ವಿಜಯಪುರ: ಇಡೀ ಮನುಷ್ಯ ಸಂಕುಲ ಕೊರೊನಾದಿಂದ ಜರ್ಜರಿತವಾಗಿದೆ. ಎಲ್ಲೆಡೆ ಲಾಕ್ಡೌನ್ ಘೋಷಣೆಯಾಗಿ ಇದೀಗಾ ಸ್ವಲ್ಪ ಮಟ್ಟಿಗೆ ಸಡಲಿಕೆ ಆಗಿದೆ. ಎಲ್ಲರೂ ಮನೆಯಿಂದ ಆಚೆಬಾರದೇ ಜೀವ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಇಂಥದ್ದರಲ್ಲಿ ವಿಜಯಪುರ ನಗರದೊಲ್ಲೊಬ್ಬ ಮನೆಗಳ್ಳ ಖದೀಮ ರೋಹಿತ್ ಕಾಯಗೊಂಡ ಅಂದರ್ ಆಗಿದ್ದಾನೆ.
ಖದೀಮನ ಬಂಧನಕ್ಕೆ ವಿಶೇಷ ತಂಡ:
ಲಾಕ್ಡೌನ್ ಸಮಯದಲ್ಲಿ ಎಲ್ಲರೂ ಮನೆಯಲ್ಲಿದ್ದರೂ ಸಹ ರೋಹಿತ್ ಕಾಯಗೊಂಡ ಕೆಲ ಬೀಗ ಹಾಕಿದ್ದ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದ. ಕೆಲ ಮನೆಗಳಲ್ಲಿ ಒಂಟಿಯಾಗಿ ವಾಸಿಸುವವರ ಮನೆಗಳನ್ನೂ ಈತ ಲಿಸ್ಟ್ ಮಾಡುತ್ತಿದ್ದ. ಮನೆಯವರು ಆಚೆ ಹೋದ ಕೂಡಲೇ ತನ್ನ ಕೈಚಳಕ ಮಾಡುತ್ತಿದ್ದ. ಮನೆಯಲ್ಲಿ ಸಿಕ್ಕ ನಗ ನಾಣ್ಯ ಕದ್ದು ಎಸ್ಕೇಪ್ ಆಗುತ್ತಿದ್ದ. ಕೊರೊನಾ ಹಾವಳಿ ಮಧ್ಯೆಯೂ ಪೊಲೀಸರಿಗೆ ನಗರದಲ್ಲಿ ಮನೆಗಳ ಕಳ್ಳತನ ಆಗೋದು ತಲೆ ನೋವಾಗಿತ್ತು. ಈ ದಿಸೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮಾ, ಮನೆಗಳ್ಳತನ ಮಾಡುತ್ತಿದ್ದವರ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಿದ್ದರು.
ನಿನ್ನೆ ಸಾಯಂಕಾಲ ತನಿಖಾ ತಂಡದ ಕಣ್ಣಿಗೆ ಬಿದ್ದಿದ್ದೇ ಈ ಖದೀಮ ರೋಹಿತ್. ನಗರದ ಸರಾಫ್ ಬಜಾರಿನಲ್ಲಿ ಸಂಶಯಾಸ್ಪದವಾಗಿ ಓಡಾಡುತ್ತಿದ ಈತನನ್ನು ಹಿಡಿದು ವಿಚಾರಣೆ ನಡೆಸಿದ್ದಾರೆ. ಆರಂಭದಲ್ಲಿ ನಾನವನಲ್ಲಾ.. ನಾನವನಲ್ಲಾ.. ಎಂದು ಬಡಾಯಿ ಕೊಚ್ಚಿದ್ದನಂತೆ. ಈತನ ವರ್ತನೆ ಕಂಡು ಸಂಶಯ ಹೊಂದಿದ್ದ ಖಾಕಿ ಪಡೆ ತಮ್ಮದೇ ಶೈಲಿಯಲ್ಲಿ ಬಾಯಿ ಬಿಡಿಸಿದ್ದಾರೆ. ತಾನು ಮನೆ ಕಳ್ಳತನ ಮಾಡುತ್ತಿದ್ದ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಮನೆಗಳ್ಳ ಮೂಲತಃ ನಗರದ ಹೊರಭಾಗದ ಗಾಂಧಿನಗರದ ಮೂಲ ವಾಸಿ. ಸದ್ಯ ನಗರದ ಗ್ಯಾಂಗ್ ಬಾವಡಿ ಪ್ರದೇಶದಲ್ಲಿ ವಾಸವಿದ್ದಾನೆ. ಮನೆಗಳ್ಳತನ ಮಾಡಿ ಜೀವನ ಮಾಡುತ್ತಿದ್ದಾನಂತೆ.
ಆರೋಪಿ ನ್ಯಾಯಾಂಗ ಬಂಧನಕ್ಕೆ:
ಮನೆಗಳ್ಳ ರೋಹಿತ್ನನ್ನು ಬಂಧಿಸಿರುವ ಪೊಲೀಸರು ಈತನಿಂದ ಬರೋಬ್ಬರಿ 108 ಗ್ರಾಂ ಚಿನ್ನದ ಆಭರಣ ಹಾಗೂ 410 ಗ್ರಾಂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಮೌಲ್ಯ 3,24,900 ಎಂದು ಪೊಲೀಸರು ಅಂದಾಜು ಮಾಡಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.
Published On - 1:59 pm, Fri, 22 May 20