ತಿರುಪತಿ ಲಡ್ಡು ವಿವಾದ: ಜಗನ್​ ಮೋಹನ್​ ರೆಡ್ಡಿಯನ್ನ ಬಂಧಿಸಿ ಎಂದ ಯತ್ನಾಳ್​

| Updated By: ವಿವೇಕ ಬಿರಾದಾರ

Updated on: Sep 21, 2024 | 3:04 PM

ಕೋಟ್ಯಂತರ ಭಕ್ತರು ತಿರುಪತಿ ಬಾಲಾಜಿಗೆ ನಡೆದುಕೊಳ್ಳುತ್ತಾರೆ. ಲಡ್ಡುವಿನಲ್ಲಿ ಪ್ರಾಣಿಯ ಕೊಬ್ಬು ಬಳಸುತ್ತಿದ್ದಾರೆ ಎಂಬ ಹೇಳಿಕೆ ರಾಜಕೀಯ ಟೀಕೆ ಅಲ್ಲ. ಗುಜರಾತ್​ನಲ್ಲಿ ಪರೀಕ್ಷಿಸಲಾಗಿದ್ದು, ಕೊಬ್ಬು ಬಳಸಿರುವುದು ದೃಢಪಟ್ಟಿದೆ. ಸನಾತನ ಧರ್ಮ ನಿರ್ಮೂಲನೆಗೆ ವ್ಯವಸ್ಥಿತ ಸಂಚು ರೂಪಿಸಲಾಗಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಹೇಳಿದರು.

ತಿರುಪತಿ ಲಡ್ಡು ವಿವಾದ: ಜಗನ್​ ಮೋಹನ್​ ರೆಡ್ಡಿಯನ್ನ ಬಂಧಿಸಿ ಎಂದ ಯತ್ನಾಳ್​
ಬಸನಗೌಡ ಪಾಟೀಲ್​ ಯತ್ನಾಳ್
Follow us on

ವಿಜಯಪುರ, ಸೆಪ್ಟೆಂಬರ್​ 21: ತಿರುಪತಿ ಲಡ್ಡು (Tirupati Laddu) ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ಜಗನ್​ ಮೋಹನ್​ ರೆಡ್ಡಿ (Jagan Mohan Reddy) ಅವರನ್ನು ಬಂಧಿಸಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda patil Yatnal) ಆಗ್ರಹಿಸಿದರು. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಗನ್​ ಮೋಹನ್​ ರೆಡ್ಡಿ ಹಿಂದೂ ಅಲ್ಲ, ಮತಾಂತರ ಕ್ರಿಶ್ಚಿಯನ್ ಎಂದರು.

ಕೋಟ್ಯಂತರ ಭಕ್ತರು ತಿರುಪತಿ ಬಾಲಾಜಿಗೆ ನಡೆದುಕೊಳ್ಳುತ್ತಾರೆ. ಲಡ್ಡುವಿನಲ್ಲಿ ಪ್ರಾಣಿಯ ಕೊಬ್ಬು ಬಳಸುತ್ತಿದ್ದಾರೆ ಎಂಬ ಹೇಳಿಕೆ ರಾಜಕೀಯ ಟೀಕೆ ಅಲ್ಲ. ಗುಜರಾತ್​ನಲ್ಲಿ ಪರೀಕ್ಷಿಸಲಾಗಿದ್ದು, ಕೊಬ್ಬು ಬಳಸಿರುವುದು ದೃಢಪಟ್ಟಿದೆ. ಸನಾತನ ಧರ್ಮ ನಿರ್ಮೂಲನೆಗೆ ವ್ಯವಸ್ಥಿತ ಸಂಚು ರೂಪಿಸಲಾಗಿದೆ. ತಿಮ್ಮಪ್ಪನ ಸನ್ನಿಧಿಯಲ್ಲಿ ಘಟನೆ ನಡೆದಿರೋದು ಆಘಾತ ತಂದಿದೆ. ತಪ್ಪು ಮಾಡಿರುವವರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಎಂದು ಒತ್ತಾಯಿಸಿದರು.

