Siddeshwara Swamiji Death: ಜೀವನದ ಉಪಯುಕ್ತವಾದ ಅನುಭವಗಳನ್ನು ಆಸಕ್ತರೊಂದಿಗೆ ಹಂಚಿಕೊಳ್ಳುವುದೆ ‘ಧರ್ಮ’ ಎಂದ ಸಿದ್ದೇಶ್ವರ ಶ್ರೀಗಳ ಅಂತಿಮ ಅಭಿವಂದನ ಪತ್ರ ಇಲ್ಲಿದೆ

| Updated By: ವಿವೇಕ ಬಿರಾದಾರ

Updated on: Jan 03, 2023 | 12:16 AM

Siddeshwara Swamiji: ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಅಂತಿಮ ಅಭಿವಂದನ ಪತ್ರ

Siddeshwara Swamiji Death: ಜೀವನದ ಉಪಯುಕ್ತವಾದ ಅನುಭವಗಳನ್ನು ಆಸಕ್ತರೊಂದಿಗೆ ಹಂಚಿಕೊಳ್ಳುವುದೆ ‘ಧರ್ಮ’ ಎಂದ ಸಿದ್ದೇಶ್ವರ ಶ್ರೀಗಳ ಅಂತಿಮ ಅಭಿವಂದನ ಪತ್ರ ಇಲ್ಲಿದೆ
ಅಂತಿಮ ಅಭಿವಂದನ ಪತ್ರ
Follow us on

ಜ್ಞಾನ ಯೋಗಾಶ್ರಮದ ಜ್ಞಾನ ಜ್ಯೋತಿಯು ಶಾಂತವಾಯಿತು. ಸಿದ್ದಪುರಷ ಸಿದ್ದೇಶ್ವರ ಶ್ರೀಗಳು ಶಿವಾದೀನರಾಗಿದ್ದಾರೆ. ನಾಡು, ದೇಶ, ಅಂತರಾಷ್ಟ್ರ ಮಟ್ಟದಲ್ಲಿ ಪ್ರವಚನಗಳನ್ನು ಮಾಡಿ ಭಕ್ತರಿಗೆ ಆಶಿರ್ವದಿಸುತ್ತಿದ್ದರು. ನಡೆದಾಡುವ ದೇವರೆಂದೇ ಖ್ಯಾತರಾಗಿದ್ದರು. ಇವರು ಇಂದು (ಜ.3) ಲಿಂಗೈಕ್ಯರಾಗಿದ್ದಾರೆ. ಶ್ರೀಗಳು ದೇಹ ನಶ್ವರ ಆತ್ಮ ಒಂದೇ ಶಾಶ್ವತ, ಸರಳತೆಯಲ್ಲೇ ಜೀವನದ ಸತ್ಯವನ್ನು ಕಂಡುಕೊಂಡವರು. ಜ್ಞಾನದ ಮೂಲಕ ಜೀವ ಸಂಕಲಕ್ಕೆ ಬೆಳಕಾದವರು. ಶ್ರೀಗಳು ದೇಹ ತ್ಯಾಗಕ್ಕೂ ಮುನ್ನ ಬೆರೆದ “ಅಂತಿಮ ಅಭಿವಂದನ ಪತ್ರ” ಇಲ್ಲಿದೆ.

ಅಂತಿಮ ಅಭಿವಂದನ ಪತ್ರ

ಬದುಕು ಅನುಭವಗಳ ಪ್ರವಾಹ. ಅದರ ಸಿರಿವಂತಿಕೆಯು ವಿಶ್ವ ಚಿಂತನೆ ಹಾಗೂ ಸತ್ಯ ಶೋಧನೆಗಳಿಂದ ಅದರ ಸೌಂದರ್ಯವು ರಾಗ-ದ್ವೇಷ ರಹಿತವಾದ ಹಾಗೂ ಅಸೀಮಿತವಾದ ಸದ್ಭಾವದಿಂದ ಅದನ್ನು ಸಮೃದ್ಧಗೊಳಿಸುವುದೇ ಸಾಧನೆ. ಅಂತಹ ಜೀವನದ ಉಪಯುಕ್ತವಾದ ಅನುಭವಗಳನ್ನು ಆಸಕ್ತರೊಂದಿಗೆ ಹಂಚಿಕೊಳ್ಳುವುದೆ ‘ಧರ್ಮ’. ಅದು ಸ್ವ-ಪರ ನೆಮ್ಮದಿಗೆ ಕಾರಣ.

