IPL 2026: ಗೆಲುವಿನ ಬೆನ್ನಲ್ಲೇ ಶ್ರೇಯಸ್ ಅಯ್ಯರ್ಗೆ 12 ಲಕ್ಷ ರೂ. ದಂಡ..!
Punjab Kings vs Gujarat Titans: ಇಂಡಿಯನ್ ಪ್ರೀಮಿಯರ್ ಲೀಗ್ನ 4ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು 20 ಓವರ್ಗಳಲ್ಲಿ 162 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡವು 19.1 ಓವರ್ಗಳಲ್ಲಿ 165 ರನ್ ಬಾರಿಸಿ 3 ವಿಕೆಟ್ಗಳ ರೋಚಕ ಜಯ ಸಾಧಿಸಿದೆ.
Updated on: Apr 01, 2026 | 11:19 AM

IPL 2026: ಐಪಿಎಲ್ 2026ರ ತನ್ನ ಮೊದಲ ಪಂದ್ಯದಲ್ಲೇ ಗುಜರಾತ್ ಟೈಟಾನ್ಸ್ ವಿರುದ್ಧ ಭರ್ಜರಿ ಜಯ ದಾಖಲಿಸಿದ ಪಂಜಾಬ್ ಕಿಂಗ್ಸ್ ತಂಡಕ್ಕೆ ಈಗ ದಂಡದ ಬಿಸಿ ತಟ್ಟಿದೆ. ನಿಧಾನಗತಿಯ ಓವರ್ ರೇಟ್ (Slow Over-rate) ಕಾಯ್ದುಕೊಂಡಿದ್ದಕ್ಕಾಗಿ ತಂಡದ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಅವರಿಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

ಮಾರ್ಚ್ 31ರಂದು ನಡೆದ ಸೀಸನ್ನ 4ನೇ ಪಂದ್ಯದಲ್ಲಿ, ಗುಜರಾತ್ ಟೈಟಾನ್ಸ್ ವಿರುದ್ಧದ ಹೋರಾಟದ ವೇಳೆ ಪಂಜಾಬ್ ಕಿಂಗ್ಸ್ ನಿಗದಿತ ಸಮಯದೊಳಗೆ ಓವರ್‌ಗಳನ್ನು ಪೂರ್ಣಗೊಳಿಸಲು ವಿಫಲವಾಯಿತು. ಐಪಿಎಲ್ ನೀತಿ ಸಂಹಿತೆಯ ಅಡಿಯಲ್ಲಿ ಇದು ಕನಿಷ್ಠ ಓವರ್ ರೇಟ್ ಅಪರಾಧವಾಗಿದೆ. ಈ ಸೀಸನ್ನಲ್ಲಿ ತಂಡದ ಮೊದಲ ತಪ್ಪು ಇದಾಗಿರುವುದರಿಂದ, ಐಪಿಎಲ್ ನಿಯಮದಂತೆ ನಾಯಕನಿಗೆ ಮಾತ್ರ 12 ಲಕ್ಷ ರೂಪಾಯಿ ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ.

ಐಪಿಎಲ್ ನಿಯಮದ ಪ್ರಕಾರ, ಪ್ರತಿ ತಂಡಗಳು 20 ಓವರ್‌ಗಳನ್ನು 1 ಗಂಟೆ 30 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕು. ಒಂದು ವೇಳೆ ಇದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡರೆ ಬೌಂಡರಿ ಲೈನ್ನಿಂದ ಒಬ್ಬ ಫೀಲ್ಡರ್ನನ್ನು ಕಡಿತ ಮಾಡಲಾಗುತ್ತದೆ.

ಇನ್ನು ಇದೇ ತಪ್ಪನ್ನು 2ನೇ ಬಾರಿ ಪುನರಾವರ್ತಿಸಿದರೆ ನಾಯಕನಿಗೆ 24 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಇದರ ಜೊತೆಗೆ ಪ್ಲೇಯಿಂಗ್ ಇಲೆವೆನ್ನ 10 ಆಟಗಾರರಿಗೆ 6 ಲಕ್ಷ ಅಥವಾ ಪಂದ್ಯದ ಶುಲ್ಕದ 25% ದಂಡವನ್ನು ವಿಧಿಸಲಾಗುತ್ತದೆ.

ಈ ತಪ್ಪನ್ನು ಮೂರನೇ ಬಾರಿ ಆವರ್ತಿಸಿದರೆ, ತಂಡದ ನಾಯಕನಿಗೆ 30 ಲಕ್ಷ ದಂಡ ವಿಧಿಸಲಾಗುತ್ತದೆ. ಅಲ್ಲದೆ ನಾಯಕನಿಗೆ ಡಿಮೆರಿಟ್ ಪಾಯಿಂಟ್ ನೀಡಲಾಗುತ್ತದೆ. ಹಾಗೆಯೇ ಪ್ಲೇಯಿಂಗ್ ಇಲೆವೆನ್ನ 10 ಆಟಗಾರರಿಗೆ 12 ಲಕ್ಷ ಅಥವಾ ಅವರ ಪಂದ್ಯದ ಶುಲ್ಕದ 50% ದಂಡವನ್ನು ವಿಧಿಸಲಾಗುತ್ತದೆ.

ಇನ್ನು ನಾಯಕ ನಾಯಕನ ಖಾತೆಯಲ್ಲಿ ಡಿಮೆರಿಟ್ ಪಾಯಿಂಟ್‌ಗಳು ಒಂದು ನಿರ್ದಿಷ್ಟ ಮಿತಿಯನ್ನು (ಉದಾಹರಣೆಗೆ 3 ವರ್ಷಗಳಲ್ಲಿ 4 ಪಾಯಿಂಟ್ಸ್) ಮೀರಿದಾಗ ಮಾತ್ರ ಪಂದ್ಯದ ನಿಷೇಧ ಹೇರಬಹುದು. ಅಂದರೆ ಅತ್ಯಂತ ಗಂಭೀರ ಅಥವಾ ಅತಿ ಹೆಚ್ಚು ಬಾರಿ ತಪ್ಪು ಮಾಡಿದಾಗ ಮಾತ್ರ ನಾಯಕನನ್ನು ಒಂದು ಪಂದ್ಯದಿಂದ ನಿಷೇಧಿಸಲಾಗುತ್ತದೆ.
