ವಿಜಯಪುರ, (ಜನವರಿ 13): ತಾಯಿಯೊಬ್ಬಳು 4 ಮಕ್ಕಳನ್ನು ಕಾಲುವೆಗೆ ಎಸೆದು ತಾನೂ ಜೀವ ಬಿಡಲು ಯತ್ನಿಸಿದ ದಾರುಣ ಘಟನೆ ವಿಜಯಪುರದ ನಿಡಗುಂದಿ ತಾಲೂಕಿನ ಬೇನಾಳ ಬಳಿಯ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಯಲ್ಲಿ ನಡೆದಿದೆ. ಕಾಲುವೆಗೆ ಮಕ್ಕಳು ಎಸೆದ ಬಳಿಕ ತಾಯಿಯೂ ಸಹ ಹಾರಿದ್ದಾಳೆ. ಈ ದುರಂತ ನೋಡಿದ ಸ್ಥಳೀಯರು ತಾಯಿಯನ್ನು ಕಾಪಾಡಿದ್ರೆ 4 ಮಕ್ಕಳು ಜಲಸಮಾಧಿ ಆಗಿದ್ದಾರೆ. 5 ವರ್ಷದ ತನು ಲಿಂಗರಾಜ್ ಭಜಂತಿ, 3 ವರ್ಷದ ರಕ್ಷಾ ಲಿಂಗರಾಜ್ ಭಜಂತ್ರಿ ಹಾಗೂ 13 ತಿಂಗಳ ಅವಳಿ ಜವಳಿ ಹಸೇನ ಹಾಗೂ ಹುಸೇನ ನೀರಿನಲ್ಲಿ ಮುಳುಗಿ ಉಸಿರು ಬಿಟ್ಟಿದ್ದಾರೆ. ಈ ಘಟನೆಯ ಬಗ್ಗೆ ನಿಡಗುಂದಿ ಪೊಲೀಸರು ಮಾಹಿತಿ ಕಲೆ ಹಾಕಿದ್ದು, ಕುಟುಂಬಸ್ಥರು ಕಾರಣ ಏನು ಎನ್ನುವುದನ್ನು ಹೇಳಿ ಕಣ್ಣೀರಿಟ್ಟಿದ್ದಾರೆ.
ಲಿಂಗರಾಜ್ ಭಜಂತ್ರಿ ಕುಟುಂಬದಲ್ಲಿ ಆಸ್ತಿ ವಿಚಾರಕ್ಕೆ ಗಲಾಟೆ ನಡೆದಿತ್ತು. ಇದರಿಂದ ನೊಂದಿದ್ದ ಲಿಂಗರಾಜ್, ಇದೇ ಸಿಟ್ಟಿನಲ್ಲಿ ಪತ್ನಿ ಭಾಗ್ಯಶ್ರೀ ಮೇಲೆ ಕೋಪಗೊಂಡು ಗಲಾಟೆ ಮಾಡುತ್ತಿದ್ದ. ಇದರಿಂದ ಮನನೊಂದಿದ್ದ ಭಾಗ್ಯಶ್ರೀ ಆತ್ಮಹತ್ಯೆ ನಿರ್ಧಾರ ಕೈಗೊಂಡಿದ್ದಾಳೆ.
