ತೀರಾ ಆರ್ಥಿಕ ಸಂಕಷ್ಟದಲ್ಲಿರುವ ಬಿಎಂಟಿಸಿ: ತೈಲ ಕಂಪನಿಗಳಿಗೆ 4-5 ತಿಂಗಳಿನ ಸುಮಾರು 600 ಕೋಟಿ ಹಣ ಬಾಕಿ ಆರೋಪ
ತೈಲ ಕಂಪನಿಗಳಿಗೆ ಕಳೆದ 4-5 ತಿಂಗಳಿನಿಂದ ಸುಮಾರು 600 ಕೋಟಿ ಡೀಸೆಲ್ ಬಾಕಿ ಹಣ ಪಾವತಿಸಲೂ ಆಗದ ಆರ್ಥಿಕ ಸ್ಥಿತಿಗೆ ಬಿಎಂಟಿಸಿ ತಲುಪಿದ್ದು, ಶಕ್ತಿ ಯೋಜನೆಯ ಬಾಕಿ ಹಣ ಬಿಡುಗಡೆಗೆ ಸಾರಿಗೆ ನೌಕರರ ಮುಖಂಡ ಜಗದೀಶ್ ಆಗ್ರಹಿಸಿದ್ದಾರೆ. ಬಿಡಿ ಭಾಗಗಳ ಕೊರತೆ ವಿಚಾರದಲ್ಲಿಯೂ ಇದೇ ಸ್ಥಿತಿ ಮುಂದುವರಿದ್ದು, ಪ್ರತಿಯೊಂದು ಡಿಪೋಗಳೂ ಈ ಸಮಸ್ಯೆಯಿಂದ ಬಳಲುತ್ತಿವೆ ಎಂದವರು ದೂರಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್ 18: ಪ್ರತಿದಿನ 40 ಲಕ್ಷಕ್ಕೂ ಹೆಚ್ಚು ಜನರು ಪ್ರಯಾಣಕ್ಕೆ ಅವಲಂಬಿಸಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ತೀರಾ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಬಿಎಂಟಿಸಿಗೆ ಡೀಸೆಲ್ ಸರಬರಾಜು ಮಾಡುವ ತೈಲ ಕಂಪನಿಗಳಿಗೆ ನಾಲ್ಕೈದು ತಿಂಗಳಿನಿಂದ ಹಣ ಪಾವತಿ ಮಾಡಿಲ್ಲ. ಹೀಗಾಗಿ ತಿಂಗಳೊಳಗೆ ದುಡ್ಡು ನೀಡದಿದ್ದರೆ, ಡೀಸೆಲ್ ಸಪ್ಲೈ ನಿಲ್ಲಿಸೋದಾಗಿ ಕಂಪನಿಗಳು ತಿಳಿಸಿವೆ. ಒಂದೊಮ್ಮೆ ಪರಿಸ್ಥಿತಿ ಅಲ್ಲಿಯವರೆಗೆ ಹೋದಲ್ಲಿ ಬಿಎಂಟಿಸಿ ಬಸ್ಸುಗಳು ಡಿಪೋಗಳಲ್ಲೇ ನಿಲ್ಲುವುದು ಗ್ಯಾರಂಟಿ ಎಂದು ಸಾರಿಗೆ ನೌಕರರ ಮುಖಂಡ ಜಗದೀಶ್ ಆತಂಕ ವ್ಯಕ್ತಪಡಿಸಿದ್ದಾರೆ.