ತಿರುಪತಿ ಸುತ್ತಮುತ್ತ ಚರ್ಚ್ ಮಾಡಿದ್ದಾರೆ. ತಿರುಪತಿ ದೇಗುಲದ ಆಡಳಿತ ಮಂಡಳಿ ಹಿಂದೂಗಳ ಕೈಯಲ್ಲಿರಬೇಕು. ಇಡೀ ತಿರುಪತಿ ದೇವಸ್ಥಾನ ಶುದ್ಧಿಗೊಳಿಸಬೇಕು. ಸನಾತನ ಹಿಂದೂ ಧರ್ಮದವರ ಭಾವನೆ ಜೊತೆ ಆಟವಾಡಿ ಮೋಸ ಮಾಡಿದ್ದಾರೆ. ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ಈ ಪ್ರಕರಣವನ್ನು ಇಲ್ಲಿಗೆ ಬಿಡಬಾರದು. ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಾಣಿಸಬೇಕೆಂದು ಎಂದು ಮನವಿ ಮಾಡಿದರು.

ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಸಿರುವ ವಿಚಾರದ ಕುರಿತು ಕೇಂದ್ರ ಆರೋಗ್ಯ ಸಚಿವರು ವರದಿ ಕೇಳಿದ್ದಾರೆ. ಪ್ರಕರಣದಲ್ಲಿ ಯಾರು ತಪ್ಪಿತಸ್ಥರು ಇದ್ದಾರೆ ಅವರಿಗೆ ಗಲ್ಲು ಶಿಕ್ಷೆ ನೀಡಬೇಕು. ಇಲ್ಲವಾದರೆ ಹಿಂದೂ ಧರ್ಮದ ಮೇಲೆ ಏನೇ ಮಾಡಿದರು ನಡೆಯುತ್ತೆ ಎಂಬಂತಾಗುತ್ತದೆ. ಹಿಂದೂ ಧಾರ್ಮಿಕ ಸಂಸ್ಥೆಗಳ ಮೇಲೆ ಟ್ಯಾಕ್ಸ್ ಹಾಕಿ ಆ ಹಣವನ್ನು ಕ್ರಿಶ್ಚನ್ ಹಾಗೂ ವಕ್ಫ್ ಅಸ್ತಿ ರಕ್ಷಣೆಗೆ ಉಪಯೋಗಿಸುತ್ತಾರೆ ಎಂದು ತಿಳಿಸಿದರು.

ಧಾರ್ಮಿಕ ದತ್ತಿ ಇಲಾಖೆಯಲ್ಲಿ ಹಿಂದೂಯೇತರ ನೌಕರರು ಇರಬಾರದು. ದೇವಸ್ಥಾನ ವ್ಯವಸ್ಥಾಪನ ಮಂಡಳಿಯಲ್ಲಿ ಕೇವಲ ಹಿಂದುಗಳು ಮಾತ್ರ ಇರಬೇಕು. ಹಿಂದೂಯೇತರರು ಇದ್ದರೆ ಅವರನ್ನು ತೆಗೆದು ಹಾಕಬೇಕೆಂದು ಒತ್ತಾಯ. ಸರ್ಕಾರಿ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳನ್ನ ಮುಕ್ತ ಮಾಡಬೇಕು. ಭಕ್ತರೇ ಸ್ವಾಯತ್ವತವಾಗಿ ರಚನೆ ಮಾಡಿಕೊಂಡ ಸಮಿತಿಗಳು ರಚನೆಯಾಗಬೇಕು. ಹಿಂದುಗಳಲ್ಲಿ ದೇವಸ್ಥಾನ ಹಣ ತಿನ್ನೋ ಕೆಟ್ಟ ಬುದ್ಧಿ ಇರಲ್ಲ ಎಂದರು.

