ಯಶೋಗಾಥೆ: ಬಂಜರು ಭೂಮಿಯಲ್ಲಿ ಸೀತಾಫಲ ಬೆಳೆದು ಗೆದ್ದ ನಿವೃತ್ತ ಶಿಕ್ಷಕ, ಮಹತ್ತರ ಸಾಧನೆಗೆ ಮೆಚ್ಚುಗೆಯ ಮಹಾಪೂರ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 03, 2022 | 6:22 AM

Kashiraya gowda biradar: ಸವಳು ಜವಳು ಹಾಗೂ ಬರಡು ಭೂಮಿಯಿದ್ದರೆ ಅಲ್ಲಿ ಏನೂ ಬೆಳೆಯದೇ ಹಾಗೇ ಬಿಡೋದು ಇಲ್ಲಿಯ ರೈತರ ಚಾಳಿಯಾಗಿದೆ. ಆದರೆ ನಿವೃತ್ತ ಶಿಕ್ಷಕ ಕಾಶಿರಾಯಗೌಡರು ಬರಡು ಭೂಮಿಯನ್ನು ಫಲವತ್ತಾದ ಭೂಮಿಯನ್ನಾಗಿ ಮಾಡಿ, ಬರಡು ಭೂಮಿಯಲ್ಲಿ ಒಂದು ಸಾವಿರ ಸೀತಾಫಲ ಗಿಡ ಬೆಳೆದಿದ್ದಾರೆ.

ಯಶೋಗಾಥೆ: ಬಂಜರು ಭೂಮಿಯಲ್ಲಿ ಸೀತಾಫಲ ಬೆಳೆದು ಗೆದ್ದ ನಿವೃತ್ತ ಶಿಕ್ಷಕ, ಮಹತ್ತರ ಸಾಧನೆಗೆ ಮೆಚ್ಚುಗೆಯ ಮಹಾಪೂರ
ಯಶೋಗಾಥೆ: ಏನೂ ಬೆಳೆಯದ ಬಂಜರು ಭೂಮಿಯಲ್ಲಿ ನಿವೃತ್ತ ಶಿಕ್ಷಕ ಏನು ಬೆಳೆದಿದ್ದಾರೆ? ಲಾಭ ಎಷ್ಟು ಮಾಡಿದ್ದಾರೆ? ಲೇಖನ ಓದಿ
Follow us on

ಇದು ನಿವೃತ್ತ ಶಿಕ್ಷಕರು (Retired Teacher) ತೋಟಗಾರಿಕೆ ಬೆಳೆಯಲ್ಲಿ (Horticulture) ಮಾಡಿರುವ ಸಾಧನೆ. ವೃತ್ತಿಯಲ್ಲಿ ಶಿಕ್ಷಕರಾಗಿದ್ದವರೂ ವಯೋ ನಿವೃತ್ತಿಯಿಂದ ಮಾದರಿ ರೈತರಾದ ಕಥೆಯಿದು. ಮನಸ್ಸಿದ್ದರೆ ಮಾರ್ಗ ಎನ್ನುವುದಕ್ಕೆ ಇವರು ಉದಾಹರಣೆಯಾಗುತ್ತಾರೆ. ಏನೂ ಬೆಳೆಯದ ಬಂಜರು ಭೂಮಿಯಲ್ಲಿ ಸಿಹಿಯಾದ ಹಣ್ಣುಗಳನ್ನು ಬೆಳೆದು ತೋರಿಸಿದ್ದಾರೆ. ಸವಳು ಜವಳು, ಮಡ್ಡಿ ಪ್ರದೇಶ ಬಂಜರು ಭೂಮಿಯಲ್ಲಿ ಏನೂ ಬೆಳೆಯಲು ಅಸಾಧ್ಯ. ಆದರೆ ಇದು ಸುಳ್ಳು, ಅಲ್ಲಿಯೂ ಬೆಳೆಗಳನ್ನು ಬೆಳೆದು ಲಾಭದಾಯಕ ಕೃಷಿ ಮಾಡಬಹುದು ಎಂಬುದನ್ನು ರುಜುವಾತು ಪಡಿಸಿದ್ದಾರೆ. ಬನ್ನಿ ಹಾಗಾದರೆ ಏನೂ ಬೆಳೆಯದ ಬಂಜರು ಭೂಮಿಯಲ್ಲಿ ನಿವೃತ್ತ ಶಿಕ್ಷಕರು ಏನು ಬೆಳೆದಿದ್ದಾರೆ? ಎಷ್ಟು ಲಾಭ ಮಾಡಿಕೊಂಡಿದ್ದಾರೆ ಎಂಬುದನ್ನ ನೋಡ್ಕೊಂಡು ಬರೋಣಾ.

