ದ್ರಾಕ್ಷಿ ತವರು ವಿಜಯಪುರ ಜಿಲ್ಲೆಯಲ್ಲಿ ಕೇಳುವವರಿಲ್ಲ ಬೆಳೆಗಾರರ ಸಮಸ್ಯೆ: ಸಿಹಿಯಾಗಬೇಕಿದ್ದ ದ್ರಾಕ್ಷಿ ಕಹಿ ಆಯ್ತು

|

Updated on: Apr 02, 2023 | 9:20 PM

ಹಸಿ ದ್ರಾಕ್ಷಿ ಬೆಳೆಗಾರರ ಪಾಡು ಇದಾದರೆ, ಒಣ ದ್ರಾಕ್ಷಿ ಮಾಡುವ ಬೆಳೆಗಾರರಿಗೂ ಹತ್ತಾರು ಸಮಸ್ಯೆಗಳು ಕಾಡುತ್ತಿವೆ. ಕಾರಣ ಈ ಬಾರಿ ಒಣ ದ್ರಾಕ್ಷಿ ಮಾಡಲು ಪರದಾಡುವಂತಾಗಿದೆ.

ದ್ರಾಕ್ಷಿ ತವರು ವಿಜಯಪುರ ಜಿಲ್ಲೆಯಲ್ಲಿ ಕೇಳುವವರಿಲ್ಲ ಬೆಳೆಗಾರರ ಸಮಸ್ಯೆ: ಸಿಹಿಯಾಗಬೇಕಿದ್ದ ದ್ರಾಕ್ಷಿ ಕಹಿ ಆಯ್ತು
ದ್ರಾಕ್ಷಿ ಬೆಳೆಗಾರರು
Follow us on

ವಿಜಯಪುರ: ಜಿಲ್ಲೆಯನ್ನು ದ್ರಾಕ್ಷಿ (Grapes) ತವರು ಎಂದು ಕರೆಯಲಾಗುತ್ತಿದೆ. ಇಲ್ಲಿ ಬೆಳೆಯುವ (growers) ದ್ರಾಕ್ಷಿ ಉತ್ತಮ ಗುಣಮಟ್ಟವನ್ನು ಹೊಂದಿರುವ ಕಾರಣ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿಯೂ ಇಲ್ಲಿನ ದ್ರಾಕ್ಷಿಗೆ ಬೇಡಿಕೆಯಿದೆ. ಆದರೆ ಇತ್ತೀಚಿನ ಮೂರು ವರ್ಷಗಳಿಂದ ದ್ರಾಕ್ಷಿ ಬೆಳೆಗಾರರು ಒದ್ದಾಡುವಂತಾಗಿದೆ. ಸರಿಯಾದ ದರ, ಕೋಲ್ಡ್ ಸ್ಟೋರೇಜ್ ಹಾಗೂ ಇತರೆ ಸಮಸ್ಯೆಗಳು ಇರುವ ಕಾರಣ ದ್ರಾಕ್ಷಿ ಲಾಭದಾಯಕವಾಗುತ್ತಿಲ್ಲ. ಸಾಮಾನ್ಯವಾಗಿ ಒಂದು ಎಕರೆ ದ್ರಾಕ್ಷಿ ಬೆಳೆಯಲು 2 ರಿಂದ 3 ಲಕ್ಷ ರೂಪಾಯಿ ಖರ್ಚಿದೆ. ಉತ್ತಮ ದರ ಮಾರುಕಟ್ಟೆಯಲ್ಲಿ ಒಳ್ಳೆಯ ಬೇಡಿಕೆ ಬಂದರೆ ಮಾತ್ರ ಲಾಭ ಎನ್ನುವಂತಾಗಿದೆ. ಆದರೆ ಈ ಬಾರಿ ಜಿಲ್ಲೆಯಲ್ಲಿ ದ್ರಾಕ್ಷಿಯ ಉತ್ತಮ ಫಸಲು ಬಂದಿದೆ. ಒಳ್ಳೆಯ ದರ ಬರುತ್ತದೆ ಉತ್ತಮ ಲಾಭವಾಗುತ್ತದೆ ಎಂದು ಕನಸು ಕಂಡಿದ್ದ ಬೆಳೆಗಾರರು ಇದೀಗ ಕಣ್ಣೀರು ಹಾಕುವಂತಾಗಿದೆ. ಕಾರಣ ಹಸಿ ದ್ರಾಕ್ಷಿ ಮಾರಾಟವಾಗುತ್ತಿಲ್ಲ.

