
ವಿಜಯಪುರ, ಅಕ್ಟೋಬರ್ 09: ರಾಜ್ಯ ಸರ್ಕಾರದ ಉಚಿತ ಅಭಯದ ಅಭಿಯಾನಗಳ ನಡುವೆಯೇ ಸಾರಿಗೆ ಸಂಸ್ಥೆಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದು ಒಂದೊಂದಾಗಿ ಸಾಬೀತಾಗುತ್ತಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಡೀಸೆಲ್ ಇಲ್ಲದೆ ಬಸ್ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡಿದ ಘಟನೆಯ ಬೆನ್ನಲ್ಲೇ, ಇದೀಗ ವಿಜಯಪುರದಲ್ಲೂ ಅಂತಹುದೇ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ.
ವಿಜಯಪುರ ನಗರ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗಗಳಿಗೆ ತೆರಳಬೇಕಿದ್ದ ಸರ್ಕಾರಿ ಬಸ್‌ಗಳಿಗೆ ಡೀಸೆಲ್ ಭರಿಸಲು ವಿಳಂಬವಾದ ಹಿನ್ನೆಲೆಯಲ್ಲಿ, ನಗರದ ಮೂರು ಡಿಪೋಗಳಲ್ಲಿ ಬಸ್‌ಗಳು ಸಾಲುಗಟ್ಟಿ ನಿಲ್ಲುವಂತಾಯಿತು. ಇದರಿಂದ ಬೆಳಗಿನ ಜಾವ ಶಾಲೆ, ಕಾಲೇಜು ಹಾಗೂ ಉದ್ಯೋಗಗಳಿಗೆ ತೆರಳಬೇಕಿದ್ದ ಸಾರ್ವಜನಿಕರು ತೀವ್ರ ಪರದಾಟ ನಡೆಸಿದರು.
ಘಟನೆಯ ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಪ್ರವಾಸದಲ್ಲಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮಾಜಿ ಪರಿಷತ್ ಸದಸ್ಯ ಅರುಣ ಶಹಾಪೂರ ಹಾಗೂ ಸ್ಥಳೀಯ ಮುಖಂಡರೊಂದಿಗೆ ಗ್ಯಾಂಗ್ ಬಾವಡಿಯಲ್ಲಿರುವ ಡಿಪೋಗೆ ಭೇಟಿ ನೀಡಿ ಪರಿಶೀಲಿಸಿದರು. ಡಿಪೋ ಮ್ಯಾನೇಜರ್ ಜೊತೆ ಚರ್ಚಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ರಾಜ್ಯ ಸರ್ಕಾರ ಕೇವಲ ದಿವಾಳಿಯಾಗುವ ಹಂತದಲ್ಲಷ್ಟೇ ಇಲ್ಲ, ಸಂಪೂರ್ಣ ದಿವಾಳಿಯಾಗಿದೆ. ಶಕ್ತಿ ಯೋಜನೆಯಿಂದಾಗಿ ಸಾರಿಗೆ ಇಲಾಖೆಗೆ ಸರ್ಕಾರದಿಂದ ಬರಬೇಕಾದ ಸುಮಾರು 6,500 ಕೋಟಿ ರೂಪಾಯಿ ಬಾಕಿಯಿದೆ” ಎಂದು ಕಿಡಿಕಾರಿದರು.
ಇದೇ ವೇಳೆ ಮೊದಲ ಬಾರಿಗೆ ಪೊಲೀಸ್ ಸಿಬ್ಬಂದಿಯ ವೇತನವೂ ಬಾಕಿ ಉಳಿದಿದೆ ಎಂದು ಆರೋಪಿಸಿದ ಅವರು, ಸರ್ಕಾರದ ಶೂನ್ಯ ಹಣಕಾಸು ನಿರ್ವಹಣೆಗೆ ಈ ಘಟನೆ ಸಾಕ್ಷಿ ಎಂದರು. ನಿನ್ನೆ ಸಂಜೆ ಡೀಸೆಲ್ ಪೂರೈಕೆಯಾಗದ ಕಾರಣ ಈ ಸಮಸ್ಯೆ ಎದುರಾಗಿತ್ತು, ಇಂದು ತಡವಾಗಿ ಡೀಸೆಲ್ ತಲುಪಿದ ಬಳಿಕ ಬಸ್‌ಗಳಿಗೆ ಇಂಧನ ತುಂಬಿಸಿ ಸಂಚಾರ ಪುನರಾರಂಭಿಸಲಾಗಿದೆ.
ಇದನ್ನೂ ಓದಿ ತೀರಾ ಆರ್ಥಿಕ ಸಂಕಷ್ಟದಲ್ಲಿರುವ ಬಿಎಂಟಿಸಿ: ತೈಲ ಕಂಪನಿಗಳಿಗೆ 4-5 ತಿಂಗಳಿನ ಸುಮಾರು 600 ಕೋಟಿ ಹಣ ಬಾಕಿ ಆರೋಪ
ಕೊಪ್ಪಳ, ವಿಜಯಪುರವಷ್ಟೇ ಅಲ್ಲದೆ ಬೆಂಗಳೂರಿನ ಬಿಎಂಟಿಸಿಗೂ ಸಹ ಸಂಕಷ್ಟ ಎದುರಾಗಿದೆ. ಪ್ರತಿದಿನ 40 ಲಕ್ಷಕ್ಕೂ ಹೆಚ್ಚು ಜನರು ಪ್ರಯಾಣಕ್ಕೆ ಅವಲಂಬಿಸಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಡೀಸೆಲ್ ಸರಬರಾಜು ಮಾಡುವ ತೈಲ ಕಂಪನಿಗಳಿಗೆ ನಾಲ್ಕೈದು ತಿಂಗಳಿನಿಂದ ಹಣ ಪಾವತಿ ಮಾಡಿಲ್ಲ. ಆದ್ದರಿಂದ ಆದಷ್ಟು ಬೇಗ ಹಣ ನೀಡದಿದ್ದಲ್ಲಿ ಡೀಸೆಲ್ ಸಪ್ಲೈ ನಿಲ್ಲಿಸಬೇಕಾಗುತ್ತದೆ ಎಂದು ಕಂಪನಿಗಳು ತಿಳಿಸಿವೆ. ಇದೇ ರೀತಿ ಮುಂದುವರಿದರೆ ಬೆಂಗಳೂರಿನಲ್ಲೂ ಡೀಸೆಲ್ ಇಲ್ಲದೆ ಪ್ರಯಾಣಿಕರು ಪರದಾಡುವ ಸ್ಥಿತಿ ಎದುರಾಗುವುದು ದೂರವೇನಿಲ್ಲ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:11 pm, Fri, 9 October 26