Vijayapura: ಪತಿಯೇ ವಿಷಹಾಕಿ ಕಾಲುವೆಗೆ ದೂಡಿದ: ವಿಜಯಪುರ ಆತ್ಮಹತ್ಯೆಯತ್ನ ಪ್ರಕರಣಕ್ಕೆ ಹೊಸ ತಿರುವು
Vijayapura suicide attempt case: ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದ ಬಳಿ ತುಂಬಿ ಹರಿಯುತ್ತಿದ್ದ ಆಲಮಟ್ಟಿ ಎಡ ದಂಡೆ ಕಾಲುವೆಗೆ ನಾಲ್ವರು ಮಕ್ಕಳೊಂದಿಗೆ ಮಹಿಳೆ ನೀರಿಗೆ ಹಾರಿದ ಘಟನೆಗೆ ಟ್ವಿಸ್ಟ್ ಸಿಕ್ಕಿದೆ. ಈ ಘಟನೆಯಲ್ಲಿ ಮಹಿಳೆ ಬದುಕಿದ್ದಾಳೆ. ಪತಿಯೇ ಮಕ್ಕಳಿಗೆ ವಿಷ ಹಾಕಿ ತನ್ನನ್ನೂ ಸೇರಿ ಎಲ್ಲರವನ್ನೂ ಕಾಲುವೆಗೆ ದೂಡಿದರೆಂದು ಭಾಗ್ಯಶ್ರೀ ಆರೋಪಿಸಿದ್ದಾಳೆ.
ವಿಜಯಪುರ, ಜನವರಿ 14: ನಾಲ್ವರು ಮಕ್ಕಳೊಂದಿಗೆ ಕಾಲುವೆಗೆ ಬಿದ್ದು ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಈ ಪ್ರಕರಣದ ಹಿಂದೆ ಮಹಿಳೆಯ ಪತಿಯ ಕೈವಾಡ ಇರುವುದು ಬೆಳಕಿಗೆ ಬಂದಿದೆ. ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದ ಬಳಿ ತುಂಬಿ ಹರಿಯುತ್ತಿದ್ದ ಎಡದಂಡೆ ಕಾಲುವೆಗೆ ಭಾಗ್ಯಶ್ರೀ ಭಜಂತ್ರಿ ಎನ್ನುವ ಮಹಿಳೆ ಹಾಗೂ ನಾಲ್ವರು ಎಳೆಯ ಮಕ್ಕಳು ಬಿದ್ದಿದ್ದರು. ಈ ಘಟನೆಯಲ್ಲಿ ನಾಲ್ವರು ಮಕ್ಕಳು ಮೃತಪಟ್ಟಿದ್ದರೆ ಮಹಿಳೆಯನ್ನು ರಕ್ಷಿಸಲಾಗಿತ್ತು. ಇದೀಗ ಮಹಿಳೆಯೇ ಖುದ್ದಾಗಿ ಮಾಹಿತಿ ನೀಡಿ, ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟಿದ್ದಾರೆ. ತನ್ನ ತವರು ಮನೆಯಲ್ಲಿ ಸಹೋದರರ ಜಗಳದಿಂದ ಬೇಸರಗೊಂಡು ಪತ್ನಿ ಭಾಗ್ಯಶ್ರೀ ಭಜಂತ್ರಿ ಮಕ್ಕಳ ಸಮೇತ ಆತ್ಮಹತ್ಯೆಗೆ ಯತ್ನಿದ್ದರು ಎಂದು ಆಕೆಯ ಪತಿ ಅಲವತ್ತುಕೊಂಡಿದ್ದರು. ಕೊಲ್ಹಾರ ತಾಲೂಕಿನ ತೆಲಗಿ ಗ್ರಾಮದ ಭಾಗ್ಯಶ್ರೀ ಭಜಂತ್ರಿ ಇದೀಗ ನಿಜ ಮಾಹಿತಿ ಬಹಿರಂಗಪಡಿಸಿದ್ದಾರೆ. ತನ್ನ ಪತಿಯೇ ವಿಷ ಹಾಕಿ ತಮ್ಮನ್ನು ಕಾಲುವೆಗೆ ಎಸೆದನೆಂದು ಆಕೆ ತನ್ನ ಸಂಬಂಧಿಕರಿಗೆ ತಿಳಿಸಿದ್ದಾಳೆ.