ಕೊಲ್ಹಾರ ತಾಲೂಕಿನ ತೆಲಗಿ ಗ್ರಾಮದ ಲಿಂಗರಾಜ್ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ. ಈ ಸಾಲವನ್ನು ತೀರಿಸಲು ಆಸ್ತಿ ಮಾರಾಟ ಮಾಡಲು ಚಿಂತನೆ ನಡೆಸಿದ್ದ. ಹೀಗಾಗಿ ತನ್ನ ಪಿತ್ರಾರ್ಜಿತ ಆಸ್ತಿ ಪಾಲು ಕೇಳಿದ್ದ.ಸಾಲ ತೀರಿಸಲು ತಂದೆಯ ಪಿತ್ರಾರ್ಜಿತ ಆಸ್ತಿಯ ಪಾಲು ಕೇಳಿದ್ದ. ಆದ್ರೆ, ಆಸ್ತಿಪಾಲಿನ ವಿಚಾರವಾಗಿ ನಿಂಗರಾಜ ಸಹೋದರರು ತಂದೆಯ ಜೊತೆ ಜಗಳವಾಡಿದ್ದಾರೆ. ಇದೇ ವಿಚಾರವಾಗಿ ಕಳೆದ ಹಲವಾರು ದಿನಗಳಿಂದ ಮನೆಯಲ್ಲಿ ಜಗಳ ಆಗಿತ್ತಂತೆ. ತಂದೆ ತಾಯಿ ಇರುವರೆಗೂ ಆಸ್ತಿಯಲ್ಲಿ ಪಾಲು ನೀಡಲ್ಲ ಎಂದು ನಿಂಗರಾಜ ಸಹೋದರರು ಜಗಳ ಮಾಡಿದ್ದರು. ಇದರಿಂದ ನಿಂಗರಾಜ ತೀವ್ರವಾಗಿ ನೊಂದಿದ್ದ. ಈ ಕಾರಣಕ್ಕಾಗಿ ಪತ್ನಿ ಭಾಗ್ಯಶ್ರೀ ಹಾಗೂ ಲಿಂಗರಾಜ ಮಧ್ಯೆ ಜಗಳವಾಗುತ್ತಿತ್ತು.
ಇಂದು ಬನದ ಹುಣ್ಣಿಮೆ ಇರುವ ಕಾರಣನಿಂಗರಾಜ, ಹೆಂಡ್ತಿ ಮಕ್ಕಳೊಂದಿಗೆ ನಿಡಗುಂದಿ ತಾಲೂಕಿನ ಎಲ್ಲಮ್ಮನ ಬೂದಿಹಾಳ ಗ್ರಾಮಕ್ಕೆ ಎಲ್ಲಮ್ಮನ ದರ್ಶನಕ್ಕೆ ಕುಟುಂಬ ಸಮೇತ ತೆರಳುತ್ತಿದ್ದ. ಆದ್ರೆ, ದುರದೃಷ್ಟವಶಾತ್ ಆಲಮಟ್ಟಿ ಎಡದಂಡೆ ಕಾಲುವೆ ಬಳಿ ನಿಂಗರಾಜನ ಬೈಕ್ ಪೆಟ್ರೋಲ್ ಖಾಲಿಯಾಗಿತ್ತು. ಬಳಿಕ ನಿಂಗರಾಜ, ಮಕ್ಕಳು ಹಾಗೂ ಪತ್ನಿಯನ್ನ ಕೆನಾಲ್ ಬಳಿ ನಿಲ್ಲಿಸಿ ಪೆಟ್ರೋಲ್ ತರಲು ಹೋಗಿದ್ದ. ವಾಪಸ್ ಬರುವಷ್ಟರಲ್ಲಿ ಭಾಗ್ಯಶ್ರೀ ತನ್ನ ನಾಲ್ಕು ಮಕ್ಕಳನ್ನ ಕಾಲುವೆಗೆ ಎಸೆದು ತಾನೂ ಸಹ ಜಿಗಿದಿದ್ದಳು. ಇದನ್ನು ನೋಡಿದ್ದ ಮೀನುಗಾರರು, ಭಾಗ್ಯಶ್ರೀಯನ್ನು ರಕ್ಷಿಸಿದ್ದರು. ತೀರ್ವ ಅಸ್ವಸ್ಥಳಾಗಿದ್ದ ಭಾಗ್ಯಶ್ರೀ ನಿಡಗುಂದಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇನ್ನು ಕಾಲುವೆ ಬಳಿ ಇಬ್ಬರು ಗಂಡು ಮಕ್ಕಳ ಶವಕ್ಕಾಗಿ ಶೋಧಕಾರ್ಯ ಮುಂದುವರೆದಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.