ಗ್ಯಾರಂಟಿಗಳ ಒತ್ತಡದಲ್ಲಿ ಕಾಂಗ್ರೆಸ್: ಗೃಹಜ್ಯೋತಿ ಯೋಜನೆ ಸರ್ವರ್ ಬಿಜಿ, ಇತರೆ ಯೋಜನೆಗಳು ಇನ್ನೂ ವಿಳಂಬ

ಪೂರ್ವ ಸಿದ್ದತೆಗಳಿಲ್ಲದೇ ಗ್ಯಾರಂಟಿಗಳಿಗೆ ದಿನಾಂಕ ಘೋಷಿಸಿ ಕಾಂಗ್ರೆಸ್ ಪೀಕಲಾಟಕ್ಕೆ ಗುರಿಯಾಗಿದೆ. ತಾನೇ ಕೊಟ್ಟ ಡೆಡ್ ಲೈನ್​ಗಳ ಒತ್ತಡದ ಸುಳಿಯಲ್ಲಿ ಕಾಂಗ್ರೆಸ್ ಸರ್ಕಾರ ಸಿಕ್ಕಿ ಹಾಕಿಕೊಂಡಿದೆ.

ಗ್ಯಾರಂಟಿಗಳ ಒತ್ತಡದಲ್ಲಿ ಕಾಂಗ್ರೆಸ್: ಗೃಹಜ್ಯೋತಿ ಯೋಜನೆ ಸರ್ವರ್ ಬಿಜಿ, ಇತರೆ ಯೋಜನೆಗಳು ಇನ್ನೂ ವಿಳಂಬ
ಮುಖ್ಯಮಂತ್ರಿ ಸಿದ್ದರಾಮಯ್ಯ
Follow us
|

Updated on: Jun 19, 2023 | 9:04 AM

ಬೆಂಗಳೂರು: ರಾಜ್ಯ ಕಾಂಗ್ರೆಸ್​ (Congress) ಸರ್ಕಾರ ಚುನಾವಣೆ ವೇಳೆ ಘೋಷಿಸಿದ್ದ 5 ಗ್ಯಾರಂಟಿಗಳನ್ನು(Congress Guarantee) ಪೂರೈಸಲು ಹರಸಾಹಸ ಪಡುತ್ತಿದೆ. ಅನ್ನ ಭಾಗ್ಯ ಯೋಜನೆ ಜಾರಿ ಮಾಡಲು ರಾಜ್ಯದಲ್ಲಿ ಅಕ್ಕಿ ಕಡಿಮೆಯಾಗಿದ್ದು ಅನ್ಯ ರಾಜ್ಯಗಳ ಮೊರೆ ಹೋಗಿದೆ. ಇದರ ನಡುವೆ ಗೃಹಜ್ಯೋತಿ ಯೋಜನೆ (Gruha Jyothi Scheme)ಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದ್ದು ಮೊದಲ ದಿನವೇ ರಾಜ್ಯದಲ್ಲಿ 55,000 ಅರ್ಜಿಗಳು ಸಲ್ಲಿಕೆಯಾಗಿದೆ. ಇದರ ನಡುವೆ ಸರ್ವಸ್ ಬಿಜಿಯಾಗಿದ್ದು ಅನೇಕರಿಗೆ ಅರ್ಜಿಸಲ್ಲಿಸಲಾಗುತ್ತಿಲ್ಲ. ಪೂರ್ವ ಸಿದ್ದತೆಗಳಿಲ್ಲದೇ ಗ್ಯಾರಂಟಿಗಳಿಗೆ ದಿನಾಂಕ ಘೋಷಿಸಿ ಕಾಂಗ್ರೆಸ್ ಪೀಕಲಾಟಕ್ಕೆ ಗುರಿಯಾಗಿದೆ. ತಾನೇ ಕೊಟ್ಟ ಡೆಡ್ ಲೈನ್​ಗಳ ಒತ್ತಡದ ಸುಳಿಯಲ್ಲಿ ಕಾಂಗ್ರೆಸ್ ಸರ್ಕಾರ ಸಿಕ್ಕಿ ಹಾಕಿಕೊಂಡಿದೆ.

ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಯುವನಿಧಿ ಹಾಗೂ ಅನ್ನ ಭಾಗ್ಯ ಯೋಜನೆಗಳ ಜಾರಿಗೆ ಒತ್ತಡ ಹೆಚ್ಚಾಗಿದೆ. ಗೃಹ ಲಕ್ಷ್ಮಿ, ಗೃಹ ಜ್ಯೋತಿ ಯೋಜನೆಗಳಿಗೆ ಜೂನ್ 15 ರಿಂದಲೇ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಬೇಕಿತ್ತು. ತಾವೇ ಘೋಷಿಸಿದ ದಿನಾಂಕ ಕಳೆದರೂ ಅರ್ಜಿ ಸಲ್ಲಿಕೆಗೆ ಇನ್ನೂ ಕೂಡ ವೇದಿಕೆ ಸಿದ್ದವಾಗಿಲ್ಲ. ಗೃಹ ಜ್ಯೋತಿ ಯೋಜನೆಗೆ ಅರ್ಜಿ ಪ್ರಕ್ರಿಯೆ ಶುರುವಾಗಿದ್ದರೂ ಸರ್ವರ್ ಕಂಟಕ ಎದುರಾಗಿದೆ. ಡೆಡ್ ಲೈನ್ ಕಳೆದು ನಾಲ್ಕು ದಿನ ಆದರೂ ಗೃಹ ಲಕ್ಷ್ಮಿಗೆ ಅರ್ಜಿ ಭಾಗ್ಯ ಕೂಡಿ ಬಂದಿಲ್ಲ. ಸರ್ವರ್ ಸಮಸ್ಯೆ, ಗ್ರಾಹಕರ ಒತ್ತಡಗಳ ಬಗ್ಗೆ ಪೂರ್ವಾಲೋಚನೆಯೇ ಮಾಡದೇ ದಿನಾಂಕ ನಿಗದಿ ಮಾಡಲಾಗಿದೆ.

ಅನ್ನ ಭಾಗ್ಯ, ಗೃಹ ಜ್ಯೋತಿ, ಗೃಹ ಲಕ್ಷ್ಮಿ ಯಾವ ಯೋಜನೆಗಳೂ ಕೂಡ ಹೇಳಿದ ಸಮಯಕ್ಕೆ ಪ್ರಾರಂಭ ಆಗ್ತಿಲ್ಲ. ಯುವನಿಧಿಗೂ ಇನ್ನೂ ಅರ್ಜಿ ಸಲ್ಲಿಕೆಗೆ ವೆಬ್ ಸೈಟ್ ಓಪನ್ ಆಗಿಲ್ಲ. ಇನ್ನು ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳ ಮಾಡುವುದಾಗಿ ಕಾಂಗ್ರೆಸ್ ಆರನೇ ಭರವಸೆ ನೀಡಿತ್ತು. ಆದ್ರೆ ಈಗ ತನ್ನ ಆರನೇ ಗ್ಯಾರಂಟಿ ಬಗ್ಗೆ ಇದುವರೆಗೆ ಒಂದೇ ಒಂದು ಚಕಾರ ಎತ್ತಿಲ್ಲ. ನಾಲ್ಕು ಯೋಜನೆಗಳ ಜಾರಿಯೇ ಇದೀಗ ಒತ್ತಡವಾಗಿರುವ ಹಿನ್ನೆಲೆಯಲ್ಲಿ ಆರನೇ ಗ್ಯಾರಂಟಿ ಬಗ್ಗೆ ಕಾಂಗ್ರೆಸ್ ಅಪ್ಪಿ ತಪ್ಪಿಯೂ ಪ್ರಸ್ತಾಪ ಮಾಡುತ್ತಿಲ್ಲ.

