ನಾಲ್ಕು ಮಕ್ಕಳು ಜಲಸಮಾಧಿ: ಮಕ್ಕಳನ್ನು ಕಾಲುವೆಗೆ ಎಸೆದು ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿ ಬಚಾವ್
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನಲ್ಲಿ ಭಯಾನಕ ಘಟನೆ ನಡೆದಿದೆ. ತಾಯಿಯೊಬ್ಬಳು ತನ್ನ ನಾಲ್ವರು ಮಕ್ಕಳನ್ನು ಕಾಲುವೆಗೆ ಎಸೆದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ನಾಲ್ವರು ಮಕ್ಕಳು ಮೃತಪಟ್ಟಿದ್ದಾರೆ. ತಾಯಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ. ಈ ಘಟನೆ ಕೌಟುಂಬಿಕ ಕಲಹದಿಂದ ಉಂಟಾಗಿದೆ ಎಂದು ಶಂಕಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವಿಜಯಪುರ, ಜನವರಿ 13: ನಾಲ್ವರು ಮಕ್ಕಳನ್ನು ಕಾಲುವೆಗೆ ಎಸೆದು ತಾಯಿ (Mother) ಕೂಡ ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ಜಿಲ್ಲೆಯ ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದ ಬಳಿಯ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಯಲ್ಲಿ ನಡೆದಿದೆ. ತೆಲಗಿ ಗ್ರಾಮದ ತನು ನಿಂಗರಾಜ ಭಜಂತ್ರಿ(5), ರಕ್ಷಾ ಭಜಂತ್ರಿ(3), ಹಸೇನ್ ನಿಂಗರಾಜ ಭಜಂತ್ರಿ(2), 13 ತಿಂಗಳ ಹುಸೇನ್ ಮೃತ ಮಕ್ಕಳು. ಮೃತರು ಕೊಲ್ಹಾರ ತಾಲೂಕಿನ ತೆಲಗಿ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ. ಕೌಟುಂಬಿಕ ಕಲಹವೇ ಘಟನೆಗೆ ಕಾರಣ ಎನ್ನಲಾಗಿದೆ.
ಕಾಲುವೆಗೆ ಜಿಗಿದಿದ್ದ ತಾಯಿ ಭಾಗ್ಯಳನ್ನು ಸ್ಥಳೀಯರು ರಕ್ಷಿಸಿದ್ದಾರೆ. ಕಾಲುವೆಯಿಂದ ತನು, ರಕ್ಷಾ ಮೃತದೇಹವನ್ನು ಮೀನುಗಾರರು ಹೊರತೆಗೆದಿದ್ದು, ಮತ್ತಿಬ್ಬರ ಮೃತದೇಹ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆದಿದೆ. ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ನಿಡಗುಂದಿ ಪೊಲೀಸರು ಮತ್ತು ಅಗ್ನಿಶಾಮಕದಳ ಸಿಬ್ಬಂದಿ ದೌಡಾಯಿಸಿದ್ದಾರೆ.
ಪಾದಚಾರಿಗೆ ಖಾಸಗಿ ಬಸ್ ಡಿಕ್ಕಿ: ಸ್ಥಳದಲ್ಲೇ ಪ್ರಾಣಬಿಟ್ಟ ಮಹಿಳೆ
ವಿಜಯಪುರ ನಗರದ ಮನಗೂಳಿ ರಸ್ತೆಯ ವಿಆರ್‌ಎಲ್ ಬಸ್ ನಿಲ್ದಾಣದಲ್ಲಿ ಪಾದಚಾರಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮಹಿಳೆ ಮೃತಪಟ್ಟಿರುವಂತಹ ಘಟನೆ ನಡೆದಿದೆ. ಮಹಿಳೆಗೆ 70 ವರ್ಷ ಅಂದಾಜಿಸಲಾಗಿದೆ.
ಇದನ್ನೂ ಓದಿ: ನೀರು ಕಾಯಿಸುವ ವಿಚಾರಕ್ಕೆ ಮುಖ್ಯಶಿಕ್ಷಕ, ಸೆಕ್ಯೂರಿಟಿ ಗಾರ್ಡ್ ಮಧ್ಯೆ ಜಗಳ: ಕೊಲೆಯಲ್ಲಿ ಅಂತ್ಯ
ಮೃತ ಮಹಿಳೆಯ ಹೆಸರು ವಿಳಾಸ ತಿಳಿದು ಬಂದಿಲ್ಲ. ಮಹಿಳೆಯ ಶವ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಸಂಚಾರಿ ಪೊಲೀಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸಾಲಬಾಧೆ ತಾಳಲಾರದೆ ರೈತ ನೇಣಿಗೆ ಶರಣು
ಗದಗ ಜಿಲ್ಲೆ ನರಗುಂದ ತಾಲೂಕಿನ ಗುರ್ಲಕಟ್ಟಿ ಗ್ರಾಮದಲ್ಲಿ ಸಾಲಬಾಧೆಯಿಂದ ರೈತ ಆತ್ಮಹತ್ಯೆಗೆ ಶರಣಾಗಿರುವಂತಹ ಘಟನೆ ನಡೆದಿದೆ. ಮನೆಯಲ್ಲಿ ನೇಣು ಹಾಕಿಕೊಂಡು ರೈತ ಶಿವನಗೌಡ ಕರಿಗೌಡ್ರ (39) ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇದನ್ನೂ ಓದಿ: ಪ್ರೀತಿಸಿ ಮದ್ವೆಯಾಗಿದ್ದ ಪತ್ನಿಯನ್ನೇ ಹತ್ಯೆಗೈದ ಪತಿ: ಜಾತ್ರೆಯಲ್ಲಿ ಹುಟ್ಟಿದ ಲವ್ ಜಾತ್ರೆಯಲ್ಲೇ ಅಂತ್ಯ
ಎಸ್‌ಬಿಐ ಬ್ಯಾಂಕ್ನಲ್ಲಿ 1 ಲಕ್ಷ 50 ಸಾವಿರ ರೂ. ಸಾಲ ಪಡೆದಿದ್ದ ರೈತ, ಬಡ್ಡಿ ಸೇರಿ 4 ಲಕ್ಷ 50 ಸಾವಿರ ರೂ. ಆಗಿದೆ. ಪ್ರಾಥಮಿಕ ಸಹಕಾರಿ ಸಂಘದಲ್ಲಿ 1 ಲಕ್ಷ 50 ಸಾವಿರ ರೂ. ಸಾಲ. ಹಲವು ವರ್ಷಗಳಿಂದ ಜಮೀನಿನಲ್ಲಿ ಫಸಲು ಸರಿಯಾಗಿ ಬಂದಿಲ್ಲ. ಸಾಲ ತೀರಿಸಲು ಆಗದೆ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನರಗುಂದ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:49 pm, Mon, 13 January 25