ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಮಹಾರಾಷ್ಟ್ರದ ಗಡಿ ಭಾಗದಲ್ಲಿ ಸರ್ವರ್ ಸಮಸ್ಯೆ: ಸಿಡಿದೆದ್ದ ಜನ

|

Updated on: Jun 20, 2023 | 1:54 PM

ಸರ್ವರ್ ಸಮಸ್ಯೆಯಿಂದ ಒಂದು ಅರ್ಜಿ ಸಲ್ಲಿಸಲು 30 ನಿಮಿಷದಿಂದ ಒಂದು ಗಂಟೆ ಸಮಯ ವ್ಯಯವಾಗುತ್ತಿದೆ. ಹೀಗಾಗಿ ಗೃಹಜ್ಯೋತಿ ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಕೆ ಮಾಡಲು ಬಂದವರಿಗೆ ಭಾರಿ ನಿರಾಸೆಯಾಗುತ್ತಿದೆ.

ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಮಹಾರಾಷ್ಟ್ರದ ಗಡಿ ಭಾಗದಲ್ಲಿ ಸರ್ವರ್ ಸಮಸ್ಯೆ: ಸಿಡಿದೆದ್ದ ಜನ
ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಬಂದ ಜನ
Follow us on

ವಿಜಯಪುರ: ಗೃಹಜ್ಯೋತಿ ಯೋಜನೆಗೆ(Gruha Jyothi Scheme) ಜೂನ್ 18ರ ಭಾನುವಾರದಂದು ಚಾಲನೆ ಸಿಕ್ಕಿದ್ದು ಮೂರನೆ ದಿನವಾದ ಇಂದು ಕೂಡ ಸಾವರ್ಜನಿಕರು ಸರ್ವರ್ ಸಮಸ್ಯೆ(Server Down) ಎದುರಿಸುತ್ತಿದ್ದಾರೆ. ಮಹಾರಾಷ್ಟ್ರದ ಗಡಿ ಭಾಗವನ್ನು ಹಂಚಿಕೊಂಡಿರುವ ವಿಜಯಪುರದ 150ಕ್ಕೂ ಹೆಚ್ಚು ಗ್ರಾಮಗಳಲ್ಲಿ ಗ್ರಾಮ ಒನ್, ಗ್ರಾಹಕರ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಜನರು ಪರದಾಡುತ್ತಿರುವಂತಹ ಪರಿಸ್ಥಿತಿ ಇದೆ. ಗ್ರಾಹಕರ ಸೇವಾ ಕೇಂದ್ರಗಳಲ್ಲಿ ಇಂಟರ್ನೆಟ್ ಸಮಸ್ಯೆಯಿಂದ ಅರ್ಜಿ ಸಲ್ಲಿಸಲು ವಿಳಂಬವಾಗುತ್ತಿದೆ.

ಸರ್ವರ್ ಸಮಸ್ಯೆಯಿಂದ ಒಂದು ಅರ್ಜಿ ಸಲ್ಲಿಸಲು 30 ನಿಮಿಷದಿಂದ ಒಂದು ಗಂಟೆ ಸಮಯ ವ್ಯಯವಾಗುತ್ತಿದೆ. ಹೀಗಾಗಿ ಗೃಹಜ್ಯೋತಿ ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಕೆ ಮಾಡಲು ಬಂದವರಿಗೆ ಭಾರಿ ನಿರಾಸೆಯಾಗುತ್ತಿದೆ. ಮನೆ ಕೆಲಸ, ಜಮೀನು ಕೆಲಸಗಳನ್ನು ಬಿಟ್ಟು ಪ್ರತಿ ನಿತ್ಯ ಗ್ರಾಮ ಒನ್, ಗ್ರಾಹಕರ ಸೇವಾ ಕೇಂದ್ರಗಳಿಗೆ ಜನರು ಅಲೆದಾಡುತ್ತಿದ್ದಾರೆ. ಆದ್ರೆ ಸರ್ವರ್ ಸಮಸ್ಯೆಯಿಂದಾಗಿ ಪ್ರತಿನಿತ್ಯ ಕೂಲಿ ಕೆಲಸ ಬಿಟ್ಟು ಬಂದರೂ ಅರ್ಜಿ ಸಲ್ಲಿಕೆ ಮಾಡಲು ಆಗುತ್ತಿಲ್ಲ. ಗಡಿಭಾಗದ ಗ್ರಾಮಗಳಲ್ಲಿ ಬಸ್ ಸೌಲಭ್ಯವು ಇಲ್ಲದ ಕಾರಣ ಖಾಸಗಿ ವಾಹನಗಳಿಂದ ಜನ ಕೇಂದ್ರಗಳಿಗೆ ಬರುತ್ತಿದ್ದಾರೆ. ಹೀಗಾಗಿ ದಿನಕ್ಕೆ ನಮಗೆ 500 ರೂಪಾಯಿ ನಷ್ಟವಾಗುತ್ತಿದೆ. ಕಳೆದ ಎರಡು ಮೂರು ದಿನಗಳಿಂದ ಅರ್ಜಿ ಸಲ್ಲಿಸಲು ಬಂದರೂ ಅರ್ಜಿ ಸಲ್ಲಿಕೆ ಮಾಡಲು ಆಗಿಲ್ಲ. ಸರ್ವರ್ ಸಮಸ್ಯೆಯಿಂದ ಕೇವಲ ಅಲೆದಾಟವಾಗಿದೆ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಗ್ಯಾರಂಟಿಗಳ ಒತ್ತಡದಲ್ಲಿ ಕಾಂಗ್ರೆಸ್: ಗೃಹಜ್ಯೋತಿ ಯೋಜನೆ ಸರ್ವರ್ ಬಿಜಿ, ಇತರೆ ಯೋಜನೆಗಳು ಇನ್ನೂ ವಿಳಂಬ

