AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಮೀನು ವ್ಯಾಜ್ಯಕ್ಕೆ ತಂದೆ-ಮಗನೇ ಬಲಿ: ಕಬ್ಬು ಕಟಾವು ಮಾಡಲು ಹೋದವರ ಮೇಲೆ ಮಾರಣಾಂತಿಕ ಹಲ್ಲೆ

ವಿಜಯಪುರ ಕೊಲ್ಹಾರದ ತಡಲಗಿ ಗ್ರಾಮದಲ್ಲಿ ಕಬ್ಬು ಕಟಾವು ವಿಚಾರವಾಗಿ ನಡೆದ ಭೂ ವಿವಾದದಲ್ಲಿ ತಂದೆ-ಮಗ ಬಲಿಯಾಗಿದ್ದಾರೆ. ಜಮೀನು ಮಾಲೀಕತ್ವದ ಗಲಾಟೆ ವಿಕೋಪಕ್ಕೆ ತಿರುಗಿ, ಹನುಮಂತ ಸಾಲವಾಡಗಿ ಮತ್ತು ಮಗ ಮಂಜುನಾಥ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೊಲ್ಹಾರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ತನಿಖೆ ಮುಂದುವರಿದಿದೆ. ಈ ಘಟನೆ ಭೂ ವಿವಾದಗಳ ಗಂಭೀರತೆಯನ್ನು ಎತ್ತಿ ತೋರಿಸುತ್ತದೆ.

ಜಮೀನು ವ್ಯಾಜ್ಯಕ್ಕೆ ತಂದೆ-ಮಗನೇ ಬಲಿ: ಕಬ್ಬು ಕಟಾವು ಮಾಡಲು ಹೋದವರ ಮೇಲೆ ಮಾರಣಾಂತಿಕ ಹಲ್ಲೆ
ಜಮೀನಿನ ವ್ಯಾಜ್ಯ
ಅಶೋಕ ಯಡಳ್ಳಿ, ವಿಜಯಪುರ
| Edited By: |

Updated on: Nov 14, 2026 | 7:40 PM

Share

ವಿಜಯಪುರ, ನ.14: ಬೇರೆಯವರ ಜಮೀನಿನ ವ್ಯಾಜ್ಯವೊಂದು ಮುಗ್ಧ ತಂದೆ ಮತ್ತು ಮಗನ ಜೀವವನ್ನೇ ಬಲಿ ತೆಗೆದುಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ತಡಲಗಿ ಗ್ರಾಮದಲ್ಲಿ ನಡೆದಿದೆ. ಕಬ್ಬು ಕಟಾವು ಮಾಡುವ ವಿಚಾರವಾಗಿ ನಡೆದ ಎರಡು ಗುಂಪುಗಳ ನಡುವಿನ ಗಲಾಟೆ ವಿಕೋಪಕ್ಕೆ ತಿರುಗಿ, ದೊಣ್ಣೆ ಹಾಗೂ ಕಲ್ಲುಗಳಿಂದ ಹಲ್ಲೆ ನಡೆಸಿದ ಪರಿಣಾಮ ತಂದೆ ಹಾಗೂ ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಏನಿದು ಘಟನೆ? ಕಬ್ಬು ಕಟಾವು ವೇಳೆ ನಡೆದಿದ್ದೇನು?

ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ತಡಲಗಿ ಗ್ರಾಮದ ಹನುಮಂತ ಸಾಲವಾಡಗಿ ಹಾಗೂ ಆತನ ಪುತ್ರ ಮಂಜುನಾಥ ಸಾಲವಾಡಗಿ ತಮ್ಮ ಸಂಬಂಧಿಕರೊಂದಿಗೆ ಕೃಷಿಕಾಯಕ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಅದೇ ಗ್ರಾಮದ ಹನುಮವ್ವ ಮೇಟಿ ಎಂಬುವವರಿಗೆ ಸೇರಿದ ಸರ್ವೇ ನಂಬರ್ 213/2 ರ 8 ಎಕರೆ ಜಮೀನನ್ನು ಕಳೆದ ಎರಡು ವರ್ಷಗಳಿಂದ ಪಾಲು ಆಧಾರದ (ಅರ್ಧ ಭಾಗ ಉಳುಮೆ ಮಾಡಿದವರಿಗೆ) ಮೇಲೆ ಅವರು ಕೃಷಿ ಮಾಡಿಕೊಂಡು ಬರುತ್ತಿದ್ದರು.

