ವಿಜಯಪುರ, ಜನವರಿ 20: ಹಣ ಪಡೆದು ಕೆಲಸಕ್ಕೆ ಬರಲು ವಿಳಂಬ ಮಾಡಿದ್ದಕ್ಕೆ ಮೂವರು ಕಾರ್ಮಿಕರ ಮೇಲೆ ಮನಸೋಇಚ್ಛೆ ಮಾರಣಾಂತಿಕವಾಗಿ ಹಲ್ಲೆ (assault) ನಡೆಸಿದ್ದವರ ಪೈಕಿ ಇಟ್ಟಿಗೆ ಕಾರ್ಖಾನೆ ಮಾಲೀಕ ಖೇಮು ರಾಠೋಡ್, ವಿಶಾಲ ಜುಮನಾಳ ಹಾಗೂ ಸಚಿವ ಮಾನವರ ಅನ್ನು ಪೊಲೀಸರು ಗಾಂಧಿನಗರದ ಖೇಮು ನಿವಾಸದಲ್ಲಿ ಬಂಧಿಸಿದ್ದಾರೆ. ಪರಾರಿಯಾದ ಇಬ್ಬರಿಗಾಗಿ ಶೋಧ ನಡೆಸಿದ್ದಾರೆ. ವಿಜಯಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಜನವರಿ 18ರಂದು ಮಾಲೀಕ ಖೇಮು ರಾಥೋಡ್, ಸಹಚರರಿಂದ ವಿಜಯಪುರ ಹೊರವಲಯದ ಇಟ್ಟಿಗೆ ಕಾರ್ಖಾನೆಯಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಚಿಕ್ಕಲಕಿ ಗ್ರಾಮದ ಕಾರ್ಮಿಕರ ಮೇಲೆ ಹಲ್ಲೆ ಮಾಡಲಾಗಿದೆ. ಮುಂಗಡ ಹಣ, ಕೆಲಸ ಮಾಡುವ ವಿಚಾರವಾಗಿ ಹಲ್ಲೆ ನಡೆದಿದೆ ಎಂದರು.
ಇದನ್ನೂ ಓದಿ: ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್
ಸಂಕ್ರಾಂತಿ ಹಬ್ಬಕ್ಕೆ ಹೋಗಿದ್ದವರು ಹಿಂದಿರುಗುವುದು ತಡವಾಗಿದ್ದಕ್ಕೆ ಮೂವರು ಕಾರ್ಮಿಕರ ಪಾದಗಳಿಗೆ ಕಟ್ಟಿಗೆ, ಪೈಪ್ಗಳಿಂದ ಹೊಡೆದಿದ್ದಾರೆ. ಕಾರ್ಮಿಕರ ಮೇಲೆ ಹಲ್ಲೆ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಮಾನವೀಯ ಹಲ್ಲೆ ಸಂಬಂಧ ಪ್ರಕರಣ ದಾಖಲಿಸಿ ಮೂವರನ್ನು ಬಂಧಿಸಲಾಗಿದೆ. ಪರಾರಿಯಾಗಿರುವ ಇಬ್ಬರು ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ. ಕಾರ್ಮಿಕರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗುವುದು. ಹಲ್ಲೆಗೊಳಗಾದ ಕಾರ್ಮಿಕರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಕರಣ ಬಗ್ಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ಹಲ್ಲೆ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ಯಾರೇ ತಪ್ಪು ಮಾಡಿದರೂ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದಿದ್ದಾರೆ.
ರಾಯಚೂರಿನಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿ, ಎಲ್ಲರೂ ತಲೆತಗ್ಗಿಸುವಂತ ಅಮಾನವೀಯ ಘಟನೆ ಇದು. ಲೇಬರ್, ಪೊಲೀಸ್ ಕೇಸ್ ಎಲ್ಲಾ ಸೆಕೆಂಡರಿ. ಈ ತರ ಮನಸ್ಥಿತಿ ಇರುವಂತದ್ದು ನಮ್ಮ ರಾಜ್ಯದಲ್ಲಿ ನಡೆದಿದೆ ಅಂದರೆ ನನಗೆ ವೈಯಕ್ತಿಕವಾಗಿ ತಲೆತಗ್ಗಿಸುವಂತದ್ದು. ಕಾರ್ಮಿಕರನ್ನ ಹಿಗ್ಗಾ ಮುಗ್ಗಾ ಹೊಡೆದಿರುವುದನ್ನ ನಾನು ಮಾಧ್ಯಮಗಳ ಮುಖಾಂತರ ನೋಡಿದ್ದೇನೆ. ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಕ್ಕಳನ್ನ ಕಾಲುವೆಗೆ ಎಸೆದು ತಾನೂ ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದ ಮಹಿಳೆ ವಿರುದ್ಧ ಕೇಸ್ ಬುಕ್
ಕಾನೂನಿನ ಕಠಿಣ ಕ್ರಮ ಪರಿಹಾರ ಅಲ್ಲಾ ಮನಸ್ಥಿತಿಗಳು ಬದಲಾಗಬೇಕು. ಬಾಲಕಾರ್ಮಿಕ ಪದ್ದತಿ ಕೂಡ ಬದಲಾಗಬೇಕು. ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಈ ರೀತಿಯ ಮನಸ್ಥಿತಿ ಬದಲಾಗಬೇಕು. ಇದಕ್ಕೆ ನನ್ನ ಸಮ್ಮತಿಯಿದೆ. ಕಾರ್ಮಿಕ ಅಂತ ಅಲ್ಲಾ ಯಾರ ಮೇಲೂ ಇಂತಹ ಘಟನೆ ನಡೆಯಬಹುದು. ಕಾರ್ಮಿಕ ಅಂತ ಪದ ತೆಗೆದರು ಈ ರೀತಿ ಹೊಡಿಬಹುದಾ, ಇದು ಮನಸ್ಥಿತಿ. ಇಂತಹ ಮನಸ್ಥಿತಿಯನ್ನ ನಾವು ವಿರೋಧಿಸಬೇಕು ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:32 pm, Mon, 20 January 25