(ವರದಿ: ಅಶೋಕ ಯಡಳ್ಳಿ, ಟಿವಿ 9, ವಿಜಯಪುರ)

ಬಂಜರು, ಸವಳು ಜವಳು ಭೂಮಿಯಲ್ಲಿ ಮೈದೈಳಿದ ಸೀತಾಫಲ (Custard Apple)… ಸಾಲು ಸಾಲುಗಿರೋ ಗಿಡಗಳಲ್ಲಿ ಫಸಲಿನ ರಾಶಿ… ನಿವೃತ್ತ ಶಿಕ್ಷಕರ ಸಾಧನೆಗೆ ರೈತರ ಮೆಚ್ಚುಗೆ… ಸೀತಾಫಲ ಬೆಳೆದು ಉತ್ತಮ ಆದಾಯ ಗಳಿಸಿದ ರಿಟೈರ್ಡ್ ಟೀಚರ್… ಇದನ್ನು ನಿವೃತ್ತ ಶಿಕ್ಷಕರ ಯಶೋಗಾಥೆ ಎನ್ನಬಹುದು. ಶಿಕ್ಷಕ ವೃತ್ತಿಯ ಜೊತೆಗೆ ಕೃಷಿಯನ್ನು ಪ್ರವೃತ್ತಿಯಾಗಿಸಿಕೊಂಡಿದ್ದ ಶಿಕ್ಷಕರು ನಿವೃತ್ತಿಯ ಬಳಿಕ ಮಾದರಿ ರೈತರಾಗಿದ್ದಾರೆ. ಅವರೇ ವಿಜಯಪುರ (Vijayapura) ತಾಲೂಕಿನ ಹೆಗಡಿಹಾಳ ಗ್ರಾಮದ ಕಾಶಿರಾಯಗೌಡ ಬಿರಾದಾರ್ (Kashiraya gowda biradar). 41 ವರ್ಷಗಳ ಕಾಲ ಶಿಕ್ಷಕರಾಗಿ ಕೆಲಸ ಮಾಡುತ್ತಿರುವಾಗಲೇ ಕೃಷಿಯನ್ನೂ ಮಾಡಿಕೊಂಡು ಬಂದಿದ್ದರು.

ಇದೀಗ ನಿವೃತ್ತಿಯ ಬಳಿಕ ಪೂರ್ಣ ಪ್ರಮಾಣದ ರೈತರಾಗಿದ್ದಾರೆ. ಇವರ ಪಾಲಿಗೆ ಬಂದಿದ್ದ ಜಮೀನಿನ ಪೈಕಿ ನಾಲ್ಕಾರು ಎಕರೆ ಭೂಮಿ ಬರಡು ಭೂಮಿಯಾಗಿತ್ತು. ಸವಳು ಜವಳಿನ ಕಾರಣ ಅಲ್ಲಿ ಏನೂ ಬೆಳೆಯದಂಥ ಸ್ಥಿತಿ ನಿರ್ಮಾಣವಾಗಿತ್ತು. ಜಿಲ್ಲೆಯಲ್ಲಿ ಸವಳು ಜವಳು ಹಾಗೂ ಬರಡು ಭೂಮಿಯಿದ್ದರೆ ಅಲ್ಲಿ ಏನೂ ಬೆಳೆಯದೇ ಹಾಗೇ ಬಿಡೋದು ಇಲ್ಲಿಯ ರೈತರ ಚಾಳಿಯಾಗಿದೆ. ಆದರೆ ನಿವೃತ್ತ ಶಿಕ್ಷಕ ಕಾಶಿರಾಯಗೌಡರು ಬರಡು ಭೂಮಿಯನ್ನು ಫಲವತ್ತಾದ ಭೂಮಿಯನ್ನಾಗಿ ಮಾಡಲು ಮುಂದಾಗಿ ಸಾವಯವ ಹಾಗೂ ಶೂನ್ಯ ಬಂಡವಾಳ ಪದ್ದತಿಯ ಮೂಲಕ ತಮ್ಮ ಬರಡು ಭೂಮಿಯಲ್ಲಿ ಒಂದು ಸಾವಿರ ಸೀತಾಫಲ ಸಸಿಗಳನ್ನು ಹಚ್ಚಿದ್ದರು.