ಒಂದು ಕೆಜಿ ಹಸಿ ದ್ರಾಕ್ಷಿ 20 ರಿಂದ 30 ರೂಪಾಯಿಗೆ ಮಾತ್ರ ಖರೀದಿದಾರರು ಕೇಳುತ್ತಿದ್ದಾರೆ. ಅಷ್ಟೆಕ್ಕೆ ಕೊಟ್ಟರೂ ಸಹ ಜಮೀನಿನಲ್ಲಿರುವ ಉತ್ತಮ ಗೊಂಚಲುಗಳನ್ನು ಮಾತ್ರ ಒಯ್ಯುತ್ತಾರೆ. ಇನ್ನುಳಿದ ದ್ರಾಕ್ಷಿಯನ್ನು ಒಯ್ಯುತ್ತಿಲ್ಲ. ಇದರಿಂದ ಒಟ್ಟು ಬೆಳೆಯಲ್ಲಿ ಶೇಕಡಾ 50 ರಷ್ಟು ಫಸಲು ಉಳಿದು ಹಾಳಾಗುತ್ತದೆ. ಇನ್ನು ಕೂಲಿಯ ಖರ್ಚು ಸಹ ತೀವ್ರವಾಗಿ ಹೆಚ್ಚಳವಾಗಿದೆ ಎಂದು ಹಸಿ ದ್ರಾಕ್ಷಿ ಮಾರಾಟವಾಗದ್ದರ ಬಗ್ಗೆ ದ್ರಾಕ್ಷಿ ಬೆಳೆಗಾರರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಇಸ್ರೋದ ಆರ್‌ಎಲ್‌ವಿ-ಟಿಡಿ ಕಾರ್ಯಾಚರಣೆ: ಭವಿಷ್ಯದ ಬಾಹ್ಯಾಕಾಶ ಪ್ರವಾಸಕ್ಕೆ ಮುನ್ನುಡಿಯೇ?

ಹಸಿ ದ್ರಾಕ್ಷಿ ಬೆಳೆಗಾರರ ಪಾಡು ಇದಾದರೆ, ಒಣ ದ್ರಾಕ್ಷಿ ಮಾಡುವ ಬೆಳೆಗಾರರಿಗೂ ಹತ್ತಾರು ಸಮಸ್ಯೆಗಳು ಕಾಡುತ್ತಿವೆ. ಕಾರಣ ಈ ಬಾರಿ ಒಣ ದ್ರಾಕ್ಷಿ ಮಾಡಲು ಪರದಾಡುವಂತಾಗಿದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಪ್ರಮಾಣದಲ್ಲಿ ದ್ರಾಕ್ಷಿ ಬೆಳೆಯಲಾಗಿದೆ. ಕಳೆದ ಮೂರು ವರ್ಷಗಳ ಪ್ರಮಾಣವನ್ನು ನೋಡಲಾಗಿದೆ. ಪ್ರತಿ ವರ್ಷ 2 ರಿಂದ 3 ಸಾವಿರ ಹೆಕ್ಟೇರ್ ಪ್ರಮಾಣದಲ್ಲಿ ದ್ರಾಕ್ಷಿ ಬೆಳೆ ಹೆಚ್ಚಳವಾಗಿದೆ. 2020 ರಲ್ಲಿ 17000 ಹೆಕ್ಟೇರ್, 2021 ರಲ್ಲಿ 21000 ಹೆಕ್ಟೇರ್ 2022 ರಲ್ಲಿ 25000 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗಿದೆ.

ವರ್ಷದಿಂದ ವರ್ಷಕ್ಕೆ ದ್ರಾಕ್ಷಿ ಪ್ರದೇಶ ಹೆಚ್ಚಳವೂ ತೀವ್ರ ಪರಿಣಾಮ ಬೀರುತ್ತಿದೆ. ಇದು ಹಸಿ ದ್ರಾಕ್ಷಿ ಹಾಗೂ ಒಣ ದ್ರಾಕ್ಷಿ ಬೆಳೆಗಾರರಿಗೆ ಸಮಸ್ಯೆಯಾಗುತ್ತಿದೆ. ಸದ್ಯ ಹಸಿ ದ್ರಾಕ್ಷಿಯ ಬದಲಾಗಿ ಒಣ ದ್ರಾಕ್ಷಿ ಮಾಡಲು ಬೆಳೆಗಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಹಸಿ ದ್ರಾಕ್ಷಿಯನ್ನ ಒಣ ದ್ರಾಕ್ಷಿ ಮಾಡಲು ಸಹ ಹೆಚ್ಚಿನ ಖರ್ಚು ಮಾಡಬೇಕು. ಒಣ ದ್ರಾಕ್ಷಿ ಮಾಡಲು 25 ದಿನಗಳ ಕಾಲ ಸಂಸ್ಕರಣೆ ಮಾಡಬೇಕಿದೆ. ಹೀಗೆ ಸಂಸ್ಕರಣೆ ಮಾಡಲು ರ್ಯಾಕ್ ಗಳ ಕೊರತೆ ಇದೀಗ ಕಾಡುತ್ತಿದೆ.