ಮೃತಪಟ್ಟ ನಾಲ್ವರು ಮಕ್ಕಳು…
ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದ ಬಳಿ ಇರುವ ಆಲಮಟ್ಟಿ ಎಡದಂಡೆ ಕಾಲುವೆಯಲ್ಲಿ ನಿನ್ನೆ ದುರಂತ ಘಟನೆ ನಡೆದಿತ್ತು. ಮಹಿಳೆ ಹಾಗು ಮಕ್ಕಳು ನೀರಿಗೆ ಬಿದ್ದಿರುವುದನ್ನು ಕಂಡ ಮೀನುಗಾರರು ಹಾಗೂ ಮಲ್ಲಪ್ಪ ಸುಳೇ ಹಾಗೂ ಸ್ಥಳೀಯ ಯುವಕರ ತಂಡವು ಬೈಕಿನ ಕೇಬಲ್ ಸಹಾಯದಿಂದ ಮಹಿಳೆಯನ್ನು ರಕ್ಷಿಸಿದ್ದರು. ಆದರೆ, ನಾಲ್ವರು ಮಕ್ಕಳನ್ನು ಉಳಿಸಲು ಆಗಲಿಲ್ಲ. ಈ ನಾಲ್ವರು ಮಕ್ಕಳಲ್ಲಿ ಇಬ್ಬರ ಶವಗಳು ಸಿಕ್ಕರೆ, ಇನ್ನಿಬ್ಬರು ಮಕ್ಕಳ ಶವ ಸಿಕ್ಕಿಲ್ಲ. ತನು (5) ರಕ್ಷಾ (3) ಎಂಬ ಇಬ್ಬರು ಹೆಣ್ಣು ಮಕ್ಕಳು ಹಾಗೂ 13 ತಿಂಗಳ ಅವಳಿಜವಳಿ ಗಂಡು ಮಕ್ಕಳು ಸಾವನ್ನಪ್ಪಿವೆ.
ಇದೇ ವೇಳೆ ಅಲ್ಲಿಗೆ ಬಂದ ಮಹಿಳೆ ಪತಿ ನಿಂಗರಾಜ್ ಭಜಂತ್ರಿ ಬಂದು ಗೋಳಾಡುತ್ತಾನೆ. ಹೆಂಡತಿ ಮಕ್ಕಳೊಂದಿಗೆ ನಿಡುಗುಂದಿ ತಾಲೂಕಿನ ಎಲ್ಲಮ್ಮನ ಬೂದಿಹಾಳ ಗ್ರಾಮದ ಎಲ್ಲಮ್ಮ ದರ್ಶನಕ್ಕೆ ತೆಲಗಿ ಗ್ರಾಮದಿಂದ ಹೊರಟಿದ್ದೆವು. ನಾಲೆ ಬಳಿ ಬಂದಾಗ ಬೈಕ್ನಲ್ಲಿನ ಪೆಟ್ರೋಲ್ ಖಾಲಿಯಾಗಿತ್ತು. ತಾನು ಪೆಟ್ರೋಲ್ ತರಲು ಹೋಗಿ ಬರುವಷ್ಟರಲ್ಲಿ ಇಲ್ಲಿ ಜನ ಸೇರಿದ್ದರು. ಯಾಕೆ ಸೇರಿದ್ದಾರೆ ಎಂದು ನೋಡಿದಾಗ ತನ್ನ ಪತ್ನಿ ಹಾಗೂ ಮಕ್ಕಳೇ ಕಾಲುವೆ ಪಾಲಾಗಿದ್ದರು ಎಂದು ಗೋಳಾಡಿ ಕಣ್ಣೀರು ಹಾಕಿದ್ದಾನೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಹತ್ಯೆ
