ಪ್ರೀತಿಸಿ ಮದ್ವೆಯಾಗಿದ್ದ ಪತ್ನಿಯನ್ನೇ ಹತ್ಯೆಗೈದ ಪತಿ: ಜಾತ್ರೆಯಲ್ಲಿ ಹುಟ್ಟಿದ ಲವ್ ಜಾತ್ರೆಯಲ್ಲೇ ಅಂತ್ಯ
ಅವರಿಬ್ಬರು ಪ್ರೀತಿಸಿ ವಿವಾಹವಾಗಿದ್ದರು. ಆದ್ರೆ ಮದುವೆಯಾದ ಮೇಲೆ ಗಂಡನಿಗೆ ಹೆಂಡತಿ ಮೇಲೆ ಪ್ರೀತಿ ಮಾಯವಾಗಿ, ಅನುಮಾನದ ರೋಗ ಹೆಚ್ಚಾಗಿತ್ತು. ಆದ್ರೆ ಗವಿಮಠದ ಜಾತ್ರೆಗೆ ವ್ಯಾಪರಕ್ಕೆ ಅಂತ ಪತ್ನಿಯನ್ನು ಕರೆದುಕೊಂಡು ಬಂದಿದ್ದ ಪಾಪಿ ಪತಿ, ಇಲ್ಲಿ ಕೂಡಾ ಪತ್ನಿಯ ಮೇಲೆ ಸಂಶಯ ಪಟ್ಟು, ಜಗಳ ಆರಂಭಿಸಿದ್ದ. ಜಗಳ ವಿಕೋಪಕ್ಕೆ ಹೋಗಿದ್ದರಿಂದ, ಇಂದು ಮಠದ ಮೈದಾನದಲ್ಲಿಯೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಇನ್ನು ಜಾತ್ರೆಯಲ್ಲಿ ಹುಟ್ಟಿಕೊಂಡಿದ್ದ ಲವ್ ಜಾತ್ರೆಯಲ್ಲಿ ಅಂತ್ಯವಾಗಿದೆ.
ಕೊಪ್ಪಳ, (ಜನವರಿ 12): ಕೊಪ್ಪಳದ ಗವಿಮಠದ ಮುಂದಿನ ಮೈದಾನದಲ್ಲಿ ಇಂದು (ಜನವರಿ 12) ಜನನಿಬಿಡ ಪ್ರದೇಶದಲ್ಲಿಯೇ ಮಹಿಳೆಯೋರ್ವಳ ಬರ್ಬರ ಕೊಲೆಯಾಗಿದೆ. ದಕ್ಷಿಣ ಭಾರತದ ಕುಂಬಮೇಳ ಅಂತಲೇ ಖ್ಯಾತಿ ಪಡೆದಿರೋ ಗವಿಮಠದ ಜಾತ್ರೆ ಇದೇ ಜನವರಿ 15 ರಿಂದ ಆರಂಭವಾಗಲಿದೆ. ಜಾತ್ರೆ ಅಂಗವಾಗಿ ಎಲ್ಲಾ ಸಿದ್ದತೆಗಳು ಜೋರಾಗಿ ನಡೆಯುತ್ತಿವೆ. ಜಾತ್ರೆಗೆ ರಾಜ್ಯದ ವಿವಿಧಡೆಯಿಂದ ವ್ಯಾಪರಸ್ಥರು ಬಂದಿದ್ದು, ಅವರಿಗಾಗಿಯೇ ಮಠದ ಮುಂದಿನ ಮೈದಾನದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ವ್ಯಾಪರಸ್ಥರು, ತಮಗೆ ನಿಗದಿ ಪಡಿಸಿದ ಜಾಗದಲ್ಲಿ ಸ್ಟಾಲ್ ಗಳನ್ನು