ವಿಜಯಪುರ, ಜನವರಿ 31: ಇತ್ತೀಚೆಗೆ ಕ್ಲೈಮೆಟ್ ಟ್ರೆಂಡ್ಸ್, ರೆಸ್ಪೈರರ್ ಲಿವಿಂಗ್ ಸೈನ್ಸ್ ಹಾಗೂ ರೆಸ್ಪೈರರ್ ವರದಿಯಲ್ಲಿ ಶುದ್ಧ ಗಾಳಿ ಹೊಂದಿರುವ ನಗರಗಳ ಪಟ್ಟಿಯಲ್ಲಿ ದೇಶದಲ್ಲೇ ವಿಜಯಪುರ (Vijayapura) ನಗರ 6 ನೇ ಸ್ಥಾನ ಪಡೆದಿತ್ತು. ಜಿಲ್ಲೆಯ ಜನರು ಹಾಗೂ ನಗರದ ಜನರು ಖುಷಿ ಪಟ್ಟಿದ್ದರು. ಆದರೆ, ಇದೀಗ ವಿಜಯಪುರ ನಗರದ ಜನರಿಗೆ ಕೂಡ ಸಂಕಷ್ಟ ಬಂದಿದೆ. ಸದ್ಯ ನಗರ ಭಾಗದ ಜನರು ವಿಷಾನಿಲ (Poisonous gas) ಉಸಿರಾಡುವ ಸ್ಥಿತಿ ನಿರ್ಮಾಣವಾಗಿದೆ.
ವಿಜಯಪುರ ನಗರ ಭಾಗದ ಜನರಿಗೆ ಇದೀಗ ಭಯ ಆವರಿಸಿದೆ. ಕಳೆದ 10 ದಿನದಿಂದ ಇಡೀ ನಗರದ ಅರ್ಧ ಭಾಗದ ಪ್ರದೇಶಗಳಲ್ಲಿ ವಿಷಾನಿಲ ವ್ಯಾಪಿಸಿದೆ. ನಗರದ ಹೊರ ಭಾಗದಲ್ಲಿರೋ ಮಹಾನಗರ ಪಾಲಿಕೆಯ ಘನತ್ಯಾಜ್ಯ ಸಂಸ್ಕರಣ ಹಾಗೂ ವಿಲೇವಾರಿ ಘಟಕದಲ್ಲಿರೋ ಮಿಶ್ರಣವಾಗಿರೋ ಕಸದ ರಾಶಿಗೆ ಬೆಂಕಿ ತಗುಲಿ ವಿಷಾನಿಲ ಹೊರ ಸೂಸುತ್ತಿದೆ. ಘನತ್ಯಾಜ್ಯ ಸಂಸ್ಕರಣ ಹಾಗೂ ವಿಲೇವಾರಿ ಘಟಕಲ್ಲಿ 15000 ಟನ್ ಸಂಗ್ರಹವಾಗಿರೋ ಮಿಶ್ರಕಸದ ರಾಶಿ ಬಿದ್ದಿದೆ. ಇದಕ್ಕೆ ಪಕ್ಕದಲ್ಲಿರೋ ಬಯೋ ಮೆಡಿಕಲ್ ವೇಸ್ಟ್ ನಿಂದ ಬೆಂಕಿ ಕಸದ ರಾಶಿಗೆ ಹಚ್ಚಿ ಇಲ್ಲಿರೋ ಕಸದ ರಾಶಿ ಹೊತ್ತಿ ಉರಿಯುತ್ತಿದೆ. ಕಸದ ರಾಶಿಯ ಬೆಂಕಿಯಿಂದ ದಟ್ಟ ಹೊಗೆ ಆವರಿಸಿದ್ದು ವಿಜಯಪುರ, ಇಂಡಿ ಹಾಗೂ ಮಹಾರಾಷ್ಟ್ರದ ಅಕ್ಕಲಕೋಟ ಪಟ್ಟಣ ಸೇರಿದಂತೆ ಇತರೆಡೆ ಸಂಪರ್ಕ ಕಲ್ಪಿಸಿರೋ ರಸ್ತೆಯಲ್ಲಿ ಸಂಚಾರ ಮಾಡದಷ್ಟು ಹೊಗೆ ಆವರಿಸಿದೆ. ನಿತ್ಯ ಸಾವಿರಾರು ವಾಹನಗಳು ವಾಹನ ಸವಾರರು ಬೈಕ್ ಸವಾರರು ಕಷ್ಟಪಟ್ಟು ಇಲ್ಲಿ ವಾಹನ ಚಾಲನೆ ಮಾಡಬೇಕಿದೆ. ಮೂಗಿಗೆ ಮಾಸ್ಕ್ ಹಾಕಿಕೊಂಡು ವಾಹನ ಓಡಿಸೋದು ಇಲ್ಲಿ ಮಾಮೂಲಾಗಿದೆ. ದಟ್ಟ ಹೊಗೆಯ ಕಾರಣದಿಂದ ಅಪಘಾತಗಳು ಆಗುತ್ತಿದ್ದು, ಅನೇಕ ಜನರು ಗಾಯಗೊಂಡು ಆಸ್ಪತ್ರೆ ಪಾಲಾಗಿದ್ದಾರೆ.
ಕಸದ ರಾಶಿ ಸಂಗ್ರಹಕ್ಕೆ ಹೊತ್ತಿರೋ ಬೆಂಕಿಗೆ ನೀರು ಸಿಂಪರಣೆ ಮಾಡಲಾಗಿದ್ದರೂ ಒಳಗಿನ ಬೆಂಕಿ ಆರಿಲ್ಲ. ಬದಲಾಗಿ ದಟ್ಟ ಹೊಗೆಗೆ ಕಾರಣವಾಗಿದೆ. ಈ ಕಾರಣದಿಂದ ಮಿಥೇನ್ ಉತ್ಪಾದನೆ ಆಗುತ್ತಿದ್ದು ಜನರ ಆರೋಗ್ಯಕ್ಕೆ ಬಾಧಕವಾಗಿದೆ. ಮಿಥೇನ್ ಒಂದು ರೀತಿಯಲ್ಲಿ ಭಾರಿ ವಿಷ ಅನಿಲ ಅಲ್ಲಾದರೂ ಅದು ಆಮ್ಲಜನಕದ ಪ್ರಮಾಣ ಕಡಿಮೆಗೊಳಿಸಿ ಉಸಿರಾಟ ನಿಲ್ಲಿಸುವ ಕೆಲಸ ಮಾಡುತ್ತದೆ. ತಾಪಮಾನವನ್ನು ಹೆಚ್ಚಿಸುತ್ತದೆ. ಇದು ರಸ್ತೆಯಲ್ಲಿ ಸಂಚಾರ ಮಾಡುವ ರಸ್ತೆ, ಕೈಗಾರಿಕೆ ಪ್ರದೇಶ, ಕಿರಾಣಿ ಮಾರುಕಟ್ಟೆ, ಸುತ್ತಮುತ್ತಲ ವಾಸಿಗಳ ಹಾಗೂ ನಗರ ವಾಸಿಗಳ ಆರೋಗ್ಯದಲ್ಲಿ ಏರುಪೇರು ಮಾಡುತ್ತಿದೆ. ಇಲ್ಲಿನ ದಟ್ಟ ಹೊಗೆಯಿಂದ ಜನರು ಮಾತ್ರ ರೋಸಿ ಹೋಗಿದ್ಧಾರೆ. ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ.