ಆಸ್ತಿ ವಿಚಾರ ಹಾಗೂ ಕೌಟುಂಬಿಕ ಕಲಹದಿಂದ ಮನೆಯಲ್ಲಿ ಜಗಳವಾಗಿತ್ತು. ನನಗೆ ಪಿತ್ರಾರ್ಜಿತ ಆಸ್ತಿಯನ್ನು ಕೊಡುವುದಿಲ್ಲ ಎಂದು ನನ್ನ ತಂದೆ ಹಾಗೂ ಸಹೋದರರು ಹೇಳಿದ್ದರು. ಈ ವಿಚಾರವಾಗಿ ನನ್ನ ಸಹೋದರರು ನನ್ನ ಪತ್ನಿಗೆ ನಿಂದನೆಯನ್ನು ಸಹ ಮಾಡಿದ್ದರು. ಮಕ್ಕಳೊಂದಿಗೆ ಊರು ಬಿಟ್ಟು ಬೆಂಗಳೂರು ಅಥವಾ ಬೇರೆ ಕಡೆ ಹೋಗಿ ಕೂಲಿ ಕೆಲಸ ಮಾಡಿ ಆದರೂ ಬದುಕೋಣ ಎಂದು ಪತ್ನಿಗೆ ಧೈರ್ಯ ಹೇಳಿದ್ದೆ. ಇದು ಬನದ ಹುಣ್ಣಿಮೆ ಇದೆ ಎಲ್ಲಮ್ಮನ ದೇವಸ್ಥಾನಕ್ಕೆ ಹೋಗಿ ಬರೋಣವೆಂದು ಕರೆದುಕೊಂಡು ಬಂದಾಗ ಈ ಘಟನೆ ನಡೆದಿದೆ ಎಂದು ಎದೆ ಬಡಿದುಕೊಂಡು ಅತ್ತು ಕರೆದಿದ್ದ. ನಿಂಗರಾಜನ ಹೇಳಿಕೆಯ ಪ್ರಕಾರ ತನ್ನ ಮನೆಯ ಆಸ್ತಿವಿವಾದ ಕೌಟುಂಬಿಕ ಕಲಹ ಭಾಗ್ಯಶ್ರೀ ಕೈಯಲ್ಲಿ ಇಂತಹ ಘೋರ ಕೃತ್ಯವನ್ನು ಮಾಡಿಸಿದೆ ಎಂದೇ ಭಾವಿಸಲಾಗಿತ್ತು.
ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ನಿಡಗುಂದಿ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾಲುವೆ ಬಳಿ ಆಗಮಿಸಿ ಇಬ್ಬರು ಅಪ್ರಾಪ್ತ ಬಾಲಕರ ಶವಕ್ಕಾಗಿ ಶೋಧ ನಡೆಸಿದರು. ಹೆಚ್ಚುವರಿ ಪೊಲೀಸ್ ಆಯುಕ್ತ ಶಂಕರ್ ಮರಿಹಾಳ ಡಿವೈಎಸ್ಪಿ ಬಾಲಪ್ಪ ನಂದಗಾವಿ ಸೇರಿದಂತೆ ಇತರ ಅಧಿಕಾರಿಗಳು ಸಹ ಸ್ಥಳದಲ್ಲೇ ಠಿಕಾಣಿ ಹೂಡಿ ಮಾಹಿತಿ ಕಲೆಹಾಕುವ ಕೆಲಸ ಮಾಡಿದರು.
ಸಾವಿನಿಂದ ಬಚಾವಾದ ಭಾಗ್ಯಶ್ರೀ ಅವರನ್ನು ನಿಡಗುಂದಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಶ್ವಾಸಕೋಶದಲ್ಲಿ ನೀರು ತುಂಬಿದ ಕಾರಣಕ್ಕೆ ಅವರನ್ನು ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ಛೇ, ಒಂದು ನಾಣ್ಯದಿಂದ ಯುವತಿಯ ಬದುಕೇ ನಾಶವಾಯ್ತು
ಜಮೀನು ಮಾರುವ ಸಂಬಂಧ ಜಗಳವಾಗಿತ್ತು…
ಭಾಗ್ಯಶ್ರೀ ಸಾವಿಗೆ ಆಕೆಯ ಪತಿ ನಿಂಗರಾಜ ಹಾಗೂ ಮನೆಯವರು ಕಾರಣ ಎಂದು ಆ ಮಹಿಳೆಯ ತವರಿನ ಜನರು ಆರೋಪಿಸಿದ್ದಾರೆ. ತಮ್ಮ ಒಬ್ಬಳೇ ಮಗಳಾದ ಭಾಗ್ಯಶ್ರೀಯನ್ನು ತೆಲಗಿ ಗ್ರಾಮದ ನಿಂಗರಾಜನಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ನಿಂಗರಾಜನಿಗೆ ಸಾಲ ಇದ್ದು, ಅದನ್ನು ತೀರಿಸಲು ಜಮೀನು ಮಾರಾಟ ಮಾಡುವುದಾಗಿ ಆತನ ಮನೆಯವರು ಹೇಳಿದ್ದರು. ಈ ವಿಚಾರವಾಗಿ ಜಗಳವಾಗಿತ್ತು. ಈ ವೇಳೆ ತನ್ನ ಮಗಳ ಮೇಲೆ ಅಳಿಯ ನಿಂಗರಾಜ ಹಾಗೂ ಆತನ ತಂದೆ ಮತ್ತು ತಾಯಿ ಹಲ್ಲೆ ಮಾಡಿದ್ದರು ಎಂದು ಆಪಾದಿಸಿದ್ದಾರೆ.
ಪತಿಯೇ ವಿಷ ಹಾಕಿ ಕೊಲ್ಲಿಸಿದ ವಿಚಾರ ತಿಳಿಸಿದಳಾ ಭಾಗ್ಯಶ್ರೀ?
ಜಿಲ್ಲಾಸ್ಪತ್ರೆಯಲ್ಲಿರುವ ಭಾಗ್ಯಶ್ರೀ ತನ್ನ ಸಂಬಂಧಿಕರ ಬಳಿ ನೀಡಿದ್ದಾರೆನ್ನಲಾದ ಮಾಹಿತಿ ಪ್ರಕಾರ, ಆಕೆಯ ಪತಿಯೇ ಐವರನ್ನು ಕೊಲ್ಲಲು ಯತ್ನಿಸಿರುವುದು ತಿಳಿದುಬಂದಿದೆ. ತಾನು ಮಕ್ಕಳೊಂದಿಗೆ ಕಾಲುವೆಗೆ ಹಾರಿಲ್ಲ. ತನಗೆ ಹಾಗು ಇಬ್ಬರು ಹೆಣ್ಮಕ್ಕಳಿಗೆ ಪತಿ ವಿಷ ಕುಡಿಸಿದರು. ಬಳಿಕ ನಾಲ್ವರು ಮಕ್ಕಳು ಹಾಗೂ ತನ್ನನ್ನು ಪತಿಯೇ ಕಾಲುವೆಗೆ ದೂಡಿದರು ಎಂದು ಈಕೆ ಹೇಳಿದ್ದಾಳೆ.