ನನ್ನದು ಆವೇಗವಿಲ್ಲದ, ಸಾವಧಾನದ ಸಾಮಾನ್ಯ ಬದುಕು. ಅದನ್ನು ರೂಪಿಸಿದವರು ‘ಗುರುದೇವರು’ ಅದನ್ನು ಹದುಳಿಸಿದವರು ನಾಡಿನ ಪೂಜ್ಯರು, ಹಿತೈಷಿಗಳು, ಸಹೃದಯರು, ಸಾಧಕರು ಹಾಗೂ ಶ್ರೀಸಾಮಾನ್ಯರು. ನಿಸರ್ಗವು ಮೈಮನಸ್ಸುಗಳಿಗೆ ತಂಪನಿತ್ತಿದೆ. ತಾತ್ವಿಕ ಚಿಂತನೆಗಳು ತಿಳಿಬೆಳಗ ಹರಡಿವೆ. ಜಾಗತಿಕ ತತ್ತ್ವಜ್ಞಾನಿಗಳ ಮತ್ತು ವಿಜ್ಞಾನಿಗಳ ಶೋಧನೆಗಳು ದೃಷ್ಟಿಯ ಪರಿಸೀಮೆಯನ್ನು ದೂರ ದೂರ ಸರಿಸಿವೆ. ಆದ್ದರಿಂದಲೇ ನಾನು ಎಲ್ಲರಿಗೂ, ಎಲ್ಲದಕ್ಕೂ ಉಪಕೃತ.

ಬದುಕು ಮುಗಿಯುತ್ತಿದೆ. ದೀಪ ಆರಿದಂತೆ, ತೆರೆ ಅಡಗಿದಂತೆ, ಮೇಘ ಕರಗಿದಂತೆ. ಉಳಿಯುವುದು ಬರೀ ಬಯಲು. ಮಹಾ ಮೌನ.. ಶೂನ್ಯ ಸತ್ಯ. ಹಲವು ದಶಕಗಳ ಕಾಲ ಅದ್ಭುತ ಜಗತ್ತಿನಲ್ಲಿ ಬಾಳಿದ್ದೇನೆ. ನೋಡಿ ತಿಳಿದು ಅನುಭವಿಸಿದ್ದೇನೆ. ನನ್ನ ಬದುಕು ಕೊನೆಗೊಳ್ಳುವ ಮುಂಚೆ ಅದನ್ನ ಕೃತಜ್ಞತೆಯಿಂದ ಸ್ಮರಿಸಬೇಕು. ಅದಕ್ಕಾಗಿ ಈ ಅಂತಿಮ ಅಭಿವಂದನ ಪತ್ರ.

ದೇಹದ ವಿಷಯದಲ್ಲಿ ಒಂದೆರೆಡು ಆಶಯಗಳು

1) ದೇಹವನ್ನು ಭೂಮಿಯಲ್ಲಿಡುವ ಬದಲು ಅಗ್ನಿಯಿಂದ ಸ್ಪರ್ಶ ಮಾಡುವುದು
2) ಶ್ರಾದ್ಧಿಕ ವಿಧಿ-ವಿಧಾನಕರ್ಮಗಳು ಅನಗತ್ಯ
3) ಚಿತಾಭಸ್ಮವನ್ನು ನದಿ ಅಥವಾ ಸಾಗರದಲ್ಲಿ ವಿಸರ್ಜಿಸುವುದು
4) ಯಾವುದೇ ಬಗೆಯ ಸ್ಮಾರಕ ನಿರ್ಮಿಸಬಾರದು

ಅಂತಿಮ ನೆನಪು

ಸತ್ಯವೂ ಇಲ್ಲ.. ಅಸತ್ಯವೂ ಇಲ್ಲ
ಸಹಜವೂ ಇಲ್ಲ.. ಅಸಹಜವೂ ಇಲ್ಲ
ನಾನೂ ಇಲ್ಲ.. ನೀನೂ ಇಲ್ಲ
ಇಲ್ಲ.. ಇಲ್ಲ.. ಎಂಬುದು ತಾನಿಲ್ಲ..
ಗುಹೇಶ್ವರನೆಂಬುದು ಬರಿ ಬಯಲು
ಅಂತ್ಯ ಪ್ರಣಾಮಾಂಜಲಿ

                                                                                                                         ಸ್ವಾಮಿ ಸಿದ್ದೇಶ್ವರ

Published On - 12:11 am, Tue, 3 January 23