ಕಳೆದ ಬಾರಿ ಈರುಳ್ಳಿ ಬೆಳೆದು ಪಾಲು ಮಾಡಿಕೊಂಡಿದ್ದ ಸಾಲವಾಡಗಿ ಕುಟುಂಬ, ಈ ಬಾರಿ ಅದೇ ಜಮೀನಿನಲ್ಲಿ ನಾಟಿ ಮಾಡಿದ್ದ ಕಬ್ಬು ಕಟಾವಿಗೆ ಮುಂದಾಗಿತ್ತು. ಕಾರ್ಮಿಕರನ್ನು ಕರೆಸಿ ಪೂಜೆ ಮಾಡಿ ಕಟಾವು ಮಾಡಲು ಹೋದಾಗ, ಜಮೀನು ಮಾಲೀಕ ಹನುಮವ್ವ ಮೇಟಿ ಅವರ ದಾಯಾದಿಗಳಾದ (ಅಣ್ಣ -ತಮ್ಮಂದಿರು) ಗಿರಿಯಪ್ಪ ಮೇಟಿ, ರಾಮಪ್ಪ ಮೇಟಿ, ಹನುಮಂತ ಮೇಟಿ, ನಾಗಪ್ಪ ಮೇಟಿ ಹಾಗೂ ಇತರರು ಸ್ಥಳಕ್ಕೆ ಆಗಮಿಸಿ, “ಇದು ವ್ಯಾಜ್ಯವಿರುವ ಜಮೀನು, ಕಬ್ಬು ಕಟಾವು ಮಾಡಲು ಬಿಡುವುದಿಲ್ಲ, ನಮ್ಮದೂ ಪಾಲಿದೆ” ಎಂದು ತಗಾದೆ ತೆಗೆದಿದ್ದಾರೆ.

ಜಮೀನು ವ್ಯಾಜ್ಯವಿದ್ದರೆ ಬಗೆಹರಿಸಿಕೊಳ್ಳಿ, ನಾವು ಸಾಲ ಮಾಡಿ ಕಬ್ಬು ಬೆಳೆದಿದ್ದೇವೆ, ಕಟಾವು ಮಾಡಲು ಬಿಡಿ ಎಂದು ಹನುಮಂತ ಸಾಲವಾಡಗಿ ಪರಿಪರಿಯಾಗಿ ಬೇಡಿಕೊಂಡರೂ ಆರೋಪಿಗಳು ಕೇಳಲಿಲ್ಲ. ಮಾತಿಗೆ ಮಾತು ಬೆಳೆದು ವಾಗ್ವಾದ ಉಂಟಾಗಿ, ಎರಡು ಗುಂಪುಗಳ ನಡುವೆ ಘರ್ಷಣೆ ನಡೆಯಿತು. ಈ ವೇಳೆ ಆಕ್ರೋಶಗೊಂಡ ಮೇಟಿ ಕುಟುಂಬದವರು ದೊಣ್ಣೆ ಮತ್ತು ಕಲ್ಲುಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದು, ಹನುಮಂತ ಸಾಲವಾಡಗಿ ಹಾಗೂ ಅವರ ಪುತ್ರ ಮಂಜುನಾಥ ಸ್ಥಳದಲ್ಲೇ ಅಸುನೀಗಿದ್ದಾರೆ. ಘಟನೆಯಲ್ಲಿ ಮಹಾದೇವಪ್ಪ ಹಾಗೂ ಮಲ್ಲಪ್ಪ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಮೀನಿನ ಹಿನ್ನೆಲೆ ಹಾಗೂ ಸಂತ್ರಸ್ತರ ಆಕ್ರೋಶ:

ಮೇಟಿ ಕುಟುಂಬಕ್ಕೆ ಹತ್ತಾರು ಎಕರೆ ಜಮೀನಿದ್ದರೂ, ದಾಯಾದಿಗಳ ಜಗಳದ ಕಾರಣ ಸದರಿ 8 ಎಕರೆ ಜಮೀನು ಕಳೆದ 4-6 ವರ್ಷಗಳಿಂದ ಪಾಳು ಬಿದ್ದಿತ್ತು. ಕುಟುಂಬ ನಿರ್ವಹಣೆಗೆ ಕಷ್ಟವಾದಾಗ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಪಂಚಾಯತ್ ಮಾಡಿ, ವಯಸ್ಸಾಗಿರುವ ಹನುಮವ್ವ ಮೇಟಿ ಅವರು ಸಾಲವಾಡಗಿ ಕುಟುಂಬಕ್ಕೆ ಜಮೀನನ್ನು ಉಳುಮೆಗೆ ನೀಡಿದ್ದರು. ಜಮೀನಿನ ವಿಚಾರವಾಗಿ ದಾಯಾದಿಗಳು ನಮ್ಮೊಂದಿಗೆ ಜಗಳವಾಡುತ್ತಿದ್ದಾರೆ. ಆದರೆ ಯಾವುದೇ ಸಂಬಂಧವೇ ಇಲ್ಲದ, ನಮಗೆ ಸಹಾಯ ಮಾಡಲು ಬಂದ ಸಾಲವಾಡಗಿ ಕುಟುಂಬದ ತಂದೆ-ಮಗನ ಪ್ರಾಣ ತೆಗೆದುಬಿಟ್ಟರಲ್ಲ ಎಂದು ಜಮೀನು ಮಾಲೀಕ ಹನುಮವ್ವ ಮೇಟಿ ಹಾಗೂ ಮೃತರ ಪತ್ನಿ ಶಿವಬಾಯಿ ಕಣ್ಣೀರುಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಆರ್ಥಿಕ ಅಪರಾಧ ಹಾಗೂ ವಂಚನೆ ಪ್ರಕರಣಗಳ ತನಿಖೆಗೆ ಹೊಸ ಮಾರ್ಗಸೂಚಿ ಪ್ರಕಟಿಸಿದ ಡಿಜಿಪಿ ಡಾ. ಎಂ.ಎ. ಸಲೀಂ

ಪೊಲೀಸರ ತನಿಖೆ ಮತ್ತು ಆರೋಪಿಗಳ ಬಂಧನ:

ಘಟನೆಯ ಗಂಭೀರತೆ ಅರಿತ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಲಕ್ಷ್ಮಣ ನಿಂಬರಗಿ, ಎಎಸ್ಪಿ ಕಟ್ಟಿಮನಿ ಹಾಗೂ ಡಿವೈಎಸ್ಪಿ ಚಂದ್ರಕಾಂತ ನಂದರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಂಡ ಹಾಗೂ ಸೊಕೋ (SOCO) ತಂಡ ಸ್ಥಳದಲ್ಲಿ ಸಾಕ್ಷ್ಯ ಕಲೆಹಾಕಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ಕೊಲ್ಹಾರ ಪೊಲೀಸರು, ಜೋಡಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ಗಿರಿಯಪ್ಪ ಮೇಟಿ, ರಾಮಪ್ಪ ಮೇಟಿ, ಹನುಮಂತ ಮೇಟಿ, ನಾಗಪ್ಪ ಮೇಟಿ ಸೇರಿದಂತೆ ಪ್ರಮುಖರನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಇತರರಿಗಾಗಿ ಶೋಧ ಮುಂದುವರಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಶೋಕ ಯಡಳ್ಳಿ, ವಿಜಯಪುರ
ಅಶೋಕ ಯಡಳ್ಳಿ, ವಿಜಯಪುರ

ಅಶೋಕ ಯಡಳ್ಳಿಯವರು ಮೂಲತಃ ಧಾರವಾಡ ಜಿಲ್ಲೆಯ ಅಮ್ಮಿನಬಾವಿ ಗ್ರಾಮದವರು. ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇದು ಇವರ ಕೆಲಸದ ಮಾಹಿತಿಯಾಗಿದೆ. ಪ್ರಾಥಮಿಕ ಶಿಕ್ಷಣ ನಂತರ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡವೇ ಇವರ ವಿದ್ಯಾ ಕ್ಷೇತ್ರವಾಗಿದೆ . ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ್ದಾರೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ, ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದಾರೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ, ಆಸಕ್ತಿ ಇವರಗಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ.

Read More