ಇನ್ನು ಅರ್ಜಿ ಸಲ್ಲಿಕೆ ವಿಳಂಬವಾಗುತ್ತಿರುವ ಕಾರಣ ಸೇವಾ ಕೇಂದ್ರದ ಸಿಬ್ಬಂದಿಯ ಜೊತೆ ಜನ ವಾಗ್ವಾದ ಮಾಡುತ್ತಿರುವ ಘಟನೆ ನಡೆದಿದೆ. ಇದರ ಜೊತೆಗೆ ಸರ್ಕಾರ ಗೃಹಲಕ್ಷ್ಮಿ ಯೋಜನೆಯನ್ನು ಜಾರಿ ಮಾಡಬೇಕೆಂದು ಮಹಿಳೆಯರು ಒತ್ತಾಯಿಸಿದ್ದಾರೆ. ಮಹಾರಾಷ್ಟ್ರದ ಗಡಿ ಭಾಗವನ್ನು ಹಂಚಿಕೊಂಡಿರುವಲ್ಲಿ ಸೂಕ್ತ ಸರ್ವರ್ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಇಂಧನ ಇಲಾಖೆ ಅಭಿವೃದ್ಧಿ ಪಡಿಸಿರುವ ಸೇವಾ ಸಿಂಧೂ ಆ್ಯಪ್ ನಲ್ಲಿ ಸಧ್ಯ ಅರ್ಜಿ ರಿಜಿಸ್ಟರ್ ಮಾಡಲಾಗುತ್ತಿದೆ.‌ ಆದ್ರೆ ಏಕಾಕಾಲಕ್ಕೆ ವೆಬ್ ಸೈಟ್ ಓಪನ್ ಮಾಡಿ ಅರ್ಜಿ ಸಲ್ಲಿಸುತ್ತಿರುವುದರಿಂದ ರಾಜ್ಯದೆಲ್ಲೆಡೆ ಸರ್ವರ್ ಡೌನ್ ಆಗಿ ಸಮಸ್ಯೆಗಳಾಗುತ್ತಿವೆ. ಇನ್ನು ಸೇವಾ ಕೇಂದ್ರಗಳಿಗೆ ಆಗಮಿಸಿ ಸಾವಿರಾರು ಜನ ಅರ್ಜಿ ಸಲ್ಲಿಸುತ್ತಿದ್ಧಾರೆ. ಅರ್ಜಿ ಸಲ್ಲಿಕೆಗೆ ಸ್ವೀಕೃತಿ ಅರ್ಜಿಗಾಗಿ 20 ರುಪಾಯಿ ಪಡೆದುಕೊಳ್ಳಲಾಗುತ್ತಿದೆ ಎಂದು ಬೆಂಗಳೂರು ಒನ್ ಸಿಬ್ಬಂದಿ ತಿಳಿಸಿದ್ದಾರೆ.

ಗೃಹಜ್ಯೋತಿಗೆ ಅರ್ಜಿ ಸಲ್ಲಿಸಲು ಸೇವಾ ಸಿಂಧು ವೆಬ್ ಸೈಟ್ ಮೂಲಕ ನೊಂದಣಿಗೆ ಅವಕಾಶ ನೀಡಲಾಗಿದೆ. ಹಾಗೂ ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್, ಗ್ರಾಮ ಪಂಚಾಯತ್, ನಾಡ ಕಚೇರಿ ಹಾಗೂ ವಿದ್ಯುತ್ ಕಚೇರಿಗಳಲ್ಲೂ ನೊಂದಣಿ ಮಾಡಿಸಬಹುದು. ಆಧಾರ್ ನಂಬರ್, ವಿದ್ಯುತ್ ಬಿಲ್ ನಲ್ಲಿ ನೀಡಲಾದ ವಿದ್ಯುತ್ ಖಾತೆ ಸಂಖ್ಯೆ, ಹಾಗೂ ಮೊಬೈಲ್ ನಂಬರ್ ಕಡ್ಡಾಯ ಮಾಡಲಾಗಿದೆ.

ವಿಜಯಪುರ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:50 pm, Tue, 20 June 23