ಹಾಕುತ್ತಿದ್ದಾರೆ. ಇದರ ಮಧ್ಯೆ ಕೊಲೆಯೊಂದು ನಡೆದಿದೆ. ಹೌದು…ಪ್ರೀತಿಸಿ ಮದುವೆಯಾಗಿದ್ದ ಹೆಂಡ್ತಿಯನ್ನೇ ಪತಿರಾಯ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ತುಮಕೂರು ಜಿಲ್ಲೆಯ ತುರುವೆಕೆರೆ ತಾಲೂಕಿನ ಭುವನಹಳ್ಳಿ ಗ್ರಾಮದ ನಿವಾಸಿಯಾಗಿರೋ ಇಪ್ಪತ್ತಾರು ವರ್ಷದ ಗೀತಾ ಮತ್ತು ಆಕೆಯ ಪತಿ ರಾಜೇಶ್ ಕೂಡಾ ವ್ಯಾಪರಕ್ಕೆಂದೆು ಗವಿಮಠದ ಜಾತ್ರೆಗೆ ಬಂದಿದ್ದಾರೆ. ಬಾಂಡೆ ಸಾಮಾನಿನ ಸ್ಟಾಲ್ ಹಾಕಲು ಜಾಗ ಪಡೆದಿದ್ದು,ಸ್ಟಾಲ್ ಹಾಕಲು ಹತ್ತು ದಿನದ ಹಿಂದೆಯೇ ಕೊಪ್ಪಳಕ್ಕೆ ಬಂದಿದ್ದಾರೆ. ಆದ್ರೆ ಇಂದು ಗೀತಾಳ ಬರ್ಬರ ಕೊಲೆಯಾಗಿದೆ. ಇನ್ನು ಗೀತಾಳನ್ನು ಕೊಲೆ ಮಾಡಿದ್ದು ಬೇರಾರು ಅಲ್ಲಾ, ಆಕೆಯ ಪತಿ ರಾಜೇಶ್.
ಇದನ್ನೂ ಓದಿ: ಗಂಡ್ಮಕ್ಳು ಮಾತ್ರ ಕೆಟ್ಟವರು, ಹುಡ್ಗಿರು ಏನೇ ಮಾಡಿದ್ರೂ ಲೆಕ್ಕಕ್ಕೆ ಬರಲ್ಲ..ವಿಡಿಯೋ ಮಾಡಿ ಪ್ರಾಣ ಬಿಟ್ಟ ಯುವಕ
ಮಧ್ಯಾಹ್ನ ಹನ್ನೆರಡು ಗಂಟೆ ಸಮಯದಲ್ಲಿ, ಮೈದಾನದಲ್ಲಿ ಚಾಕುವಿನಿಂದ ಕುತ್ತಿಗೆ ಸೇರಿದಂತೆ ಮೂರು ಕಡೆ ಇರದಿದ್ದಾನೆ. ಇದನ್ನು ಗಮನಿಸಿದ ಸುತ್ತಮುತ್ತಲಿನ ಜನರು ಮಹಿಳೆಯ ನೆರವಿಗೆ ಧಾವಿಸಿದ್ದಾರೆ. ಕೆಲವರು ಆರೋಪಿಯನ್ನು ಹಿಡಿದ್ರೆ, ಕೆಲವರು ಕೂಡಲೇ ಗೀತಾಳನ್ನು ಆಸ್ಪತ್ರೆಗೆ ಸಾಗಿಸುವ ಕೆಲಸ ಮಾಡಿದ್ದಾರೆ. ಆದ್ರೆ ಆಸ್ಪತ್ರೆಗೆ ಹೋಗುವ ಮುನ್ನವೇ ಗೀತಾ ಬಾರದ ಲೋಕಕ್ಕೆ ಹೋಗಿದ್ದಾಳೆ. ಇನ್ನು ಪತಿ ರಾಜೇಶ್ ನ್ನು ಸ್ಥಳೀಯರು ಪೊಲೀಸರಿಗೊಪ್ಪಿಸಿದ್ದಾರೆ.