ಇದನ್ನೂ ಓದಿ: ರಾಜ್ಯ ರಾಜಕಾರಣದ ಬಗ್ಗೆ ಸದಾಶಿವ ಮುತ್ಯಾನ ಸ್ಫೋಟಕ ಭವಿಷ್ಯ, ಕಾಲಜ್ಞಾನದ ಹೇಳಿಕೆ ಇಲ್ಲಿದೆ ನೋಡಿ

ತುರ್ತಾಗಿ ಕಟಾವಿದೆ ಬಂದಿರುವ ದ್ರಾಕ್ಷಿಗಳನ್ನು ಸಂಸ್ಕರಣೆ ಮಾಡಲು ರ್ಯಾಕ್​ಗಳು ಸಿಗುತ್ತಿಲ್ಲ. ಈ ಬಾರಿ ಹವಾಮಾನ ವೈಪರಿತ್ಯತದ ಕಾರಣ ಒಣ ದ್ರಾಕ್ಷಿ ಮಾಡುವ ಸಮಯದಲ್ಲಿ ಬದಲಾವಣೆಯಾಗಿ ಸರಿಯಾಗಿ ಶುಗರ್ ಕಂಟೇಂಟ್ ಬಿಡದ ಕಾರಣ ಸಮಯ ವ್ಯತಿರಿಕ್ತವಾಗಿರುವ ಕಾರಣ ರ್ಯಾಕ್​ಗಳ ಕೊರತೆಯಾಗಿದೆ. ಸದ್ಯ ರ್ಯಾಕ್​ನಲ್ಲಿ ಸಂಸ್ಕರಣೆ ಮಾಡಲು ಹಾಕದಿದ್ದರೆ ಕಟಾವಿಗೆ ಬಂದ ದ್ರಾಕ್ಷಿ ಬಳ್ಳಿಯಲ್ಲಿಯೇ ಹಾಳಾಗುತ್ತಿದೆ. ಹೀಗಾಗಿ ಉತ್ತಮ ಫಸಲು ಬಂದರೂ ಸಹ ಹಸಿ ಹಾಗೂ ಒಣ ದ್ರಾಕ್ಷಿ ಬೆಳೆಗಾರರಿಗೆ ಕಣ್ಣೀರು ತರಿಸುತ್ತಿದೆ.

ಇದು ಇಲ್ಲಿಯ ಸಮಸ್ಯೆಯಾದರೆ ಇದರಾಚೆ ಮಹಾರಾಷ್ಟ್ರದಲ್ಲಿಯೂ ದ್ರಾಕ್ಷಿ ಬೆಳೆಯುವ ಪ್ರದೇಶ ಹೆಚ್ಚಾಗಿದೆ. ಇಷ್ಟು ದಿನಗಳ ಕಾಲ ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಹೆಚ್ಚು ಬೆಳೆಯುತ್ತಿದ್ದ ದ್ರಾಕ್ಷಿ ಬೆಳೆ ತಮಿಳುನಾಡು, ಕೇರಳ, ಆಂದ್ರಪ್ರದೇಶದಲ್ಲಿಯೂ ಬೆಳೆಯುತ್ತಿರುವ ಕಾರಣ ಬೇಡಿಕೆಯ ಪ್ರಮಾಣ ತೀವ್ರವಾಗಿ ಕುಸಿದಿದೆ. ಒಂದೆಡೆ ಬೇಡಿಕೆ ಕಡಿಮೆಯಾಗಿ ಉತ್ಪಾದನೆ ಹೆಚ್ಚಳವಾಗಿದ್ದು ಇದರ ಜೊತೆಗೆ ಹವಾಮಾನ ವೈಪರಿತ್ಯವು ದ್ರಾಕ್ಷಿಗೆ ಕಂಟಕವಾಗಿದೆ

ವರದಿ: ಅಶೋಕ ಯಡಳ್ಳಿ, ಟಿವಿ9 ವಿಜಯಪುರ 

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:20 pm, Sun, 2 April 23