ಯಾವುದೇ ರಾಸಾಯನಿಕ ರಸಗೊಬ್ಬರ ಹಾಗೂ ರಾಸಾಯನಿಕ ಔಷಧಿಗಳನ್ನು ಉಪಯೋಗ ಮಾಡದೇ ಕೇವಲ ಹಸುಗಳು ಎಮ್ಮೆಗಳ ಗಂಜಲ ಹಾಗೂ ಸಗಣಿಯನ್ನು ಕೊಳೆ ಹಾಕಿ ಅದರಿಂದ ಬರುವ ನೀರನ್ನು ಸಸಿಗಳಿಗೆ ಬಿಡುವ ಮೂಲಕ ಉತ್ತಮ ಬೆಳೆ ಬೆಳೆದರು. ಜಮೀನಿಗೆ ಸಗಣಿ ಗೊಬ್ಬರ ಮಾತ್ರ ಹಾಕಿ ಭೂಮಿಯ ಫಲವತ್ತತೆಯನ್ನು ಕ್ರಮೇಣ ಹೆಚ್ಚಿಸಿದರು. ಸಸಿಗಳನ್ನು ಹಚ್ಚಿದ ಬಳಿಕ ಎರಡು ವರ್ಷಕ್ಕೆ ಮೊದಲ ಬೆಳೆ ಬಂದಿತ್ತು. ಮೊದಲ ಬೆಳೆ ಬಂದಾಗ ಸ್ವತಃ ಕಾಶೀರಾಯಗೌಡ ಹಾಗೂ ಮನೆಯವರು ನಂಬಿರಲಿಲ್ಲಾ. ಏನೂ ಬೆಳೆಯದ ಭೂಮಿಯಲ್ಲಿ ಸೀತಾಫಲ ಬಂದಿದ್ದಕ್ಕೆ ಎಲ್ಲರೂ ಖುಷಿ ಪಟ್ಟಿದ್ದರು. ಸ್ಥಳಿಯ ಮಾರುಕಟ್ಟೆಯಲ್ಲಿ ಮೊದಲ ವರ್ಷದ ಬೆಳೆಯನ್ನು ಮಾರಾಟ ಮಾಡಿದ್ದರು.

ಕಾಶೀರಾಯಗೌಡರು ತಮ್ಮ ಬರಡು ಭೂಮಿಯಲ್ಲಿ ಸೀತಾಫಲ ಹಚ್ಚೋವಾಗ ಸಂಬಂಧಿಕರಿಂದ ಹಿಡಿದು ಗ್ರಾಮದವರು ಕುಹಕವಾಡಿದ್ದರು. ಮಕ್ಕಳಿಗೆ ಪಾಠ ಹೇಳಿದವರು ಬರಡು ಭೂಮಿಯಲ್ಲಿ ಸೀತಾಫಲ ಹಚ್ಚುತ್ತಿದ್ದಾರೆ ಎಂದು ನಕ್ಕಿದ್ದರು. ಆಗ ಮೌನವಾಗಿದ್ದ ಕಾಶೀರಾರಾಯಗೌಡರು ಮಕ್ಕಳಿಗೆ ಅಕ್ಷರ ಕಲಿಸೋದಷ್ಟೆಯಲ್ಲಾ, ಬರಡು ಭೂಮಿಯಲ್ಲೀ ಸೀತಾಫಲದ ಫಸಲು ಬೆಳೆದು ತೋರಿಸಿದ್ದಾರೆ. ಸಾಮಾನ್ಯವಾಗಿ ಸೀತಾಫಲ ಬೆಳೆಯಲು ನೀರಿನ ಅಗತ್ಯ ತೀರಾ ಕಡಿಮೆ. ಬೇಸಿಗೆ ಕಾಲದಲ್ಲಿ ಒಂದೆರಡು ತಿಂಗಳು ಮಾತ್ರ ಕಡಿಮೆ ನೀರು ಬಿಟ್ಟರೆ ಸಾಕು. ಇನ್ನುಳಿದಂತೆ ಯಾವುದೇ ರೋಗಭಾದೆ ಇದಕ್ಕಿಲ್ಲಾ. ಕಳೆ ನಿರ್ವಹಣೆ ಮಾಡಿಕೊಂಡು ಬಂದರೆ ಸಾಕು ಭರಪೂರ ಬೆಳೆ ಮಾತ್ರ ಗ್ಯಾರಂಟಿ.