‘4 ನಿಗಮಗಳಿಗೆ ಶಕ್ತಿ ಯೋಜನೆಯ 5 ಸಾವಿರ ಕೋಟಿ ಹಣ ಬಾಕಿ’
ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳಿಗೆ ರಾಜ್ಯ ಸರ್ಕಾರದಿಂದ ಶಕ್ತಿ ಯೋಜನೆಯ 5 ಸಾವಿರ ಕೋಟಿ ಹಣ ಪಾವತಿಯಾಗದೆ ಬಾಕಿ ಉಳಿದಿದೆ. ಈ ಪೈಕಿ ಬಿಎಂಟಿಸಿಗೇ ಒಂದು ಸಾವಿರ ಕೋಟಿ ರೂಪಾಯಿಗಳಷ್ಟು ಹಣ ಬಾಕಿ ಇದೆ. ಬಿಎಂಟಿಸಿಯಲ್ಲಿರುವ 5,169 ಡೀಸೆಲ್ ಬಸ್ಸುಗಳಿಗೆ ಪ್ರತಿದಿನ ಸರಾಸರಿ 2.5 ಲಕ್ಷ ಲೀಟರ್ ಡೀಸೆಲ್ ಬೇಕಾಗುತ್ತದೆ. ಇದರಿಂದ ಪ್ರತಿದಿನ ತೈಲ ಕಂಪನಿಗಳಿಗೆ 2ರಿಂದ 3 ಕೋಟಿ ರೂಪಾಯಿಗಳಷ್ಟು ಹಣ ಪಾವತಿ ಮಾಡಬೇಕಾಗುತ್ತದೆ. ಆದರೆ ಕಳೆದ ನಾಲ್ಕೈದು ತಿಂಗಳಿನಿಂದ ಹಣ ಪಾವತಿ ಮಾಡದ ಹಿನ್ನೆಲೆ ಸುಮಾರು 600 ಕೋಟಿ ರೂಪಾಯಿಯಷ್ಟು ಬಾಕಿ ಉಳಿದುಕೊಂಡಿದೆ. ಒಂದೊಮ್ಮೆ ಕಂಪನಿಗಳು ಇಂಧನ ಸರಬರಾಜು ನಿಲ್ಲಿಸಿದರೆ ಪ್ರಯಾಣಿಕರಿಗೆ ಬಹಳ ತೊಂದರೆಯಾಗಲಿದೆ ಎಂದು ಜಗದೀಶ್ ಹೇಳಿದ್ದಾರೆ.
ಇದನ್ನೂ ಓದಿ: 4,500 ಇವಿ ಬಸ್ ಸೇರ್ಪಡೆಗೆ ಅಸ್ತು: ಬಿಎಂಟಿಸಿ ಚಾಲಕರನ್ನೇ ನೇಮಿಸಲು ನೌಕರರ ಪಟ್ಟು, ಹೋರಾಟದ ಎಚ್ಚರಿಕೆ
ಈ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಅನುದಾನ ನೀಡದೇ ಇದ್ದಲ್ಲಿ ಬಿಎಂಟಿಸಿ ಉಳಿಯಲು ಸಾಧ್ಯವಿಲ್ಲ. ಬಿಡಿ ಭಾಗಗಳ ಕೊರತೆ ವಿಚಾರದಲ್ಲಿಯೂ ಇದೇ ಸ್ಥಿತಿ ಮುಂದುವರಿದ್ದು, ಪ್ರತಿಯೊಂದು ಡಿಪೋಗಳೂ ಇಂತಹುದ್ದೇ ಸಮಸ್ಯೆಯಿಂದ ಬಳಲುತ್ತಿವೆ. ರಾಜ್ಯದ ಜನರ ಜೀವದ ಜೊತೆ ಸರ್ಕಾರ ಚೆಲ್ಲಾಟ ನಡೆಸುತ್ತಿದ್ದು, ಶಕ್ತಿ ಯೋಜನೆ ಹಣವನ್ನು ತ್ವರಿತವಾಗಿ ಬಿಡುಗಡೆ ಮಾಡಬೇಕಿದೆ. ಸರ್ಕಾರದ ವಿರುದ್ಧ ಮಾತನಾಡಲು ಸಾರಿಗೆ ನೌಕರರು ಹೆದರುತ್ತಿದ್ದಾರೆಯಾದರೂ ಸಾರಿಗೆ ಸಂಘಟನೆಗಳು ಈ ಬಗ್ಗೆ ಧ್ವನಿ ಎತ್ತುತ್ತಿವೆ ಎಂದು ಅವರು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:59 pm, Fri, 18 September 26