ಇದನ್ನೂ ಓದಿ: 2 ಮಕ್ಕಳ ತಂದೆಯನ್ನ ಮದ್ವೆಯಾಗಲು ಇಬ್ಬರು ಮಹಿಳೆಯರ ನಡುವೆ ಕಿತ್ತಾಟ, ಚಾಕು ಇರಿತ
ಆತ್ಮಹತ್ಯೆಗೆ ಮೊದಲೇ ನಿರ್ಧಾರವಾಗಿತ್ತಾ?
ತನ್ನ ಪತಿ ಸುಮಾರು ಮೂವತ್ತು ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದು, ಸಾಲ ತೀರಿಸಲು ಪರದಾಡುತ್ತಿದ್ದರು. ಮನೆಯಲ್ಲಿ ತನ್ನ ಪಾಲಿನ ಆಸ್ತಿ ಕೇಳಿದ್ದರು. ಅದಕ್ಕೆ ಮನೆಯವರು ಒಪ್ಪಲಿಲ್ಲ. ಈ ವಿಚಾರವಾಗಿ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರವನ್ನು ಗ್ರಾಮ ಪಂಚಾಯತಿ ಸದಸ್ಯನಾಗಿರೋ ನಿಂಗರಾಜ ಹಾಗೂ ಭಾಗ್ಯಶ್ರೀ ನಿರ್ಧಾರ ಮಾಡಿದ್ದರಂತೆ. ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ವಿಷದ ಬಾಟಲಿಯನ್ನು ನನ್ನ ಪತಿ ಮನೆಯಲ್ಲಿ ತಂದಿಟ್ಟಿದ್ದರು. ಇಂದು ನಾಲ್ಕು ಮಕ್ಕಳನ್ನ ಕರೆದುಕೊಂಡು ಎಲ್ಲಮ್ಮನ ಬೂದಿಹಾಳಕ್ಕೆ ಹೋಗೋದಾಗಿ ಮನೆಯಿಂದ ಹೊರ ಬಂದಿದ್ದೆವು. ಹೊರಗಡೆ ಬಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ನನ್ನ ಪತಿ ಹಾಗೂ ನಾನು ಮಾಡಿದ್ದೇವು. ಬೇನಾಳ ಬಳಿಯ ಕಾಲುವೆ ಬಳಿ ಇಬ್ಬರು ಹೆಣ್ಣು ಮಕ್ಕಳಿಗೆ ನನ್ನ ಪತಿ ಸ್ವಲ್ಪ ಸ್ವಲ್ಪ ವಿಷ ಕುಣಿಸಿದ್ದರು. ನಂತರ ನಾಲ್ಕು ಮಕ್ಕಳನ್ನ ಕಾಲುವೆಗೆ ಎಸೆದ. ಇದೇ ವೇಳೆ ನನ್ನನ್ನು ಕಾಲುವೆಯಲ್ಲಿ ದೂಡಿ ಅಲ್ಲಿಂದ ಹೋಗಿಬಿಟ್ಟ ಎಂದ ಕಠೋರ ಸತ್ಯವನ್ನು ಸಂಬಧಿಕರ ಬಳಿ ಭಾಗ್ಯಶ್ರೀ ಹೇಳಿದ್ದಾಳೆ. ಭಯಾನಕ ಸತ್ಯ ಹೇಳುವ ಮೂಲಕ ಇಡೀ ದುರಂತಕ್ಕೆ ಕಾರಣವಾದ ಅಸಲಿ ಸತ್ಯವನ್ನು ಬಯಲಿಗೆ ತಂದಿದ್ದಾಳೆ ಭಾಗ್ಯಶ್ರೀ. ಈಕೆಯ ಹೇಳಿಕೆಯನ್ನ ಸಂಬಂಧಿಕರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದುಕೊಂಡಿದ್ದಾರೆ.
ಸದ್ಯ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅವಳಿ ಜವಳಿ ಗಂಡುಮಕ್ಕಳ ಶವಕ್ಕಾಗಿ ಶೋಧ ಕಾರ್ಯವೂ ನಡೆಯುತ್ತಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