ಪ್ರೀತಿಸಿ ಮದುವೆಯಾಗಿದ್ದ ಜೋಡಿ
ಮೂಲತ ಮಂಡ್ಯ ಜಿಲ್ಲೆಯ ನಿವಾಸಿಯಾಗಿದ್ದ ಗೀತಾ, ಆರೋಪಿ ರಾಜೇಶ್ ಗೆ ದೂರದ ಸಂಬಂಧಿ. ಆದ್ರೆ ಇಬ್ಬರು ಜಾತ್ರೆಯಲ್ಲಿ ವ್ಯಾಪರಕ್ಕೆ ಹೋದ ಸಮಯದಲ್ಲಿ ಪ್ರೀತಿಗೆ ಬಿದ್ದಿದ್ದರು. ನಂತರ ಕುಟುಂಬದವರು ಇಬ್ಬರ ಪ್ರೀತಿಯನ್ನು ಒಪ್ಪಿ, ಎಂಟು ವರ್ಷದ ಹಿಂದೆ ಮದುವೆ ಮಾಡಿದ್ದರು. ದಂಪತಿಗೆ ಇಬ್ಬರು ಮಕ್ಕಳು ಕೂಡಾ ಇವೆ. ಆದ್ರೆ ಮದುವೆಯಾದ ಮೇಲಿಂದ ರಾಜೇಶ್, ಗೀತಾಳ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದನಂತೆ. ನಿನಗೆ ಅವರಿವರ ಜೊತೆ ಸಂಬಂಧವಿದೆ ಅಂತ ಆರೋಪಿಸಿ, ಪ್ರತಿನಿತ್ಯ ಕುಡಿದು ಬಂದು ಗಲಾಟೆ ಮಾಡೋದು, ಹೊಡೆಯೋದು ಮಾಡುತ್ತಿದ್ದನಂತೆ. ಆದ್ರು ಕೂಡಾ ಗೀತಾ, ಪತಿಯ ಹಿಂಸೆಯನ್ನು ತಾಳಿಕೊಂಡು ಸಂಸಾರ ನಡೆಸುತ್ತಿದ್ದಳು. ಗವಿಮಠದ ಜಾತ್ರೆ ಹಿನ್ನೆಲೆಯಲ್ಲಿ ಮಕ್ಕಳನ್ನು ಹೆತ್ತವರ ಬಳಿ ಬಿಟ್ಟು, ಪತ್ನಿಯನ್ನ ಕೊಪ್ಪಳಕ್ಕೆ ಕರೆದುಕೊಂಡು ಬಂದಿದ್ದ ರಾಜೇಶ್, ಇಲ್ಲಿ ಕೂಡಾ ತನ್ನ ಹಳೆ ಚಾಳಿ ಮುಂದುವರಿಸಿದ್ದ.
ನಾಲ್ಕು ದಿನದ ಹಿಂದೆ ಕುಡಿದು ಬಂದು ಪತ್ನಿಯನ್ನು ರಾಜೇಶ್ ಚೆನ್ನಾಗಿ ಥಳಿಸಿದ್ದ. ತಾನೇ ಕೊಪ್ಪಳ ನಗರ ಠಾಣೆಗೆ ಹೋಗಿ, ತನ್ನ ಪತ್ನಿಗೆ ಅಕ್ರಮ ಸಂಬಂಧವಿದೆ ಎಂದು ದೂರು ಕೊಡಲು ಹೋಗಿದ್ದ. ಆಗ ಪೊಲೀಸರು ದಂಪತಿಗೆ ಬುದ್ದಿ ಹೇಳಿ ಕಳುಹಿಸಿದ್ದರು. ಆದ್ರೆ ಇಂದು ಬೆಳಗ್ಗೆ ಪತ್ನಿ ಜೊತೆ ಜಗಳ ಆರಂಭಿಸಿದ್ದನಂತೆ. ಹೀಗಾಗಿ ಗೀತಾ, ತಾನು ತನ್ನ ಹೆತ್ತವರ ಮನೆಗೆ ಹೋಗುತ್ತೇನೆ ಎಂದು ಹೋಗುತ್ತಿದ್ದಳು. ಆಗ ಗೀತಾಳನ್ನು ಬೆನ್ನತ್ತಿದ್ದ ಪಾಪಿ ರಾಜೇಶ್, ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಈ ಬಗ್ಗೆ ಕೊಪ್ಪಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪಾಪಿ ಪತಿಯನ್ನು ಬಂಧಿಸಿದ್ದಾರೆ. ಆದ್ರೆ ದುಡಿಮೆ ಮಾಡಲು ಪತ್ನಿಯನ್ನು ಕರೆದುಕೊಂಡು ಬಂದಿದ್ದ ಪತಿ, ಅನುಮಾನದ ರೋಗಕ್ಕೆ ಆಕೆಯನ್ನು ಕೊಂದು ಕಂಬಿ ಹಿಂದೆ ಹೋಗಿದ್ದು ಮಾತ್ರ ದುರಂತವೇ ಸರಿ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:21 pm, Sun, 12 January 25