ವಿಜಯಪುರ ಪಾಲಿಕೆ ಫಲಿತಾಂಶ ಇಡೀ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರುತ್ತೆ: ಬಸನಗೌಡ ಪಾಟೀಲ್ ಯತ್ನಾಳ

| Updated By: ಸಾಧು ಶ್ರೀನಾಥ್​

Updated on: Nov 01, 2022 | 2:44 PM

Basanagouda patil yatnal: ರೆಡ್ಡಿಗೆ ನೋವಿದೆ, ಒಂದು ಕಾಲದಲ್ಲಿ ರೆಡ್ಡಿಯಿಂದ ನೆರವು ಪಡೆದು ಸಿಎಂ ಆಗಿದ್ದರು. ಅವರು ಈಗ ಗಾಲಿ ಜನಾರ್ದನ ರೆಡ್ಡಿ ಸಹಾಯಕ್ಕೆ ಹೋಗಬೇಕು ಎಂದು ಪರೋಕ್ಷವಾಗಿ ಬಿಎಸ್​ ಯಡಿಯೂರಪ್ಪಗೆ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಟಾಂಗ್ ನೀಡಿದರು.

ವಿಜಯಪುರ ಪಾಲಿಕೆ ಫಲಿತಾಂಶ ಇಡೀ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರುತ್ತೆ: ಬಸನಗೌಡ ಪಾಟೀಲ್ ಯತ್ನಾಳ
ಬಸನಗೌಡ ಪಾಟೀಲ್ ಯತ್ನಾಳ್
Follow us on

ವಿಜಯಪುರ: ವಿಜಯಪುರ ನಗರದಲ್ಲಿ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಥಳೀಯ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ (Basanagouda Patil Yatnal) ನಿನ್ನೆ ಪ್ರಕಟಗೊಂಡ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ (Vijayapura Corporation Result) ವಿಚಾರವಾಗಿ ಮಾತನಾಡಿದ್ದಾರೆ. ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಇಡೀ ಕರ್ನಾಟಕ ವಿಧಾನಸಭಾ ಚುನಾವಣೆ (Assembly Elections 2023) ಮೇಲೆ ಪರಿಣಾಮ ಬೀರುತ್ತದೆ. ರಾಜಕಾರಣದ ವಾತಾವರಣ ಬದಲಾವಣೆಯಾಗುತ್ತಿದೆ. ಎಲ್ಲರ ವಿಶ್ವಾಸ ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ವಿಜಯಪುರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಪಾಲಿಕೆಯಲ್ಲಿ ಇದುವರೆಗೆ ಯಾವ ಪಕ್ಷವೂ ಇಷ್ಟು ಸ್ಥಾನ ಗೆದ್ದಿರಲಿಲ್ಲ. 35 ಸ್ಥಾನಗಳ ಪೈಕಿ ಬಿಜೆಪಿ 17 ಸ್ಥಾನಗಳನ್ನು ಗೆದ್ದಿದೆ. ಕಳೆದ ಬಾರಿಗಿಂತ ಈ ಬಾರಿ ನಾವು ಹೆಚ್ಚು ಸ್ಥಾನಗಳನ್ನು ಗೆದ್ದಿದ್ದೇವೆ. ಅಭಿವೃದ್ಧಿ ಹಾಗೂ ಹಿಂದುತ್ವವನ್ನು ಜನ ಒಪ್ಪಿದ್ದಾರೆ ಎಂದ ಯತ್ನಾಳ್ ಕಡಿಮೆ ಮತಗಳ ಅಂತರದಿಂದ ಮೂರು ಸ್ಥಾನಗಳಲ್ಲಿ ಸೋತಿದ್ದೇವೆ. ಬಿಜೆಪಿ ಗೆಲುವಿನ ಬಗ್ಗೆ ಸಿಎಂ ಬೊಮ್ಮಾಯಿ ಅಭಿನಂದನೆ ಸಲ್ಲಿಸಿದ್ದಾರೆ. ಕೆಲವು ಲೀಡರ್​​ಗಳು ಮನೆಯಲ್ಲಿ ಕುಳಿತು ಕುತಂತ್ರ ಮಾಡಿದ್ದರು. ಕಾಂಗ್ರೆಸ್, ಬಿಜೆಪಿಯಲ್ಲಿ ಕೆಲ ಕಳ್ಳರ ಗ್ಯಾಂಗ್ ಇದೆ. ಬೆಂಗಳೂರು, ಮುಧೋಳದಿಂದ ಸಾಕಷ್ಟು ಸಹಾಯಹಸ್ತ ಬಂದಿತ್ತು. ನನ್ನನ್ನು ಮಣಿಸಬೇಕು ಅಂದುಕೊಂಡವರಿಗೆ ಜನ ಉತ್ತರ ಕೊಟ್ಟಿದ್ದಾರೆ. ಇನ್ನು ಮೇಲಾದರೂ ನಿವೃತ್ತಿಯಾಗಿ ಮನೆಯಲ್ಲಿ ಆರಾಮವಿರಬೇಕು ಅಂತಹವರು ಎಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾರ್ಮಿಕವಾಗಿ ಹೇಳಿದ್ದಾರೆ.