ಇದನ್ನೂ ಓದಿ: ಅನ್ನಭಾಗ್ಯ ಯೋಜನೆ ಅಕ್ಕಿಗಾಗಿ ಅನ್ಯ ರಾಜ್ಯಗಳ ಮೊರೆ ಹೋದ ಸರ್ಕಾರ; ತೆಲಂಗಾಣ ಸಿಎಂಗೆ ಸಿದ್ದರಾಮಯ್ಯ ಕರೆ

ಗೃಹ ಲಕ್ಷ್ಮಿ ಯೋಜನೆ ಜಾರಿ ವಿಚಾರದಲ್ಲಿ ಮೂರು ಇಲಾಖೆಗಳ ನಡುವೆ ಹೊಂದಾಣಿಕೆ ಸಮಸ್ಯೆ ಇದ್ದು ಅದು ಇದೀಗ ತಲೆನೋವಾಗಿದೆ. ಯೋಜನೆ ಅನುಷ್ಟಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯದ್ದು ಆದರೆ ಯೋಜನೆ ಜಾರಿಗೊಳಿಸುವಷ್ಟು ಸಿಬ್ಬಂದಿ ಹಾಗೂ ತಾಂತ್ರಿಕ ಸೌಲಭ್ಯ ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಬಳಿ ಇಲ್ಲ. ಅರ್ಜಿ ಸ್ವೀಕಾರ ಪ್ರಕ್ರಿಯೆ ನಡೆಸಬೇಕಿರುವುದು ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ. ಕಂದಾಯ ಇಲಾಖೆಯ ಸಿಬ್ಬಂದಿಗೆ ಇನ್ನೂ ಪೂರ್ಣವಾಗಿಲ್ಲ ಅರ್ಜಿ ಸ್ವೀಕಾರದ ತರಬೇತಿ ನೀಡಿಲ್ಲ. ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸ್ಪೀಡ್ ಗೆ ಇ-ಗೌರ್ನೆನ್ಸ್ ಇಲಾಖೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಇ-ಗೌರ್ನೆನ್ಸ್ ಇಲಾಖೆ ಅಧಿಕಾರಿಗಳು ಇನ್ನೂ ಸೇವಾ ಸಿಂಧು ಅಪ್ ಗ್ರೇಡೆಷನ್ ಗೆ ಸಮಯಾವಕಾಶ ಕೇಳಿದ್ದಾರೆ. ಹೀಗಾಗಿ ಕಂದಾಯ ಇಲಾಖೆ, ಐಟಿಬಿಟಿ ಇಲಾಖೆಯತ್ತ ನೋಡುತ್ತ ಸುಮ್ಮನೆ ಕೂರಬೇಕಾಗಿದೆ.

ನಾಡಕಚೇರಿ, ಗ್ರಾಮ ಒನ್, ಬೆಂಗಳೂರು ಒನ್, ಬಾಪೂಜಿ ಸೇವಾ ಕೇಂದ್ರ ಎಲ್ಲವೂ ಕಂದಾಯ ಇಲಾಖೆ ವ್ಯಾಪ್ತಿಗೆ ಬರುತ್ತವೆ. ಕಂದಾಯ ಇಲಾಖೆಯಲ್ಲಿ ಇನ್ನೂ ಕೂಡ ಅರ್ಜಿ ಸ್ವೀಕಾರಕ್ಕೆ ಮೂಲಸೌಕರ್ಯಗಳ ಕೊರತೆ ಎದುರಾಗಿದೆ. ಇದೆಲ್ಲ ಕಾರಣಗಳಿಂದ ಗೃಹ ಲಕ್ಷ್ಮಿ ಯೋಜನೆ ಜಾರಿಗೆ ಗೊಂದಲ, ಕಸರತ್ತು ಮುಂದುವರಿದಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