ಸಕ್ಕರೆ ಕಾರ್ಖಾನೆ ಬಂದ್​ ಆದೇಶಕ್ಕೆ ಹೈಕೋರ್ಟ್ ತಡೆ; ಸತ್ಯಕ್ಕೆ ಜಯ ಎಂದ ಯತ್ನಾಳ್

| Updated By: Rakesh Nayak Manchi

Updated on: Jan 29, 2024 | 5:17 PM

ವಾಯು, ಜಲ ಕಾಯ್ದೆ ಉಲ್ಲಂಘನೆ ಆರೋಪ ಹಿ‌ನ್ನಲೆ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಚಿಮ್ಮಾಯಿದಲಾಯಿ ಗ್ರಾಮದ ಬಳಿ ಇರುವ ಯತ್ನಾಳ್ ಒಡೆತನದ ಸಿದ್ದ ಶ್ರೀ ಸಕ್ಕರೆ ಕಾರ್ಖಾನೆ ಬಂದ್​ಗೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ ಹೊರಡಿಸಿತ್ತು. ಈ ಆದೇಶ ಪ್ರಶ್ನಿಸಿ ಬಿಜೆಪಿ ಶಾಸಕ ಯತ್ನಾಳ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ, ಆದೇಶಕ್ಕೆ ತಡೆ ನೀಡಲಾಗಿದೆ.

ಸಕ್ಕರೆ ಕಾರ್ಖಾನೆ ಬಂದ್​ ಆದೇಶಕ್ಕೆ ಹೈಕೋರ್ಟ್ ತಡೆ; ಸತ್ಯಕ್ಕೆ ಜಯ ಎಂದ ಯತ್ನಾಳ್
ಸಕ್ಕರೆ ಕಾರ್ಖಾನೆ ಬಂದ್​ ಆದೇಶಕ್ಕೆ ಹೈಕೋರ್ಟ್ ತಡೆ; ಸತ್ಯಕ್ಕೆ ಜಯ ಎಂದ
Follow us on

ಕಲಬುರಗಿ, ಜ.29: ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಒಡೆತನದ ಸಕ್ಕರೆ ಕಾರ್ಖಾನೆ ಬಂದ್​ಗೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ (High Court) ತಡೆ ನೀಡಿದೆ. ವಾಯು, ಜಲ ಕಾಯ್ದೆ ಉಲ್ಲಂಘನೆ ಆರೋಪ ಹಿ‌ನ್ನಲೆ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಚಿಮ್ಮಾಯಿದಲಾಯಿ ಗ್ರಾಮದ ಬಳಿ ಇರುವ ಯತ್ನಾಳ್ ಒಡೆತನದ ಸಿದ್ದ ಶ್ರೀ ಸಕ್ಕರೆ ಕಾರ್ಖಾನೆ (Sugar Factory) ಬಂದ್​ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಇತ್ತೀಚೆಗೆ ಆದೇಶಿಸಿತ್ತು.

ಸದ್ಯ, ಮಂಡಳಿ ಆದೇಶಕ್ಕೆ ಹೈಕೋರ್ಟ್​ನಿಂದ ತಡೆ ಸಿಕ್ಕಿರುವ ಹಿನ್ನೆಲೆ ಎಕ್ಸ್​ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ ಯತ್ನಾಳ್, ಸತ್ಯ ಮೇವ ಜಯತೆ ಎಂದು ಹೇಳಿದ್ದಾರೆ. ಅಲ್ಲದೆ, ಸರ್ಕಾರದ ಷಡ್ಯಂತ್ರಕ್ಕೆ ಹೈಕೋರ್ಟ್ ತಡೆ ನೀಡಿದೆ ಎಂದಿದ್ದಾರೆ.

“ಕಾಂಗ್ರೆಸ್ ಸರ್ಕಾರ ನಮ್ಮ ಸಿದ್ದಸಿರಿ ಸಕ್ಕರೆ ಹಾಗು ಎಥನಾಲ್ ಕಾರ್ಖಾನೆ ಮುಚ್ಚಲು ನೀಡಿದ್ದ ನೋಟಿಸ್ ಹಾಗು ಮುಚ್ಚುವ ಷಡ್ಯಂತ್ರಕ್ಕೆ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ ತಡೆ ನೀಡಿದೆ” ಎಂದು ಯತ್ನಾಳ್ ಹೇಳಿದ್ದಾರೆ.

ಪರಿಸರ ನಿಯಮ ಉಲ್ಲಂಘನೆ ಆರೋಪದಡಿ ಯತ್ನಾಳ್ ಒಡೆತನದ ಸಕ್ಕರೆ ಕಾರ್ಖಾನೆ ಮುಚ್ಚಲು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶಿಸಿತ್ತು. ಈ ಕುರಿತು ಯತ್ನಾಳ್ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ಹರಿ ಹಾಯ್ದಿದ್ದರು. ಯತ್ನಾಳ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದ ಕೈಗಾರಿಕೆ ಸಚಿವ ಎಂಬಿ ಪಾಟೀಲ್, ಕಾನೂನು ಪ್ರಕಾರ ಸರ್ಕಾರ ಕ್ರಮ ತೆಗೆದುಕೊಂಡಿರುತ್ತದೆ. ಒಂದು ವೇಳೆ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ನೋಟಿಸ್ ಸರಿ ಇಲ್ಲದಿದ್ದರೆ ನ್ಯಾಯಲಯದ ಮೊರೆ ಹೋಗಲಿ ಎಂದು ಸಲಹೆ ನೀಡಿದ್ದರು.

ಇದನ್ನೂ ಓದಿ: ಕೈಲಾಗದವರ ಕೊನೆಯ ಅಸ್ತ್ರವೇ ಅಪಪ್ರಚಾರ; ಸಕ್ಕರೆ ಕಾರ್ಖಾನೆ ನೋಟಿಸ್​ಗೆ ಸರ್ಕಾರದ ವಿರುದ್ಧ ಯತ್ನಾಳ್ ಕಿಡಿ

ಅಲ್ಲದೆ, ಕಾರ್ಖಾನೆ ತಡೆ ಆದೇಶದ ಹಿಂದೆ ಬಿಜೆಪಿ ಕೈವಾಡ ಇದೆ ಎಂದು ಎಂಬಿ ಪಾಟೀಲ್ ಹೇಳಿದ್ದರು. ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ನಮ್ಮವರಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗ ನೇಮಕ ಮಾಡಿದ್ದು. ಕಾರಣ ಯತ್ನಾಳ್​ ಕಾರ್ಖಾನೆ ವಿಚಾರದಲ್ಲಿ ಕಾಂಗ್ರೆಸ್ ರಾಜಕಾರಣವಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:14 pm, Mon, 29 January 24