ಬರಡು ಭೂಮಿಯಲ್ಲಿ ಬೆಳೆದ ಸೀತಾಫಲವನ್ನು ಇವರು ಸ್ಥಳಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದರೂ ಉತ್ತಮ ಬೆಲೆ ಸಿಕ್ಕಿರಲಿಲ್ಲ. ಇದೀಗ ಸೀತಾಫಲ ಉತ್ತಮ ಇಳುವರಿ ಬಂದಿದ್ದು ಬೆಂಗಳೂರಿನ ಮಾರುಕಟ್ಟೆಗೆ ಸೀತಾಫಲವನ್ನು ಕಳುಹಿಸುತ್ತಿದ್ದಾರೆ. ಒಂದು ಕೆಜಿಗೆ ಸರಾಸರಿ 100 ರಿಂದ 175 ರೂಪಾಯಿವರೆಗೂ ಇವರ ಸೀತಾಫಲ ಮಾರಾಟವಾಗುತ್ತಿದ್ದು, ಉತ್ತಮ ಆದಾಯ ನೀಡುತ್ತಿದೆ.

ಮೂರು ತಿಂಗಳ ಕಾಲಕ್ಕೆ ಇಳುವರಿ ಬರುತ್ತಿದ್ದು ಒಂದು ಹೆಕ್ಟೇರ್ ಪ್ರದೇಶದಿಂದ ಆರೇಳು ಲಕ್ಷ ರೂಪಾಯಿ ಆದಾಯ ಖಚಿತವಾಗಿದೆ. ಸೀತಾಫಲ ಹಚ್ಚುವ ವೇಳೆ ಇವರನ್ನು ಕಂಡು ಮೂಗು ಮುರಿದಿದ್ದವರು ಇದೀಗಾ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಇಷ್ಟರ ಮಧ್ಯ ಅನೇಕ ರೈತರು ಯುವಕರು ಸಹ ಕಾಶೀರಾಯಗೌಡರು ಬೆಳದ ಸೀತಾಫಲ ನೋಡಲು ಆಗಮಿಸಿ ಆಗತ್ಯ ಸಲಹೆ ಸೂಚನೆಗಳನ್ನು ಪಡೆದುಕೊಂಡು ಹೋಗುತ್ತಿದ್ದಾರೆ. ಇವರಂತೆ ತಾವೂ ಸಹ ಸೀತಾಫಲ ಬೆಳೆದು ಉತ್ತಮ ಲಾಭ ಹಾಗೂ ಆದಾಯ ಮಾಡಿಕೊಳ್ಳಲು ಮುಂದಾಗಿದ್ಧಾರೆ. ತಮ್ಮ ಜಮೀನಿಗೆ ಬಂದವರಿಗೆ ಅಗ್ಯ ಮಾಹಿತಿ ನೀಡಿ, ಸಲಹೆ ಸೂಚನೆ ನೀಡುತ್ತಿದ್ದಾರೆ ಕಾಶೀರಾಯಗೌಡರು.

ದೇಶದಲ್ಲಿ ಸೀತಾಫಲ ಬೆಳೆಯೋ ಒಟ್ಟು ಪ್ರದೇಶದ ಪೈಕಿ ಮಹಾರಾಷ್ಟ್ರದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಒಟ್ಟು ಸೀತಾಫಲ ಬೆಳೆಯೋ ಪ್ರದೇಶದಲ್ಲಿ 42 ಶೇಕಡಾ ಪ್ರದೇಶ ಮಹಾರಾಷ್ಟ್ರದಲ್ಲಿಯೇ ಇದೆ ಎಂಬುದು ಗಮನಿಸಬೇಕಾದ ಅಂಶ. ಇನ್ನು ವಿಜಯಪುರ ಜಿಲ್ಲೆಯಲ್ಲಿ ಹೆಚ್ಚಾಗಿ ಬರಡು ಭೂಮಿ, ಮಡ್ಡಿ ಜಮೀನು ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಯ ಕಾರಣ ಬಹಳ ಭೂಮಿ ಸವಳು ಜವಳು ಆಗಿದೆ. ಅದರಂತೆ ಭೀಮಾ ನದಿ ಹಾಗೂ ಡೋಣಿ ನದಿ ತಟದಲ್ಲೂ ಸವಳು ಜವಳು ಭೂಮಿಯಿದೆ. ಇಂಥ ಪ್ರದೇಶದಲ್ಲಿ ಜಿಲ್ಲೆಯ ರೈತರು ಸೀತಾಫಲವನ್ನು ಹಚ್ಚಿದರೆ ಉತ್ತಮ ಫಸಲು ಹಾಗೂ ಆದಾಯವನ್ನೂ ಪಡೆಯಬಹುದಾಗಿದೆ.

Published On - 6:06 am, Thu, 3 November 22