ಸಾಮಾನ್ಯವಾಗಿ ಘನತ್ಯಾಜ್ಯ ವಿಲೇವರಿ ಹಾಗೂ ಸಂಸ್ಕರಣ ಘಟಕಗಳು ನಗರ ಪಟ್ಟಣ ಭಾಗದಿಂದ ಐದಾರು ಕಿಲೋ ಮೀಟರ್ ದೂರದಲ್ಲಿರಬೇಕು. ಆದರೆ ವಿಜಯಪುರ ನಗರಕ್ಕೆ ಹೊಂದಿಕೊಂಡಂತೆ ಕೇವಲ 2 ಕಿಲೋ ಮೀಟರ್ ದೂರದಲ್ಲಿ ಮಹಾನಗರ ಪಾಲಿಕೆಯ ಘನತ್ಯಾಜ್ಯ ಸಂಸ್ಕರಣ ಹಾಗೂ ವಿಲೇವಾರಿ ಘಟಕವಿದೆ. ಕಳೆದ 10 ವರ್ಷಗಳಿಂದ ಇಲ್ಲಿಯೇ ಕಸದ ರಾಶಿಯನ್ನು ಹಾಕಿಕೊಂಡು ಬರಲಾಗಿದೆ. ಆದರೆ ಕಸ ವಿಲೇವಾರಿ ಹಾಗೂ ಸಂಸ್ಕರಣೆ ಮಾಡದ ಕಾರಣ ಇಲ್ಲಿ 15000 ಟನ್ ಕಸ ರಾಶಿಯಾಗಿಯೇ ಬಿದ್ದಿದೆ. ಇದೀಗ ಮಿಶ್ರಣದ ಕಸದಿಂದ ಮಿಥೇನ್ ಉತ್ಪಾದನೆಯಾಗುತ್ತಿದ್ದು ಯಾವುದೂ ಹತೋಟಿಗೆ ಬರುತ್ತಿಲ್ಲ. ಪಾಲಿಕೆಯ ಆಧಿಕಾರಿಗಳೂ ಸಹ ನಿರ್ಲಕ್ಷ್ಯ ಮಾಡುತ್ತಿರೋದು ಸಮಸ್ಯೆ ಮತ್ತಷ್ಟು ಉಲ್ಬಣವಾಗುವಂತಾಗಿದೆ. ಈ ಕಾರಣದಿಂದ ನಗರದ ಜನರು ಘನತ್ಯಾಜ್ಯ ಸಂಸ್ಕರಣ ಹಾಗೂ ವಿಲೇವಾರಿ ಘಟಕ ಇಲ್ಲಿಂದ ಸ್ಥಳಾಂತರವಾಗಬೇಕೆಂದು ಜನ ಪಟ್ಟು ಹಿಡಿದ್ದಾರೆ. ಈ ನಿಟ್ಟಿನಲ್ಲಿ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಅವರು ಘನತ್ಯಾಜ್ಯ ಸಂಸ್ಕರಣ ಹಾಗೂ ವಿಲೇವಾರಿ ಘಟಕವನ್ನು ಇಲ್ಲಿಂದ ದೂರದಲ್ಲಿ ಸ್ಥಳಾಂತರ ಮಾಡಬೇಕೆಂದು ಒತ್ತಾಯ ಮಾಡಿದ್ದಾರೆ.