ಇದನ್ನೂ ಓದಿ: ಲಡ್ಡು ಪರೀಕ್ಷೆಗೆ ದೇವಸ್ಥಾನದಲ್ಲಿ ಲ್ಯಾಬ್ ತೆರೆಯಬೇಕು: ಟಿಟಿಡಿಗೆ ಶ್ರೀರಾಮ ಸೇನೆ ಮನವಿ

ಈ ಕುರಿತು ಕೇಂದ್ರ ಸರ್ಕಾರಕ್ಕೂ ಒತ್ತಾಯ ಮಾಡುವೆ. ಹಿಂದೂ ದೇವಸ್ಥಾನಗಳನ್ನು ಸರ್ಕಾರದ ಮುಜರಾಯಿ ವ್ಯಾಪ್ತಿಯಿಂದ ಕೈ ಬಿಟ್ಟು ಟ್ರಸ್ಟ್ ಮಾಡಬೇಕೆಂದು ಆಗ್ರಹಿಸುವೆ. ಈ‌ ನಿಟ್ಟಿನಲ್ಲಿ ಹೊಸ ಕಾನೂನು ಜಾರಿ ಮಾಡಬೇಕು. ಹಿಂದೂ ದೇವಸ್ಥಾನಗಳಿಗೆ ಬರುವಂತ ಆದಾಯವನ್ನು ಸನಾತನ ಹಿಂದೂ ಧರ್ಮದ ರಕ್ಷಣೆಗೆ ಬಳಸಿಕೊಳ್ಳಬೇಕು. ಈ ವಿಚಾರವನ್ನು ಆಂಧ್ರದ ಉಪಮುಖ್ಯಮಂತ್ರಿ ಹೇಳಿದ್ದಾರೆ. ಸನಾತನ ಹಿಂದೂ ರಕ್ಷಣಾ, ಧರ್ಮ ರಕ್ಷಣಾ ಮಂಡಳಿ ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಸಮಿತಿ ರಚನೆ ಆಗಬೇಕೆಂದು ಆಂಧ್ರದ ಸಿಎಂ ಹೇಳಿದ್ದಾರೆ ಎಂದು ತಿಳಿಸಿದರು.

ಒಂದು ವೇಳೆ ಹಿಂದೂ ದೇವಸ್ಥಾನದಲ್ಲಿ ಅಧಿಕಾರ ಮತ್ತು ಹಣ ದುರ್ಬಳಕೆ ಆದರೆ ಅದರ ತನಿಖೆಯನ್ನು ಮಂಡಳಿ ನಡೆಸಬೇಕು. ರಾಷ್ಟ್ರ ಮಟ್ಟದಲ್ಲಿ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾದೀಶರು. ರಾಜ್ಯ ಮಟ್ಟದಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಾದೀಶರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು. ಹಿಂದೂ ಧರ್ಮದ ರಕ್ಷಣಾ ಚಟುವಟಿಕೆ ಈ ಮಂಡಳಿ ಮೂಲಕ ನಡೆಯಬೇಕು ಎಂದು ಸಲಹೆ ನೀಡಿದರು.

ಗಣೇಶ ಉತ್ಸವಗಳಲ್ಲಿ ಮುಸ್ಲಿಮರಿಂದ ಕಲ್ಲು ತೂರಾಟ ವಿಚಾರವಾಗಿ ಮಾತನಾಡಿದ ಅವರು, ಕಲ್ಲು ತೂರಾಟ ಉದ್ದೇಶಪೂರ್ವಕವಾಗಿ ನಡೆಯುತ್ತಿವೆ. ದೇಶದಲ್ಲಿ ಈದ್ ಮಿಲಾದ್ ಮೇಲೆ ಕಲ್ಲು ಬಿದ್ದಿದೆಯಾ? ಮುಸ್ಲಿಮರಿಗೆ ಶಾಂತಿಯಿಂದ ದೇಶದಲ್ಲಿರಬೇಕು ಎನ್ನುವ ಭಾವನೆ ಇಲ್ಲ. ಹಿಂದೂಗಳನ್ನು ಕೆಣಕುತ್ತಿದ್ದಾರೆ. ಮಸೀದಿಗಳ ಮುಂದೆ ಬರಬೇಡಿ ಎನ್ನುತ್ತಾರೆ. ಮಸೀದಿ ರಸ್ತೆಗಳು ಇವರಪ್ಪನ ಆಸ್ತಿಯಾ? ಸಾರ್ವಜನಿಕ ರಸ್ತೆ ಮೇಲೆ ಓಡಾಡುವ ಹಕ್ಕು ಹಿಂದೂಗಳಿಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