹಾಕುತ್ತಿದ್ದಾರೆ.
ಒಂದೆಡೆ ಮಳೆ ಹಾಗೂ ಪ್ರವಾಹದಿಂದ ಅನ್ನದಾತರು ಸಂಕಷ್ಟಕ್ಕೆ ಒಳಗಾಗಿದ್ದರೆ, ಇತ್ತ ಭೀಮಾ ನದಿಯ ಪ್ರವಾಹಕ್ಕೆ ಜೆಸ್ಕಾಂ ಟ್ರಾನ್ಸಫಾರ್ಮರ್, ಎಲೆಕ್ಟ್ರಿಕ್ ಪೋಲ್ಗಳು ಸಹ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಜೇಸ್ಕಾಂ ಅಧ್ಯಕ್ಷ ಪ್ರವೀಣ್ ಹರವಾಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭೀಮಾ ಹಾಗೂ ಕಾಗಿಣಾ ನದಿ ಪ್ರವಾಹದಿಂದ 270 ಟ್ರಾನಫಾರ್ಮರ್, 600 ಕ್ಕೂ ಹೆಚ್ಚು ಪೋಲ್ಗಳು ಹಾಳಾಗಿರುವದು ಪ್ರಾಥಮಿಕ ಪರಿಶೀಲನೆಯಲ್ಲಿ ಕಂಡು ಬಂದಿದ್ದು, ಈ ಮೂಲಕ ಜೇಸ್ಕಾಂ ಇಲಾಖೆಗೂ ಸಹ ಕೋಟ್ಯಂತರ ರೂಪಾಯಿ ಹಣ ನಷ್ಟವಾಗಿದೆ.
ಭೀಮಾ ನದಿ ಪ್ರವಾಹದ ವಿಚಾರವಾಗಿ 2500 ಕೋಟಿ ರೂ. ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಆದರೆ, ಸದ್ಯ ಸೂರು ಕಳೆದುಕೊಂಡವರಿಗೆ ಮನೆ ಹಾಗೂ ಧವಸ ಧಾನ್ಯ ಕಳೆದುಕೊಂಡವರಿಗೆ ತುತ್ತು ಅನ್ನ ಕೊಡುವ ಕೆಲಸ ಮೊದಲು ಮಾಡಬೇಕಾಗಿದೆ.
ಅಪಾಯ ಮಟ್ಟ ಮೀರಿ ಹರಿಯುತ್ತಿರೋ ಮಾಂಜ್ರಾ
ಬೀದರ್ ಜಿಲ್ಲೆಯ ಕಾರಂಜಾ ಜಲಾಶಯ ಹಾಗೂ ಮಹಾರಾಷ್ಟ್ರದ ಧನೆಗಾಂವ್ ಡ್ಯಾಂನಿಂದ ನೀರು ಮಾಂಜ್ರಾ ನದಿಗೆ ನಿಂತರವಾಗಿ ನೀರನ್ನ ಹರಿಬಿಡಲಾಗುತ್ತಿದೆ. ಬೀದರ್ ತಾಲೂಕಿನ ಹಿಪ್ಪಳಗಾಂವದಲ್ಲಿ ಸುಮಾರು 12 ಎಕರೆಗೂ ಅಧಿಕ ಬೆಳೆ ಹಾನಿಯಾಗಿದೆ. ಸಾಲ ಮಾಡಿ ಬಿತ್ತಿದ ಬೆಳೆ ಕೈಗೆ ಬರುವಷ್ಟರಲ್ಲಿ ಮಣ್ಣು ಪಾಲಾಗುತ್ತಿದೆ. ಮತ್ತೊಂದೆಡೆ, ವಿಜಯಪುರದ ಜನರನ್ನು ಹೈರಾಣ ಮಾಡಿದ ಭೀಮಾ ನದಿ ಸದ್ಯ ತುಸು ಶಾಂತವಾಗಿದೆ. ಆದರೆ ಕಾಳಜಿ ಕೇಂದ್ರದಲ್ಲಿರುವ ಜನರು, ಸರ್ಕಾರ ನೆರವಿಗೆ ಬರಲಿ ಎಂದು ಕಾಯುತ್ತಿದ್ದಾರೆ. ಇಂಡಿ ಆಲಮೇಲ ತಾಲೂಕಿನ 664 ಜನ ಸಂತ್ರಸ್ತರು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಮನೆಯಲ್ಲಿನ ವಸ್ತುಗಳು ಎಲ್ಲವೂ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿದ್ದು, ಜಿಲ್ಲಾಡಳಿತ ಸೂಕ್ತ ಸಹಾಯ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಧಾರಾಕಾರ ಮಳೆ: ವಾಹನ ಸವಾರರ ಪರದಾಟ
ಇದು ಸಂತ್ರಸ್ತರ ಬವಣೆಯಾದರೆ ಹಲವು ಪ್ರವಾಹ ಪೀಡಿತ ಗ್ರಾಮಗಳಲ್ಲಿ ಶುದ್ದ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ. ಆಲಮೇಲ ತಾಲೂಕಿನ ಶಂಬೇವಾಡ ಗ್ರಾಮದ ಜನ ಕುಡಿಯುವ ನೀರಿಲ್ಲದೆ ಪರಿತಪಿಸುತ್ತಿದ್ದಾರೆ. ಒಂದು ಕೊಳವೆ ಬಾವಿಯನ್ನಾದರೂ ಹಾಕಿಸಿ ಅಂತಾ ಅಲವತ್ತುಕೊಂಡಿದ್ದಾರೆ.
ಬೆಂಗಳೂರು, ಮೈಸೂರಿನಲ್ಲೂ ಮಳೆ
ಬೆಂಗಳೂರಿನಲ್ಲಿ ಕೂಡ ಗುರುವಾರ ಸಂಜೆ ದಿಢೀರ್ ಮಳೆಗೆ ಜನ ಪರದಾಡಿದರು. ವಿಜಯದಶಮಿ ಹಬ್ಬದ ಮೂಡ್ನಲ್ಲಿದ್ದವರಿಗೆ ವರುಣ ಒಂದು ಗಂಟೆ ಸತಾಯಿಸಿದ. ಮೈಸೂರಿನಲ್ಲಿ ದಸರಾ ಮೆರವಣಿಗೆ ವೇಳೆಯೂ ವರುಣನ ಸಿಂಚನವಾಯಿತು. ತುಂತುರು ಮಳೆಯ ನಡುವೆಯೇ ಕಲಾ ತಂಡಗಳು ಸಾಗಿದವು.