ಇದನ್ನೂ ಓದಿ: ಸಕ್ಕರೆ ಕಾರ್ಖಾನೆ ಬಂದ್ ಆದೇಶಕ್ಕೆ ಹೈಕೋರ್ಟ್ ತಡೆ; ಸತ್ಯಕ್ಕೆ ಜಯ ಎಂದ ಯತ್ನಾಳ್
ಈ ವಿಚಾರದ ಕುರಿತು ಟಿವಿ9 ಜೊತೆಗೆ ಮಾತನಾಡಿದ ಮಹಾನಗರ ಪಾಲಿಕೆಯ ಆಯುಕ್ತ ಬದ್ರುದ್ದೀನ್ ಸೌದಾಗರ, ಮಹಾನಗರ ಪಾಲಿಕೆಯ ಘನತ್ಯಾಜ್ಯ ಸಂಸ್ಕರಣ ಹಾಗೂ ವಿಲೇವಾರಿ ಘಟಕದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಈ ಘಕಟದ ಪಕ್ಕದಲ್ಲಿರೋ ಇಂಡಿಯನ್ ಮೆಡಿಕಲ್ ಅಸೋಷಿಯೇಷನ್ ಅವರ ಬಯೋ ಮೆಡಿಕಲ್ ವೇಸ್ಟ್ ನಿಂದ ಬೆಂಕಿ ಕಿಡಿ ಹಾರಿ ಬಿದ್ದು ಇಲ್ಲಿ ಬೆಂಕಿ ಹೊತ್ತಿದೆ. ಕಸದ ರಾಶಿ ಬಹಳ ವರ್ಷಗಳಿಂದ ಇಲ್ಲಿ ಸಂಗ್ರಹವಾಗಿದ್ದೇ ಸಮಸ್ಯೆಗೆ ಕಾರಣವಾಗಿದೆ. ಬೆಂಕಿಯನ್ನು ನಂದಿಸಲು ಹಾಕಿದ್ದ ನೀರು ಹಾಗೂ ಮಿಶ್ರಕಸದ ಕಾರಣ ಮಿಥೇನ್ ಉತ್ಪಾದನೆಯಾಗುತ್ತಿದೆ. ಇದನ್ನು ನಂದಿಸಲಾಗುತ್ತದೆ. ಈಗಗಾಲೇ ಈ ಘಟಕದಲ್ಲಿ ಟ್ರಾಬೆಲ್ ಯಂತ್ರ ಹಾಕಲಾಗಿದ್ದು ಮುಂದಿನ 15 ದಿನಗಳಲ್ಲಿ ನಿತ್ಯದ ಕಸವನ್ನು ಪ್ರತ್ಯೇಕಿಸಿ ವಿಲೇವಾರಿ ಮಾಡುವ ಕೆಲಸ ಆರಂಭಿಸಲಾಗುತ್ತದೆ. ಇದರಿಂದ ಭವಿಷ್ಯದಲ್ಲಿ ಸಮಸ್ಯೆಯಾಗಲ್ಲಾ ಎಂದು ಸಮಜಾಯಿಸಿ ನೀಡಿದ್ದಾರೆ.
ಸದ್ಯ ಹೊಗೆಯ ಕಾಟ ಹಾಗೇ ಮುಂದುರೆದಿದೆ. ಮೇಲಿಂದ ಎಷ್ಟೇ ನೀರು ಹಾಕಿದರೂ ಹೊಗೆಯನ್ನು ತಡೆಯಲಾಗುತ್ತಿಲ್ಲ. ಇಡೀ ಕಸದ ರಾಶಿಯನ್ನು ಅಗೆದು ತೆಗೆದು ನೀರು ಹಾಕಬೇಕು. ಇಲ್ಲವೇ ವೈಜ್ಞಾನಿಕವಾಗಿ ಕಾರ್ಯಾಚರಣೆ ಮಾಡಬೇಕಿದೆ. ಆದರೆ ಮಿಥೇನ್ ಅನಿಲ ಮಾತ್ರ ಎಡೆ ಬಿಡದೇ ಆವರಿಸುತ್ತಿದ್ದು ಸಮಸ್ಯೆಗೆ ಮೂಲ ಕಾರಣವಾಗುತ್ತಿದೆ. ಇಡೀ ವಾತಾವರಣದಲ್ಲಿ ಮಿಥೇನ್ ಸೇರಿಕೊಂಡು ಜನರ ಉಸಿರಾಟದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ವಿವಿಧ ಖಾಯಿಲೆಗಳಿಗೆ ಇದು ಕಾರಣವಾಗುತ್ತಿದೆ. ವಾತಾವರಣದ ತಾಪಮಾನವನ್ನೂ ಏರಿಸುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