ರೆಡ್ಡಿಗೆ ನೋವಿದೆ, ಅದನ್ನು ಸರಿಪಡಿಸಿ- ಬಿಎಸ್​ ಯಡಿಯೂರಪ್ಪಗೆ ಯತ್ನಾಳ್ ಟಾಂಗ್:

ಇನ್ನು, ಬಿಜೆಪಿ ಮೇಲೆ ಮಾಜಿ ಸಚಿವ ಜನಾರ್ದನ ರೆಡ್ಡಿ ಮುನಿಸು ವಿಚಾರವಾಗಿ ವಿಜಯಪುರದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್, ರೆಡ್ಡಿಗೆ ನೋವಿದೆ, ಅದನ್ನು ಪಕ್ಷದ ಹಿರಿಯರು ಸರಿಪಡಿಸುತ್ತಾರೆ. ಒಂದು ಕಾಲದಲ್ಲಿ ರೆಡ್ಡಿಯಿಂದ ನೆರವು ಪಡೆದು ಸಿಎಂ ಆಗಿದ್ದರು. ಅವರು ಈಗ ಗಾಲಿ ಜನಾರ್ದನ ರೆಡ್ಡಿ ಸಹಾಯಕ್ಕೆ ಹೋಗಬೇಕು ಎಂದು ಪರೋಕ್ಷವಾಗಿ ಬಿಎಸ್​ ಯಡಿಯೂರಪ್ಪಗೆ ಟಾಂಗ್ ನೀಡಿದರು. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ನಮ್ಮ ಜಿಲ್ಲೆಗೆ ಒಳ್ಳೆಯ ಉಸ್ತುವಾರಿ ಸಚಿವರನ್ನು ನೀಡಿದರೆ ಸ್ವಾಗತ. ಸಿಎಂ ಬೊಮ್ಮಾಯಿ ಅವರಿಗೂ ಸಚಿವ ಸಂಪುಟ ವಿಸ್ತರಣೆ ಮಾಡುವ ಆಸಕ್ತಿಯಿಲ್ಲ. ಸಂಪು ವಿಸ್ತರಣೆ ವಿಚಾರದಲ್ಲಿ ಅಸಮಾಧಾನ, ಭಿನ್ನಮತ ಬೇಡಾ. ಆರಾಮಾಗಿ ಆರು ತಿಂಗಳು ಕಳೆಯಬೇಕೆಂದುಕೊಂಡಿದ್ದಾರೆ ಎಂದು ಯತ್ನಾಳ್ ಇದೆ ಸಂದರ್ಭದಲ್ಲಿ ಹೇಳಿದರು.

ಎಂಇಎಸ್ ಅಧಿಕಾರ ಕಳೆದುಕೊಂಡು ಹತಾಶಗೊಂಡಿದೆ:

ಎಂಇಎಸ್​​ ವಿರುದ್ಧ ಕಿಡಿಕಾರಿದ ಬಸನಗೌಡ ಪಾಟೀಲ್​ ಯತ್ನಾಳ್​​ ಭಾಷೆಯ ವಿಚಾರದಲ್ಲಿ ಎಂಇಎಸ್​​ ಪುಂಡಾಟ ಮಾಡುತ್ತಿದ್ದಾರೆ. ಬೆಳಗಾವಿ ನಗರ ಪಾಲಿಕೆಯಲ್ಲಿ ಸದ್ಯ ಬಿಜೆಪಿ ಅಧಿಕಾರದಲ್ಲಿದೆ. ಪಾಲಿಕೆ ಚುನಾವಣೆಯಲ್ಲಿ ಎಂಇಎಸ್​ ಸೋತಿದ್ದರೂ ಬುದ್ಧಿ ಕಲಿಯಲಿಲ್ಲ. ಬೆಳಗಾವಿ ಜನತೆ ಎಂಇಎಸ್​ ಅನ್ನು ತಿರಸ್ಕರಿಸಿದ್ದಾರೆ. ಈ ಹಿಂದೆ ಬೆಳಗಾವಿಯಲ್ಲಿ 5 ರಿಂದ 6 ಜನ ಎಂಇಎಸ್ ಶಾಸಕರು ಇರುತ್ತಿದ್ದರು. ಹಾಗಾಗಿ ಅಧಿಕಾರ ಕಳೆದುಕೊಂಡು ಹತಾಶರಾಗಿ ಕರಾಳ ದಿನ ಆಚರಿಸ್ತಿದ್ದಾರೆ ಎಂದು ಶಾಸಕ ಯತ್ನಾಳ್​​ ಹೇಳಿದರು.

ಎಂಇಎಸ್ ನವರ ಅಂತ್ಯದ ದಿನಗಳು ಇರೋ ಕಾರಣ ಪುಂಡಾಟಿಕೆ ಮಾಡುತ್ತಿದ್ದಾರೆ. ಮರಾಠಾ ಸಮಾಜಕ್ಕೂ ಎಂಇಎಸ್ ಗೂ ಯಾವುದೇ ಸಂಬಂಧವಿಲ್ಲಾ. ಭಾಷಾ ವಿಚಾರದಲ್ಲಿ ಎಂಇಎಸ್ ನವರು ಬೆಳಗಾವಿಯಲ್ಲಿ ಪುಂಡಾಟ ಮಾಡುತ್ತಿದ್ದಾರೆ. ಮಹಾರಾಷ್ಟ್ರದ ಕೊಲ್ಲಾಪುರ ಭಾಗದಿಂದ ಗೂಂಡಾಗಳು ಬಂದು ಗಲಾಟೆ ಮಾಡುತ್ತಾರೆಂದು ಯತ್ನಾಳ್ ಆರೋಪ ಮಾಡಿದರು.